ಕಥಾಕಣಜಸಾಹಿತ್ಯ

KD Street ಕಲೀಲ

VIJAY C.V TUMAKURವಿಜಯ್ ಸಿ.ವಿ ತುಮಕೂರು

ಕಟ್ಟೆ ದೇವಾಚಾರ್ ಬೀದಿ ಕೊನೇಲಿ ಒಂದು ಸೋಡಿಯಮ್ ಲ್ಯಾಂಪ್ ಶೇ.೬೦ರಷ್ಟು ಬೆಳಕನ್ನು ತನ್ನ ಶಕ್ತಿ ಮೀರಿ ಸೂಸುತ್ತಿತ್ತು. ಮೂರು ಬೀದಿ ನಾಯಿಗಳು ಚಳಿಗಾಲದ ಥಂಡಿ ಅರಗಿಸಿಕೊಳ್ಳಲು ಅಲ್ಲೇ ಬದಿಯಲ್ಲಿ ಆರಿದ ಬೂದಿಯ ಮೇಲೆ ಬಿದ್ದು ಹೊರಳಾಡುತ್ತಿದ್ದವು. ಹೊಟ್ಟೆ ತುಂಬಾ ಉಂಡವರು ತಮ್ಮ ಘಟದ ಮೇಲೆ ಕೈ ಆಡಿಸುತ್ತಾ ಮನೆ ಜಗಲಿಯ ಮೇಲೆ ಹರಟೆ ಹೊಡೀತಾ ತಾಂಬೂಲ ಮೇಯುತ್ತಾ ಕೂತಿದ್ದರು. ಇತ್ತ ಮುತ್ತೈದೆಯರೆಲ್ಲಾ ಒಲೆ ಆರಿಸುತ್ತಾ ಇದ್ದರೆ, ಭಾವಿ ಮುತ್ತೈದೆಯರು ಹತ್ತಿ ಪೋಣಿಸುತ್ತಾ ಅಕ್ಕಪಕ್ಕದ ಮನೆ ಸಮಾಚಾರ ಒಂದು ಚೂರು ಕಿವಿಗೆ ಬಿದ್ದರೆ ನಿದ್ದೆ ಮಂಪರಾದ್ರೂ ಹತ್ತೀತೆಂದು ಗಾಳಿಗೆ ಕಿವಿಯನ್ನು ಬೀಸುತಿದ್ದರು. ಇಂಥಹ ಸಾಮಾನ್ಯ ಸನ್ಮಾನ್ಯ ನಾಗರಿಕ ವಾತಾವರಣಕ್ಕೆ ಸರಿಯಾಗಿ ” ಏಯ್, ಹಲೋ ಫ್ರೆಂಡ್ಸ್, ಏನಮ್ಮ ಗೌರಿ ಓದ್ತಾ ಇದ್ಯಾ, ಪಾಸ್ ಆಗ್ತ್ಯಾ ಹೋಗು ತಲೆಕಡೆಸಿಕೊಳ್ಳಬೇಡ, ಮೇಷ್ಟ್ರಿಗೆ ನನ್ನ ಹೆಸರು ಹೇಳು ಹೋಗು, ಏನು ಹೇಳು ನನ್ ಹೆಸರು, ಹೂಂ,.ಹೇಳು.,,ಶಾಲಿಮಾರ್.,ಹೌದು ಶಾಲಿಮಾರ್ ಅನ್ನು”.

“ಬಂದಾ ಇವ್ನು, ಥೂ.,ಇವನಿಗೆ ಮನೆ,ಮಠ ಏನೂ ಇಲ್ವಾ? ಅದೇನು ಸರಿಯಾಗಿ ಇದೇ ಟೈಮ್‌ಗೆ ಕುಡ್ಕೊಂಡು ಬಂದು ನಮ್ಗೆಲ್ಲಾ ಕಾಟಕೊಡ್ತಾನೊ” ಅಂತ ಪದವಿ ವ್ಯಾಸಂಗದ ತರುಣಿಯರ ಶಾಪವಾದರೆ, ಇನ್ನು ಚಿಂಟು-ಪಿಂಟುಗಳಿಗೆ ಶಾಲಿಮಾರ್ ಎಂದರೆ ಸಾಕು, ಚಡ್ಡಿ ಒಳಗಿಂದ ಚಿಲಿಮೆಯ ಧಾರೆ. ಗಂಡನೂರು, ತಾಯಿ ಊರು, ನೆಂಟರೂರು ಎಲ್ಲಿದ್ದರೂ ಸರಿ ಶಾಲಿಮಾರ್ ನಾಮವೇ ಸಾಕು ತರಲೆ ಮಕ್ಕಳ ಕೀಟಲೆಗಳೆಲ್ಲವೂ ಗಡಿಪಾರು. ತುಂಬಾ ಹಟ ಮಾಡಿದಾಗ ಅಮ್ಮಂದಿರು ಮೊದಲಿಗೆ “ನಿಮ್ಮಪ್ಪಂಗೆ ಹೇಳ್ತೀನಿ” ಅಂತ್ತಿದ್ರು, ಇಷ್ಟೆಲ್ಲಾ ಕಿವಿಗೆ ಬಿದ್ದರೂ ಕೇಳದಂತೆ ಕುಣಿವ ಮಕ್ಕಳಿಗೆ ಅಮ್ಮಂದಿರ ಬಳಿ ಇದ್ದಂಥಹ ಮುಂದಿನ ಬ್ರಹ್ಮಾಸ್ತ್ರ “ಶಾಲಿಮಾರ್ ಬಂದ ನೋಡು” ಅಷ್ಟೇ, ಮಕ್ಕಳೇಕೆ ಮಕ್ಕಳ ಅಪ್ಪಂದಿರೂ ಕೂಡ ಗಪ್‌ಚುಪ್. ಹಾಗಿತ್ತು ಆಸಾಮಿ.

