–ಚಿನ್ಮಯ.ಎಂ.ರಾವ್,ಹೊನಗೋಡು
“ನಮ್ಮ ಮ್ಯುಸಿಕ್ ಡೈರೆಕ್ಟರ್ ಸಾಯಿ ಕಾರ್ತೀಕ್ ಹೈದರಾಬಾದ್‌ನಿಂದ ಬಂದಿದ್ದಾರೆ. ಬೆಂಗಳೂರಿನಲ್ಲಿ ಈಗ ಧ್ವನಿಮುದ್ರಣ ಆಗ್ತಾ ಇದೆ. ಶ್ಯುಟಿಂಗ್ ತಯಾರಿಗೆ ತೀರ್ಥಹಳ್ಳಿಗೆ ನಾನಿವತ್ತು ಬಂದಿದೀನಿ.ನಾಳೆ ನನ್ ಜೊತೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದುಬಿಡಿ. ನಾಡಿದ್ದು ನೀವೂ ಒಂದು ಪ್ರಯತ್ನ ಮಾಡಬಹುದು” ಅಂತ ಅವರು ಹೇಳಿದಾಗ ಒಮ್ಮೆಲೇ ಉತ್ಸಾಹದಿಂದ “ಆಯ್ತು ಸಾರ್ ಅಂದೆ”. ಕಳೆದ ನಾಲ್ಕು ವರ್ಷದಿಂದ ಅವರೊಡನೆ ನನಗೆ ಆಪ್ತಒಡನಾಟ ಇದ್ದರೂ ಈ ಅವಕಾಶ ಆಕಸ್ಮಿಕವಾಗಿತ್ತು.
ಮರುದಿನ ಸಂಜೆ ಬೆಂಗಳೂರಿಗೆ ಸಾಗುವಾಗ ಬೇರೆ ಬೇರೆ ಗಾಯಕಗಾಯಕಿಯರ ಧ್ವನಿ,ಶೈಲಿಯ ಬಗ್ಗೆ ಲೋಕಾಭಿರಾಮವಾಗಿ ನಮ್ಮಿಬ್ಬರಲ್ಲಿ ಚರ್ಚೆ ಸಾಗಿತ್ತು. ನೀಲಿ ನೀಲಿ ಅಂಬರವನ್ನೂ ಅಲ್ಲಿರುವ ಒಬ್ಬ ಚಂದಿರನನ್ನೂ ನೋಡುತ್ತಾ ಭಾವಪರವಶರಾಗಿ ನಿರ್ದೇಶಕರು ತಮ್ಮ ಹೊಸ ಧಾರವಾಹಿಯ ಗೀತೆಯನ್ನು ಗುನುಗುತ್ತಾ ಈ ಗೀತೆ ಯಾರ ಧ್ವನಿಗೆ ಹೊಂದಬಹುದು?ಎಂಬ ಬಗ್ಗೆ ನಮ್ಮಿಬ್ಬರಲ್ಲಿ ಚರ್ಚಾಸ್ಪರ್ಧೆಯೇ ಏರ್ಪಟ್ಟಿತ್ತು. ನಾನು ಕೆಲವರನ್ನು ಸೂಚಿಸಿದಾಗ ಅಷ್ಟು ಸುಲಭವಾಗಿ
ಒಪ್ಪುತ್ತಿರಲಿಲ್ಲ ಆ ಮನುಷ್ಯ. ಅವರೆಂತಹ ದೊಡ್ಡ ಕಲಾವಿದರೇ ಆಗಿರಲಿ ಅವನ್ನೊಮ್ಮೆ ತಮ್ಮದೇ ದೃಷ್ಟಿಕೋನದಲ್ಲಿ ಅಳೆದು ತೂಗಿ ಮನದಾಳಕ್ಕೊಮ್ಮೆ ಇಳಿಸಿಕೊಂಡು ಚಿಂತನೆಮಾಡಿ ತಮ್ಮ ವಿಚಾರಲಹರಿಯನ್ನು ಹರಿಬಿಡುತ್ತಿದ್ದರು. ಪೂರ್ವಾಗ್ರಹಪೀಡಿತರಾಗಿ ಮತ್ತಾರದ್ದೋ ಮಾತನ್ನು ಕೇಳಿಕೊಂಡು ಒಮ್ಮೆಲೇ ನಿರ್ಧಾರಕ್ಕೆ ಬಂದು ಬಿಡುವ ಜಾಯಮಾನ ಅವರದಲ್ಲ.ಸೋಲೋ ಗೆಲುವೋ ತಮಗನಿಸಿದ್ದನ್ನು ಮಾಡಿಬಿಡುವ ನಿಶ್ಚಲ ಮನಸ್ಸು.
