ಕನ್ನಡಸಂಗೀತ ಸಮಯ

ಚಿನ್ಮಯ ಎಂ.ರಾವ್ ಗಾಯನದ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆ

ಸಾಗರ : ಸಮೀಪದ ಹೊನಗೋಡಿನ ಯುವ ಸಂಗೀತ ನಿರ್ದೇಶಕ ಹಾಗೂ ಗಾಯಕ ಚಿನ್ಮಯ ಎಂ.ರಾವ್ ಅವರ ಗಾಯನದ ಶ್ರೀ ಗುರುಸಂಹಿತಾ ಎಂಬ ಆಡಿಯೋ ಡಿ.ವಿ.ಡಿ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಎಂದು ಯುನೆಟೆಡ್ ಕಿಂಗ್ ಡಮ್ ಮೂಲದ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದೆ. ಕಳೆದ ಮೇ ತಿಂಗಳ ೨೪ರಂದು ಹರಿಹರದ ನಾರಾಯಣಾಶ್ರಮದಲ್ಲಿ ಲೋಕಾರ್ಪಣೆಗೊಂಡಿದ್ದ ಈ ಆಡಿಯೋ ಡಿ.ವಿ.ಡಿ ಒಟ್ಟು ೨೮ ಗಂಟೆ ೮ ನಿಮಿಷ ೩೦ ಸೆಕೆಂಡ್ ಧ್ವನಿಮುದ್ರಣವಾಗಿರುವ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿ.ವಿ.ಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

“ಶ್ರೀ ಗುರುಸಂಹಿತಾ” ಎಂಬ ಹೆಸರಿನ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ ಪವಿತ್ರ ಗ್ರಂಥದಲ್ಲಿನ ೫೨ ಅಧ್ಯಾಯಗಳಲ್ಲಿರುವ ಅನುಷ್ಟುಪ್ ಛಂದಸ್ಸಿನ ಒಟ್ಟು ೬,೬೨೧ ಸಂಸ್ಕೃತ ಶ್ಲೋಕಗಳನ್ನು ಚಿನ್ಮಯ ಎಂ.ರಾವ್ ತಮ್ಮ ಹೊನಗೋಡಿನ ಮನೆಯಲ್ಲಿರುವ ಪುಟ್ಟ ಸ್ಟೂಡಿಯೋದಲ್ಲಿ ತಾವೇ ಧ್ವನಿಮುದ್ರಣ ಮಾಡಿಕೊಂಡು ಇದರ ಸಂಕಲನದ ಕೆಲಸವನ್ನೂ ತಾವೇ ಮಾಡಿಕೊಂಡು ಅಂತಿಮ ಹಂತದ ಮಾಸ್ಟರ್ ಡಿ.ವಿ.ಡಿ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದಾರೆ. ಚಿನ್ಮಯ ಎಂ.ರಾವ್ ೨೦೧೦ರಿಂದ ೨೦೧೩ರರವರೆಗೆ ೩ ವರ್ಷ ಈ ಅಡಕ ಮುದ್ರಿಕೆಯ ಧ್ವನಿಮುದ್ರಣಕ್ಕಾಗಿ ಒಟ್ಟು ೨,೪೦೦ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

ಮೂಲತಹ ಮರಾಠಿ ಭಾಷೆಯ ಗಂಗಾಧರ ಸರಸ್ವತಿ ಎಂಬ ಕವಿಯಿಂದ ರಚಿಸಲ್ಪಟ್ಟ ಶ್ರೀ ಗುರುಚರಿತ್ರಾ ಎಂಬ ಈ ಪವಿತ್ರ ಗ್ರಂಥ ಇಂದಿಗೂ ಮಹಾರಾಷ್ಟ್ರದಾದ್ಯಂತ ಪ್ರಚಲಿತವಾಗಿದೆ. ಶ್ರೀ ಗುರುಚರಿತ್ರೆಯು, ಶ್ರೀ ದತ್ತಾತ್ರೇಯರ, ಶ್ರೀಪಾದಶ್ರೀವಲ್ಲಭರ, ಶ್ರೀ ನೃಸಿಂಹ ಸರಸ್ವತಿಗಳ ಅದ್ಭುತವೂ ಪರಮಾನಂದವೂ ಆದ ದಿವ್ಯ ಚರಿತ್ರೆ. ಶ್ರೀ ವಾಸುದೇವಾನಂದ ಸರಸ್ವತಿಗಳು ದತ್ತನ ಪ್ರೇರಣೆಯಿಂದ ಸಂಸ್ಕೃತ ಭಾಷೆಗೆ ಇದನ್ನು ಅನುವಾದಿಸಿದ್ದಾರೆ.

ಚಿತ್ರದುರ್ಗದ ಹಿರಿಯ ಜ್ಯೋತಿಷಿ ಶ್ರೀ ಎಸ್ ಶ್ರೀಧರ ಮೂರ್ತಿ ನಿರ್ಮಾಣದ ಈ ಆಡಿಯೋ ಡಿ.ವಿ.ಡಿಯನ್ನು ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಹೊರತಂದಿದೆ.

Related Articles

Check Also
Close
Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.