ಸಂದರ್ಶನಸಾಹಿತ್ಯ

ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸಿದೆ-ಬೆಳೆಯೂರು ವೀಣಾ

VEENA BELEYURUಬೆಳೆಯೂರು ವೀಣಾ…..ರಾಜಕಾರಣ….

ವಿಶೇಷ ಲೇಖನ-ಸಂದರ್ಶನ-ಚಿನ್ಮಯ ಎಂ.ರಾವ್ ಹೊನಗೋಡು

ಇಂದಿನ ಮಹಿಳೆಯರು ಹಿಂದಿನಂತಿಲ್ಲ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ನಿಧಾನವಾಗಿ ತಮ್ಮ ಸ್ಥಾನವನ್ನೂ ತಮ್ಮ ತನವನ್ನೂ ಭದ್ರಪಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ವ್ಯಾವಹಾರಿಕ, ಔದ್ಯೋಗಿಕ, ರಾಜಕೀಯ ಹೀಗೆ ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಗೆ ಬರುತ್ತಿರುವ ಮಹಿಳೆಯರು ಒಂದೆಡೆಯಾದರೆ ಇನ್ನೊಂದೆಡೆ ಇದನ್ನು ಸಹಿಸದ ಒಂದಷ್ಟು ಮಂದಿ ಅವರಿಗೆ ಹೇಗೆಲ್ಲಾ ತಡೆಯೊಡ್ಡಬಹುದೆಂದು ಶತಪ್ರಯತ್ಮ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ರಾಜಕೀಯ ಹಾಗು ಸಿನಿಮಾ ತಾರೆಯರ ಕುರಿತಾಗಿ ಒಳಸತ್ಯವನ್ನರಿಯದೆ ಅಂತೆಕಂತೆಗಳ ಸಂತೆಯಲ್ಲಿ ಸುಳ್ಳು ಸುದ್ದಿಗಳನ್ನೇ ಸತ್ಯವೆಂಬಂತೆ ನಂಬಿ ಗುಟ್ಟಾಗಿ ಮಾತನಾಡುವವರೇ ಹೆಚ್ಚು. ಸಾಂದರ್ಭಿಕವಾಗಿ ವ್ಯಕ್ತಿಯ ಜೊತೆ ನೇರ ಸಂದರ್ಶನ ಮಾಡುವುದೇ ಇಲ್ಲ. ಮಹಿಳೆಯೊಬ್ಬಳ ಕುರಿತಾಗಿ ಕಲ್ಪಿತ ಮಾಹಿತಗಳನ್ನೇ ಸವಿಯುತ್ತಾ ಅತಿರಂಜಿತವಾಗಿ ಅತಿರೋಚಕವಾಗಿ ಚರ್ಚೆ ಮಾಡುವವರೇ ಹೆಚ್ಚು. ಮಹಿಳೆಯೊಬ್ಬಳ ಮೇಲೆ ಇದು ಪರೋಕ್ಷ ದೌರ್ಜನ್ಯವೇ ಸರಿ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಸಾಕಷ್ಟು ಅವಮಾನಗಳನ್ನುಂಡರೂ ತಾನು ರಾಜಕೀಯದ ಮೂಲಕ ಮಾಡುತ್ತಿರುವ ಸಮಾಜಸೇವೆಯಿಂದಾಗಿ ಗ್ರಾಮೀಣ ಭಾಗದ ಹಲವಾರು ಜನರಿಗೆ ಉಪಯೋಗವಾಗಿದೆ…ಉಪಕಾರವಾಗಿದೆ. ಅವರೆಲ್ಲಾ ತನ್ನ ಸಹಾಯವನ್ನು ಸ್ಮರಿಸಿಕೊಳ್ಳುವುದೇ ತನಗೆ ಸನ್ಮಾನ…ಅಲ್ಲೇ ತನ್ನ ಸಾರ್ಥಕ್ಯ…ಅದರ ಮುಂದೆ ಕುತಂತ್ರ ರಾಜಕಾರಣದಲ್ಲಿ ಎಂತಹ ಅವಮಾನಗಳೂ ಗೌಣ…ಎಂದು ಅತ್ಯಂತ ಸ್ಪಷ್ಟವಾಗಿ ನಿಖರವಾಗಿ ಅಷ್ಟೇ ಶಾಂತವಾಗಿ ನುಡಿಯುತ್ತಾರೆ ವೀಣಾ ಬೆಳೆಯೂರು…ಅವರ ಮಾತುಗಳನ್ನು ಕೇಳಿದಾಗ ನಮಗನಿಸುತ್ತದೆ ವೀಣಾ ರಾಜಕಾರಣದಲ್ಲಿ ಬೆಳೆಯೋರು.