ಮರುದಿನ “ಹೃದಯಶಿವ” ಪ್ರೀತಿಯಿಂದ ಬರೆದುಕೊಟ್ಟ ಗೀತೆಗೆ ಹೃದಯವಂತ ಸಂಗೀತ ನಿರ್ದೇಶಕ ಸಾಯಿ ಕಾರ್ತೀಕ್ ತನ್ಮಯರಾಗಿ ಧ್ವನಿ ಮುದ್ರಿಸಿಕೊಳ್ಳುತ್ತಿದ್ದರು. ನನಗೆ ಭಕ್ತಿಭಾವ ಇರುವ ಗಾಯಕರೆಲ್ಲಾ ಹಾಡಿದ ನಂತರ ನಾನೂ ಭಕ್ತಿಭಾವದಿಂದ ಒಂದು ಪ್ರಯತ್ನವನ್ನು ಮಾಡಿದೆ. ನನ್ನ ಸಾಮಾನ್ಯ ಗಾಯನವನ್ನೂ ಸಹನೆ ಕಳೆದುಕೊಳ್ಳದೆ ನಿರ್ದೇಶಕರು-ಸಂಗೀತ ನಿರ್ದೇಶಕರು ಹಲವು ಟೇಕ್ಸ್ ತೆಗೆದುಕೊಂಡು ಮುದ್ರಿಸಿಕೊಂಡಿದ್ದು ನನಗೆ ಪರಮಾಶ್ಚರ್ಯವಾಯಿತು ಹಾಗು ನನ್ನೊಳಗೇ ನನ್ನ ನ್ಯೂನತೆಯ ಬಗ್ಗೆ ಪರಮಹೇಸಿಗೆಯಾತು. ಮುಂದೆ ನನ್ನ ಗಾಯನಶೈಲಿಯನ್ನು ಹೇಗೆ ಸುಧಾರಣೆ ಮಾಡಿಕೊಳ್ಳಬಹುದೆಂದು ಅವರಿಬ್ಬರೂ ಚರ್ಚಿಸಿ ನನಗೆ ಮಾರ್ಗದರ್ಶನ ಮಾಡಿದರು. ಆ ದಿನದ ಅನುಭವದಿಂದ ನಾನು ಒಂದಷ್ಟನ್ನು ಕಲಿತೆ. ನಾನು ಹೊರಡುವಾಗ ನಿರ್ದೇಶಕರು ಅವರ ಕಿಸೆಯಲ್ಲಿದ್ದ ಕಾಸನ್ನು ನನ್ನ ಕಿಸೆಗೆ ವರ್ಗಾಯಿಸಲು ಬಂದಾಗ, “ನಾನು ಇಂದು ನಿಮಗಾಗಿ “ಪ್ರೀತಿಯಿಂದ” ಹಾಡಿದ್ದು ಎಂದಾಗ “ಅದು ನನಗೂ ಗೊತ್ತು,ಇರಲಿ ಖರ್ಚಿಗೆ ಬೇಕಾಗಬಹುದು ನಿಮಗೆ” ಎಂದು ಒತ್ತಾಯಪೂರ್ವಕವಾಗಿ ಜೇಬಿಗೆ ಹಾಕಿ ಬೀಳ್ಕೊಟ್ಟರು. ನನ್ನ ಸಾಮಾನ್ಯ ಗಾಯನವನ್ನು ನಿತ್ಯಪ್ರಸಾರವಾಗುವ ಧಾರಾವಾಹಿಯ ಶೀರ್ಷಿಕೆಗೀತೆಗೆ ಹೇಗೆ ತಾನೆ ಇಟ್ಟುಕೊಂಡಾರು ಎಂದು ಅಂದೇ ಅದನ್ನು ಮರೆತುಬಿಟ್ಟೆ.
