
ನಾಡಿನ ಹೆಸರಾಂತ ಗಾಯಕಿ, ನಟಿ, ಎದೆ ತುಂಬಿ ಹಾಡುವೆನು ಖ್ಯಾತಿಯ ಕುಮಾರಿ ರಕ್ಷಿತಾ ಭಾಸ್ಕರ್ ರವರು ಸಂಸ್ಥಾಪಿಸಿರುವ ತ್ರಿಧಾ ಮ್ಯೂಸಿಕ್ ಅಕಾಡೆಮಿಯ ಮೊದಲನೆಯ ವಾರ್ಷಿಕೋತ್ಸವ “ತ್ರಿಧಾ ಮಿಲನ-2025” ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 17 ಅಕ್ಟೋಬರ್ 2025ರಂದು ಸಂಜೆ 4:30 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೆಸರಾಂತ ಸಂಗೀತ ನಿರ್ದೇಶಕರಾದ ಶ್ರೀ ವಿ ಮನೋಹರ್ ರವರು ಮತ್ತು ಸೃಜನ ಸಾಂಸ್ಕೃತಿಕ ಸಮೂಹದ ಸಂಸ್ಥಾಪಕ ಅಧ್ಯಕ್ಷರೂ, ರಕ್ಷಿತಾ ಭಾಸ್ಕರ್ ರವರ ಸಂಗೀತದ ಗುರುಗಳೂ ಆದ ಶ್ರೀ ನರಹರಿ ದೀಕ್ಷಿತ್ ರವರು ಆಗಮಿಸಿದ್ದರು.
ಶ್ರೀ ವಿ ಮನೋಹರ್ ರವರು ಮಾತನಾಡಿ, ಕನ್ನಡ ನಾಡಿನ ಮನೆಮಗಳು, ಅಸಾಮಾನ್ಯ ಬಹುಮುಖ ಪ್ರತಿಭೆ, ಕುಮಾರಿ ರಕ್ಷಿತಾ ಚಿಕ್ಕ ವಯಸ್ಸಿನಿಂದಲೇ ಎಲ್ಲರ ಭರವಸೆಯ ಕಲಾವಿದೆ. ಅವರ ತ್ರಿಧಾ ಸಂಸ್ಥೆಯು ಅತ್ಯಂತ ಯಶಸ್ವಿಯಾಗಲಿ, ಉನ್ನತೋನ್ನತ ಸಾಧನೆಗೈಯಲಿ, ಇನ್ನೂ ಅನೇಕ ಕಲಾವಿದರು ಈ ಸಂಸ್ಥೆಯಿಂದ ಹೊರಬರುವಂತಾಗಲಿ ಎಂದು ಶುಭ ಹಾರೈಸಿದರು.
ಗುರು ಶ್ರೀ ನರಹರಿ ದೀಕ್ಷಿತ್ ರವರು ಮಾತನಾಡಿ, ಕಿರಿಯ ವಯಸ್ಸಿನಲ್ಲಿಯೇ ತನ್ನ ಅದ್ಭುತ ಗಾನ ಪ್ರತಿಭೆಯಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದ ರಕ್ಷಿತಾ, ತನ್ನದೇ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವುದು ಸಂತಸದ ಸಂಗತಿ. “ತ್ರಿಧಾ” ಹೆಸರಿನಲ್ಲೇ “ಧೀ” ಶಕ್ತಿ ಅಡಗಿದೆ. ರಕ್ಷಿತಾಳ ಪೋಷಕರು, ಸಂಸ್ಥೆಯ ನುರಿತ ಶಿಕ್ಷಕರೇ ಇದರ ಶಕ್ತಿ. ಈ ಶಕ್ತಿ ಸ್ಥಳದಲ್ಲಿ ಕಲಿಯುವ ವಿದ್ಯಾರ್ಥಿಗಳೆಲ್ಲರೂ, ಶ್ರದ್ಧಯಿಂದ ಕಲಿತು ಕಲೆಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸೃಜನ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ತ್ರಿಧಾ ಸಂಸ್ಥೆಯ ರಕ್ಷಿತಾರವರು ಸ್ವಾಗತ ಕೋರಿದರು. ಸಂಸ್ಥೆಯ ವಿದ್ಯಾರ್ಥಿಗಳ ಸಮೂಹ ಗಾಯನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು. ಮೋನಿಕಾರವರು ನಿರೂಪಣೆ ಹಾಗೂ ವಂದನಾರ್ಪಣೆ ನೆರವೇರಿಸಿದರು.
ಪ್ರಖ್ಯಾತ ನಟಿ ಶ್ರೀಮತಿ ಗಿರಿಜಾ ಲೋಕೇಶ್, ಅನಿರುದ್ಧ ಶಾಸ್ತ್ರಿ, ಸ್ನೇಹ, ಅಥರ್ವ ಹಾಗೂ ಇನ್ನಿತರ ಕಲಾ ಸಾಧಕರು, ತ್ರಿಧಾ ಸಂಸ್ಥೆಯ ಸಮಸ್ತ ವಿದ್ಯಾರ್ಥಿ ಮತ್ತು ಪೋಷಕ ವೃಂದ ಉಪಸ್ಥಿತರಿದ್ದರು.





