ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ 2023-24ನೆಯ ಶೈಕ್ಷಣಿಕ ವರ್ಷದ ಸಂಗೀತೋತ್ಸವವನ್ನು ಜನವರಿ 25, ಶನಿವಾರದಂದು ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿ.ಜಿ.ಎಸ್ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
“ಸ್ವರಮೇಧಾ ಮ್ಯೂಸಿಕ್ ಫೆಸ್ಟಿವಲ್ 2022-23″ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯಾಲಯದ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ವಿಭಾಗದ ನೂರಾರು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯಲಿದೆ. ತ್ಯಾಗರಾಜರ ಸಾದಿಂಚನೆ ಪಂಚರತ್ನ ಕೃತಿಯನ್ನು ಸ್ವರಮೇಧಾ ಸಂಗೀತ ಶಾಲೆಯ 75 ವಿದ್ಯಾರ್ಥಿಗಳು ಏಕಕಂಠದಲ್ಲಿ ಏಕಕಾಲದಲ್ಲಿ ಹಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆಯಲಿದ್ದಾರೆ.
ಸಂಜೆ 5 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕುಂಬಳಗೋಡು ಶಾಖಾಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ.
ರಾಮನಗರದ ಶತಾಯುಷಿ ಸಂಗೀತ ವಿದ್ವಾನ್ ಬಿ.ಎಸ್ ನಾರಾಯಣ ಅಯ್ಯಂಗಾರ್ ಅವರಿಗೆ “ಸ್ವರಮೇಧಾ ಸಂಗೀತರತ್ನ” ಪ್ರಶಸ್ತಿಯನ್ನೂ, ಹಿರಿಯ ವೀಣಾವಾದಕಿ ವಿದುಷಿ ರೇವತಿ ಕಾಮತ್ ಅವರಿಗೆ “ಸ್ವರಮೇಧಾ ಸಂಗೀತವಿಭೂಷಣ” ಪ್ರಶಸ್ತಿಯನ್ನೂ ಹಾಗೂ ಪ್ರಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ ಪಲ್ಲವಿ ಅವರಿಗೆ “ಸ್ವರಮೇಧಾ ಸಂಗೀತಶ್ರೀ” ಬಿರುದನ್ನು ನೀಡಿ ಸನ್ಮಾನಿಸಲಾಗುತ್ತಿದೆ.
ಮುಖ್ಯ ಅತಿಥಿಗಳಾಗಿ ಆಲ್ಪೈನ್ ಶಾಲೆಯ ಸಂಸ್ಥಾಪಕರಾದ ಎಸ್.ಎ ಕಬೀರ್ ಹಾಗೂ ಪ್ರಖ್ಯಾತ ನಟಿ ಲಕ್ಷ್ಮೀ ಗೌಡ ಅವರು ಆಗಮಿಸಲಿದ್ದಾರೆ.
ಸಮಾಜಸೇವಕರಾದ ಪಟ್ಟಣಗೆರೆ ಜಯಣ್ಣ, ಗೋಸೇವಕರಾದ ಮಹೇಂದ್ರ ಮುನ್ನೋಟ್, ಉದ್ಯಮಿ ನಿರಂಜನ್ ಮೂರ್ತಿ, ರಾಜೇಶ್ ಬಾಬು, ಅಂಕಿ ರೆಡ್ಡಿ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕ ಡಾ. ಚಿನ್ಮಯ ಎಂ.ರಾವ್ ಹಾಗೂ ಸ್ವರಮೇಧಾ ಸಂಸ್ಥೆಯ ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿರಲಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ವ್ಯಾಪಕ ಪ್ರಸಾರದ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುವ ಕಾರಣ ಬಹುಜನರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸ್ವರಮೇಧಾ ಸಂಸ್ಥಾಪಕ ಡಾ. ಚಿನ್ಮಯ ಎಂ.ರಾವ್ ಸಮಸ್ತ ಸಂಗೀತಾಭಿಮಾನಿಗಳನ್ನು ಆಹ್ವಾನಿಸಿದ್ದಾರೆ.
ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಕಿರುಪರಿಚಯ :
ವಿಶ್ವದಾಖಲೆ ವಿಜೇತ ಯುವ ಸಂಗೀತ ನಿರ್ದೇಶಕ ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ. ಚಿನ್ಮಯ ಎಂ.ರಾವ್ ವಿಶ್ವಶಾಂತಿಗಾಗಿ ಸಂಗೀತ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ 2015ರಲ್ಲಿ ಸಂಸ್ಥಾಪಿಸಲ್ಪಟ್ಟ ಸಂಸ್ಥೆಯೇ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ. ಕಳೆದ ಒಂಬತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಹಾಗೂ ದೇಶ ವಿದೇಶಗಳಲ್ಲಿರುವ ನೂರಾರು ವಿದ್ಯಾರ್ಥಿಗಳಿಗೆ ಸ್ವತಹ ಚಿನ್ಮಯ ಎಂ.ರಾವ್ ಅವರೇ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಪ್ರಾಂಶುಪಾಲಕರಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ವಿಶೇಷವಾಗಿ ಯುವಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಯುವಪೀಳಿಗೆಯನ್ನು ಶಾಸ್ತ್ರೀಯ ಸಂಗೀತದ ಸಾಧನೆಯತ್ತ ಕೊಂಡೊಯ್ಯಲು ಸಂಸ್ಥೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
******