ಕಥಾಕಣಜಕನ್ನಡ

ಇಷ್ಟೇನ ಜೀವನ….?

deepak-koradi-3ದೀಪಕ್ ಕೋರಡಿ

ಸಾಫ್ಟ್‍ವೆರ್ ಉದ್ಯೋಗಿ ಹಾಗು
ಹವ್ಯಾಸಿ ಸಂಗೀತಗಾರ

ಪ್ರತೀ ಬಾರಿಯೂ ಊರಿಗೆ ಹೋಗುವಾಗ ಏನೋ ತವಕ. ಒಗೆಯಬೇಕಾದ ಬಟ್ಟೆಗಳನ್ನೆಲ್ಲಾ, ಊರಿಗೆ ಕೊಂಡೊಯ್ಯಲೆಂದೇ ತೆಗೆದುಕೊಂಡ ಹೊಸ ಬ್ಯಾಕ್-ಪ್ಯಾಕ್ ನಲ್ಲಿ ತುಂಬಿಸಿಕೊಂಡು, ಜೇನುಗೂಡಿನಂತೆ ಕಾಣುವ ಸಿಟಿ-ಬಸ್ಸಿನಲ್ಲಿ ಜೋತಾಡುತ್ತ ಮೆಜೆಸ್ಟಿಕ್ ತಲುಪಿದಾಗ ಸ್ವಲ್ಪ ನೆಮ್ಮದಿ.