ಉದ್ದಕ್ಕಿದ್ದ ಬೀದಿಯ ಒಂದು ಕೊನೆಯಲ್ಲಿ ಸರಿಯಾಗಿ ೯.೧೫ಕ್ಕೆ ಕಂಚಿನ ಕಂಠದಿಂದ ಪ್ರತಿ ಮನೆಯ ಹೊರಗೆ ಕಂಡ ಎಲ್ಲರನ್ನೂ ಶಾಲಿಮಾರ್ ವಿಚಾರಿಸಿಕೊಳ್ಳುತ್ತಿದ್ದ. ಕೆಲವರಿಗೆ ಮಂಗಳಾರತಿ, ಕೆಲವರಿಗೆ ಕುಶಲೋಪರಿ, ಬಹುಪಾಲು ಮಂದಿಗೆ ಕಿರಿಕಿರಿ. ಅದೇನೋ ಗೊತ್ತಿಲ್ಲ ಬೀದಿಯ ಭಲೇ ಗಂಡು ಅನ್ನಿಸಿಕೊಂಡವರೂ ಕೂಡ ಶಾಲಿಮಾರ್ ತಮ್ಮ ಮನೆ ಮುಂದೆ ನಿಂತು ಆರತಿ ಎತ್ತುತ್ತಿದ್ದರೂ “ಏಯ್ ಹೋಗೊ, ಸಾಕು ಎನ್ನುತಿದ್ದರು” ಅಷ್ಟೇ. ಅವನ ಮೇಲೆ ಕೈ ಎತ್ತುತ್ತಿರಲಿಲ್ಲ, ಕನಿಷ್ಠ ದೂಡುತ್ತಲೂ ಇರಲಿಲ್ಲ. ಒಟ್ಟಿನಲ್ಲಿ ಇಡೀ ಕಟ್ಟೆದೇವಾಚಾರ್ ಬೀದಿಯ ಸುಮಾರು ೨೫೦ ಹಿರಿ,ಕಿರಿ,ಮರಿಗಳು ಪ್ರತಿದಿನ ಮುಕ್ಕಾಲು ಗಂಟೆಯವರೆಗೆ ಶಾಲಿಮಾರ್ ಎಂಬ ತೇರನ್ನು ಎಳೆಯಲೇಬೇಕಿತ್ತು. ಕೆಲವು ಚೂಟಿ ಹುಡುಗಿಯರು ಇವನಿಗೆ ‘ಕೆಡಿ ಸ್ಟ್ರೀಟ್ ಕಲೀ’ ಎಂದು ನಾಮಕರಣಮಾಡಿದ್ದರು.

ಬೆಳಗಿನ ಹೊತ್ತು ಶಾಲಿಮಾರ್ ಅಷ್ಟಾಗಿ ಯಾರಿಗೂ ಕಾಣಸಿಗುತ್ತಿರಲಿಲ್ಲ. ಬಹುಶಃ ಎಲ್ಲಾದರೂ ಕೆಲಸಕ್ಕೆ ಹೋಗುತ್ತಿದ್ದ ಅನ್ನಿಸುತ್ತೆ. ಮಾಮೂಲಿಯಾಗಿ ಕೆಡಿ ಬೀದಿ ಅವನನ್ನು ಕಾಣುತ್ತಿದ್ದದ್ದು ನಿಶೆಯಲ್ಲಿ, ನಶೆಯ ಜೊತೆ ಮಾತ್ರ.

