ಸ್ವರಮೇಧಾ ಸಂಗೀತೋತ್ಸವದ ಅಭೂತಪೂರ್ವ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಪ್ರಕಾಶನಾಥ ಸ್ವಾಮೀಜಿ
ಬೆಂಗಳೂರು : ಸ್ವರಮೇಧಾ ಸಂಗೀತೋತ್ಸವ ಕೇವಲ ಸಂಗೀತ ಕಾರ್ಯಕ್ರಮವಲ್ಲ ಆದರೆ ಇದು ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಪ್ರತೀ ವರ್ಷ ಸಂದಾಯವಾಗುತ್ತಿರುವ ಅನನ್ಯ ಸಂಗೀತಸೇವೆಯಾಗಿದೆ. ಈ ಮೂಲಕ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಸ್ವರಮೇಧಾ ಸಂಗೀತೋತ್ಸವದ ಮೂಲಕ ಕೊಡುಗೆಯನ್ನು ನೀಡುತ್ತಿದೆ. ವಿಶ್ವಶಾಂತಿಗಾಗಿ ಸಂಗೀತ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವದಾದ್ಯಂತ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಧಕರನ್ನು ಹುಟ್ಟುಹಾಕುತ್ತಿರುವ ಸ್ವರಮೇಧಾ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಪಾಶ್ಚಾತ್ಯ ಸಂಗೀತದ ಆಕರ್ಷಣೆಗೆ ಮಾರು ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸ್ವರಮೇಧಾ ಸಂಸ್ಥೆ ಏರ್ಪಡಿಸುತ್ತಿರುವ “ಸ್ವರಮೇಧಾ ಸಂಗೀತೋತ್ಸವ”ಕ್ಕೆ ಪ್ರತೀ ವರುಷ ಸಾವಿರಾರು ಜನ ಸೇರುತ್ತಿದ್ದಾರೆ ಎಂದರೆ ಅದೊಂದು ಆಶ್ಚರ್ಯಕರ ಹಾಗೂ ಆರೋಗ್ಯಕರ ಬೆಳವಣಿಗೆ, ಇದು ಹೀಗೆಯೇ ಮುಂದುವರೆಯಬೇಕು ಎಂದು ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕುಂಬಳಗೋಡು ಶಾಖಾಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವರಮೇಧಾ ಸಂಗೀತೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡ ಕಾರಣ ಸ್ವರಮೇಧಾ ಸಂಸ್ಥಾಪಕ ಸಂಗೀತಗುರು ಡಾ.ಚಿನ್ಮಯ ರಾವ್ ಅವರಿಂದ ಗುರುವಂದನೆ ಹಾಗೂ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಇಂತಹ ಸಮಾಜಮುಖಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಯುವಸಮುದಾಯವನ್ನು ಕಲಾವಿದರಾಗಲು ಪ್ರೇರೇಪಿಸುತ್ತಿದೆ ಎಂದರು. ಕೆಂಗೇರಿ ಬಿಜಿಎಸ್ ಶಿಕ್ಷಣಸಂಸ್ಥೆಯಲ್ಲಿ ನಡೆದ ಈ ಗುರುವಂದನೆಯ ಸಂದರ್ಭದಲ್ಲಿ ಸ್ವರಮೇಧಾ ಸಂಸ್ಥೆಯ ಶೀಲಾ ಸಿ ರಾವ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಪುಟ್ಟರಾಜು, ಬಿಜಿಎಸ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಆಡಳಿತವರ್ಗ ಉಪಸ್ಥಿತರಿದ್ದರು.
****************






