ಬೆಂಗಳೂರು : ಸಂಗೀತ ಸಾಧನೆಗೆ ಸದ್ಗುರುವನ್ನು ಆಶ್ರಯಿಸಬೇಕಾಗಿದೆ. ಸದ್ಗುರುವಿನ ಮಾರ್ಗದರ್ಶನದಲ್ಲಿ ಶಿಷ್ಯನಾದವನು ಸಂಗೀತಾಭ್ಯಾಸವನ್ನು ನಿರಂತರ ತಪಸ್ಸಿನಂತೆ ಮಾಡಿದರೆ ಮಾತ್ರ ಸಂಗೀತ ಸಿದ್ಧಿಸುತ್ತದೆ. ಇದು ಜೀವನ ಪೂರ್ತಿ ಕಲಿಯುವ ವಿದ್ಯೆ, ಜೀವನಪೂರ್ತಿ ಕಲಿತರೂ ಮುಗಿಯದ ವಿದ್ಯೆ. “ಕಾಂತಾರ” ಚಿತ್ರದ “ವರಾಹ ರೂಪಂ” ಗೀತೆಯ ಹಿನ್ನೆಲೆ ಗಾಯನ ನನಗೆ ಯಾವುದೋ ಜನ್ಮದ ಪುಣ್ಯದ ಫಲವಾಗಿ ಸಿಕ್ಕಿದೆ. ಇದು ನನ್ನ ನಿತ್ಯ ನಿರಂತರ ಧ್ಯೇಯ ಗೀತೆಯಂತಾಗಿದೆ. ಈ ಹಾಡನ್ನು ಹಾಡುವ ಗಾಯಕನಿಗೂ ಕೇಳುವ ಪ್ರತಿಯೊಬ್ಬ ಪ್ರೇಕ್ಷಕನಿಗೂ ಖಂಡಿತವಾಗಿಯೂ ದೈವಾನುಭೂತಿ ಇಂದಿಗೂ ಎಂದಿಗೂ ಆಗುತ್ತಲೇ ಇರುತ್ತದೆ. ಇದೇ ದೇವರ ಮಹಿಮೆ. ಇದೇ ದೇವರನ್ನು ನಮಗೆ ತೋರಿಸುವ ಸಂಗೀತದ ಹಿರಿಮೆ, ಮಹಿಮೆ, ಎಂದು “ಕಾಂತಾರ” ಚಿತ್ರದ “ವರಾಹ ರೂಪಂ” ಮೂಲ ಗೀತೆಯನ್ನು ಹಾಡಿರುವ ಪ್ರಖ್ಯಾತ ಗಾಯಕ ವಿದ್ವಾನ್ ಸಾಯಿ ವಿಘ್ನೇಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿಜಿಎಸ್ ಸಭಾಂಗಣದಲ್ಲಿ ಶನಿವಾರ ನಡೆದ ಸ್ವರಮೇಧಾ 9ನೆಯ ವರ್ಷದ ಸಂಗೀತೋತ್ಸವದಲ್ಲಿ “ಸ್ವರಮೇಧಾ ಸಂಗೀತಶ್ರೀ” ಬಿರುದನ್ನು ಸ್ವೀಕರಿಸಿದ ನಂತರ ಮಾತನಾಡಿದ ಅವರು ಕರ್ನಾಟಕ ಶಾಸ್ತ್ರೀಯ ಶಾಸ್ತ್ರೀಯ ಸಂಗೀತವನ್ನು ವಿಶ್ವಶಾಂತಿಗಾಗಿ ಸಂಗೀತ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಮುನ್ನಡೆಸುತ್ತಿರುವ ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಚಿನ್ಮಯ ರಾವ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಅವರು ಶುಭಹಾರೈಸಿದರು. ನಂತರದಲ್ಲಿ “ವರಾಹ ರೂಪಂ” ಗೀತೆಗೆ ಸಂಗೀತದ ವಿಶೇಷ ಸ್ವರಪ್ರಸ್ತಾರಗಳನ್ನು ಹಾಕಿ ಅವರು ತಮ್ಮ ಸಾಧನೆಯನ್ನು ಸಭಿಕರಿಗೆ ಪರಿಚಯಿಸಿದಾಗ ಸಭಾಂಗಣದಲ್ಲಿನ ಕರತಾಡನ ಮುಗಿಲುಮುಟ್ಟಿತ್ತು.