ಸರಿ ಸುಮಾರು ೩ ತಿಂಗಳ ನಂತರ ನಿರ್ದೇಶಕರ ಕರೆಗೆ ಸ್ಪಂದಿಸಿ ಚಿತ್ರೀಕರಣ ನಡೆಯುತ್ತಿರುವ ನಮ್ಮೂರಿನಿಂದ ಮುಕ್ಕಾಲು ಗಂಟೆಯಷ್ಟು ಪ್ರಯಾಣದ ತೀರ್ಥಹಳ್ಳಿ ಸಮೀಪದ ಕೋಟೆಗದ್ದೆಗೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಹಳೆಯ ಮನೆಯ ಕೊಟ್ಟಿಗೆಯನ್ನೇ ಎಡಿಟಿಂಗ್ ಸ್ಟೂಡಿಯೋ ಮಾಡಿಕೊಂಡಿದ್ದ ನಿರ್ದೇಶಕರು ನನ್ನನ್ನು ಅಲ್ಲಿ ಆಹ್ವಾನಿಸಿ “ಈ ಗೀತೆಯನ್ನು ಕೇಳಿ ಹೇಗಿದೆ ಅಂತ ಹೇಳಿ” ಎಂದಾಗ ನನ್ನ ಪ್ರಿಯಗಾಯಕರಾದ ಚಿತ್ರ,ಶಂಕರ್‌ಮಹದೇವನ್ ಯಾರೋ ಹಾಡಿರಬಹುದೆಂದು ಅಂದುಕೊಂಡು ಅತ್ಯುತ್ಸಾಹದಿಂದ ಕೇಳಲಾರಂಭಿಸಿದರೆ ಅರೇ..ನನ್ನದೇ ಧ್ವನಿ! ತಂತ್ರಜ್ನಾನದಿಂದ ಸುಂದರವಾಗಿ ಪರಿಷ್ಕರಿಸಿದ್ದರು. ಆದರೂ ನನ್ನ ಗಾಯನದ ಬಗ್ಗೆ ನನಗೆ ಒಳಗೊಳಗೇ ಅಸಮಾಧಾನ ಇರುವುದನ್ನು ಅವರಲ್ಲಿ ತೋಡಿಕೊಂಡೆ.ನಿಮಗೆ ಅದು ಸಹಜ ಬಿಡಿ ಎಂದು ಅವರು ಸುಮ್ಮನಾಗಿಬಿಟ್ಟರು.
ಜೀವನವೆಂದರೆ “ಹೀಗೇ..ಒಂದು ರೀತಿ ವಿಚಿತ್ರ. ಬಯಸಿ ಬಯಸಿ ಬಯಕೆಗಳನ್ನು ಬದಿಗೊತ್ತಿ ನಿರ್ಲಿಪ್ತರದಾಗ ನಾವು ಹಿಂದೆ ಬಯಸಿದ್ದು ನಮ್ಮೆಡೆಗೆ ತಾನಾಗೇ ಬಯಸಿ ಬಂದು ಅನಿರೀಕ್ಷಿತ ದಿಕ್ಕಿನೆಡೆಗೆ ನಮ್ಮನ್ನು ಕೈಹಿಡಿದು ಕರೆದುಕೊಂಡು ಹೋಗಿ ಆಲಂಗಿಸಿಕೊಳ್ಳುತ್ತದೆ. ನಡೆಗಳು ಎಂದೂ ನಿಗೂಢ,ಮುನ್ನಡೆಯುತ್ತಾ ಹೋದಂತೆ ನಾವು ಕನಸು ಕಂಡಿದ್ದು ಸಾರ್ಥಕವಾಯಿತೆಂದು ಅನಿಸಿ ಸಾರ್ಥಕತೆಯ ಭಾವಬಿಂದುವೊಂದು ಗೋಚರವಾಗುತ್ತದೆ. ಸಾಧನೆಯ ಬೃಹತ್‌ಸೌಧ ನಿರ್ಮಿಸಲು ಇಂತದೊಂದೇ ಅಡಿಗಲ್ಲು ಸಾಕು. ತಳಪಾಯ ಭದ್ರವಾಗಿ ತಳವೂರಿದಷ್ಟೂ ತಳಮಳವಿಲ್ಲದೆ ಸೌಧವನ್ನು ಎತ್ತರೆತ್ತರಕ್ಕೆ ಏರಿಸಬಹುದು. ಅಂತೆಯೇ ಈಗ ನನ್ನ ಕನಸ ಗೂಡಿಗೆ, ಸಾಧನೆಯ ಗುಡಿಗೆ ಮೊದಲ ಅಡಿಗಲ್ಲನ್ನಿಟ್ಟಿದ್ದಾರೆ ಆ ವ್ಯಕ್ತಿ.ಮೊದಲು ಅವಕಾಶ ಕೊಟ್ಟವರನ್ನು ಎಂದೆಂದೂ ಮರೆಯುವ ಅವಕಾಶವೇ ಬರುವುದಿಲ್ಲ,ಮುಡಿ ತಲುಪಿದರೂ ಅಡಿಗಲ್ಲಿನ ಆಧಾರದಿಂದ ತಾನೆ?
