–ಚಿನ್ಮಯ ಎಂ.ರಾವ್ ಹೊನಗೋಡು
ಹಾಡು ಎಂದಾಕ್ಷಣ ಹಾಡು
ಒಳಗೊಂದು ಹಾಡು
ಹೊರಗೊಂದು ಹಾಡು
ಹೊರಗೆ ಹಾಡುವ ಮುನ್ನ
ಒಳಗೊಂದು ಹಾಡು
ಹೊರಗೆ ಕೇಳುವ ಹಾಡು
ಒಳಗೊಂದು ಹೊರಗೆ ಕೇಳದ ಹಾಡು
ಒಳಗೊಂದು ಭಾವ ಮೂಡಿದಾಗಲೇ
ಹೊರಗೆ ಹೊಮ್ಮುವುದು ಹಾಡು
ಹೊರಗೆ ಹೊಮ್ಮದೆ
ಒಳಗೊಳಗೇ ಹಾಡುವ ಹಾಡು
ಹಿಡಿದು ರಾಗದ ಜಾಡು
ಅದೇ ಅನಾಹತದ ಬೀಡು
ತುಟಿಯ ತೆರೆಯದೆ
ಧ್ವನಿಪೆಟ್ಟಿಗೆಯ ಬಳಸದೆ
ದೇಹವೀಣೆಯ ನುಡಿಸದೆ
ಕೊರಳ ತಂತಿಯ ಮೀಟದೆ
ಆತ್ಮವನ್ನು ಆವರಿಸಿಕೊಳ್ಳುವ ರಾಗಸುಧೆ
ಅದೇ…ಅನಾಹತ ನಾದ…ಅದೇ..!
ಒಳಗೆ ಕೇಳುವ ಹೊರಗೆ ಕೇಳದ
ಅಂತರಂಗದಿ ಮಾತ್ರ ಹರಿವ
ಬಹಿರಂಗವ ಮರೆವ
ಲೌಕಿಕದಿಂದ ಅತೀತವಾದ
ಅಲೌಕಿಕ ಗಾಯನವೇ
ಅಂತರಂಗದ ಸಂಗೀತ
ಅದುವೇ ಅನಾಹತ
ಹಾಡಬೇಕೆಂಬ ಮನದಾಳದ ಬಯಕೆಯ
ಮನದಾಳಕ್ಕೇ ಸೀಮಿತಗೊಳಿಸಿ
ಅತ್ಮದೊಳಗೆ ಸಮ್ಮಿಲನಗೊಳಿಸುವ
ವಿಶೇಷ ಧ್ಯಾನವೇ ಅನಾಹತ
ಅನಾಹತ ವರ್ಣನೆಗೂ ನಿಲುಕದ
ದೇಹಾತೀತ ಕಾಲಾತೀತ ಕಲ್ಪನಾತೀತ
ರಾಗಾಂತರಂಗದ ರಾಗತರಂಗ
ಈ ದೇಹ ಮಣ್ಣಾಗಬಹುದು
ಆತ್ಮ ಸಿದ್ಧಿಸಿಕೊಂಡ ಅನಾಹತ ಮಾತ್ರ
ಅದು ಆತ್ಮಸಮೇತ
ಅಂತರಂಗದಿಂದ ಹೊರಹೊಮ್ಮಿ
ಬಹಿರಂಗವಾಗುವ ಗಾಯನ
ಕೇಳುಗನ ಬಹಿರಂಗದಿಂದ
ಅಂತರಂಗಕ್ಕೆ ಪಯಣಿಸಿ ಆತನ ಮನಸ್ಸು
ಈ ಗಾಯನವನ್ನು
ಸದಾ ನೆನೆಯುತ್ತಾ
ಮನದಾಳದಲ್ಲೆಲ್ಲೋ ಹಾಡುವುದೇ
ಅನಾಹತ ಗಾಯನದ ಆರಂಭಿಕ ಹಂತ…
ಆದರೆ ಅನಾಹತದ ಸಿದ್ಧಿ ಅನಂತ…!
ಹಾಡು ಎಂದಾಕ್ಷಣ ಹಾಡು
ಆಂತರ್ಯದಲೊಂದು ಹಾಡು
ಅದೇ ಅಂತರಂಗದ ನಾದೋಪಾಸನೆ
ಅನಾಹತನಾದೋಪಾಸನೆ
ಹಾಡು ಎಂದಾಕ್ಷಣ ಹಾಡು
ಅಂತರಂಗದ ಹಾಡು
ಅಂತರಂಗದಿ ಹಾಡು
ಅಂತರಂಗದಿಂದ ಬಹಿರ್ಮುಖವಾಗಿ
ಪ್ರವಹಿಸಲಿ ಹಾಡು
ಬಹಿರ್ಮುಖದಿಂದ ಮತ್ತೆ
ಅಂತರಂಗದೆಡೆಗೆ
ಹಿಮ್ಮುಖವಾಗಲಿ ಹಾಡು !
ಅನಾಹತದಿಂದ ಆಹತದೆಡೆಗೆ
ಆಹತದಿಂದ ಅನಾಹತದೆಡೆಗೆ
ಸಾಗಲಿ ನಮ್ಮ ಹಾಡು…
ಚಿನ್ಮಯ ಎಂ.ರಾವ್ ಹೊನಗೋಡು