ಸಂಗೀತ ಸಮಯ

ಈಕೆ ರಮ್ಯಾ ವಾಸಿಷ್ಠ, ಇವಳು ಸಾಧಕಿ ಇದು ಸ್ಪಷ್ಟ….

ದಿನಕ್ಕೊಂದು ಕನಸು ಕಾಣುವವರನ್ನು ನೋಡಿದ್ದೇವೆ. ದಿವರಾತ್ರಿಯೂ ಹಗಲುಗನಸನ್ನೇ ಹೊದ್ದು ಮಲಗುವವರನ್ನು ನೋಡಿದ್ದೇವೆ. ಕನಸುಕಾಣುತ್ತಾ ಕ್ರೀಯಾಶೀಲರಾಗದೆ ವಯಸ್ಸು ಮುಂದೂಡುವವರನ್ನು ನೋಡಿದ್ದೇವೆ. ನಿದಿರೆಯಲ್ಲಿ ಕನಸು ಕಾಣುವುದರ ಬದಲು ಕನಸು ಕಾಣುತ್ತಲೇ ನಿದಿರೆಹೋಗುವವರನ್ನು ನೋಡಿದ್ದೇವೆ. ಕಂಡ ಕನಸನ್ನು ನನಸಾಗಿಸಲು ಹರಸಾಹಸ ಪಟ್ಟು ಸಾಗಿಸಲಾಗದೆ ಹೊತ್ತ ಗುರಿಯ ಭಾರವನ್ನು ಕೆಳಗಿಳಿಸಿ ಅಳುವವರನ್ನು ನೋಡಿದ್ದೇವೆ. ಕನಸು ನನಸಾದಾಗ ಮೈಮರೆತು ಹಳ್ಳ ಹತ್ತಿದವರನ್ನು ನೋಡಿದ್ದೇವೆ. ಅವರ ಬಗ್ಗೆ ಬಾಯ್ತುಂಬ ಮಾತನಾಡಿದ್ದೇವೆ. ಆದರೆ ಇಲ್ಲೊಬ್ಬಳಿದ್ದಾಳೆ,ಈಕೆ ತುಂಬ ವಿಭಿನ್ನ,ವಿಚಿತ್ರ. ಈಕೆ ಕನಸುಗಳನ್ನು ಕಾಣದೆ ನನಸಾಗಿಸುತ್ತಾಳೆ. ಗುರಿಯನ್ನು ಇಟ್ಟುಕೊಳ್ಳದೆ ಗುರಿಯನ್ನು ತಲುಪುತ್ತಿದ್ದಾಳೆ. ಕನಸು-ನನಸು,ಗೊತ್ತು-ಗುರಿ ಎಲ್ಲವನ್ನೂ ಆಗಲೇ ಮೇಲೊಬ್ಬ ನಿರ್ಧರಿಸಿರುತ್ತಾನೆ. ನಾವು ನಮ್ಮ ಪಾಡಿಗೆ ನಮ್ಮ ಪಾಲಿಗೆ ಬಂದ ಸವಾಲನ್ನು ಸ್ವೀಕರಿಸುತ್ತಾ ಸಹನೆಯಿಂದ ಬಾಳಬೇಕು ಎನ್ನುತ್ತಾರೆ. ಎಲ್ಲರೊಡನೆ ಎಲ್ಲರಿಗಾಗಿ ಇದ್ದು ಎಲ್ಲರಂತಲ್ಲದೆ ಎಲ್ಲೋ ಕಾಣೆಯಾಗಿ ಎಲ್ಲೆಲ್ಲೂ ಗೆಲ್ಲುತ್ತಾ, ಗೆಲುವು-ಸೋಲು ಯಾವುದನ್ನೂ ಹೆಚ್ಚು ಹಚ್ಚಿಕೊಳ್ಳದವಳಾಗಿ ವೈರಾಗ್ಯ ಭಾವದಲ್ಲಿ ಭವವನ್ನು ಭಾವಿಸುತ್ತಿರುವ ಈಕೆ ಬೇರಾರು ಅಲ್ಲ ರಮ್ಯಾ ವಾಸಿಷ್ಠ. ನಿರೂಪಕಿ,ಗಾಯಕಿ,ಸಂಗೀತ ನಿರ್ದೇಶಕಿ,ಲೇಖಕಿ ಹೀಗೆ ಇವಳ ವೃತ್ತಿಯ ವ್ಯಾಪ್ತಿ ಇವಳ ಮನಸ್ಸಿನಷ್ಟೇ ವಿಶಾಲವಾಗಿದೆ. ವೃತ್ತಿಯ ಹೊಸ ಹೊಸ ಆವೃತ್ತಿಗಳು ದಿನದಿನಕ್ಕೂ ಇವಳಲ್ಲಿ ವಿಸ್ತಾರವಾಗುತ್ತದೆ ಎಂಬುದೇ ವಿಶೇಷ!