ಆ ನಿರ್ದೇಶಕರು ನಾನು ಅವರ ಉದ್ದೇಶಿತ ಧಾರವಾಹಿ “ಕಣ್ಮಣಿ”ಗೆ ನನ್ನ ರಾಗಸಂಯೋಜನೆಯಲ್ಲಿ, ನನ್ನದೇ ಕಂಠದಲ್ಲಿ ಮಾಡಿಕೊಟ್ಟ ಶೀರ್ಷಿಕೆಗೀತೆಯನ್ನು ಮತ್ತೆ ಮತ್ತೆ ಕೇಳಿ,”ಈ ಧ್ವನಿ ಕರ್ನಾಟಕದ ಮನೆಮನೆಯಲ್ಲೂ ನಿತ್ಯ ಪ್ರಸಾರವಾಗುವಂತೆ ಮಾಡುತ್ತೇನೆ”ಎಂದು ಸ್ವಯಂಪ್ರೇರಿತರಾಗಿ ಹಿಂದೊಮ್ಮೆ ಶಪಥ ಮಾಡಿದ್ದರು. ಆಡಿದ ಮಾತಿನಂತೆ ನಡುದುಕೊಂಡಿದ್ದಾರೆ. ಆಡಿದ ಮಾತು, ಮಾತು ಮುಗಿಯುವುದರೊಳಗೇ ಮರೆತುಹೋಗಿರುತ್ತದೆ ಚಿತ್ರರಂಗದಲ್ಲಿ ಇಂದು ಬಹುಪಾಲು ಮಂದಿಗೆ.ಅಂಥವರು ಕೇವಲ ಮುಖಸ್ತುತಿಗೆ ಮಾತನಾಡಿ ಮರೆತುಬಿಡುವ ಪರಿಪಾಠವನ್ನು ಬೆಳೆಸಿಕೊಂಡಿರುತ್ತಾರೆ.
ಮಾತೆತ್ತಿದರೆ “ಸಿನಿಮಾ ಲಾಂಗ್ವೇಜ್” ಎಂದು ಬಡಬಡಾಸುವ ಗಾಂಧೀನಗರದ ಗಂಧದಗುಡಿಯ ಮಂದಿಗಳು ನೂರಕ್ಕೆ ತೊಂಬತ್ತು ಸಿನಿಮಾಗಳು ಸೋಲುತ್ತಿರುವ ಈ ಘಟ್ಟದಲ್ಲಿ ಆ ತೊಂಬತ್ತು ಸಿನಿಮಾಗಳು ಯಾವ”ಲಾಂಗ್ವೆಜ್”ನಲ್ಲಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದೇ ಇಲ್ಲ. ಯಾರೋ ಪರಿಚಯಿಸಿದ ಹೊಸ ಪ್ರತಿಭೆ ಗೆದ್ದ ನಂತರ ಅವರ ಬಾಲ ಹಿಡಿಯುತ್ತಾರೆ. ನಿಜ…ಅದು ಉದ್ಯಮದ ಚಾಕಚಕ್ಯತೆ ತಪ್ಪಲ್ಲ, ಆದರೆ ಹೊಸಪ್ರತಿಭೆಯೊಂದನ್ನು ಮುಖ್ಯವಾಹಿನಿಯಲ್ಲಿ ತಂದು ನಿಲ್ಲಿಸಿ ರೇಸ್‌ಗೆ ಬಿಡುವ ತಾಕತ್ತು ನಮ್ಮಲ್ಲಿ ಎಷ್ಟು ಜನಕ್ಕಿದೆ?