“ಸ್ವರಮೇಧಾ ಸಂಗೀತ ವಿಭೂಷಣ” ಬಿರುದನ್ನು ಸ್ವೀಕರಿಸಿ ಮಾತನಾಡಿದ ಪ್ರಖ್ಯಾತ ಸಾಕ್ಸೋಫೋನ್ ಕಲಾವಿದ ವಿದ್ವಾನ್ ಶ್ರೀಧರ್ ಸಾಗರ್ ಅವರು ಸ್ವರಮೇಧಾ ಸಂಸ್ಥಾಪಕ ಚಿನ್ಮಯ ರಾವ್ ಹಾಗೂ ನಾನು, ಅಂದರೆ ನಾವಿಬ್ಬರೂ ಶಿವಮೊಗ್ಗ ಜಿಲ್ಲೆಯ ಸಾಗರದವರು. ನಮ್ಮೂರಿನ ಕಲಾವಿದ ನಮ್ಮೂರಿನ ಇನ್ನೊಬ್ಬ ಕಲಾವಿದನನ್ನು ಇನ್ನೊಂದು ಊರಿನಲ್ಲಿ, ಅಂದರೆ ಬೆಂಗಳೂರೆಂಬ ಈ ಮಹಾನಗರದಲ್ಲಿ ಆಹ್ವಾನಿಸಿ ಬಿರುದನ್ನು ನೀಡಿ ಗೌರವುಸುವುದು ನಿಜಕ್ಕೂ ರೋಮಾಂಚನದ ಸಂಗತಿ. ನಮ್ಮೂರಿನವರಿಂದ, ನಮ್ಮವರಿಂದ ನಮಗೆ ಆಗುವ ಸನ್ಮಾನ ಹಾಗೂ ಲಭಿಸುವ ಬಿರುದು ಜೀವನದಲ್ಲಿ ಎಂದೆಂದಿಗೂ ಅವಿಸ್ಮರಣಿಯವಾಗುತ್ತದೆ. ನಮ್ಮೂರಿನ ಸ್ವರಮೇಧಾ ಸಂಸ್ಥೆ ವಿಶ್ವದಾದ್ಯಂತ ಬೆಳೆದು ಶೊಭಾಯಮಾನವಾಗಲಿ ಎಂದು ಶುಭಹಾರೈಸಿದರು. ನಂತರ ಸುಪ್ರಸಿದ್ದ ಗೀತೆಗಳನ್ನು ತಮ್ಮ ಸ್ಯಾಕ್ಸೋಫೋನ್ ವಾದನದ ಮೂಲಕ ನುಡಿಸಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದರು.
“ಸ್ವರಮೇಧಾ ಸಂಗೀತರತ್ನ” ಬಿರುದನ್ನು ಸ್ವೀಕರಿಸಿ ಮಾತನಾಡಿದ 90 ವರ್ಷದ ಹಿರಿಯ ವೇಣುವಾದಕ ವಿದ್ವಾನ್ ಬಿ.ಜಿ ಶ್ರೀನಿವಾಸ್ ಅವರು ಸಂಗೀತ ಸಾಧನೆಗೆ ವಯಸ್ಸೆಂಬುದೇ ಇಲ್ಲ. ಸಂಗೀತ ಸಾಧನೆ ಮಾಡುವವರಿಗೆ ವಯಸ್ಸಾಗಿದ್ದೇ ಗೊತ್ತಾಗುವುದಿಲ್ಲ. ಸಂಗೀತವೆಂಬುದು ನಮಗೆ ನಿರಂತರವಾಗಿ ಚೈತನ್ಯವನ್ನು ನೀಡುವ ಚಿಲುಮೆ ಎಂದು ಸಂಗೀತ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚನ್ನೆನಹಳ್ಳಿಯ ವೇದವಿಜ್ನಾನ ಗುರುಕುಲದ ಸಂಸ್ಥಾಪಕ ಪ್ರೊಫೆಸರ್ ಡಾ. ರಾಮಚಂದ್ರ ಭಟ್ ಕೋಟೆಮನೆ ಅವರು ಮಾತಿಗಿಂತ ಕೃತಿ ಮುಖ್ಯ. ಸ್ವರಮೇಧಾ ಸಂಸ್ಥೆ ಸಂಗೀತದ ಕೃತಿಗಳನ್ನು ತನ್ನ ವಿದ್ಯಾರ್ಥಿಗಳ ಸಾಧನೆಯ ಮೂಲಕ ಕೃತಿರೂಪಕ್ಕಿಳಿಸುತ್ತಾ ಯಾವುದೇ ಅಬ್ಬರವಿಲ್ಲದಂತೆ ಮೌನವಾಗಿಯೇ ಸಾಧನೆ ಮಾಡುತ್ತಿದೆ. ಈ ಸಾಧನೆ ಹಿಗೆಯೇ ಚಿರಕಾಲ ನಡೆಯಲಿ, ಸ್ವರಮೇಧಾ ಸಂಸ್ಥೆ ಬೆಳೆಯಲಿ, ಬೆಳಗಲಿ ಎಂದು ಶುಭಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಟ್ರಸ್ಟಿ ಶ್ರೀ ಹಯಗ್ರೀವಾಚಾರ್ ಅವರು ಮಾತನಾಡುತ್ತಾ ಸ್ವರಮೇಧಾ ಸಂಸ್ಥೆ ಕೇವಲ 9 ವರ್ಷಗಳಲ್ಲಿ ಇಷ್ಟೊಂದು ವಿದ್ಯಾರ್ಥಿಗಳನ್ನು ಶಾಸ್ತ್ರೀಯ ಸಂಗೀತ ಸಾಧನೆ ಮಾಡುವಂತೆ ಪ್ರೇರೇಪಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ ಎಂದರು. ಇಂತಹ ಸಂಸ್ಥೆಗಳು ಸಮಾಜದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯೋನ್ಮುಖವಾದರೆ ನಮ್ಮ ಶಾಸ್ತ್ರೀಯ ಸಂಗೀತ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಅನುಕೂಲವಾಗುತ್ತದೆ ಎಂದರು.