ಪುಟ್ಟಪುಟ್ಟ ಹೆಜ್ಜೆಗಳನ್ನು ದಿಟ್ಟವಾಗಿ ಇಟ್ಟು ದಿಟವಾಗಿಯೂ ಹಲವು ಗಮ್ಯಸ್ಥಾನಗಳನ್ನು ತಲುಪುವುದೇ ರಮ್ಯಾಳ ಜೀವನ. ಆ ಕ್ಷಣಕ್ಕೆ ತನ್ನೆದುರಿಗೆ ಬಂದ ಸವಾಲನ್ನು ಪ್ರೀತಿಯಿಂದ ಮಾತನಾಡಿಸಿ ಕೈಹಿಡಿದು ಗುರಿ ತಲುಪಿಸಿಬರುವುದೇ ರಮ್ಯಾಳ ಜಾಯಮಾನ. ಈಗ ಹತ್ತುವರುಷಗಳ ಹಿಂದೆ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಕನ್ನಡದ ಮೊದಲ ರಿಯಾಲಿಟಿ ಶೋ “ನಿತ್ಯೋತ್ಸವ” ಕಾರ್ಯಕ್ರಮದಲ್ಲಿ ನಗುಮೊಗದ ಚೆಲುವೆಯೊಬ್ಬಳು ನಿರೂಪಣೆ ಮಾಡಿದ್ದನ್ನು ನೀವು ನೋಡಿರಬಹುದು.ಅವಳೇ ಇವಳು,ಇವಳೇ ಅವಳು ರಮ್ಯಾ ವಾಸಿಷ್ಠ..ಈಕೆ ಸಾಧಕಿ ಇದು ಸ್ಪಷ್ಟ.