VEENA BELEYURU-2ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ವೀಣಾ ಪರಾಭವ ಹೊಂದಿದ್ದರು ನಿಜ. ಆದರೆ ಈಡಿಗ ಜನಾಂಗದ ಪ್ರಾಬಲ್ಯವಿರುವ ಕೆಳದಿಯಂತಹ ಕ್ಷೇತ್ರದಲ್ಲಿ ಹವ್ಯಕ ಮಹಿಳೆಯೊಬ್ಬಳು ಏಳು ಸಾವಿರಕ್ಕೂ ಹೆಚ್ಚು ಮತ ಪಡೆದಿರುವುದು ಅವರು ಜಾತ್ಯಾತೀತರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದಲೆ ಹೊರತು, ಪಕ್ಷಾತೀತವಾಗಿ ಪಡೆದ ಜನಪ್ರಿಯತೆಯಿಂದಲೆ ಹೊರತು ಪ್ರವಾಸಿ ಮಂದಿರದ ರಾಜಕಾರಣದಿಂದಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಗೆದ್ದ ಅಭ್ಯರ್ಥಿಗಿಂತ ಕೇವಲ ೨೬೦೦ ಮತಗಳ ಹಿನ್ನೆಡೆ ವೀಣಾ ಅವರದಾಗಿತ್ತು. ಈ ಹಿನ್ನೆಡೆಗೂ ಹಲವಾರು ಕಾಣದ ಕೈಗಳ ಕಾರಣಗಳಿತ್ತು. ಅದೇನೇ ಇರಲಿ ಇತ್ತೀಚೆಗೆ ಕಾಂಗ್ರೇಸ್ ಪಕ್ಷದಲ್ಲಿ ನಿಧಾನವಾಗಿ ಬೆಳೆಯುತ್ತಿರುವ ವೀಣಾ ಬೆಳೆಯೂರು ಆಗಾಗ ಸುದ್ದಿಯಲ್ಲಿರುವ ಯುವನಾಯಕಿ. ಈ ಹಂತದಲ್ಲಿ ಸುವರ್ಣ ಪ್ರಭಾ ಪತ್ರಿಕೆ ಅವರನ್ನು ಸಂದರ್ಶಿಸುವ ಅನಿವಾರ್ಯತೆಯಿದೆ ಎಂಬುದನ್ನು ಭಾವಿಸಿ ಅವರಿಗೆ ಕೆಲವೊಂದು ಪ್ರೆಶ್ನೆಗಳನ್ನು ಖಡಕ್ಕಾಗಿ ಕೇಳಿತು. ವೀಣಾ ಸಮಾಧಾನವಾಗಿ ಉತ್ತರಿಸಿದರು. ವಿಪರ್ಯಾಸವೆಂದರೆ ಇಂತಹ ಸತ್ಯಶೋಧನೆಯಿಂದ ಕೂಡಿದ ಧನಾತ್ಮಕ ಅಂಶಗಳನ್ನು ಪ್ರಕಟಿಸುವಾಗ ಕೂಡ ಕೆಲ ಮಂದಿ ಮಾತನಾಡುದುಂಟು…ಈ ಲೇಖಕ ಅಥವಾ ಈ ಪತ್ರಿಕೆ ಸಂಬಂಧಿಸಿದವರಿಂದ ಹಣ ಪಡೆದೋ ಅಥವಾ ಇನ್ನಿತರ ಅನುಕೂಲಗಳನ್ನು ಪಡೆದೋ ಅವರ ಪರವಾಗಿ ಬರೆದಿದ್ದಾರೆ ಎಂದು. ಆದರೆ ಅಂತಹ ಮಾತುಗಳಿಗೆ ಕಿವಿಗೊಡದೆ, ಅಂತಹ ಆಪಾದನೆಗಳಿಗೆ ಸೊಪ್ಪು ಹಾಕಾದೆ ವ್ಯಕ್ತಿಯೊಬ್ಬರ ಅಂತರಂಗದ ಸತ್ಯವನ್ನು ಜಗತ್ತಿಗೆ ಸಾರುವುದೇ ಪತ್ರಿಕೋದ್ಯಮದ ಧ್ಯೇಯವೆಂದು ಭಾವಿಸಿ ಈ ಪತ್ರಿಕೆ ಈ ಲೇಖನ ಹಾಗು ಸಂದರ್ಶನವನ್ನು ಪ್ರಕಟಿಸುತ್ತಿದೆ.