**@@@??

ಶಾಲಿಮಾರ್ ಚಿಕ್ಕಂದಿನಿಂದ ಕಟ್ಟಿಗೆ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ. ಅವನ ತಂದೆ ಇವನಿಗೆ ಕಸುಬೆಂದು ತೋರಿಸಿಕೊಟ್ಟ ದಾರಿ ಅದು. ಸುಮಾರು ೧೯ರ ಅರಳುತ್ತಿದ್ದ ಮೊಗ್ಗು ಯೌವ್ವನದಲ್ಲಿ ಬೀಡಿ ಸೇದಿಕೊಂಡು ಚಿಕನ್ ತರಲು ಹೊರಟವನಿಗೆ ಓಣಿಯ ಹೊರಗೆ ಕಾಲಿಡುತ್ತಿದ್ದಂತೆ, ಎರಡು ದಿನ ಮುಂಚೆ ೧೮ಕ್ಕೆ ಜಿಗಿದ ಸಮೀನಾ ಎದುರಾದಳು. ಸೊಂಟದ ಮೇಲೆ ಕೆಂಪು ಪ್ಲಾಸ್ಟಿಕ್ ಕೊಡ ಹೊತ್ತುಕೊಂಡು ಹೋಗುತ್ತಿದ್ದ ಸಮೀನಾಳನ್ನು ಕಂಡ ಶಾಲಿಮಾರ್ ಹಾಗೆಯೇ ಅವಳ ಹಿಂದೆ ಅವಳ ಮನೆತನಕ ಸಪ್ತಪದಿ ತುಳಿದು ಚಿಕನ್ ಮರೆತು ಮನೆಗೆ ಬಂದ. ಸೌದೆ ಕತ್ತರಿಸಿ ತತ್ತರಿಸಿದ್ದ ಶಾಲಿಮಾರ್ ತಂದೆಯ ಜೊತೆ ಮಾವ ಪೀರ್‌ಮಾಮು ಹರಟುತ್ತಿದ್ದರು. ಖಾಲಿ ಕೈಯಲ್ಲಿ ಬಂದ ಶಾಲಿಮಾರ್ ಕೆನ್ನೆಗೆ ಎರೆಡು ಬಿದ್ದಾಗಲೇ ಅವನಿಗೆ ಚಿಕನ್ ನೆನಪಾಗಿದ್ದು. ಹೊಟ್ಟೆ ಹಸಿವು ತಾಳಲಾರದೆ ಶಾಲಿಮಾರ್ ತಂದೆ ” ಏಯ್ ಛೋಕರಾ, ನಾಜಾನೆ ಕಿಸ್ ಮಖನ್ ಕೆ ಪೀಚೆ ಜಾಕೆ ಚಿಕನ್ ಭೂಲ್ ಆಯ,,” ಎಂದು ಗೊಣಗುತ್ತಾ ಹೋಟೆಲ್ ಕಡೆಗೆ ನಡೆದರು. ಆದರೆ ಅಂದು ಶಾಲಿಮಾರ್ ಕೆನ್ನೆಗೆ ಬಿದ್ದ ಪೆಟ್ಟು ಮಾತ್ರ ಅವನಿಗೆ ನೋವಾಗಿರಲೇ ಇಲ್ಲ. ಮನಸ್ಸಿಗೊಂದು ಹೂಬಾಣ ಬಿದ್ದು ನೋವಾಗಿತ್ತಲ್ಲ ಹಾಗಾಗಿ ಆ ಹಿತನೋವು ಈ ಕಪಾಳಮೋಕ್ಷವನ್ನು ನುಂಗಿತ್ತು.

ಹೀಗೆ ದಿನನಿತ್ಯದ ಮಾಮೂಲಿ ಕೆಲಸಗಳು ಹಾದಿತಪ್ಪಿ ಎಡವಲು ಆರಂಭಿಸಿದಾಗ ಶಾಲಿಮಾರ್ ತಂದೆ-ತಾಯಿಯರಿಗೆ ಮಗನಿಗೆ ಮದುವೆ ಮಾಡುವುದು ಒಳೆಯದೆನಿಸಿತು. ಮಾವ ಪೀರ್‌ಮಾಮು ಬೀಡಿ ಹಂಚಿಕೊಳ್ಳುತ್ತಾ ” ಕ್ಯಾರೆ,. ಕೋಯಿ ಲಡಕಿ ದಿಮಾಕ್ ಮೆ ಹೈ,.ಪಸಂದ್ ಕರತಾ ಹೈ..? ” ಎಂದು ಶಾಲಿಮಾರ್ ಬಾಯಿಂದ ಸಮೀನಾಳನ್ನು ಹೊರತೆಗೆಸಿದರು. ಮುಂದಿನ ಮೂರು ವಾರದೊಳಗೆ ಸಮೀನಾ ಶಾಲಿಮಾರ್ ಮನೆಯ ದೀಪ ಹಚ್ಚಿದಳು.