ರಮ್ಯ-ಬಾಲ್ಯ

ಸಂಪ್ರದಾಯದ ಹಾಡುಗಳನ್ನು ಹಾಡುತ್ತಿದ್ದ ಅಮ್ಮನೇ ರಮ್ಯಾಳಿಗೆ ಮೊದಲ ಗುರು. ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರಲ್ಲಿ ಸಂಗೀತದ ಜ್ಯೂನಿಯರ್ ಪರೀಕ್ಷೆ ಮುಗಿಸಿದಳು. ಫಲಿತಾಂಶ ನೋಡಲು ಶಾಲೆಗೆ ತೆರಳಿದ ರಮ್ಯಾಳ ಅಮ್ಮ ತನ್ನ ಮಗಳ ಅಂಕಗಳನ್ನೇ ಪ್ರಕಟಿಸಿಲ್ಲ ಎಂದು ದೂರಿತ್ತಳು. ಕಾರಣ ಪ್ರಾಕ್ಟಿಕಲ್‌ಗೆ ೮೦,ಥಿಯರಿಗೆ ೨೦, ಒಟ್ಟು ೧೦೦ ಎಂದು ರಮ್ಯಾಳ ಅಂಕದ ಜಾಗದಲ್ಲಿ ಹಾಕಿದ್ದರು. ಆದರೆ ಆಕೆಗೆ ೧೦೦ ಕ್ಕೆ ೧೦೦ ಬಂದಿದೆ,ಮೊದಲ ರಾಂಕ್ ಎಂದು ಆ ನಂತರ ಅಲ್ಲಿಯ ಅಧಿಕಾರಿಗಳು ತಿಳಿಹೇಳಿದಾಗ ಅದನ್ನು ನಂಬಲಾಗಲಿಲ್ಲ !ಆಶ್ಚರ್ಯ! ಇದನ್ನು ರಮ್ಯಾಳಿಗೆ ತಿಳಿಸಬಹುದಾ? ಬೇಡವಾ? ಅದು ಸುಳ್ಳಾಗಿದ್ದರೆ..ಎಂಬ ಅಳುಕಿನಂದಲೇ ಮನೆಗೆ ಬಂದು ಮಗಳಿಗೆ ಹೇಳಿದಳು. ವಿಷಯ ತಿಳಿದ ರಮ್ಯಾ “ಹೌದ?” ಎಂದು ಒಂದಿನಿತೂ ಬೀಗದೆ ನಿರ್ಲಿಪ್ತಳಾಗಿಯೇ ಇದ್ದಳು. ಬಾಲ್ಯದಿಂದಲೇ ಅವಳ ಸ್ವಭಾವ ಹಾಗೆ. ಯಶಸ್ಸಿಗೆ ಹಿಗ್ಗದೆ ಸೋಲಿಗೆ ಕುಗ್ಗದೆ ಒಂದೇ ರೀತಿ ಸಮಚಿತ್ತದಿಂದ ಎಲ್ಲವನ್ನೂ ತನ್ನದಲ್ಲ,ಇನ್ನಾವುದೋ ಶಕ್ತಿ ಇದಕ್ಕೆಲ್ಲಾ ಕಾರಣವೆಂದು ತಾನು ಇದ್ದಂತೆಯೇ ಇರುವುದು. ಶ್ರೀನಿವಾಸ ಅಯ್ಯಂಗಾರರ ಕಾಲಾನಂತರ ಅವರ ಶಿಷ್ಯರಾದ ಬಿ.ವಿ ವಿಜಯಲಕ್ಷ್ಮಿ ಅವರಲ್ಲಿ ರಮ್ಯ ಸೀನಿಯರ್ ಅಭ್ಯಾಸ ಮಾಡಿದರು. ಕಾಲೇಜಿನಲ್ಲಿ ತನ್ನ ಸಹಪಾಠಿಗಳು ಹಿಂದುಸ್ಥಾನಿ ಹಾಡುವುದನ್ನು ನೋಡಿ ಆಕರ್ಷಿತರಾಗಿ ಅದರ ಪ್ರಾಥಮಿಕ ಜ್ನಾನವನ್ನಾದರೂ ತಿಳಿಯಬೇಕೆಂದು ವಿನಾಯಕ ತೊರವಿ ಅವರಲ್ಲಿ ಏಳು ವರ್ಷ ಅಭ್ಯಾಸ ಮಾಡಿದರು. ರಾಜು ಅನಂತಸ್ವಾಮಿ ಅವರಿಂದ ಸುಗಮಸಂಗೀತವನ್ನೂ ಕಲಿತರು. ಈ ತುಲನಾತ್ಮಕ ಅಧ್ಯಯನ ಅವರ ಇಂದಿನ ಸಂಗೀತ ನಿರ್ದೇಶನಕ್ಕೆ ಸಹಕಾರಿಯಾಗಿದೆ.