೧-“ಬೆಳೆಯೂರು ವೀಣಾ”- ಇತ್ತೀಚೆಗೆ ಬಹಳ ಹೆಸರು ಮಾಡುತ್ತಿರುವ ಯುವ ರಾಜಕಾರಣಿ…ಯಾವ ಕಾರಣಕ್ಕಾಗಿ?
ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸಿದೆ. ಆದರೆ ಪ್ರಸಿದ್ಧಿ ಯಾವುದಕ್ಕೆ ನೀಡುತ್ತಾರೆ?! ಹಿಂದಿನ ಕುತಂತ್ರಗಳೇನು? ಯಾವ ರೀತಿಯ ಮಾಧ್ಯಮಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತವೆ? ನೀವೇ ನಿರ್ಧರಿಸಿ.

೨-ರಾಜಕಾರಣದಲ್ಲಿ ಮುಂಚೂಣಿಗೆ ಬರುತ್ತಿರುವ ಮಹಿಳೆಯೊಬ್ಬಳನ್ನು ತುಳಿಯುವ ಪ್ರಯತ್ನ ಪುರುಷಪ್ರಧಾನ ಸಮಾಜದಲ್ಲಿ ನಡೆಯುತ್ತಿದೆ ಎಂದು ನಿಮಗನಿಸುತ್ತಿದೆಯಾ?
ಕೆಲವು ಜನರು ಕೆಲವು ಸುದ್ದಿ ಮಾಧ್ಯಮಗಳು ನಡೆದುಕೊಳ್ಳುವ ರೀತಿಯಿಂದ ಮಹಿಳೆಯರನ್ನು ತುಳಿಯುವ ಕೆಲಸ ಸದಾ ನಡೆಯುತ್ತಿದೆ ಎಂಬುದು ನನ್ನ ಭಾವನೆ.

೩-ನೀವು ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದ್ದು ಯಾವಾಗ? ಯಾವ ಕಾರಣಕ್ಕಾಗಿ?
೨೦೦೫ರಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಮಹಿಳಾ ಮಂಡಳಿಯ ಮೂಲಕ ಸಾಮಾಜಿಕ ಅಭಿವೃದ್ಧಿ ಕೆಲಸದಲ್ಲಿ ಭಾಗವಹಿಸಿ ಅನುಭವ ಪಡೆದೆ. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಇದೇ ಪ್ರೇರಣೆಯಾಯಿತು.

Former Chief Minister S. Bangarappa in Mysore. Photo: M.A. Sriram 11-09-2006
Former Chief Minister S. Bangarappa in Mysore.
Photo: M.A. Sriram 11-09-2006

೪-ರಾಜಕೀಯದಲ್ಲಿ ನಿಮ್ಮ ಗಾಡ್ ಫಾದರ್ ಯಾರು?
ಎಸ್.ಬಂಗಾರಪ್ಪನವರು ನನ್ನ ಗಾಡ್ ಫಾದರ್.