ಆದರೂ ವೀಕೆಂಡ್ ಪ್ರಯಾಣವಾದ್ದರಿಂದ ಬಸ್-ಟಿಕೆಟ್ ಸಿಗುತ್ತೋ ಇಲ್ಲೋ ಎಂಬ ಆತಂಕ. ಟಿಕೆಟಿನ ದುಡ್ಡಿನ ಜೊತೆ 20 ರೂಪಾಯಿ ಹೆಚ್ಚಿಗೆ ಇಟ್ಟು, ಕಂಡಕ್ಟರಿನ ಜೇಬಿನ ತೂಕವ ಸ್ವಲ್ಪ ಹೆಚ್ಚಿಸಿ, ಹೇಗೋ ಸೆಮಿ-ಸ್ಲೀಪರ್ ಬಸ್ಸಿನ ಕೊನೆಯ ಸಾಲಿನಲ್ಲಿ ಒಂದು ಸೀಟು ಗಿಟ್ಟಿಸಿಕೊಂಡು, ಲಗೇಜನ್ನು ಮೇಲಕ್ಕೆ ಹೇರಿ, ಒಂದೆರಡು ಬಾರಿ ಬಸ್ಸಿನ ತುಂಬಾ ಶೊ-ಆ¥sóï ಮಾಡುತ್ತ, ಓಡಾಡಿದಾಗ ಒಂದು ತರಹದ ಸಮಾಧಾನ. ಹಾಗೆ ಓಡಾಡುವಾಗ ಬಸ್ಸಿನ ಕತ್ತಲೆಯಲ್ಲಿ ಹುಣ್ಣಿಮೆ ಚಂದಿರನಂತೆ ಹೊಳೆವ ಒಬ್ಬಳು ಬೆಡಗಿ ಕಂಡರೆ ಸಾಕು, ಮತ್ತೂ ಸಂತೋಷ. ತಾರೆಗಳಂತೆ ಹೊಳೆವ ಅವಳ ಕಂಗಳ ನೋಡುತ, ಮಿಂಚಿನಷ್ಟು ತೀಕ್ಷ್ಣವಾಗಿ ಅವಳು ಬೀರುವ ಕಣ್ಣೋಟಕೆ ಹೆದರುತ, ಬಸ್ಸನ್ನಿಳಿದಾಗ ಸುಡದೆ ಬದುಕಿದೆನಲ್ಲಾ ಎಂಬ ತೃಪ್ತಿ. ಬಸ್ಸು ಹೊರಡುವ ತನಕ ಹೊರಗೇ ನಿಂತು, ಬಸ್ಸು ಹೊರಟಕೂಡಲೆ, ನಾನೇ ಹಿಡಿದು ನಿಲ್ಲಿಸಿದೆನೆಂಬಂತೆ ಬಸ್ಸನ್ನು ಹಿಡಿದು ಹತ್ತಿ, ಮ್ಯುಸಿಕ್-ಪ್ಲೇಯರ್ ನ ಇಯರ್-ಪೆÇೀನ್ ಗಳನ್ನು ಕಿವಿಗೆ ಸಿಕ್ಕಿಸಿಕೊಂಡು ಹಾಡುಗಳನ್ನು ಕೇಳುತ್ತಾ, ಕಿಟಕಿಯನ್ನು ನೋಡುತ್ತಾ ಕುಳಿತಾಗ ಮನಸಿಗೆ ಹಾಯಾದ ಅನುಭವ. ಕಿಟಕಿಯಲ್ಲಿ ಕಾಣುವ ಚಂದಿರನನ್ನು ನೋಡುತ, ಅವನು ಚೆಲ್ಲಿರುವ ಬೆಳದಿಂಗಳಿನಲ್ಲಿ, ಅಡಗಿರುವ ಹಳೆಯ ನೆನಪುಗಳನ್ನು ಹುಡುಕುವ ಹುಚ್ಚುತನ. ಹಾಗೆ ಹುಡುಕುವಾಗ, ಮನದಾಳದಲ್ಲಿ ಮಲಗಿರುವ ನೆನಪುಗಳು ಕಣ್ಣಮುಂದೆ ಬರುತ್ತವೆ. ಅವನ್ನು ಒಂದೊಂದಾಗೆ ಮೆಲಕು ಹಾಕುತ್ತ, ನಮಗಾಗಿಯೇ ಹೇಳಿ ಮಾಡಿಸಿದಂತಿರುವ ಪ್ರೇಮ/ವಿರಹ ಗೀತೆಗಳನ್ನು ಕೇಳುತ್ತಾ ಕಣ್ಣುಮುಚ್ಚಿದರೆ, ಎಚ್ಚರವಾಗೋದು ಊರು ಬಂತೆಂದು ಕಂಡಕ್ಟರ್ ಕೂಗಿದಾಗಲೇ. ಅಯ್ಯೋ, ನನ್ನ ಪಾಡಿಗೆ ನಾನು, ಯಾವ ಜಂಜಾಟವೂ ಇಲ್ಲದ ಕನಸಿನ ಲೋಕದಲ್ಲಿ, ಹಳೆಯ ನನಪುಗಳೊಡನೆ ಹಾರಾಡುತ್ತಿರಬೇಕಾದರೆ, ಯಾಕಾದರೂ ಈ ಕಂಡಕ್ಟರ್ ಕೂಗಿ ಎಬ್ಬಿಸಿದ ಅನ್ನೋ ಸಂಕಟ ಒಂದೆಡೆಯಾದರೆ, ಅಬ್ಬಾ, ಅಂತು-ಇಂತು ಊರು ಬಂತು ಅನ್ನೋ ಸಮಾಧಾನ-ಸಂತೋಷ ಇನ್ನೊಂದೆಡೆ.