ಗಾಯನ-ಸಂಗೀತ ನಿರ್ದೇಶನ

ರಮ್ಯ ಆರನೇ ತರಗತಿಯಲ್ಲಿರುವಾಗ ಒಮ್ಮೆ ಶಾಲೆಯಲ್ಲಿ ಕವನ ಬರೆಯುವ ಸ್ಪರ್ಧೆಯನ್ನೇರ್ಪಡಿಸಿದ್ದರು. ಕವನ ಬರೆಯುತ್ತಲೇ ಅದಕ್ಕೆ ರಾಗ ಹಾಕಿದ ರಮ್ಯಾ ಅದನ್ನು ಕೂಡಲೇ ಎಲ್ಲರೆದುರು ಹಾಡಿಬಿಟ್ಟಳು. “ನೀನೆ ನೀನೆ..ಎಲ್ಲೆಡೆಯೂ ನೀನೇ..ಕಾವೇರಿ ತೀರದಲ್ಲಿ..”ಎಂದು ಹಾಡಿದಾಗ ತರಗತಿಯಲ್ಲಿ ಚಪ್ಪಾಳೆಯ ಸುರಿಮಳೆ. ಆದರೆ ಇದನ್ನು ತುಂಬಾ ಸಹಜವೇನೋ ಎಂಬಂತೆ ರಮ್ಯ ನಿರ್ವಹಿಸಿದ್ದಳು. ಹಾಡಿಗೊಂದು ರಾಗವಿರಬೇಕು ತಾನೆ? ತಾನೇನೋ ಮಹತ್ತರವಾದುದನ್ನು ಮಾಡಿದ್ದೇನೆ ಎಂದು ಆಕೆಗೆ ಅನ್ನಿಸಲೇ ಇಲ್ಲ. ಅಂದೇ ಸಂಗೀತ ನಿರ್ದೇಶಕಿ ಕಮ್ ಗಾಯಕಿಯಾದ ರಮ್ಯ ತನ್ನ ೧೯ನೇ ವಯಸ್ಸಿನಲ್ಲಿ ಕುವೆಂಪು ಅವರ ಕವನಗಳಿಗೆ ಸಂಗೀತ ನೀಡಿದಳು. “ತುಂಗತರಂಗ” ಎಂಬ ಸುಮಧುರ ಗೀತೆಗಳ ನಾದ ತರಂಗ ಇಂದಿಗೂ ಕುಪ್ಪಳ್ಳಿಯ ಕುವೆಂಪು ಮನೆಯಲ್ಲಿ ಮೆಲುದನಿಯಲ್ಲಿ ಕೇಳಿಬರುತ್ತಿರುತ್ತದೆ. ಅದೆಷ್ಟೋ ಸಂಗೀತಪ್ರೇಮಿಗಳು ಇದು ಯಾರ ದನಿ? ಎಂದು ಅಲ್ಲೇ ಸಿ.ಡಿಯನ್ನು ಖರೀದಿಸಿ ರಮ್ಯಾಳಿಗೆ ಅಭಿನಂದಿಸಿದ್ದಾರೆ.

ಕನ್ನಡದ ಆಸ್ತಿ,ನನ್ನ ಅಜ್ಜ ನನ್ನ ಹಾಡು,ಕನಕ ಪುರಂದರ ಹೀಗೆ ಇನ್ನೂ ಅನೇಕ ಸಿ.ಡಿಗಳಿಗೆ ಸಂಗೀತ ನೀಡಿರುವ ರಮ್ಯ, “ಸಲ್ಮಾ” ಎಂಬ ಹೆಸರಿನಲ್ಲಿ ಉರ್ದು ಗಜಲ್‌ಗಳನ್ನು ತಾನೇ ಬರೆದು “ಆಪ್ ಕಿ ಸಲ್ಮಾ” ಎಂಬ ಹೆಸರಿನ ಮ್ಯೂಸಿಕ್ ಆಲ್ಬಂ ಮಾಡಿದ್ದಾರೆ. ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ.

