ಸ್ವರಮೇಧಾ ಸಂಗೀತ ವಿದ್ಯಾಲಯ

ಸರ್ವಧರ್ಮದವರನ್ನೂ ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಇರುವುದು ಸಂಗೀತಕ್ಕೆ ಮಾತ್ರ

ಸ್ವರಮೇಧಾ ಸಂಗೀತೋತ್ಸವದಲ್ಲಿ ಎಸ್.ಎ ಕಬೀರ್ ಅಭಿಮತ

ಅರ್ಥಪೂರ್ಣವಾಗಿ ನೆರವೇರಿದ ಸ್ವರಮೇಧಾ ಸಂಗೀತೋತ್ಸವ

ಬೆಂಗಳೂರು : ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಇಂದಿನವರೆಗೂ ಎಲ್ಲಾ ಜಾತಿ ಧರ್ಮದವನ್ನೂ ಒಗ್ಗೂಡಿಸುವಲ್ಲಿ ಭಾರತೀಯ ಸಂಗೀತದ ಪಾತ್ರ ಮಹತ್ತರವಾಗಿದೆ. ಸರ್ವಧರ್ಮ ಸಮನ್ವಯತೆ ಕಾಪಾಡಲು ಸಂಗೀತವೇ ಸಮರ್ಥ ಸಾಧನ. ವಿಶ್ವಶಾಂತಿಗಾಗಿ ಸಂಗೀತ ಎಂಬ ಧ್ಯೇಯವನ್ನಿಟ್ಟುಕೊಂಡು ಸಾವಿರಾರು ವಿದ್ಯಾರ್ಥಿಗಳನ್ನು ಸಂಗೀತಕ್ಷೇತ್ರಕ್ಕೆ ನೀಡುತ್ತಿರುವ ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಚಿನ್ಮಯ ರಾವ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಆಲ್ಪೈನ್ ಶಾಲೆಯ ಮುಖ್ಯಸ್ಥ ಎಸ್ ಎ ಕಬೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿಜಿಎಸ್ ಸಭಾಂಗಣದಲ್ಲಿ ಶನಿವಾರ ನಡೆದ ಸ್ವರಮೇಧಾ ಸಂಗೀತೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂತಹ ಸಂಗೀತೋತ್ಸವದ ಮೂಲಕ ಸಮಾಜದ ಶಾಂತಿಗಾಗಿ ಸದಾ ಸಾಮಾಜಿಕ ಕ್ರಾಂತಿಯಾಗಬೇಕಿದೆ ಎಂದರು.

ಬಿಜಿಎಸ್ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ.ಪುಟ್ಟರಾಜು ಅವರು ಮಾತನಾಡಿ ಸಂಗೀತ ಕೇವಲ ಮನರಂಜನೆಯ ಮಾಧ್ಯಮವಲ್ಲ, ಇದೊಂದು ಸ್ವಯಮ್ ಚಿಕಿತ್ಸೆಯ ವಿಧಾನ ಎಂದು ಸಂಗೀತ ಚಿಕಿತ್ಸೆಯ ಮಹತ್ವವನ್ನು ತಮ್ಮದೇ ಆದ ಒಂದು ಸ್ವಾನುಭವದ ಮೂಲಕ ಹೇಳಿದರು. ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕುಂಬಳಗೋಡು ಶಾಖಾಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿಯವರ ಮಾರ್ಗದರ್ಶನದಂತೆ ಡಾ.ಚಿನ್ಮಯ ರಾವ್ ಅವರ ಸ್ವರಮೇಧಾ ಸಂಸ್ಥೆಗೆ ಬಿಜಿಎಸ್ ಸದಾ ಸಹಕಾರ ನೀಡಲಿದೆ ಎಂದರು.

ಸತತವಾಗಿ ಹತ್ತು ಗಂಟೆಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ ಹಾಗೂ ಸ್ವರಮೇಧಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆದ ಸ್ವರಮೇಧಾ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮದಲ್ಲಿ ಸಂಗೀತದ ಕೃತಿಗಳ ಗಾಯನಕ್ಕೂ ಮೊದಲು ವಾಗ್ಗೇಯಕಾರರ ವಿವರ ಹಾಗೂ ಕೃತಿಗಳ ಭಾವಾನುವಾದವನ್ನು ವಿದ್ಯಾರ್ಥಿಗಳು ವಿವರಿಸಿದರು. ತ್ಯಾಗರಾಜರ ಸಾದಿಂಚನೆ ಪಂಚರತ್ನ ಕೃತಿಯನ್ನು ಸ್ವರಮೇಧಾ ಸಂಗೀತ ಶಾಲೆಯ 70 ವಿದ್ಯಾರ್ಥಿಗಳು ಏಕಕಂಠದಲ್ಲಿ ಏಕಕಾಲದಲ್ಲಿ ಹಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆದರು.