ಸಿಟಿಯಲ್ಲಿ ಸ್ವಲ್ಪ ದೂರಹೋಗಬೇಕಾದರೂ ಆಟೋರಿಕ್ಷಾ/ಟ್ಯಾಕ್ಸಿಯ ಮೀಟರ್ ತುಂಬಾ ಕಾಣಿಕೆ ತುಂಬಿಸುವ ನಾವು, ಊರಿನಲ್ಲಿ ಮಾತ್ರ ಬಸ್-ಸ್ಟ್ಯಾಂಡಿನಿಂದ ಮನೆಗೆ ನಡೆದೇ ಹೋಗೋದು. ಕಾರಣ ನಾವು ಊರಿಗೆ ಬಂದಿರುವುದು ಎಲ್ಲರಿಗೂ ತಿಳಿಯಲೆಂದು. ಆಗ ತಾನೆ ಎದ್ದು ಮನೆಯ ಅಂಗಳವನ್ನು ಗುಡಿಸಿ ಸಾರಿಸುವವರು ನಮ್ಮನ್ನು ನೋಡಿ “ಈಗ ಬಂದ್ಯಾ. ಚೆನ್ನಾಗಿದಿಯಾ” ಎಂದು ಕೇಳಿದಾಗ ಒಂದು ಬಗೆಯ ಗರ್ವದಿಂದ “ಹೂಂ ಹೌದು” ಎನ್ನುತ ನಡೆಯುತ್ತಿದ್ದರೆ ರಾಜ ಮರ್ಯಾದೆಯಾದಂತಹಾ ಅನುಭವ. ಹಾಗೆ ದಾರಿಯುದ್ದಕ್ಕೂ ಎಲ್ಲರೂ ಕೇಳುವ ಅದೇ ಪ್ರಶ್ನೆಗೆ, ಅದೇ ಉತ್ತರವನ್ನು ಕೊಡುತ್ತ ಮನೆ ತಲುಪಿ ನಿಟ್ಟುಸಿರು ಬಿಟ್ಟಾಗ ಸಮಾಧಾನ.

ಮನೆಯಂಗಳದಲ್ಲಿ ರಂಗೋಲಿ ಹಾಕುತ್ತಿರುವ ಅಮ್ಮ, ಪೂಜೆಗೆಂದು ಹೂವುಗಳ ಕೀಳುತ್ತಿರುವ ಅಪ್ಪ, ಒಮ್ಮೆ ನಮ್ಮನ್ನು ನೋಡಿ ಮುಗುಳ್ನಗೆ ಬೀರುವಾಗ, ತುಂಬಿದ ಅವರ ಕಂಗಳನ್ನು ಹೊಳೆಯುವಂತೆ ಮಾಡುತ್ತವೆ ಮುಂಜಾವಿನ ಸೂರ್ಯ ರಶ್ಮಿ. ಇದನ್ನೆಲ್ಲಾ ನೋಡುವಾಗ ಕಳೆದುಕೊಂಡದ್ದೇನೋ ತಕ್ಷಣ ಸಿಕ್ಕಂತೆನಿಸುತ್ತದೆ.
ಹೊತ್ತುತಂದ ಲಗೇಜನ್ನೆಲ್ಲಾ ಕೋಣೆಯಲ್ಲಿಟ್ಟು, ಬಿಸಿ-ಬಿಸಿ ಹಂಡೆ ನೀರಿನ ಸ್ನಾನ ಮಾಡಿ, ಅಮ್ಮ ಮಾಡಿದ ದೋಸೆಯನ್ನು ಹೊಟ್ಟೆ ತುಂಬಾ ತಿಂದು ತೂಗುಯ್ಯಾಲೆಯಲ್ಲಿ ಮಲಗಿದರೆ, ಏಳುವುದಿನ್ನು ಸೂರ್ಯ ಮಲಗುವ ಸಮಯದಲ್ಲೇ.

