ಕನ್ನಡಪುಣ್ಯಕ್ಷೇತ್ರ

ಬಹು ವಿಧದಲ್ಲಿ ಭಕ್ತರ ಪೊರೆವ ಅಕ್ಕಿಆಲೂರಿನ ಶ್ರೀಚೌಡೇಶ್ವರಿ : ಶ್ರೀಭೂತಪ್ಪ

ನಂಬಿದ ಭಕ್ತರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ಭಕ್ತರನ್ನು ಪೊರೆಯಲು ದೇವರು ನಾನಾ ವಿಧದಲ್ಲಿ ನೆಲೆಯಾಗುತ್ತಾನೆ. ಇಂತಹ ದೇವರನ್ನು ಭಕ್ತರು ಸಹ ನಿತ್ಯ ಜಾತ್ರೆಯಂತೆ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ವರ್ಷವಿಡೀ ಪೂಜಿಸುತ್ತಾ ಧನ್ಯತೆ ಪಡೆಯುತ್ತಾರೆ. ಇದಕ್ಕೆ ಪುಷ್ಠಿ ಎಂಬಂತೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಶ್ರೀಚೌಡೇಶ್ವರಿ-ಶ್ರೀಭೂತಪ್ಪ ದೇವರ ಸನ್ನಿಧಾನ ಬಹು ಪ್ರಸಿದ್ಧವಾಗಿದೆ.

ಅಕ್ಕಿಆಲೂರು ಪಟ್ಟಣ ಪ್ರದೇಶದ ಸಮೀಪದಲ್ಲಿ ಆನವಟ್ಟಿ-ಹಾವೇರಿ ಮುಖ್ಯ ಹೆದ್ದಾರಿಯಲ್ಲಿ ಈ ದೇವಾಲಯವಿದೆ. ದೊಡ್ಡ ಆಲದ ಮರದ ಬುಡದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದೆ ಇಲ್ಲಿನ ಆಲದ ಮರದ ಬುಡದಲ್ಲಿ ಚೌಡೇಶ್ವರಿ ಮತ್ತು ಭೂತಪ್ಪ ದೇವರು ಚಿಕ್ಕ ಕಲ್ಲಿನಲ್ಲಿ ಒಡಮೂಡಿ ಬಂದಿದ್ದವಂತೆ. ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಪದೇ ಪದೇ ಆಕಸ್ಮಿಕ ಘಟನೆಯಿಂದ ತೊಂದರೆ ಉಂಟಾಗುತ್ತಿತ್ತಂತೆ. ಈ ಮರದ ಬಳಿ ನಿಂತು ಈ ಕಲ್ಲುಗಳಿಗೆ ನಮಿಸದೆ ಮುಂದೆ ಸಾಗಿದವರಿಗೆ ಮುಂದಿನ ಪ್ರಯಾಣ ಕಷ್ಟಕರವಾಗಿರುತ್ತಿತ್ತಂತೆ. ಭಕ್ತಿಯಿಂದ ಕೈಮುಗಿದು ಸಾಗಿದವರು ಸುಖಕರ ಪ್ರಯಾಣದ ಜೊತೆಗೆ ಬಾಳಿನಲ್ಲಿ ಸಹ ಸುಖ ಶಾಂತಿ ಪಡೆಯುತ್ತಾ ನೆಮ್ಮದಿಯ ಬದುಕು ಸಾಗಿಸುವಂತಾಗುತ್ತಿತ್ತು. ಹೀಗೆ ಜನರ ಬಾಯಿಂದ ಬಾಯಿಗೆ ಈ ದೇವರ ಮಹಿಮೆ ವಿಸ್ತಾರಗೊಳ್ಳುತ್ತಾ ಭಕ್ತರ ಸಂಖ್ಯೆ ಸಹ ಹೆಚ್ಚಾಗತೊಡಗಿತು.

ದೇವರ ಶಕ್ತಿ ಮತ್ತು ಭಕ್ತರನ್ನು  ಪೊರೆಯುವ ಪವಾಡದ ಘಟನೆಗಳಿಂದ ಇಲ್ಲಿನ ಚಿತ್ರಣವೇ ಬದಲಾಗುತ್ತಾ ಬಂತು. ಈಗ 10 ವರ್ಷಗಳ ಹಿಂದೆ ಅಂದರೆ 2004 ರ ಸುಮಾರಿಗೆ ಭಕ್ತರೆಲ್ಲ ಸೇರಿ ಹಣ ಸಂಗ್ರಹಿಸಿ ಆಲದ ಮರದ ಬುಡದ ಈ ಸ್ಥಳದಲ್ಲಿ ದೇವಾಲಯ ನಿರ್ಮಿಸಿದರು. ಚಾವಿಯ(ಬೀಗದ) ಹರಕೆ:ಕೋಳಿ ನೈವೇದ್ಯ :ಇಲ್ಲಿನ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ಚಾವಿಯನ್ನು ಹರಕೆಯಾಗಿ ಸಲ್ಲಿಸುವುದು. ಶಿಕ್ಷಣ, ನೌಕರಿ, ವ್ಯಾಪಾರಿ, ಸ್ವ-ಉದ್ಯೋಗ, ವಿವಾಹ,ಗೃಹ ಶಾಂತಿ, ಜಮೀನು  ಅಭಿವೃದ್ಧಿ, ಕೃಷಿ ಪ್ರಗತಿ, ಕೊಳವೆ ಬಾವಿಯಲ್ಲಿ ಯತೇಚ್ಛ ನೀರಿನ ಲಭ್ಯತೆ,ಶತ್ರು ಭಯ ನಾಶ, ರೋಗಗಳಿಂದ ಮುಕ್ತಿ ಇತ್ಯಾದಿ ಬಗೆ ಬಗೆಯ ಸಂದರ್ಭದಲ್ಲಿ ಭಕ್ತರು ಇಲ್ಲಿಗೆ ಬಂದು  ಹೊಸದಾಗಿ ಖರೀದಿಸಿದ ಚಾವಿ(ಬೀಗ)ಯನ್ನು ಹರಕೆಯಾಗಿ ಸಮರ್ಪಿಸುತ್ತಾರೆ.  ಹೀಗೆ ಭಕ್ತರಿಂದ ಸಮರ್ಪಣೆಯಾದ ಹರಕೆಯ ಚಾವಿಗಳನ್ನು