ಸಂಜೆ ಏಳು ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ 101 ವರ್ಷದ ರಾಮನಗರದ ಶತಾಯುಷಿ ಸಂಗೀತ ವಿದ್ವಾಂಸರಾದ ಬಿ ಎಸ್ ನಾರಾಯಣ ಅಯ್ಯಂಗಾರ್ ಅವರಿಗೆ “ಸ್ವರಮೇಧಾ ಸಂಗೀತರತ್ನ” ಬಿರುದನ್ನು ಪ್ರಧಾನ ಮಾಡಲಾಯಿತು. ಸನ್ಮಾನಿತರಾಗಿ ಅವರು ಗಾಯನ ಮಾಡಿದಾಗ ಸಭಿಕರೆಲ್ಲಾ ಎದ್ದು ನಿಂತು ಜೋರಾದ ಕರತಾಡನವನ್ನು ಮಾಡಿ ಅವರಿಗೆ ಗೌರವ ಸಮರ್ಪಣೆಯನ್ನು ಮಾಡಿದರು.

“ಸ್ವರಮೇಧಾ ಸಂಗೀತ ವಿಭೂಷಣ” ಬಿರುದನ್ನು ಸ್ವೀಕರಿಸಿ ಮಾತನಾಡಿದ ವೀಣಾವಿದುಷಿ ರೇವತಿ ಕಾಮತ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೂಲ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿರುವ ಸ್ವರಮೇಧಾ ಸಂಸ್ಥೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರಕ್ಕೆ ನೀಡಲಿ ಎಂದು ಶುಭ ಹಾರೈಸಿದರು.

“ಸ್ವರಮೇಧಾ ಸಂಗೀತಶ್ರೀ” ಬಿರುದನ್ನು ಪಡೆದ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ ಪಲ್ಲವಿ ಅವರು ಡಾ. ಕೆ ಎಸ್ ನರಸಿಂಹಸ್ವಾಮಿ ಅವರ “ದೀಪವು ನಿನ್ನದೆ ಗಾಳಿಯು ನಿನ್ನದೆ” ಹಾಗೂ ಡಾ. ಚಿನ್ಮಯ ರಾವ್ ಅವರ “ಶಾರದೆ ಕರುಣೆಯ ತೋರೆ” ಗೀತೆಯ ಗಾಯನವನ್ನು ಮಾಡಿ ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದರು.

ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಡಾ.ಚಿನ್ಮಯ ರಾವ್, ಗೌರವ ಸಲಹೆಗಾರರಾದ ಅಂಕಿ ರೆಡ್ಡಿ, ಸಂಗೀತ ವಿದ್ವಾನ್ ಶ್ರೀನಿವಾಸ ಪ್ರಸನ್ನ ಹಾಗೂ ಗೋಸೇವಕರಾದ ಮಹೇಂದ್ರ ಮುನ್ನೋಟ್ ಈ ಸಂದರ್ಭದಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳ ಗಾಯನಕ್ಕೆ ಮೃದಂಗದಲ್ಲಿ ವಿದ್ವಾನ್ ಹೆಚ್ ಎಲ್ ಗೋಪಾಲಕೃಷ್ಣ, ವಿದ್ವಾನ್ ಜಿ ಎಲ್ ರಮೇಶ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ಶಶಿಧರ್, ವಿದುಷಿ ವಾಸುಕಿ ಪರಿಮಳ ಅವರು ಸಹಕರಿಸಿದರು. ಮೀನಾ ಶಾಂತಲ, ಶೀಲಾ ಸಿ ರಾವ್, ಶುಭಪ್ರದ ಹಾಗೂ ಸ್ವರಮೇಧಾ ವಿದ್ಯಾರ್ಥಿಗಳು ಸಭಾಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದ ಮುಕ್ತಾಯದಲ್ಲಿ ಈ ಉತ್ಸವದಲ್ಲಿ ಗಾಯನ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲಿದ್ದ ಗಣ್ಯರು ಸ್ಮರಣಿಕೆಯನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರು.

***********

 

CLICK HERE FOR

SWARAMEDHA MUSIC FESTIVAL 2023-24 SELECTED VIDEO CLIPS – YouTube

PHOTO GALLERY OF SWARAMEDHA MUSIC FESTIVAL 2023-24

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.