ಸಂಜೆ ಎದ್ದಮೇಲೆ ಹಳೆಯ ಗೆಳಯ-ಗೆಳತಿಯರನ್ನ ಸಿಗಲೆಂದು ಪೇಟೆಗೆ ಹೊರಡುವುದು. ಮಾಸಿ ಹೋದ ಸವಿನೆನಪುಗಳ ಒರೆಸಿ ಹೊಸದಾಗಿಸಿ, ಹಳೆಯ ತುಂಟತನವನ್ನೆಲ್ಲಾ ನೆನೆಸುತ್ತಾ ಅವರೊಡನೆ ಹರಟಿದರೆ, ಬೇಸಿಗೆಯ ಬೇಗೆಗೆ ಬೇಸತ್ತು, ಬಾಡಿ ಭುವಿಯಲ್ಲಿ ಮಲಗಿದ್ದ ಸಸಿಯೊಂದು, ವರ್ಷದ ಮೊದಲ ಮಳೆಯಿಂದ ಮತ್ತೆ ಜೀವ ಪಡೆದು ನಲಿಯುವ ಹಾಗೆ, ಎಷ್ಟೇ ಜಂಜಾಟದಲ್ಲಿ ತೊಡಗಿದ್ದರೂ, ಹಳೆಯ ಸ್ನೇಹವೆಂಬುದು ನಮ್ಮಲ್ಲಿ ಮತ್ತೆ ನವ ಚೈತನ್ಯವ ಮೂಡಿಸಿತ್ತದೆಯೆಲ್ಲವೇ ಎಂದು ಅರಿತೊಡನೆ ಮನಸು ನಲಿಯುತ್ತದೆ. ಹಾಗೆ ಅವರೊಂದಿಗೆ ತಿರುಗುತ್ತಾ, ಊರಿನ ಬಸ್-ಸ್ಟಾಂಡಿನ ಒಂದು ಮೂಲೆಯಲ್ಲಿ ಗ್ಯಾಸ್-ಲೈಟ್ ಹಾಕಿಕೊಂಡು, ಗಾಡಿ ಹಳೆಯದಾದರೂ ಅದೇ ರುಚಿಯನ್ನು ಉಳಿಸಿಕೊಂಡು ಬಂದಿರುವ ಪಾನಿಪುರಿಯವನ ಹತ್ತಿರ ಅವನ ಕ್ಷೇಮ ವಿಚಾರಿಸುತ್ತಾ ಅವನ ಮಾತು ಮತ್ತು ಕೈ ರುಚಿಯಿಂದ ಹೊಟ್ಟೆ ತುಂಬಿಸಿಕೊಂಡರೆ ಸಂತೋಷಕ್ಕೆ ಮತ್ತೊಂದು ಗರಿ. ಸಿಟಿಯಲ್ಲಿ ಬರೀ ಹೈಜೀನಿಕ್-¥sóÀÅಡ್ ಬಗ್ಗೆ ತಲೆ ಕೆಡಿಸಿಕೊಳ್ಳುವ ನಾವು, ಪ್ರೀತಿ ತುಂಬಿದ ಪಾನಿಪುರಿಯವನ ಗಾಡಿಯಲ್ಲಿ ತಿನ್ನೋವಾಗ ಯಾವ ಹೈಜೀನನ್ನೂ ನೆನಪಿಸಿಕೊಳ್ಳುವುದಿಲ್ಲ. ಅಲ್ವೇ.

ಹಾಗೆ ಊರೆಲ್ಲಾ ಸುತ್ತುಹಾಕಿ (ಅದೂ ನಡೆದುಕೊಂಡೇ) ರಾತ್ರಿ ಮನೆಗೆ ಹಿಂತಿರುಗಿ ಅಮ್ಮನ ಕೈತುತ್ತು ತಿಂದು ಅವಳ ತೊಡೆಯ ಮೇಲೆ ಮಲಗಿದಾಗ, ಪ್ರಯಾಣದ ಆಯಾಸವೆಲ್ಲಾ ಇಳಿದುಹೋಗುತ್ತದೆ. ಅವಳು ನಮ್ಮ ತಲೆಯನ್ನು ನೇವರಿಸುವಾಗ, ಅದು ಯಾವಾಗ ನಿದ್ರಾವಸ್ಥೆಗೆ ಹೋಗಿರುತ್ತೇವೋ ತಿಳಿಯದು.