ಆ ದಿನ ಶಾಲಿಮಾರ್ ಮತ್ತು ಸಮೀನಾ ಸಿನಿಮಾ ನೋಡಿಕೊಂಡು ರಾತ್ರಿ ಸುಮಾರು ೮ ಗಂಟೆಗೆ ಮನೆ ತಲುಪಿದರು. ಇನ್ನೇನು ಊಟಮುಗಿಸಿ ನಿದ್ರಿಸಲು ದಂಪತಿಗಳು ತಲೆ ಊರುತ್ತಿದ್ದಂತೆ ಶಾಲಿಮಾರ್ ತಾಯಿ ” ಬೇಟಾ, ತೇರಾ ಅಬ್ಬು.,ಅರೆ ಬೇಟಾ.” ಎಂದು ಚೀರಿಕೊಂಡು ಇವರ ಕೋಣೆಗೆ ಓಡಿಬಂದರು. ಎಲ್ಲರೂ ಹೋಗಿ ನೋಡಿದರೆ ಶಾಲಿಮಾರ್ ತಂದೆಗೆ ಹೃದಯಾಘಾತವಾಗಿತ್ತು. ಪಕ್ಕದ ಬೀದಿಯಲ್ಲೇ ಇದ್ದಂಥಹ ಪೀರ್‌ಮಾಮು ದೌಡಾಯಿಸಿ ಬಂದು ಆಸ್ಪತ್ರೆಗೆ ಒಯ್ಯುವಾಗಲೇ ಮೇಲುಸಿರು ಏರಿ ಬರುತ್ತಿತ್ತು. ಕೊನೆಗೆ ಆಸ್ಪತ್ರೆ ಸೇರಿದ ಐದಾರು ನಿಮಿಷಗಳಲ್ಲಿ ಜೀವಹೋಯಿತು. ತಂದೆಯ ಸಾವು ಶಾಲಿಮಾರ್‌ನನ್ನು ಇನ್ನಿಲ್ಲದಂತೆ ಮಾನಸಿಕವಾಗಿ ಕುಗ್ಗಿಸಿ, ಕಟ್ಟಿಗೆ ತುಂಡರಿಸುವ ಕೊಡಲಿ ಮೊಂಡವಾಗುತ್ತಾ ಹೋಯಿತು.
ಆಗೀಗ ಕುಡಿಯುತ್ತಿದ್ದ ಶಾಲಿಮಾರ್ ಈಗ ಹಗಲು ಇರುಳೆನ್ನದೆ ಕುಡಿಯುತ್ತಿದ್ದ. ಕಂಡ ಕಂಡ ಕಡೆ, ಸಿಕ್ಕ ಸಿಕ್ಕ ಸಾರಾಯಿ, ವಿಸ್ಕಿ, ರಮ್, ಬ್ರಾಂದಿ ಸುರಿದುಕೊಳ್ಳುತ್ತಿದ್ದ.
ಸಮೀನಾ ಕೆಲವೊಮ್ಮೆ ಅತ್ತೆಗೆ ಹೇಳಿದರೆ, ಒಂದೆರಡು ದಿನಗಳವರೆಗೆ ಸುಮ್ಮನಿರುತ್ತಿದ್ದ ಶಾಲಿಮಾರ್ ನಂತರ ಮತ್ತೆ ಕುಡಿದು ತೂರಾಡುತ್ತಿದ್ದ. ಸಮೀನಾಳ ತವರುಮನೆಗೂ ಈ ವಿಷಯ ತಿಳಿದು ಎರೆಡು ಮೂರು ಸಲ ಸಮಾಧಾನದಿಂದಲೇ ಸಮೀನಾಳ ಚಿಕ್ಕಪ್ಪ ಶಾಲಿಮಾರ್‌ಗೆ ತಿಳಿಹೇಳಿದ್ದರು.