೫-ನೀವು ಪದೆ ಪದೆ ಪಕ್ಷಾಂತರ ಮಾಡುತ್ತಿರುವದ ಹಿಂದಿನ ಉದ್ದೇಶವೇನು? ನಿಮ್ಮ ಬದಲಾವಣೆ ಪಕ್ಷಕ್ಕಾಗಿಯೋ…ತತ್ವಕ್ಕಾಗಿಯೋ..ಸಿದ್ಧಾಂತಕ್ಕಾಗಿಯೋ…ಯಾವುದೋ ಒಬ್ಬ ಪ್ರತ್ಯೇಕ ನಾಯಕನಿಗಾಗಿಯೋ? ಸ್ವಾರ್ಥಕ್ಕಾಗಿಯೋ? ಯಾವುದಕ್ಕೆ? ಏಕನಿಷ್ಠೆ ಏಕಿಲ್ಲ?
ಸಕ್ರಿಯ ರಾಜಕಾರಣಕ್ಕಿಳಿವ ಮೊದಲೇ ನಾನು ಕಾಂಗ್ರೇಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದಿದ್ದೆ. ಬಂಗಾರಪ್ಪನವರು ಬಿಜೆಪಿಗೆ ಬಂದಾಗ ನಾನೂ ಬಿಜೆಪಿಗೆ ಬಂದೆ. ನಂತರ ಬಂಗಾರಪ್ಪ ಅವರೇ ಸಮಾಜವಾದಿ ಪಕ್ಷವನ್ನು ಕಟ್ಟುವಾಗ ನನ್ನ ಪಕ್ಷಾಂತರ ಅನಿವಾರ್ಯವಾಯಿತು. ನಂತರ ಅವರು ಜೆಡಿಎಸ್ ಸೇರಿದಾಗ ನಾನು ಮರಳಿ ಬಿಜೆಪಿಗೆ ಬಂದೆ. ಬಿಜೆಪಿಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಬಹುದೆಂಬ ನಿರೀಕ್ಷೆ ನನ್ನದಾಗಿತ್ತು. ಆದರೆ ಅಲ್ಲಿನ ಆಂತರಿಕ ಕಲಹಕ್ಕೆ ಕೆಲವು ಅಭಿವೃದ್ಧಿಕಾರ್ಯಗಳಲ್ಲಿ ಕುಂಠಿತವಾಯಿತು. ಯಡಿಯೂರಪ್ಪನವರಿಂದಾಗಿ ಬಿಜೆಪಿಯೇ ಒಡೆಯುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷವೇ ಸೂಕ್ತವೆಂದು ಮರಳಿ ಮನೆಗೆ ಬಂದಿದ್ದೇನೆ. ನನ್ನ ಪಕ್ಷಾಂತರಗಳೆಲ್ಲಾ ವಿಶೇಷವಾಗಿ ನಮ್ಮ ಭಾಗದ ಗ್ರಾಮೀಣ ಅಭಿವೃದ್ಧಿಗಾಗಿ ಹೊರತು ಸ್ವಂತಕ್ಕಲ್ಲ..ಸ್ವಾರ್ಥಕ್ಕಾಗಿಯೂ ಅಲ್ಲ. ಜನಕ್ಕೆ ನಾಡಿನ ಅಭಿವೃದ್ಧಿಯೇ ಮುಖ್ಯ ಹೊರತು ಅದನ್ನು ಯಾವ ಪಕ್ಷ ಮಾಡಿದೆಯೆಂಬುದು ಮುಖ್ಯವಲ್ಲ. ಜನ ಕೇವಲ ಪಕ್ಷ ನೋಡಿ ಓಟು ಕೊಡುವುದಿಲ್ಲ. ಅಭಿವೃದ್ಧಿಯನ್ನು ಆಧರಿಸಿ ವ್ಯಕ್ತಿಯನ್ನು ನಿರ್ಧರಿಸಿಯೂ ಮತ ನೀಡುತ್ತಾರೆ. ನನ್ನದು ಅಭಿವೃದ್ಧಿಯೆಡೆಗೆ ಏಕನಿಷ್ಠೆ ಅಷ್ಟೇ. ಪ್ರತ್ಯೇಕ ನಾಯಕನಿಗಾಗಿ ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ. ಇದರಿಂದ ಈ ಸಮಾಜಕ್ಕೆ ನಾನೇನು ನೀಡಿದಂತಾಗುವುದು? ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಶಿಕ್ಷಣದ ಸಮಸ್ಯೆ ಹಾಗೆಯೇ ಉಳಿದಿದೆ. ಶಿಕ್ಷಣವೆಂದರೆ ಅಕ್ಷರಾಭ್ಯಾಸ ಮಾತ್ರವಲ್ಲ. ಹೊಲಿಗೆ, ಕರಕುಶಲ, ಕಂಪ್ಯೂಟರ್ ಹೀಗೆ ನಾನಾ ವಿಭಾಗಗಳಲ್ಲಿ ಇನ್ನೂ ಬೆಳವಣಿಗೆಯಾಗಬೇಕಿದೆ. ಮೂಲಭೂತ ಅಗತ್ಯಗಳಾದ ರಸ್ತೆ, ಸಮುದಾಯ ಭವನ, ವಿದ್ಯಾರ್ಥಿವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ ಹೀಗೆ ಎಲ್ಲಾ ರೀತಿಯ ಅನುಕೂಲಗಳನ್ನು ಮಹಿಳೆಯರೇ ಜಾಗೃತರಾಗಿ ಸರ್ಕಾರಗಳಿಂದ ಪಡೆಯುವಂತಾಗಬೇಕು.