ಮೈಸೂರ್ ಸ್ಯಾಂಡಲ್,ನಮ್ಮ ಮೆಟ್ರೊ ಇನ್ನೂ ಅನೇಕ ಬ್ರ್ಯಾಂಡ್‌ಗಳಿಗೆ ೫೦ಕ್ಕೂ ಹೆಚ್ಚು ಜಿಂಗಲ್‌ಗಳನ್ನು ರಚಿಸಿಕೊಟ್ಟಿದ್ದಾರೆ. “ಮಿನುಗು ತಾರೆ” ಎಂಬ ಈ-ಟೀವಿಯ ಪ್ರತಿಭಾನ್ವೇಷಣೆ ಕಾರ್ಯಕ್ರಮಕ್ಕೆ ಸಂಗೀತ-ಸಾಹಿತ್ಯ ನೀಡಿದ್ದಾರೆ. ಈಗ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ “ರಾಘವೇಂದ್ರ ವೈಭವ” ಧಾರವಾಹಿಯಲ್ಲಿ ಮಧ್ಯೆ ಮಧ್ಯೆ ಸನ್ನಿವೇಶಕ್ಕನುಗುಣವಾಗಿ ಬರುತ್ತಿರುವ ಭಕ್ತಿಗೀತೆಗಳಿಗೆ ರಮ್ಯಾಳದ್ದೇ ಸಂಗೀತ ನಿರ್ದೇಶನ.ಮುರಾರಿ ಹಾಗು ಕಿಲಾಡಿಕೃಷ್ಣ ಚಿತ್ರಗಳಲ್ಲಿ ತಲಾ ಒಂದು ಗೀತೆಗೆ ಹಾಡಿದ್ದಾರೆ.

ಹಾಡಲು ಹೋಗಿ ನಿರೂಪಕಿಯಾದಳು!

ಉದಯ ವಾಹಿನಿಗೆ ಭಾವಪೂರ್ಣವಾಗಿ ಭಾವಗೀತೆ ಹಾಡುತ್ತಿದ್ದ ರಮ್ಯಾಳ ಸಹಜ ಹಾವಭಾವವನ್ನು ಗಮನಿಸಿದ ಸಂಜಯ್ ಕುಲ್‌ಕರ್ಣಿ ನಾಳೆ ನೀವು ನಿರೂಪಣೆ ಮಾಡಲು ಬನ್ನಿ ಎಂದುಬಿಟ್ಟರು! ಈ ಅನಿರೀಕ್ಷಿತ ದಿಕ್ಕಿಗೆ ತಲೆಬಾಗಿದ ರಮ್ಯ ಅಂತೂ ಮರುದಿನ ನಿರೂಪಣೆ ಮಾಡಿದಳು. ತನ್ನನ್ನು ಕೇವಲ ಪರೀಕ್ಷೆಗೆಂದು ಕರೆಸಿದ್ದಾರೆಂದು ಅಚ್ಚುಕಟ್ಟಾಗಿ ಕೆಲಸ ಮಾಡಿ ಮನೆಗೆ ಬಂದ ರಮ್ಯಾಳಿಗೊಂದು ಅಚ್ಚರಿ ಕಾದಿತ್ತು. ಪಕ್ಕದ ಮನೆಯವಳು ರಮ್ಯಾ ಟೀವಿಯಲ್ಲಿ ನಿರೂಪಣೆ ಮಾಡುತ್ತಿರುವುದನ್ನು ತೋರಿಸಿದಳು. ಆ ಕ್ಷಣಕ್ಕೊಂದು ನಗು ಅಷ್ಟೇ…ಮತ್ತೆ ಯಥಾಪ್ರಕಾರ ಇದು ಇಷ್ಟೇನ ಎಂಬ ಸಾಮಾನ್ಯಭಾವ. ಈಕೆಗೆ ನಿರಂತರ ಸಾಹಿತ್ಯದ ಅಧ್ಯಯನ ಇರುವುದರಿಂದ ನಿರೂಪಣೆ ನೀರುಕುಡಿದಷ್ಟೇ ಸಲೀಸು. ಇಂಪಾದ ದನಿಯಲ್ಲಿ ಸ್ನಿಗ್ಧಸುಂದರಿಯೊಬ್ಬಳು ಸುಂದರವಾಗಿ ನಿರೂಪಣೆಯನ್ನು ನಿರೂಪಿಸುತ್ತಿದ್ದರೆ ಜನ ಕೇಳದೇ ಇರುತ್ತಾರಾ? ಅದೆಷ್ಟೋ ಬಾರಿ ಇವಳ ನಿರೂಪಣೆಯ ಮುಂದೆ ಮುಖ್ಯ ಭಾಷಣಕಾರರ ಭಾಷಣ ಸಪ್ಪೆಯಾದದ್ದೂ ಉಂಟು. ಉದಯವಾಹಿನಿಯ ಪ್ರಶ್ನೋತ್ತರ,ನೆನಪಿನಂಗಳ,ಹೃದಯದಿಂದ ಕಾರ್ಯಕ್ರಮಗಳಲ್ಲದೆ ೨೫೦ಕ್ಕೂ ಹೆಚ್ಚು ಸರ್ಕಾರಿ ಉತ್ಸವಗಳಲ್ಲಿ ನೇರಪ್ರಸಾರಗಳಲ್ಲಿ ರಮ್ಯ ತಪ್ಪಿಲ್ಲದೆ ಸರ್ವರೂ ಒಪ್ಪುವಂತೆ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ನಿರೂಪಣೆ ಮಾಡಲು ಹೋಗಿ ನಟಿಯಾದಳು!

