ಬೆಂಗಳೂರು : ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಮುಖ ಲಯವಾದ್ಯವಾದ ಮೃದಂಗದ ಕಲಿಕೆಗೆ ಇಂದಿನ ಯುವಪೀಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಸಮಾಜದಲ್ಲಿ ಆಶಾದಾಯಕ ಬೆಳವಣಿಗೆ, ಪಾಶ್ಚಿಮಾತ್ಯ ವಾದ್ಯಗಳ ಅಬ್ಬರದ ನಡುವೆಯೇ ನಮ್ಮ ಭಾರತೀಯ ಸಂಗೀತದ ವಾದ್ಯಗಳು ಸಂಗೀತದ ಶಿಕ್ಷಣದ ಅಡಿಪಾಯವಾಗಬೇಕಾಗಿದೆ ಎಂದು ಹಿರಿಯ ಮೃದಂಗ ವಿದ್ವಾನ್ ನರೇಂದ್ರ ಅವರು ಹೇಳಿದರು.
ಸ್ವರಮೇಧಾ ಸಂಸ್ಥೆಯಿಂದ ರಾಜರಾಜೇಶ್ವರಿನಗರದ ಲ್ಲಿ ಪ್ರಾರಂಭವಾದ ಮೃದಂಗ ಶಿಕ್ಷಣದ ವಿಭಾಗಕ್ಕೆ ಗುರುವಾಗಿ ಚಾಲನೆ ನೀಡಿ ಮಾತನಾಡಿದ ಅವರು ಶಿವನ ಡಮರುಗದ ಅರ್ಧಭಾಗವನ್ನು ಹಿಂದು ಮುಂದು ತಿರುಗಿಸಿದ ರೂಪಾಂತರವೇ ಮೃದಂಗವೆಂಬ ವಿಶಿಷ್ಠ ವಾದ್ಯವಾಗಿದೆ. ಸಂಸ್ಕೃತದ “ಮೃತ್” ಹಾಗೂ “ಅಂಗ” ಮೃದಂಗವಾಗಿದೆ, ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಮೊದಲು ಮೃದಂಗವನ್ನು ಕಲಸಿದ ಮಣ್ಣಿನಿಂದಲೇ ತಯಾರಿಸುತ್ತಿದ್ದರು. ಕಾಲಕ್ರಮೇಣ ದೀರ್ಘಬಾಳಿಕೆಯ ದೃಷ್ಟಿಯಿಂದ ಹಲಸು ಹಾಗೂ ಮುಂತಾದ ಮರಗಳಿಂದ ಇದನ್ನು ತಯಾರಿಸಲು ಪ್ರಾರಂಭಿಸಿದರು ಎಂದರು. ಈ ಸಂದರ್ಭದಲ್ಲಿ ಸ್ವರಮೇಧಾ ಸಂಸ್ಥಾಪಕ ಡಾ.ಚಿನ್ಮಯ ರಾವ್, ಸಮಾಜಸೇವಕರಾದ ಚಲಪತಿ, ಫಣಿರಾಜ್ ಹಾಗೂ ಮತ್ತಿತರು ಹಾಜರಿದ್ದರು.
************************