೬-ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಿಮ್ಮ ಸೋಲಿಗೆ ಕಾರಣವೇನು?
ನಿರ್ದಿಷ್ಟ ಕಾರಣಗಳು ತಿಳಿದಿಲ್ಲ. ಪಕ್ಷದ ಆಂತರಿಕ ಕಲಹಗಳು ಕಾರಣವಾಗಬಹುದು.

೭-ಸಕ್ರಿಯ ರಾಜಕಾರಣಕ್ಕಿಳಿದ ಮೇಲೆ ತಾವು ಮಾಡಿದ ಸಾಮಾಜಿಕ ಸಾಧನೆಗಳೇನು? ತಮ್ಮಿಂದ ಆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿ…
ಸಾಕಷ್ಟು ಅಭಿವೃದ್ಧಿಕಾರ್ಯಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾಡಿದರೂ ಎಲ್ಲವನ್ನೂ ನಾನು ಪಟ್ಟಿ ಮಾಡಿಟ್ಟಿಲ್ಲ. ಆದರೆ ಕೆಲವೊಂದು ಪ್ರಮುಖ ಸಾಧನೆಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದೇನೆ. ಶ್ರೀಧರಪುರ-ಬೆಳೆಯೂರು ರಸ್ತೆ, ಮಾಸೂರು-ಆದರಂತೆ, ನಂದಿತಾಳೆ-ಕಾನ್ಮನೆ ರಸ್ತೆ , ಸಿ.ಎಮ್ ಫಂಡಿನಿಂದ ೫-೬ ರೋಗಿಗಳಿಗೆ ಸಹಾಯ, ಬಡವರಿಗೆ ವಿದ್ಯಾರ್ಥಿ ವೇತನ, ಕೆಲವು ಸಮುದಾಯಭವನಗಳು, ಜಿಲ್ಲಾಪಂಚಾಯತ್‌ನಿಂದ ಬಾವಿಗಳು, ಆಸ್ಪತ್ರೆ ಕಮಿಟಿಯಲ್ಲಿ ನಾಮನಿರ್ದೇಶಕರಾಗಿ ಸೇವೆ, ಸ್ವತಹ ರಕ್ತದಾನ, ರೋಗಿಗಳಿಗೆ ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗೆ ಸಹಾಯ ಹೀಗೆ ಇನ್ನೂ ಹಲವಾರು…..