ಅಂದು ಮೊದಲ ಬಾರಿ ಉದಯದಲ್ಲಿ ನಿರೂಪಣೆ ಮಾಡಿ ಮೆಟ್ಟಿಲುಗಳನ್ನಿಳಿವಾಗ ಅಚಾನಕ್ಕಾಗಿ ಎದುರಿಗೆ ಸಿಕ್ಕ ನಿರ್ದೇಶಕ ಟಿ.ಎನ್ ಸೀತಾರಾಮ್ “ಎ ಮರಿ…ನಿಂದು ಶೂಟಿಂಗ್ ಮಾಡ್ಲೆ ಇಲ್ಲ್ವಲ್ಲೆ….ನಾನ್ ಫೋನ್ ಮಾಡ್ತೀನಿ ..ನಾಡಿದ್ದು ರೆಡಿ ಇರು..”ಅಂದ್ ಬಿಟ್ರು. ಈ ಹಿಂದೆ ರಮ್ಯ ಶಾಲೆಯಲ್ಲಿ ಟಿ.ಪಿ ಕೈಲಾಸಂ ನಾಟಕವನ್ನು ಚೆನ್ನಾಗಿ ಅಭಿನಯಿಸಿದ್ದಾಗಲೇ ಗಮನಿಸಿದ್ದ ಟಿ.ಎಮ್.ಎಸ್ ನಟಿಸುತ್ತೀಯೇನಮ್ಮ? ಅಂತ ಕೇಳಿದ್ದರು. ಆಗ ಮುಕ್ತವಾಗಿ ಹುಮ್..ಅಂದಿದ್ದ ರಮ್ಯಾಳಿಗೆ “ಮುಕ್ತ” ಧಾರವಾಹಿಗೆ ಆಹ್ವಾನ ಬಂದೇ ಬಿಟ್ಟಿತು. ಮೊದಲಬಾರಿಗೆ ಚೆನ್ನಾಗಿ ಅಭಿನಯಿಸಿದಳು. ಚಿತ್ರೀಕರಣ ಮುಗಿಸಿ ಟಿ.ಎಮ್.ಎಸ್ ವಾಪಾಸಾದನಂತರ ಪ್ರೊಡಕ್ಷನ್ ಮ್ಯಾನೆಜರ್ ಕೇಳಿದ..”ಮೇಡಮ್…ನಿರ್ದೇಶಕರು ನಿಮ್ಮ ಸಂಬಂಧಿಕರಾ?” ಇಲ್ಲ..ಏಕೆ? ಎಂದಾಗ ಆತ ಅಂದ “ಮೇಡಮ್ ನಿರ್ದೇಶಕರು ಈ ಸಂಚಿಕೆಯನ್ನು ನಿಮಗೋಸ್ಕರವಾಗಿ ವಿಶೇಷವಾಗಿ ಬರೆದು ಚಿತ್ರೀಕರಿಸಿದ್ದಾರೆ..!” ಇದೇ ರಮ್ಯ ವಿಶೇಷ ಎಂಬುದಕ್ಕೊಂದು ಸಣ್ಣ ಉದಾಹರಣೆ.ಮುಕ್ತಾದ ಪ್ರಿಯದರ್ಶಿನಿ ಎಲ್ಲರಿಗೂ ಪ್ರಿಯಳಾದಳು. ನಂತರ ಸಾಧನೆ,ಕಾರ್ಮೋಡ, ಅಶೋಕ್ ಕಶ್ಯಪ್ ಅವರ ಟಿಲಿಚಿತ್ರ ಯಾರಿಗೆ ಯಾರು? ಇನ್ನೂ ಹಲವಾರು ಧಾರವಾಹಿಗಳಲ್ಲಿ ಅಭಿನಯಿಸಿದರು.

