ಚಿತ್ರರಂಗದಲ್ಲಿ ಯಾವುದೋ ವೃತ್ತಿಗೆ ಬಂದು ಇನ್ನಾವುದರ ಮೇಲೋ ಪ್ರೀತಿ ಹುಟ್ಟಿ ಮತ್ತಿನ್ನೇನೋ ಆಗುವ ರೀತಿಯವರು ನಮಗೆ ಅಲ್ಲಲ್ಲಿ ಕಾಣಸಿಗುತ್ತಾರೆ. ಉಪೇಂದ್ರ, ಪ್ರೇಮ್ ನಿರ್ದೇಶಕರಾಗಿ ನಾಯಕರಾದರೆ, ಸುದೀಪ್ ಹಾಗು ರಮೇಶ್ ನಾಯಕರಾಗಿ ನಿರ್ದೇಶಕರಾದರು. ಗುರುಕಿರಣ್ ನಾಯಕನಾಗಬೇಕೆದು ಬಂದು ಸಂಗೀತ ನಿರ್ದೇಶಕರಾದರು. ಇಲ್ಲಿ ಯಾರ ಹಣೆಬರಹ ಏನೆಂದು ಬರೆದಿರುವುದೋ ಆ ದೇವರಿಗೆ ಮಾತ್ರ ಗೊತ್ತು. ಹೀಗೆಯೇ ನಾಯಕಿಯೊಬ್ಬಳು ನಿರ್ದೇಶಕಿಯಾದರೆ? ಆದರೂ ಆಗಬಹುದು.
ಅಂತೆಯೇ ಈಗಷ್ಟೇ ಕನ್ನಡ ಚಿತ್ರರಂಗದ ಧರೆಗಿಳಿದು ಬಂದ ಸೌಜನ್ಯ ಎಂಬ ತುಂಬು ಸೌಜನ್ಯದ ನವನಾಯಕಿಯ ಮಾತಲ್ಲೂ..ಅವಳ ವರ್ತನೆಯಲ್ಲೂ..ನಿರ್ದೇಶನದ ವೃತ್ತಿಗೆ ಇಳಿವ ವಾಸನೆ..ಸೂಚನೆ ಎದ್ದು ಕಾಣುತ್ತಿದೆ. ಸೌಜನ್ಯ ಎಂದರೆ ಯಾರೆಂದರೆ ಇನ್ನೂ ನಿಮಗೆ ಹೊಳೆದಿರಲಿಕ್ಕಿಲ್ಲ. ಅದೇ “ಗವಿಪುರ” ಚಿತ್ರದ ನಾಯಕಿ ಎಂದರೆ ನಿಮಗೆ ನೆನಪಾಗಬಹುದು. ಕಳೆದ ವಾರವಷ್ಟೇ ಗವಿಪುರ ಚಿತ್ರದ ಪೊಸ್ಟರ್‌ಗಳಲ್ಲಿ ಹೂನಗು ಚೆಲ್ಲಿ ನಿಮ್ಮನ್ನು ಚಿತ್ರಮಂದಿರದೊಳಗೆ ಕರೆತಂದಾಕೆ ಇದೇ ಸೌಜನ್ಯ. ಕಾಲೇಜಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದಾಗ ತೆಗೆದ ಫೋಟೋಗಳು ಸೌಜನ್ಯಾಳನ್ನು ಗವಿಪುರ ಚಿತ್ರದ ಕ್ಯಾಮೆರಾ ಮುಂದೆ ತಂದು ನಿಲ್ಲಿಸಿದ್ದು ಇತಿಹಾಸ. ನಂತರ ಶಕ್ತಿ ಹಾಗು ಕ್ರೇಜಿಲೋಕ ಚಿತ್ರದಲ್ಲೂ ಸೌಜನ್ಯ ಬೀರಿದಳು ನಟನೆಯ ಮಂದಹಾಸ. ಈ ಮೂರೂ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತಂತ್ರಜ್ನಾನದ ಆಳಕ್ಕೆ ಇಳಿದ ಸೌಜನ್ಯ ಎಲ್ಲರಿಗಿಂತ ವಿಭಿನ್ನವೆನಿಸುವ ಮನೋಭಾವದವಳು. ಹಾಗಾದರೆ ಸೌಜನ್ಯ ಮುಂದೊಮ್ಮೆ ನಿರ್ದೇಶಕಿಯಾಗುತ್ತಾಳಾ? ಎಂದು ಕಾಲವೇ ಉತ್ತರಿಸಬೇಕಿದೆ.
-ಚಿನ್ಮಯ ಎಂ.ರಾವ್ ಹೊನಗೋಡು
Sunday, March 4, 2012