B.S.-Yeddyurappa೮-ಸಕ್ರಿಯ ರಾಜಕಾರಣದಲ್ಲಿರುವ ತಾವು ಸಾಗರ ತಾಲೂಕು ಮಟ್ಟದಲ್ಲಿ ನಡೆಯುವ ಸಾಕಷ್ಟು ಜನೋಪಯೋಗಿ ಹೋರಾಟಗಳಲ್ಲಿ ಭಾಗವಹಿಸುವುದಿಲ್ಲ..ಕಾರಣವೇನು?
ಯಾರಾದರೂ ನಿಮ್ಮನ್ನು ಹಿಂದೆ ಸರಿಸುತ್ತಿದ್ದಾರಾ? ಅಥವಾ ನೀವೆ ಹಿಂದೆ ಸರಿದಿದ್ದೀರಾ?
ಬೆಲೆಯೇರಿಕೆ ವಿರುದ್ಧ ನಡೆದಂತಹ ಹೋರಾಟಗಳು, ಅಂಗನವಾಡಿ ಕಾರ್ಯಕರ್ತರ ಪರವಾಗಿ ಹೋರಾಟ, ಬಗರ್ ಹುಕುಮ್ ಆಸ್ತಿ ಕೊಡಿಸಲು ಹೋರಾಟ ಹೀಗೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ನಾನು ಹಳ್ಳಿಯಲ್ಲಿ ನೆಲೆಸಿರುವ ಕಾರಣ ಕೆಲವು ಬಾರಿ ಸಾಗರಕ್ಕೆ ಬಂದು ಭಾಗವಹಿಸದೆ ಇರಬಹುದು. ಇದು ಹಿಂದೆ ಸರಿದಂತಲ್ಲ. ಯಾರೂ ಹಿಂದೆ ಸರಿಸುವ ಪ್ರೆಶ್ನೆಯೂ ಇಲ್ಲ. ಸಾಮಾಜಿಕ ಅಭಿವೃದ್ಧಿ ಕಾರ್ಯಕ್ಕಾಗಿ ನಾನೆಂದೂ ಹಿಂದೆ ಬೀಳುವುದೂ ಇಲ್ಲ.

೯-ಮಹಿಳೆ ಮನೆಯಲ್ಲಿದ್ದರೆ ಮಾತ್ರ ಒಳಿತು…ಹೊರಗೆ ಅದರಲ್ಲೂ ರಾಜಕೀಯಕ್ಕಿಳಿದರೆ ಕೆಡುಕು…ಎಂಬ ಭಾವನೆ ಈ ಸಮಾಜದ ಮನೆಮನೆಯಲ್ಲಿ ಮನೆ ಮಾಡಿದೆ…ನಿಮ್ಮ ಅಭಿಪ್ರಾಯವೇನು? ನಿಮ್ಮ ರಾಜಕೀಯ ಕೆಲಸ ಕಾರ್ಯಗಳಿಗೆ ನಿಮ್ಮ ಕುಟುಂಬದ ಸಹಕಾರ ಹೇಗಿದೆ?
ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.೫೦ ಮೀಸಲಾತಿ ನೀಡಿದೆ. ಇಂದು ಅನೇಕ ಮಹಿಳೆಯರು ಸಮಾಜದ ಏಳ್ಗೆಯಲ್ಲಿ ಶ್ರಮಿಸುತ್ತಿದ್ದಾರೆ, ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಮಹಿಳೆ ಮನೆಯಲ್ಲಿದ್ದರೆ ಒಳಿತು ಎಂದು ನೀವು ಹೇಳುವುದು ಹಳೇ ಕಾಲದ ಮಾತು. ನನ್ನ ಸಾಮಾಜಿಕ ಕೆಲಸಗಳಿಗೆ ಕುಟುಂಬದ ಸಹಕಾರ ತುಂಬಾ ಚೆನ್ನಾಗಿದೆ. ಅಧಿಕಾರ ಹಾಗು ರಾಜಕಾರಣದಿಂದ ಸಮಾಜಸೇವೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ…ತ್ವರಿತ ಗತಿಯಲ್ಲಿ ಪ್ರಗತಿಯೂ ಸಾಧ್ಯ ಎಂಬುದು ನನ್ನ ನಂಬಿಕೆ.

೧೦-ರಾಜಕೀಯದಲ್ಲಿ ನಿಮ್ಮ ಅಂತಿಮ ಗುರಿ ಏನು?
ಜನಸೇವೆ.

******************

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.