“ಮಂದ್ರ”ದಿಂದ ತಾರದವರೆಗೆ…..

ಕಲಾವಿದ ಒಬ್ಬ ಪೋಸ್ಟ್ ಮ್ಯಾನ್ ಇದ್ದ ಹಾಗೆ…ಆತ ಏನನ್ನು ಪೋಸ್ಟ್ ಮಾಡುತ್ತಾನೊ ಅದು ಜನರಿಗೆ ತಲುಪುತ್ತದೆ.ಹಾಗಾಗಿ ಪ್ರತಿಯೊಬ್ಬ ಕಲಾವಿದನಿಗೂ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ. ಆತ ಸಮಾಜದಲ್ಲಿ ಒಳ್ಳೆಯದನ್ನು ಬಿತ್ತಿದರೆ ಫಲಿತಾಂಶ ಒಳ್ಳೆಯದೇ ಆಗಿರುತ್ತದೆ. ಸದಭಿರುಚಿಯನ್ನು ಬೆಳೆಸಬೇಕೆಂದು ರಮ್ಯಾ “ಮಂದ್ರ” ಎಂಬ ತಮ್ಮದೇ ಸಂಸ್ಥೆ ಹುಟ್ಟು ಹಾಕಿಕೊಂಡು ನಮ್ಮ ಸಂಸ್ಕೃತಿಯ ದೋಣಿ ಮುಳುಗದಂತೆ ಹುಟ್ಟು ಹಾಕುತ್ತಾ ಮುನ್ನಡೆಸುತ್ತಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನ ಓಟದೆಡೆಗೆ ನೋಟವನ್ನೂ ಬೀರದೆ ತಮ್ಮದೇ ಆದ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಹನೆಯಿಂದ ಶಾಂತವಾಗಿ ಕಾರ್ಯಸಾಧನೆಯನ್ನು ಮಾಡುತ್ತಿರುವ ರಮ್ಯ ಕನ್ನಡನಾಡಿಗೆ ಕೊಡುಗೆಯಾಗಲಿ.

ಲೇಖನ-ಚಿನ್ಮಯ.ಎಮ್.ರಾವ್ ಹೊನಗೋಡು

Monday, ‎June ‎6, ‎2011

*************************

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.