ಹೀಗಿರುವಾಗ ಸಮೀನಾ ಗರ್ಭವತಿಯಾಗಿ ಕೊನೆ ತಿಂಗಳಿನಲ್ಲಿ ತವರು ಮನೆಗೆ ತೆರಳಿದಳು. ಮುಂದಿನ ೧೫ ದಿವಸಗಳಲ್ಲಿ “ಬೇಟಾ ಮುಬಾರಕ್” ಎಂಬ ಸುದ್ದಿಯನ್ನೂ ಕಳುಹಿಸಿದಳು. ಅತ್ತೆ ಮತ್ತು ಗಂಡ ಬಂದು ಮಗುವನ್ನು ಮುದ್ದಾಡಿ, ಬೇಗ ಮನೆಗೆ ಬಂದು ಬಿಡೆಂದು ಆಮಂತ್ರಣ ನೀಡಿ ಹೋದರು. ತವರು ಮನೆಗೆ ವಿದಾಯ ಹೇಳಿ ಮಗುವಿನೊಂದಿಗೆ ಕಾಲಿಟ್ಟ ಸಮೀನಾಗೆ ಬಂದ ತಕ್ಷಣ ಅವರ ಅತ್ತೆ ” ದೋ ಬೇಟಿ ಬಚ್ಚಾ ದೋ, ಕೈ ಕೊಡು” ಎಂದು ಶಾಲಿಮಾರ್ ಕೈಯಿಂದ ತಾಯತ ಬಿಗಿಸಿದರು. ತನ್ನ ರಕ್ಷಣೆಗೆಂದು ಸಮೀನಾ ಭಾವಿಸಿಕೊಂಡು ಅತ್ತೆ ಮತ್ತು ಗಂಡನ ಕಾಳಜಿಗೆ ಮನಸೋತಳು.
” ಏನ್ರಿ, ಕುಡಿಯೋದು ಬಿಟ್ರಾ,.? ಈಗ ನಮಗೆ ಪಾಪು ಆಗಿz, ತುಂಬಾ ಜವಾಬ್ದಾರಿ ಇದೆ ದಯವಿಟ್ಟು ಕುಡಿಬೇಡ್ರಿ” ಎನ್ನುತ್ತಾ ಬೀರು ಮೇಲಿನ ಎರಡು ಖಾಲಿ ಬಾಟಲಿಗಳನ್ನು ಕಂಡುಕಾಣದಂತೆ ಸಮೀನಾ ಗಂಡನ ಎದೆಯ ಮೇಲೆ ತಲೆಯೂರಿ ಹೇಳಿದಳು.
ಪಾಪು, ತಲೆಯ ಮೇಲೆ ಕೈ ಆಡಿಸುತ್ತಾ “ಇಲ್ಲಾ ಸಮೀನಾ, ನೋಡು ನಾನು ಯಾವ ರೀತಿ ಬದಲಾಗುತ್ತೇನೆಂದು ನೀನೇ ನೋಡು” ಎಂದ ಶಾಲಿಮಾರ್ ಟ್ಯೂಬ್‌ಲೈಟ್‌ನ ಸ್ವಿಚ್ ಆಫ್ ಮಾಡಲು ಎದ್ದು, ಸ್ವಲ್ಪ ನೀರು ಕುಡಿದು ದೀಪ ಆರಿಸಿದ.

ಮಾರನೆಯ ದಿನದಿಂದ ಸಮೀನಾಳ ಜೀವನದಲ್ಲಿ ವಿಚಿತ್ರ ಘಟನೆಗಳು ನಡೆಯಲು ಶುರುವಾದವು. ಗಂಡ ಶಾಲಿಮಾರ್ ಇವಳ ಕೈಯಿಂದ ಕಾಫಿ ಕುಡಿಯುತಿರಲಿಲ್ಲ, ಅತ್ತೆ ಊಟ ಬಡಿಸಿಕೊಳ್ಳುತ್ತಿರಲಿಲ್ಲ, ಅಕ್ಕ ಪಕ್ಕದ ಮನೆಯವರು ಇವಳು ಎದುರಿಗೆ ಸಿಕ್ಕರೆ, ಅವರ ಮನೆಗೆ ಹೋದರೆ ಇವಳ ಮುಖ ನೋಡದೆ, ನುಣುಚಿಕೊಳ್ಳುವ ಆತುರದಲ್ಲಿರುತ್ತಿದ್ದರು. ಎದೆ ಹಾಲಿಗೆ ಬಿಟ್ಟರೆ ಮಗುವನ್ನು ಹೆಚಿನ ಸಮಯ ಅತ್ತೆ ತನ್ನ ರೂಮಿನಲ್ಲಿಯೇ ಮಲಗಿಸಿಕೊಂಡು ಆಟವಾಡಿಸುತ್ತಿದ್ದರು. ಶಾಲಿಮಾರ್ ಯಥಾವತ್ತಾಗಿ ವಿಪರೀತ ಕುಡಿದು ಬಂದು, ಹೊಡೆಯುವ ಮಟ್ಟಕ್ಕೂ ಕೈ ಎತ್ತಿದ. ತಾಯ್ತನದ ಸಡಗರದಲ್ಲಿದ್ದ ಸಮೀನಾಳಿಗೆ ಮಾತ್ರ ತನ್ನ ಸುತ್ತಲಿನ ಈ ಜೇಡರ ಬಲೆಯಲ್ಲಿನ ಬಲಿಪಶು ಯಾರೆಂದು ಊಹಿಸಲು ಆಗಲಿಲ್ಲ.