ಕೆಲವೇ ಕೆಲವರು…ಅಂತವರಲ್ಲಿ ಒಬ್ಬರು ಆ ನಿರ್ದೇಶಕರು. ಚಿತ್ರರಂಗಕ್ಕೆ ಹೊಸಪ್ರತಿಭೆಗಳನ್ನು ತಯಾರಿಸುವ ಕಾರ್ಖಾನೆಯಂತೆ ಆತ. ಇಂದು ರಾಧಿಕ ಪಂಡಿತ್,ಯಶ್ ಅಂತವರು ತಾರೆಗಳಾಗಿದ್ದರೆ ಮೊದಲು ಅವರಿಗೆ ಬೆಳಕು ಚೆಲ್ಲಿದವರು,ಬೆಳಕಿಗೆ ತಂದವರು ಮತ್ತಾರೂ ಅಲ್ಲ…ಅವರೇ “ಸೂಪರ್”(“ಸೂಪರ್” ಚಿತ್ರದ)ಛಾಯಾಗ್ರಾಹಕ,ಖ್ಯಾತ ನಿರ್ದೇಶಕ “ಅಶೋಕ್ ಕಶ್ಯಪ್”. ಅವಕಾಶ ಕೇಳಿದವರಿಗೆಲ್ಲಾ “ಲಿಫ್ಟ್ ಕೊಡ್ಲಾ”?(ಲಿಫ್ಟ್ ಕೊಡ್ಲಾ”ಚಿತ್ರದ ನಿರ್ದೇಶಕ) ಎಂದು ಲಿಫ್ಟ್ ಕೊಟ್ಟು ಗುರಿತಲುಪಿಸಿದ್ದಾರೆ, ಮೇಲಕ್ಕೆತ್ತಿದ್ದಾರೆ. ಕಲ್ಲಿನಂತವರನ್ನೂ ಕಡೆದು ಕೆತ್ತಿದ್ದಾರೆ,ಶಿಲ್ಪವನ್ನಾಗಿಸಿದ್ದಾರೆ.ಯಾರನ್ನೂ ಅಲ್ಪರೆಂದು ಕೀಳಾಗಿ ಕಾಣದೆ “ಪ್ರೀತಿಯಿಂದ” ಪ್ರೀತಿಯನ್ನು ಹಂಚಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದರೆ ಮಾತ್ರ ಕಿರುತೆರೆ,ಬೆಳ್ಳಿತೆರೆಗಳಲ್ಲಿ ನೆಲೆಯೂರಬಹುದೆಂಬ ಪರಿಕಲ್ಪನೆಯನ್ನು ಸುಳ್ಳುಮಾಡುತ್ತಿದ್ದಾರೆ. ಕಾಡಮೂಲೆಯ ಕನಸುಗಳಿಗೆ ಅವಕಾಶದ ಬೀಜ ಬಿತ್ತಿ ನನಸಾಗಿಸಿ ಹೂನಗುವನ್ನು ಅರಳಿಸುತ್ತಿದ್ದಾರೆ. “ಸಿನಿಮಾ ಲಾಂಗ್ವೇಜ್”ಬಗ್ಗೆ ಗಂಟೆಗಟ್ಟಲೆ ಮಾತಾಡುವವರ ನಂಟನ್ನು ಮುರಿದುಕೊಂಡು ಮೌನವಾಗಿ ಹೊಸಪರಿಭಾಷೆಯೊಂದನ್ನು ಬರೆಯುತ್ತಿದ್ದಾರೆ. ಸದ್ದಿಲ್ಲದೆ ತೀರ್ಥಹಳ್ಳಿಯ ಸಮೀಪ ಕೋಟೆಗದ್ದೆಯಲ್ಲಿ “ಪ್ರೀತಿಯಿಂದ” ಧಾರವಾಹಿಯ ಚಿತ್ರೀಕರಣವನ್ನು ಸುವರ್ಣ ವಾಹಿನಿಗಾಗಿ ಮಾಡುತ್ತಿದ್ದಾರೆ. ಕಾಡಮೂಲೆಯಲ್ಲಿ ಬಾಡಿಹೋಗುತ್ತಿದ್ದ ನನ್ನಂತಹ ಗಾಯಕನನ್ನೂ ನಾಡಿಗೆ ಪರಿಚಯಿಸಿದ್ದಾರೆ.