ಸತತವಾಗಿ ಐದು ಗಂಟೆಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ ಹಾಗೂ ಸ್ವರಮೇಧಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಸ್ವರಮೇಧಾ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮದಲ್ಲಿ ಸಂಗೀತದ ಕೃತಿಗಳ ಗಾಯನಕ್ಕೂ ಮೊದಲು ವಾಗ್ಗೇಯಕಾರರ ವಿವರ ಹಾಗೂ ಕೃತಿಗಳ ಭಾವಾನುವಾದವನ್ನು ವಿದ್ಯಾರ್ಥಿಗಳು ವಿವರಿಸಿದರು. ತ್ಯಾಗರಾಜರ ಸಾದಿಂಚನೆ ಹಾಗೂ ಎಂದರೋ ಮಹಾನುಭಾವುಲು ಪಂಚರತ್ನ ಕೃತಿಗಳನ್ನು ಸ್ವರಮೇಧಾ ಸಂಗೀತ ಶಾಲೆಯ 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಭಾಕಾರ್ಯಕ್ರಮಕ್ಕೂ ಮೊದಲು ಏಕಕಂಠದಲ್ಲಿ ಏಕಕಾಲದಲ್ಲಿ ಹಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆದರು. ವಿದ್ಯಾರ್ಥಿಗಳ ಗಾಯನಕ್ಕೆ ಪಕ್ಕವಾದ್ಯದಲ್ಲಿ ವಿದ್ವಾನ್ ಗೋಪಾಲಕೃಷ್ಣ, ವಿದ್ವಾನ್ ರವಿಶಂಕರ್ ಅವರ ಮೃದಂಗ ಹಾಗು ಪಿಟೀಲಿನಲ್ಲಿ ವಿದ್ವಾನ್ ಶಶಿಧರ್ ಅವರ ವಾದನ ಮನಮೋಹಕವಾಗಿತ್ತು.
ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಡಾ.ಚಿನ್ಮಯ ರಾವ್, ಅಧ್ಯಕ್ಷರಾದ ಸಿಎ ಭರತ್ ರಾವ್ ಕೆ.ಎಸ್, ಟ್ರಸ್ಟಿ ಶೀಲಾ ಸಿ ರಾವ್, ಗೌರವ ಸಲಹೆಗಾರರಾದ ಅಂಕಿ ರೆಡ್ಡಿ, ಉದ್ಯಮಿ ರಾಜೇಶ್ ಬಾಬು ಹಾಗೂ ಗೋಸೇವಕರಾದ ಮಹೇಂದ್ರ ಮುನ್ನೋಟ್ ಈ ಸಂದರ್ಭದಲ್ಲಿ ಹಾಜರಿದ್ದರು. ಮೀನಾ ಶಾಂತಲ, ಶೀಲಾ ಸಿ ರಾವ್, ಶುಭಪ್ರದ, ಯುವ ಸಾಹಿತಿ ಅಚಲ ಬಾಪಟ್ ಹಾಗೂ ಸ್ವರಮೇಧಾ ವಿದ್ಯಾರ್ಥಿಗಳು ಸಭಾಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದ ಮುಕ್ತಾಯದಲ್ಲಿ ಈ ಉತ್ಸವದಲ್ಲಿ ಗಾಯನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲಿದ್ದ ಗಣ್ಯರು ಸ್ಮರಣಿಕೆಯನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರು.
***********





