ಕನ್ನಡಸಂಗೀತ

ಕಾವೇರಿ ಸಮಸ್ಯೆಗೆ ಆಲ್ಪೈನ್ ಪಬ್ಲಿಕ್ ಶಾಲೆಯ 160 ವಿದ್ಯಾರ್ಥಿಗಳ ಹಾಡಿನ ಉತ್ತರ !

ಅರ್ಥಪೂರ್ಣ ಗಾಯನಕ್ಕೆ ಸಾಕ್ಷಿಯಾದರು ನಾಡಿನ ಹಿರಿಯ ಕವಿ ದೊಡ್ಡರಂಗೇಗೌಡ

ಬೆಂಗಳೂರು : ನಾಡಿನ ಜೀವನದಿ ಕಾವೇರಿಗಾಗಿ ತಮಿಳುನಾಡಿನೊಂದಿಗೆ ಅಗಾಗ ನಡೆಯುತ್ತಲೇ ಇರುವ ಗಲಭೆಗಳಿಗೆ ನಗರದ ಇಸ್ರೋ ಲೇಔಟಿನಲ್ಲಿರುವ ಆಲ್ಪೈನ್ ಪಬ್ಲಿಕ್ ಶಾಲೆಯ ಒಂದು, ಎರಡು ಹಾಗೂ ಮೂರನೆಯ ತರಗತಿಯ 160 ಮಕ್ಕಳು ಜೊತೆಗೂಡಿ ವಾದ್ಯ ಸಂಗೀತದ ಜೊತೆಗೆ ಏಕಕಂಠದಿಂದ ಹಾಡುವ ಮೂಲಕ ವಿಶಿಷ್ಟ ಉತ್ತರವನ್ನು ನೀಡಿ ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಿದರು.

ಹೌದು, ಇಷ್ಟು ಪುಟ್ಟ ಪುಟ್ಟ ಮಕ್ಕಳು, ಅದರಲ್ಲೂ 160 ಮಕ್ಕಳು ಏಕಕಂಠದಲ್ಲಿ ವಾದ್ಯ ಸಂಗೀತದ ಲಯಕ್ಕೆ ತಪ್ಪಿಲ್ಲದಂತೆ ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಕಳೆದ ವರ್ಷ ಕಾವೇರಿಗಾಗಿ ರಾಜ್ಯದಾದ್ಯಂತ ನಿರ್ಮಾಣವಾಗಿದ್ದ ಪ್ರಕ್ಷುಬ್ಧ ಪರಿಸ್ಥಿಯ ಕಹಿನೆನಪನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಂಡೇ, ಅದಕ್ಕೆ ಈ ಹಾಡೇ ಪರಿಹಾರಸೂತ್ರ ಎಂಬಂತಿತ್ತು ಹಾಡುವಾಗ ಮಕ್ಕಳ ಹಾವಭಾವ. “ನಮ್ಮ ನಾಡ ಮಂತ್ರ ಅದುವೆ ಶಾಂತಿ ಮಂತ್ರ ನಮ್ಮದು” ಎನ್ನುವ ಸಾಲುಗಳು ಮಕ್ಕಳ ಇಂತಹ ಶುದ್ಧ ಅಂತರಂಗಕ್ಕೆ ಕನ್ನಡಿ ಹಿಡಿದಂತಿತ್ತು. ಇದಕ್ಕೆ ಇಂಬುಕೊಡುವಂತೆ ಗೀತೆಯೊಂದನ್ನು ರಚಿಸಿ ಅದಕ್ಕೆ ಸಂಗೀತವನ್ನು ಸಂಯೋಜಿಸಿಕೊಟ್ಟಿದ್ದ ಸಂಗೀತ ಶಿಕ್ಷಕ ಚಿನ್ಮಯ ಎಂ.ರಾವ್ ಹಾಡಿನ ಕೊನೆಯಲ್ಲಿ ತಾವೂ ದನಿಗೂಡಿಸಿದರು.

ಕಳೆದ ಡಿಸೆಂಬರ್ 17 ರಂದು ನಡೆದ ಆಲ್ಪೈನ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡದ ಹಿರಿಯ ಸಾಹಿತಿ, ಕವಿ ಪೆÇ್ರಫೆಸರ್ ದೊಡ್ಡರಂಗೇಗೌಡ ಇಂಥದ್ದೊಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. “ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ, ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ” ಎಂಬ ಈ ಗಾಯನ ಮುಗಿಯುತ್ತಲೇ ಒಮ್ಮೆಲೇ ವೇದಿಕೆಗೆ ಏರಿ ಮಕ್ಕಳೊಡನೆ ಕುಳಿತು ಫೆÇೀಟೋ ತೆಗೆಸಿಕೊಂಡ ದೊಡ್ಡರಂಗೇ ಗೌಡ ಅವರು ಸಾಕಷ್ಟು ಮಕ್ಕಳಿಗೆ ಹಸ್ತಲಾಘವವನ್ನೂ ನೀಡಿ ಅಭಿನಂದಿಸುವ ಮೂಲಕ ಸಂತಸ ಹಂಚಿಕೊಂಡರು. ಈ ಸಂದರ್ಭದಲ್ಲಿ ಹಾಜರಿದ್ದ ಶಾಲೆಯ ಪ್ರಾಂಶುಪಾಲಕಿ ಜಯಲಕ್ಷ್ಮಿ ಶಾಸ್ತ್ರಿ, ಅಕಾಡೆಮಿಕ್ ಕೋ ಆರ್ಡಿನೇಟರ್ ಕವಿತಾ ದೀಪಕ್ ಪರ್ವತೀಕರ್ ಹಾಗೂ ಇಡೀ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದ ಪರಿಶ್ರಮವನ್ನು ದೊಡ್ಡರಂಗೇಗೌಡ ಅವರು ಶ್ಲಾಘಿಸಿದರು.

ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಸಂಗೀತ-ಸಾಹಿತ್ಯ : ಚಿನ್ಮಯ ಎಂ.ರಾವ್

ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ ||

ಎಲ್ಲ ಜನರು ಕೂಡಿ ನಲಿವ ನಮ್ಮ ಚೆಲುವ ನಾಡಿದು |
ಏನೆ ಬರಲಿ ಒಂದುಗೂಡಿ ಮುನ್ನಡೆವ ನಾಡಿದು |
ಮುನ್ನಡೆವ ನಾಡಿದು |
ನಮ್ಮ ನಾಡ ಮಂತ್ರ ಅದುವೆ ಶಾಂತಿ ಮಂತ್ರ ನಮ್ಮದು |
ನಮ್ಮ ನಾಡ ಮಂತ್ರ ಅದುವೆ ಶಾಂತಿ ಮಂತ್ರ ನಮ್ಮದು |
ಶಾಂತಿ ಮಂತ್ರ ನಮ್ಮದು |

ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ ||

ಎಲ್ಲ ರಾಜ್ಯದಿಂದ ಬಂದ ಜನರು ನಮ್ಮ ನಾಡಲಿ |
ಸಂತಸದಿಂ ಬಾಳುತಿಹರು ಕನ್ನಡಾಂಬೆ ಮಡಿಲಲಿ |
ಕನ್ನಡಾಂಬೆ ಮಡಿಲಲಿ ||
ಎಲ್ಲ ಜಾತಿ ಎಲ್ಲ ಭಾಷೆ ಸರ್ವಜನರ ನಾಡಿದು |
ಒಂದೆ ರೀತಿ ಒಂದೆ ಪ್ರೀತಿ ನೀಡುವಂಥ ನಾಡಿದು |
ನೀಡುವಂಥ ನಾಡಿದು ||

ನೋಡ ಬನ್ನಿ ಎಂಥ ಚೆಂದ ನಮ್ಮ ನಾಡು ಕನ್ನಡ
ಕಾವೇರಿ ಹುಟ್ಟಿದಂಥ ನಮ್ಮ ನಾಡು ಕನ್ನಡ ||

ಒಡೆದು ಆಳೊ ಜನರನೆಲ್ಲ ದೂರ ಸರಿಸೊ ನಾಡಿದು |
ದೂರ ಸರಿಸೊ ನಾಡಿದು |
ಈ ಮಣ್ಣಿನಲ್ಲಿ ಪ್ರೇಮವೆಂಬ ಹೂವು ಎಂದು ಬಾಡದು |
ಹೂವು ಎಂದು ಬಾಡದು |

ಕಾವೇರಿ ನೀರಿಗಾಗಿ ಗಲಭೆ ಹುಟ್ಟಿಕೊಂಡರು |
ಕಾವೇರಿ ನೀರಿಗಾಗಿ ಗಲಭೆ ಹುಟ್ಟಿಕೊಂಡರು |
ಶಾಂತಿಪ್ರಿಯರು ನಮ್ಮ ಜನರು ತಾಳ್ಮೆಯನ್ನು ಮೆರೆದರು |
ಪ್ರೀತಿಯನ್ನು ತೆರೆದರು |
ಒಡೆದು ಆಳೊ ಜನರ ನಡುವೆ ಶಾಂತಿಪ್ರಿಯರು ಗೆದ್ದರು |
ಸನ್ನಿವೇಶ ಲಾಭ ಪಡೆವ ದುಷ್ಟರೆಲ್ಲ ಬಿದ್ದರು |
ದುಷ್ಟರೆಲ್ಲ ಬಿದ್ದರು |
ಎರಡು ನಾಡ ರೈತರ ಕಣ್ಣೀರು ಒಂದೆ ತಾನೆ ?
ಕಣ್ಣೀರು ಒಂದೆ ತಾನೆ ?
ಸಾವಧಾನದಿಂದ ಮುನ್ನಡೆಯಬೇಕು ತಾನೆ?
ಸಹನೆ ಮಾತ್ರದಿಂದ ಮುನ್ನಡೆಯಬೇಕು ತಾನೆ?
ನಡೆಯಬೇಕು ತಾನೆ ?
ಲಾಲ್ಲಲಾ….ಲಲಾಲ ಲಾಲ ಲಾ…
ಲಾಲ್ಲಲಾ….ಲಲಾಲ ಲಾಲ ಲಾ…
ಲಾಲ್ಲಲಾ….ಲಲಾಲ ಲಾಲ ಲಾ…
ಲಾಲ್ಲಲಾ….ಲಲಾಲ ಲಾಲ ಲಾ…

[FAG id=4842]

Related Articles

Back to top button

Adblock Detected

Please consider supporting us by disabling your ad blocker