ಒಂದುವರೆ ನಿಮಿಷದ ಶೀರ್ಷಿಕೆ ಗೀತೆಯೊಂದನ್ನು ಧಾರಾವಾಹಿಗಾಗಿ ಆಕಸ್ಮಿಕವಾಗಿ ಹಾಡಿ ಪುಟಗಟ್ಟಲೆ ನಾನೇ ಅದರ ಬಗ್ಗೆ ಬರೆದುಕೊಳ್ಳುತ್ತಿದ್ದೇನೆಂದು ನಿಮಗನಿಸಬಹುದು,ನಗಬಹುದು. ಆದರೆ ಇದಕ್ಕಾಗಿ ಏಳುವರೆವರ್ಷದಿಂದ ಪ್ರಯತ್ನಿಸುತ್ತಿದ್ದ ನನಗೆ ಸಂಭ್ರಮಿಸಲಿಕ್ಕೆ ಇಷ್ಟೇ ಸಾಕು. ನನ್ನ ಪಾಲಿನ ಅಡಿಗಲ್ಲಿನ ಸಮಾರಂಭ ಅಚ್ಚಳಿಯದೆ ಉಳಿದುಬಿಡುತ್ತದೆ. ಅಶೋಕ್ ಕಶ್ಯಪ್ ಹಾಗು ರೇಖಾರಾಣಿ “ಮನಸ್ಸು ಮಾಡಿದ್ದರೆ” ಒಬ್ಬ ಖ್ಯಾತಗಾಯಕನಿಗೆ ಈ ಅವಕಾಶವನ್ನು ಕೊಡಬಹುದಿತ್ತು.ಆದರೆ ನನಗೆ ಅವಕಾಶ ಕೊಡುವ “ಮನಸ್ಸು ಮಾಡಿದ್ದಾರೆ”. ಅದೇ ಅವರಿಬ್ಬರ ದೊಡ್ಡ ಮನಸ್ಸು. ನಾಡಿನ ಕೋಟ್ಯಾಂತರ ಪುಟ್ಟಪುಟ್ಟ ಪೆಟ್ಟಿಗೆಯಲ್ಲಿ ನನ್ನ ಗೀತೆ ಬಿತ್ತರವಾಗುವಂತೆ ಮಾಡಿ ಅಷ್ಟರ ಮಟ್ಟಿಗೆ ನನ್ನ ದನಿ ಹತ್ತಿರವಾಗುವಂತೆ ಮಾಡಿದ್ದಾರೆ. ರಂಗಕರ್ಮಿ ವರದಾಮೂಲದ ಗುರುಮೂರ್ತಿ ನನ್ನನ್ನು ಅವರಿಗೆ ಪರಿಚಯಿಸಿದ್ದಾರೆ. ಇಂಥವರಿಂದ ಇನ್ನೂ ಹೊಸಹೊಸಪ್ರತಿಭೆಗಳಿಗೆ ಅವಕಾಶ ದೊರೆತರೆ ಅದೇ ನಮ್ಮ ನಾಡಿನ ಸೌಭಾಗ್ಯ.
ಕಡೆಯದಾಗಿ ಒಂದು ಮಾತು…
ಸುವರ್ಣವಾಹಿನಿಯಲ್ಲಿ ರಾತ್ರಿ ಒಂಬತ್ತಕ್ಕೆ”ಪ್ರೀತಿಯಿಂದ “ಧಾರವಾಹಿಯ ಗೀತೆಯನ್ನು ಕೇಳಿ(ಧಾರವಾಹಿಯನ್ನೂ ನೋಡಿ),
ನನ್ನ ಗಾಯನದಲ್ಲಿನ ತಪ್ಪುಒಪ್ಪುಗಳನ್ನು ಹೇಳಿ,
ದೋಷಗಳನ್ನು ತಿದ್ದಿಕೊಳ್ಳಲು ಅಣಿಯಾಗಿದ್ದೇನೆ,
ನಿಮ್ಮ ಶುಭಹಾರೈಕೆಗಳನ್ನು ಅಪ್ಪಿಕೊಂಡು
“ಪ್ರೀತಿಯಿಂದ”ನಿಮ್ಮ ಪ್ರಿಯದನಿಯಾಗುತ್ತೇನೆ.
“ಪ್ರೀತಿಯಿಂದ”
ಚಿನ್ಮಯ.ಎಂ.ರಾವ್,ಹೊನಗೋಡು
22-4-2011