ಹಾಗೇ ಗಾಢ ನಿದ್ರೆಯಲ್ಲಿರುವ ನಮ್ಮನ್ನು ಬಡಿದೆಬ್ಬಿಸುವುದು ಪಕ್ಕದ ತೋಟದಲ್ಲಿನ ಹಕ್ಕಿಗಳ ಚಿಲಿಪಿಲಿ ನಾದ. ಅದರಿಂದ ನಮಗೆ ಎಚ್ಚರವಾದರೂ ಮನಸಿಗೆ ಏನೋ ಹಿತವೆನ್ನಿಸುವ ಅನುಭವ. ಸದಾ ಟ್ರಾಫಿûಕ್ ಗಲಾಟೆ ಕೇಳಿ, ಮುರಿದು ಹೋದ ಮೃದಂಗದಂತಾಗಿರುವ ನಮ್ಮ ಕಿವಿಗಳಿಗೆ ಈ ತರಹದ ಹಕ್ಕಿಗಳ ಕೂಗು, ಕೂಗೆನಿಸದೆ ನಾದವೆನಿಸುವಲ್ಲಿ ಆಶ್ಚರ್ಯವೇನೂ ಇಲ್ಲ. ಏಳಲು ಮನಸ್ಸಿಲ್ಲದಿದ್ದರೂ, ಏಳಲೇಬೇಕೆನಿಸುವಂತೆ ಮಾಡುವುದು, ಅಡುಗೆ ಮನೆಯಿಂದ ಬರುವ ಅಮ್ಮ ಮಾಡಿದ ರುಚಿ-ರುಚಿಯಾದ ತಿಂಡಿಯ ಪರಿಮಳ. ಅದನ್ನೊಮ್ಮೆ ಹೊಟ್ಟೆ ತುಂಬಾ ತಿಂದು ತೇಗಿದರೆ ಸ್ವರ್ಗಸುಖ.
ಹೀಗೆ ನಮ್ಮನ್ನು ನಾವು ಮರೆತು ಆನಂದದಿಂದಿರಬೇಕಾದರೆ ಕಾಡುವ ವಿಷಯವೆಂದರೆ ಇವತ್ತು ಸಂಜೆಯೇ ಮತ್ತೆ ಬೆಂಗಳೂರಿಗೆ ಹಿಂತಿರುಗಬೇಕಲ್ಲಾ ಎಂಬುದು. ಒಗೆಸಿದ ಬಟ್ಟೆಗಳನ್ನೆಲ್ಲಾ ಜೋಡಿಸಿಕೊಂಡ ನಂತರದ ಕಾರ್ಯಕ್ರಮ – ಅಪ್ಪನ ಹಿತವಚನ “ಜಾಸ್ತಿ ತಿರುಗ್ ಬೇಡ, ದುಡ್ಡು ಉಳಿಸೋದು ಕಲಿ, ಹೆಲ್ತ್ ಹಾಳು ಮಾಡ್ಕೋಬೇಡ,” ಇತ್ಯಾದಿ, ಇತ್ಯಾದಿ… ಇದನ್ನೆಲ್ಲಾ ಕೇಳಿ ಮನವರಿಕೆ ಮಾಡಿಕೊಂಡಂತೆ ನಟಿಸಿ ಅಮ್ಮನ ಹತ್ತಿರ ಸ್ವಲ್ಪ ಕಾಲ ಕಳೆಯಲು ಒಳಗೆ ಹೋದರೆ ಅಲ್ಲಿ ಇನ್ನೊಂದು ಬ್ಯಾಗ್ ರೆಡಿ. ಅದು ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಉಪ್ಪಿನಕಾಯಿ, ಇತ್ಯಾದಿ, ಮತ್ತಿವೆಲ್ಲದರೊಂದಿಗೆ ಅಮ್ಮನ ಪ್ರೀತಿ ತುಂಬಿರುವ ಬ್ಯಾಗು.