“ಚಲೋ ಬೇಟಿ, ಹಾಗೆ ಒಂದು ಸುತ್ತ ಹೋಗಿ ಬರೋಣ, ಮಗು ಇಲ್ಲೇ ಇರಲಿ, ನಡೀ ಶಾಲಿಮಾರ್ ” ಎಂದು ಒಂದು ದಿನ ಸಂಜೆ ಸುಮಾರು ೬.೪೫ಕ್ಕೆ ಶಾಲಿಮಾರ್ ಮಾವ ಪೀರ್‌ಮಾಮು ಬಂದು ಕರೆದರು.
ಒಲ್ಲದ ಮನಸ್ಸಿಂದ “ಭಯ್ಯಾ, ಎಲ್ಲಿಗೆ.? ಮಗುನೂ ಕರೆದುಕೊಂಡು ಹೋಗೋಣ, ಅತ್ತೆನೂ ಬರಲಿ” ಎಂದಳು ಸಮೀನಾ.
“ಅವೆಲ್ಲಾ ಆಗಲ್ಲ ನಡೀ, ಏಯ್ ಶಾಲಿಮಾರ್ ಏನೋ ನೋಡ್ತಾ ಇದ್ಯಾ, ಕರೆದುಕೊಳ್ಳೋ” ಎಂದು ಒರಟಾಗಿ ಪೀರ್‌ಮಾಮು ಗರ್ಜಿಸಿದಾಗ ಸಮೀನಾಳಿಗೆ ಎದೆಯಲ್ಲಿ ಭಯ ಮನೆಮಾಡಿತು.
ಶಾಲಿಮಾರ್ ಅವಳ ಕೈ ಹಿಡಿದೆಳೆದು ದರದರನೆ ಎಳೆದುಕೊಂಡು ಮಾಮನನ್ನು ಹಿಂಬಾಲಿಸಿ ನಡೆದ. ಸುಮಾರು ಮುಕ್ಕಾಲು ಗಂಟೆಯ ದೂರವನ್ನು ಬಾಡಿಗೆ ಕಾರಿನಲ್ಲಿ ಕಳೆದ ಸಮೀನಾ ತಲುಪಿದ್ದು ಪಾಳು ಬಿದ್ದ ಹಳೇ ಹಂಚಿನ ಕಾರ್ಖಾನೆಯ ಎದುರು. ಬೆದರಿಕೊಂಡು ಕಾಲಿಡುತ್ತಾ ಒಳಗೆ ಹೋದ ಮೂವರಿಗೆ ಒಬ್ಬ ಮಾಂತ್ರಿಕ ಸ್ವಾಗತಿಸಿದ. ಶಾಲಿಮಾರ್ ಆ ಮಾಂತ್ರಿಕನಿಗೆ ನೋಟಿನ ಒಂದು ಕಂತೆಯನ್ನು ನೀಡಿ, ಸಮೀನಾಳನ್ನು ಅವನ ಮುಂದೆ ಕುಳ್ಳಿರಿಸಿದ. ಶುರುವಾಯಿತು ಸಮೀನಾಳಿಗೆ ಎದೆ ಢವಢವ ಬಡಿಯಲು, ಕೆಲವೇ ಕ್ಷಣಗಳಲ್ಲಿ ” ಏಯ್., ಯಾರು ನೀನು., ಈ ಹುಡುಗಿಯನ್ನು ಬಿಟ್ಟು ಹೋಗು., ನಿನ್ನನ್ನು ಓಡಿಸಿಯೇ ನಾನು ಇಂದು ಬಿಡೋದು, ಹೇಳು ಯಾರು ನೀನು” ಎನ್ನುತ್ತಾ ಆ ಮಾಂತ್ರಿಕ ಸಮೀನಾಳಿಗೆ ಚಾಟಿಯಲ್ಲಿ ಹೊಡೆದು, ಅವಳ ಮುಖದ ತುಂಬಾ ಬೂದಿ ಉಗುಳಿದ.

ಸಮೀನಾಳಿಗೆ ಈಗ ತನ್ನೊಂದಿಗೆ ಇಷ್ಟು ದಿವಸಗಳು ನಡೆದ ಅನುಮಾನಾಸ್ಪದ ಘಟನೆಗಳ ಹಿಂದಿನ ಉದ್ದೇಶದ ಅರಿವಾಯಿತು. ಆದರೆ ಅವಳಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡದಂತೆ ತಾಳಿಕಟ್ಟಿದ ಗಂಡನೇ ತನ್ನ ಶಕ್ತಿಪ್ರಯೋಗ ಮಾಡುತ್ತಾ ಅಡ್ಡವಾಗಿ ನಿಂತಿದ್ದ. ಅವಳಿಗೆ ಒಂದು ಕಡೆಯಿಂದ ದೇಹಕ್ಕೆ ಬೀಳುತ್ತಿರುವ ಬಾಸುಂಡೆಗಳ ನೋವಾದರೆ, ಮನಸ್ಸಿಗೆ ಮಾತ್ರ ಎರಡು ಭಾರವಾದ ನೋವಿಂದ ಗಾಯಗಳಾಗಿದ್ದವು. ಒಂದು ತನ್ನ ಗಂಡನ ಮೂರ್ಖತನ, ಮತ್ತೊಂದು ತನ್ನ ಮಗುವಿಗೆ ಇಂಥಹ ಪರಿಸರ ದೊರೆಯಿತಲ್ಲ ಎಂಬ ಅಸಹ್ಯ. ಇದೇ ರೀತಿ ಸತತವಾಗಿ ೩ ವರ್ಷಗಳ ಕಾಲ ಸಮೀನಾಳಿಗೆ ದೆವ್ವ ಬಿಡಿಸುವ ಕಾರ್ಯಕ್ರಮ ಜಾರಿಯಲ್ಲಿತ್ತು. ಒಂದೇ ಒಂದು ವಿಶೇಷವೆಂದರೆ ಪ್ರತಿ ೧೫ ದಿವಸಕ್ಕೆ ದೆವ್ವ ಬಿಡಿಸುವ ಜಾಗ ಮತ್ತು ಮಾಂತ್ರಿಕ ಬದಲಾಗುತ್ತಿದ್ದರು. ಸಮೀನಾ ಮಾನಸಿಕವಾಗಿ ಕುಗ್ಗಿ ಹೋದಳು, ತನಗೆ ತಾನೇ ಭಾರವಾಗ ತೊಡಗಿದಳು.

” ರೀ, ಇವತ್ತು ಹೋಳಿಗೆ ಮಾಡ್ತೀನಿ.,ನೀವು ಮಧ್ಯಾಹ್ನ ಡಿಪೋದಿಂದ ಊಟಕ್ಕೆ ಬಂದುಬಿಡಿ, ಬುತ್ತಿ ಬೇಡ” ಎಂದು ತುಂಬು ಸಡಗರದಿಂದ ಸಮೀನಾ ಹೇಳಿದಾಗ ಶಾಲಿಮಾರ್ ಆಶ್ಚರ್ಯಪಟ್ಟರು ತೋರಿಸದೆ, ತನ್ನ ತಾಯಿಯ ಅಣತಿಯಂತೆ “ಹೂಂ, ಆಯಿತು” ಎಂದು ಮುಖ ನೋಡದೆ ಹುಂಕರಿಸಿ ಹೋದ.
ಮಧ್ಯಾಹ್ನ ಗಡದ್ದಾಗಿ ಹೋಳಿಗೆ ಊಟ ಮಾಡಿದ ಅಮ್ಮ ಮತ್ತು ಮಗ, ಸಮೀನಾಳ ಹಸಿವೆಯನ್ನು ಲೆಕ್ಕಿಸದೆ ನಿದ್ರೆಗೆ ಜಾರಿದರು. ಸ್ಕೂಲಿನಿಂದ ಬಂದ ಮಗು ” ಅಮ್ಮಿ., ಅಮ್ಮಿ.,ಏಳಿ.,ಅಮ್ಮಿ” ಎಂದು ಎಷ್ಟೇ ಗೋಗರೆದರು ಸಮೀನಾ ಏಳಲಿಲ್ಲ. ಶಾಲಿಮಾರ್‌ಗೆ ಎಚ್ಚರವಾದಾಗ ಮಗು ಒಂದೇ ಸಮನೆ ಅಳುತ್ತಿತ್ತು.

**@@@??

” ಅಪ್ಪಾ, ನಾನು ಸ್ಕೂಲ್‌ಗೆ ಹೋಗೋದಿಲ್ಲ. ಅಲ್ಲಿ ದಿನ ಬೆಂಚ್ ಮೇಲೆ ನಿಲ್ಲಿಸ್ತಾರೆ. ನಿನ್ನ ಹೆಸರಲ್ಲಿ ಫೈನ್ ಇದೆ, ನಿಮ್ಮಪ್ಪನ್ನ ಕರೆದುಕೊಂಡು ಬಾ ಅಂತಾರೆ ಆದ್ರೆ ನೀನು ಬರೋದೇ ಇಲ್ಲ. ನಾನು ಹೋಗಲ್ಲ”.
೩ ವರ್ಷದ ಮಗ ಆಸ್ಪತ್ರೆಯಲ್ಲಿ ಕುಳಿತ ಶಾಲಿಮಾರ್ ಕಾಲುಗಳ ಸಂಧಿಯಲ್ಲಿ ವಾಲಿಕೊಂಡು ಗೋಗರೆಯುತ್ತಿದ್ದ. ಅದಕ್ಕೆ ಶಾಲಿಮಾರ್ ” ಖಂಡಿತ ನಾಳೆ ಬರ್‍ತೀನಿ, ನಿಮ್ಮ ಟೀಚರ್‌ಗೆ ಹೇಳು, ಸ್ಕೂಲ್‌ಗೆ ಹೋಗಿ ಒಳ್ಳೆಯ ಹುಡುಗ ಅನ್ನಿಸಿಕೊಂಡರೆ ಆವಾಗ ಅಮ್ಮಿಗೆ ಖುಷಿಯಾಗುತ್ತೆ, ನಿನಗೆ ನಾನು ಸೈಕೆಲ್ ಕೊಡಿಸ್ತೀನಿ” ಅಂತ ಪುಸಲಾಯಿಸುತ್ತಿದ್ದ.

” ರೀ, ಏನ್ರಿ ನಿಮ್ ಹೆಸರು.? ಮಿಸ್ಟರ್ ನಿಮ್ಮ ಹೆಂಡತಿ ವಿಷ ತಗೊಂಡಿದ್ದಾರೆ. ಹೇಳಿಮ್ಮ, ನಿಮ್ಮ ಸೊಸೆ ಯಾಕೆ ಹೀಗ ಮಾಡಿದರು.?” ಎಂದು ಡಾಕ್ಡರ್ ಪ್ರಶ್ನಿಸಿದರು.
ತಾಯಿ ಮತ್ತು ಮಗ ಪರಸ್ಪರ ಮುಖ ನೋಡಿಕೊಂಡರು ಅಷ್ಟೇ.
ತಕ್ಷಣ ಶಾಲಿಮಾರ್ ” ದಯವಿಟ್ಟು ಪೊಲೀಸ್‌ಗೆ ಹೇಳಬೇಡಿ ಸ್ವಾಮಿ, ನಮಗೇನು ಗೊತ್ತಿಲ್ಲ., ಅವಳನ್ನು ಹುಷಾರಾಗಿಸಿ ಸಾಕು” ಎಂದು ಡಾಕ್ಟರ್ ಕಾಲು ಹಿಡಿದ.
” ಏಳಯ್ಯ ಮೇಲೆ, ಹೆಣ ತಂದುಬಿಟ್ಟು ಹುಷಾರುಮಾಡಿ ಅಂತೀಯಲ್ಲ” ಎಂದು ನಗುತ್ತಾ ಡಾಕ್ಟರ್ ಮುನ್ನಡೆದರು.

ಮಗು ವಾರ್ಡ್‌ನ ಬೆಡ್ ಮೇಲೆ ಹತ್ತಿ ಮಲಗಿದ್ದ ತಣ್ಣನೆಯ ದೇಹವನ್ನು ಆಲಂಗಿಸಿಕೊಂಡು ‘ಅಮ್ಮಿ.,’ ಎಂದಿತು.

**@@??

ಸರಿಯಾಗಿ ೯.೧೫ಕ್ಕೆ ಕೆಡಿ ಸ್ಟ್ರೀಟ್‌ನ ಒಂದು ಕೊನೆಯಲ್ಲಿ
” ಹಲೋ ಫ್ರೆಂಡ್ಸ್, ಏನಮ್ಮ ಸವಿತಾ.? ಏನೋ ಓದುತ್ತಾ ಇದ್ದೀಯ. ಪಾಸ್ ಆಗ್ತ್ಯಾ ಹೋಗು ತಲೆಕಡೆಸಿಕೊಳ್ಳಬೇಡ, ಮೇಷ್ಟ್ರಿಗೆ ನನ್ನ ಹೆಸರು ಹೇಳು ಹೋಗು, ಏನು ಹೇಳು ನನ್ ಹೆಸರು, ಹೂಂ,.ಹೇಳು.,,ಶಾಲಿಮಾರ್.,
ಹೌದು ಶಾಲಿಮಾರ್…’
**@@@**@@@**

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.