ದೇವಾಲಯದ ಒಳಾವರಣ ಮತ್ತು ಹೊರವಾವರಣದಲ್ಲಿ ಸಾಲಾಗಿ ಜೋಡಿಸಿಡಲಾಗಿದೆ. ಕಬ್ಬಿಣದ ರಾಡ್‍ಗಳಿಂದ ಜಾಲರಿಯಂತೆ ನಿರ್ಮಾಣದವಾದ ಇಲ್ಲಿನ ದೇವಾಲಯ ಹೊರಾವರಣ ಪೂರ್ತಿ ಚಾವಿಯಿಂದ(ಬೀಗ) ತುಂಬಿ ಥಟ್ಟನೆ ನೋಡಿದವರಿಗೆ ಗೋಡೆಯಂತೆ ಭಾಸವಾಗುತ್ತದೆ.ಇಷ್ಟೊಂದು ಬೃಹತ್ ಪ್ರಮಾಣದ ಚಾವಿ ಇಲ್ಲಿ ಹರಕೆಯಾಗಿ ಸಂದಾಯವಾಗುತ್ತಿದೆ.  ಇಂತಹ ಸಂಕಲ್ಪದ ಹರಕೆ ಫಲಿಸಿದರೆ ಭಕ್ತರು ಕೋಳಿಯನ್ನು ತಂದು ದೇವರಿಗೆ ಬಲಿಯಾಗಿ ಸಮರ್ಪಿಸುತ್ತಾರೆ. ಹೀಗೆ ದೇವರಿಗೆ ಅರ್ಪಿಸಿದ ಕೋಳಿಯನ್ನು ಅರೆದು ರುಬ್ಬಿ ಸಾಂಬಾರ ಮಾಡಿ ಊಟ ಮಾಡಲು ಸಹ ಇಲ್ಲಿ ಖಾಯಂ ಅಡುಗೆ ಕೋಣೆ ಸಿದ್ಧಪಡಿಸಲಾಗಿದೆ. ಭಕ್ತರು ಇಲ್ಲಿ ನೈವೇದ್ಯವಾಗಿ ಸಮರ್ಪಿಸಿದ ಕೋಳಿಯ ಕಜ್ಜಾಯ ಮಾಡಿ ಊಟ ಮಾಡಿ ದೇವರಿಗೆ ಇನ್ನೊಮ್ಮೆ ನಮಸ್ಕಾರ ಮಾಡಿ ಮನೆಗೆ ಹಿಂದಿರುಗುತ್ತಾರೆ.

ನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.ದೇವಾಲಯದ ಸುತ್ತ ಆವರಣದಲ್ಲಿ ಹಣ್ಣು ಕಾಯಿ ಮತ್ತು ಬಗೆ ಬಗೆಯ ಅಂಗಡಿಗಳು ಇದ್ದು ಜಾತ್ರೆಯ ವೈಭವವನ್ನು ಮೆರೆಯುತ್ತಿರುವುದು ಇಲ್ಲಿನ ಆಕರ್ಷಣೆಯಾಗಿದೆ.  ವರ್ಷವಿಡೀ ಪೂಜೆ ಮತ್ತು ಹರಕೆ ಸಮರ್ಪಣೆ ನಿರಂತರವಾಗಿ ನಡೆಯುತ್ತದೆ. ಈ ಹಿನ್ನೆಯಲ್ಲಿ ಈ ದೇವಾಲಯದಲ್ಲಿ ವಾರ್ಷಿಕ ಜಾತ್ರೋತ್ಸವ ಇತ್ಯಾದಿ ನಡೆಯುವುದಿಲ್ಲ.ನಿತ್ಯವೂ ಜಾತ್ರೆಯ ವಾತಾವರಣ, ಸಾವಿರಾರು ಭಕ್ತರ ದಂಡು ಸದಾ ನೆರೆದಿರುತ್ತದೆ.

ಫೋಟೋ ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.