ಅಪ್ಪ-ಅಮ್ಮನ ಕಾಲಿಗೆ ನಮಸ್ಕರಿಸಿ ಮನಸ್ಸಿಲ್ಲದಿದ್ದರೂ ಹೊರಡಲು ರೆಡಿ. ಅಲ್ಲಿಯವರೆಗೂ ಖುಷಿ-ಖುಷಿಯಾಗಿ ಮಕ್ಕಳೊಂದಿಗೆ ಕಾಲ ಕಳೆಯುವ ಅಪ್ಪ-ಅಮ್ಮ, ನಾವು ಹೊರಡುವಾಗ ತಾವೇ ಮಕ್ಕಳಾಗಿ ಬಿಡುತಾರೆ. ಎಷ್ಟೇ ಸಹಿಸಿಕೊಂದರೂ ಅಮ್ಮನ ಅಳು ನಿಲ್ಲುವುದಿಲ್ಲ, ಅಪ್ಪನಿಗೆ ದುಃಖವಾಗುತ್ತಿದ್ದರೂ ಮಕ್ಕಳ ಮುಂದೆ ತೋರಿಸುವುದಿಲ್ಲ, ನಮಗೂ ಬೇಸರವಾಗುತ್ತಿದ್ದರೂ, ಅವರು ಮತ್ತೆಲ್ಲಿ ನೊಂದುಕೊಳ್ಳುತಾರೋ ಎಂದು ಸುಮ್ಮನಿರಬೇಕು.

ಹೇಗೋ ಮನಸ್ಸಿಲ್ಲದೆ ಕಷ್ಟಪಟ್ಟು ಒಂದೊಂದೇ ಹೆಜ್ಜೆ ಇಡುತ್ತಾ ಆಟೋ ಹತ್ತಿಕುಳಿತು ಒಂದು ಬಾರಿ ಹಿಂತಿರುಗಿ ನೋಡಿದರೆ ಮನಸು ಕರಗುವ ದೃಷ್ಯ. ರೆಕ್ಕೆ ಬಂದ ಮರಿಯು ಗೂಡು ಬಿಟ್ಟು ಹಾರುವಾಗ, ಗೂಡು ಬಿಟ್ಟರೂ ಹಾರಲು ಕಲಿಯತಲ್ಲ ಎಂದು ತನ್ನನು ತಾನೆ ಸಂತೈಸಿಕೊಳ್ಳುತ್ತಾ ಅಳುವ ತಾಯಿಹಕ್ಕಿಯ ಹಾಗೆ, ಸಣ್ಣ ಮುಖ ಹೊತ್ತು ನಮ್ಮನೇ ನೋಡುವ ಅಮ್ಮನ ತುಂಬಿದ ಕಣ್ಣುಗಳು, ಕತ್ತಲಲ್ಲೂ ಹೊಳೆಯುತ್ತವೆ. ಇದನ್ನೆಲ್ಲಾ ನೋಡಿ ಸುಮ್ಮನೆ ಸಹಿಸಿಕೊಳ್ಳದೆ ಬೇರೆ ದಾರಿಯೇ ಇಲ್ಲವೆ ಅನಿಸುತ್ತದೆ.

ನಾಳೆಯಿಂದ ಮತ್ತೆ ತಾವೇ ಇಬ್ಬರು ಜೊತೆಗೆ ಮಕ್ಕಳ ಗಲಾಟೆ ಇಲ್ಲದೆ ಮೌನವಾಗಿರುವ ಮನೆ, ಒಬ್ಬಂಟಿಯಾಗಿ ತೂಗಿಕೊಂಡಿರುವ ತೂಗುಯ್ಯಾಲೆ. ಹೀಗೆ ಮತ್ತದೇ ಬೇಸರದ ಜೀವನವೆಂದು ಅಪ್ಪ-ಅಮ್ಮನಿಗೆ ಅನಿಸಿದರೆ, ಮತ್ತದೆ ಟ್ರಾಫಿûಕ್ ಗಲಾಟೆ, ಮತ್ತೆದೇ ಆಫಿûೀಸಿನ ಜಂಜಾಟ ಎಂಬ ಕೊರಗು ನಮ್ಮದು. ಇಷ್ಟೇನ ಜೀವನ….

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker