ಅವಧಾನ ಕಲೆಕಲಾಪ್ರಪಂಚಸಂದರ್ಶನಸಾಹಿತ್ಯ

ನನ್ನದು ಎಲ್ಲರಿಗೂ ಅರ್ಥವಾಗುವ ಸನಾತನ ಭಾಷೆ

ಶತಾವಧಾನಿ ಡಾ|| ರಾ. ಗಣೇಶ್ ಅವರ ಸಂದರ್ಶನ-ಭಾಗ-೧
ಸಂದರ್ಶಿಸಿದವರು: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

ಪ್ರ-೧: ಅವಧಾನ ಕಲೆ ನಿತ್ಯಜೀವನಕ್ಕೆ ಹೇಗೆ ಅನ್ವಯವಾಗುತ್ತದೆ? ಬೇರೆ ಕಲೆಗಿಂತ ಇದು ಹೇಗೆ ಭಿನ್ನ, ವಿಶಿಷ್ಟ?

ರಾ.ಗ.: ನನಗೆ ಅವಧಾನ ಮುಖ್ಯವಾಗಿ ದೊಡ್ಡದು ಅಂತ ಯಾಕೆ ಅನಿಸುತ್ತದೆ ಎಂದರೆ, ಅದು ಒಂದು ಯೋಗ. ನಮ್ಮ ಭಾರತೀಯ ಪರಂಪರೆಯಲ್ಲಿ ಯಾವುದಕ್ಕೂ ಪ್ರಯೋಜನ ಏನು ಅಂತ ಕೇಳಬೇಕಾಗುತ್ತದೆ. ಪ್ರಯೋಜನ ಅಂದ್ರೆ ಅದರಿಂದ ನಾವು ಪೂರ್ಣವಾಗಿ ಆತ್ಮಸಾಕ್ಷಾತ್ಕಾರ ಪಡೆದುಕೊಳ್ಳಬೇಕು. ಅದು ದೊಡ್ಡ ಮಾತು. ಆತ್ಮಸಾಕ್ಷಾತ್ಕಾರ ಅಂದ್ರೆ ಏನು? ತನ್ನನ್ನು ತಾನು ನೋಡಿಕೊಳ್ಳುವ ಹಾಗಾಗಬೇಕು. ತನ್ನನ್ನ ತನ್ನೆದುರು ನಿಲ್ಲಿಸಿಕೊಳ್ಳೋದು. ತನ್ನನ್ನ ತಾನು ನೋಡಿಕೊಳ್ಳುವುದಕ್ಕೆ ಆಗುವಂಥದು. ಈ ದೃಷ್ಟಿಯಲ್ಲಿ ಯಾವ ಕಲೆಯೂ ಒಂದು ಯೋಗ ಆಗುತ್ತದೆ. ಅವಧಾನದಲ್ಲಿ ಆ ಅಂಶ ಜಾಸ್ತಿ ಅಂತ ನನಗನ್ನಿಸುತ್ತದೆ. ಏನಂದ್ರೆ ಮಿಕ್ಕ ಕಲೆಗಳಲ್ಲಿ ಕಲಾವಿದನು ಉದ್ದೇಶಪೂರ್ವಕವಾಗಿ ತನ್ನ ಏಕಾಗ್ರತೆಗೆ ಬೇಕಾಗುವ ಅನುಕೂಲ ಮಾಡಿಕೊಳ್ಳುತ್ತಾನೆ. ಆದರೆ ಅವಧಾನದಲ್ಲಿ ಅವನು ಉದ್ದೇಶಪೂರ್ವಕವಾಗಿ ತನ್ನ ಕಲೆಗೆ ಬೇಕಾಗುವ ಅನೇಕಾಂತವನ್ನು ಮಾಡಿಕೊಳ್ಳುತ್ತಾನೆ, ಅಡಚಣೆ ಮಾಡಿಕೊಳ್ಳುತ್ತಾನೆ. ಹೀಗೆ ಮಾಡಿಕೊಳ್ಳುವುದರ ಮೂಲಕ ಅದನ್ನ ದಾಟಿ ಹೋಗಬೇಕಾದ ವ್ಯವಸ್ಥೆಯನ್ನೂ ರೂಪಿಸಿಕೊಳ್ಳುತ್ತಾನೆ. (ಅಂದ್ರೆ ದುಡ್ಡು ಕೊಟ್ಟು ದುಃಖ ತಗೊಂಡಹಾಗೆ!) ಈ ದೃಷ್ಟಿಯಿಂದ ಇದು ಜಗತ್ತಿನ ವ್ಯವಸ್ಥೆಯೇ ಆಗಿದೆ.

ಜಗತ್ತಿನಲ್ಲಿ ನಾವು ನೆಮ್ಮದಿಯಿಂದ ಇರೋ ಬದಲು ಏನೇನು ಕಷ್ಟನಷ್ಟ ಮಾಡಿಕೊಳ್ಳಬಹುದೋ ಅದನ್ನೆಲ್ಲ ನಾವೇ ಮಾಡಿಕೊಂಡು ಕಡೆಗೆ, ಮಿಡಿಚೇಪೆಕಾಯಿಗಳನೆಡೆಬಿಡದೆ ನುಂಗುವುದು, ಕಡಿಯುತಿರೆ ಹೊಟ್ಟೆ ಹರಳೆಣ್ಣೆ ಕುಡಿಯುವುದು, ಬಿಡುತಿರಲು ನೋವಾಗ ಸುಖವೀಗಳೆನ್ನುವುದು ಪೊಡವಿಗಿದೆ ಭೋಗವಿಧಿ ಮಂಕುತಿಮ್ಮ ಎಂದು ಹೇಳಿದ ಹಾಗೆ ಅವಧಾನದಲ್ಲೂ ಘಂಟಾವಾದನ, ನಿಷೇಧಾಕ್ಷರ, ಅಪ್ರಸ್ತುತ ಪ್ರಸಂಗ ಮುಂತಾದವು ಏಕಾಗ್ರತೆಗೆ ಭಂಗ ಅಂತನಿಸುತ್ತದೋ ಅದನ್ನೇ ಮಾಡಿಕೊಂಡು ಅದನ್ನ ಮೀರಿ ಸೌಂದರ್ಯ ತರುವುದಕ್ಕೆ ಪ್ರಯತ್ನ ಮಾಡ್ತೀವಿ. ಪ್ರಯತ್ನ ಮಾಡುವುದು ಅಂತಂದ್ರೆ ಅಧ್ಯಾರೋಪ. ಇದೆಲ್ಲ ತೊಡಕನ್ನ ಹಾಕಿಕೊಂಡದ್ದು, ಅದನ್ನು ಅಪವಾದ – ಎಂದರೆ ತೆಗೆದುಹಾಕೋದು; ಇದು ಅದ್ವೈತ ವೇದಾಂತದ ಪ್ರಕ್ರಿಯೆ. ಅಧ್ಯಾರೋಪಾಪವಾದಾಭ್ಯಾಂ ನಿಷ್ಪ್ರಪಂಚಂ ಪ್ರಪಂಚ್ಯತೇ ಆರೋಪ ಮಾಡಿ ಆ ಬಳಿಕ ತಳ್ಳಿಹಾಕುವುದು. ಹೀಗಾಗಿ ಜೀವನದಲ್ಲಿ ನಾವೇನು ಕಷ್ಟ ಛಿಡಿeಚಿಣe ಮಾಡಿಕೊಳ್ಳುತ್ತೇವೆ, ಅದನ್ನ ಮೀರಿ ಬೆಳೆಯುವುದು ಹೇಗೆ ಅನ್ನುವುದು ಅವಧಾನದಲ್ಲಿ ಗೊತ್ತಾಗುತ್ತದೆ. ಅಡಚಣೆಗಳನ್ನ ನಾವೇ ಉಂಟುಮಾಡಿ ಅದನ್ನ ಮೀರುವುದು ಹೇಗೆ ಅನ್ನುವುದನ್ನು ಅವಧಾನದಲ್ಲಿ ತಿಳಿದುಕೊಳ್ಳಬಹುದು. ಅದನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಅಳವಡಿಸಿಕೊಂಡಾಗಲೇ ಅದರ ಸುಖ-ಸ್ವಾರಸ್ಯ. ನಿರ್ಬಂಧ ಇರೋದು ಅದನ್ನ ಮೀರಲಿಕ್ಕೆ. ಸುಖ-ಸಾಮಗ್ರಿ ಇರೋದು ಅದನ್ನ ಮೀರೋದಕ್ಕೆ. ಚೆನ್ನಾಗಿ ಸಿಹಿ ತಿನ್ನೋದು ಯಾಕೆಂದರೆ ಮತ್ತೆ ಸಿಹಿ ತಿನ್ನಬಾರದು ಅನ್ನುವುದಕ್ಕೋಸ್ಕರ. ಇದೊಂದು ವಿಕಾರ ಅಂತ ಅನಿಸಬಹುದು. ಕಡಿಮೆ ತಿನ್ನೋದರಲ್ಲಿ ಹೆಚ್ಚು ರುಚಿ ಕಾಣಬೇಕು. ಅವಧಾನದಲ್ಲಿ ತೊಡಕು ಮಾಡಿಕೊಳ್ಳೋದು ಸಂತೋಷಕ್ಕೋಸ್ಕರ. ತೊಡಕೇ ಸಂತೋಷ, ತೊಡಕು ಮಾಡಿಕೊಳ್ಳೋದೇ ಸಂತೋಷಕ್ಕೋಸ್ಕರ. ಯಾವಾಗ ತೊಡಕೇ ಸಂತೋಷವಾಗುತ್ತದೆ ಎಂದರೆ ಅದನ್ನು ತೊಡಕು ಅಂತ ಅಂದುಕೊಳ್ಳದಿದ್ದಾಗ. ನಿಷೇಧಾಕ್ಷರಿ ಯಾವಾಗ ಹಿಂಸೆ ಆಗುತ್ತದೆಯೆಂದರೆ ಅದನ್ನ ಎದುರಿಸುವ ಸಾಮರ್ಥ್ಯ ಇಲ್ಲದಿದ್ದಾಗ. ಸಹೃದಯತೆ ಇಲ್ಲದೇ ಇದ್ದಾಗ ನಾವು ಉಂಟುಮಾಡಿಕೊಂಡ ತೊಡಕನ್ನ ಸುಖ ಅಂತ ಮಾಡಿಕೊಳ್ಳುವುದು ಹೇಗೆ? ದೇವುಡು ಹೇಳ್ತಾರೆ, “ಮೇಲಿಂದ ನೆಲದ ಮೇಲೆ ಬಿದ್ದಾಗ ಏಟಾಗುತ್ತೆ, ಮೈ ನೋವಾಗುತ್ತದೆ. ಹತ್ತಿಯ ಹಾಸಿಗೆ ಮೇಲೆ ಬಿದ್ದಾಗ ಸುಖ ಅಂತಾಗುತ್ತದೆ. ಕಾರಣ ಅದಕ್ಕಿಂತ ಮೈ ಗಟ್ಟಿಯಾಗಿರುವುದರಿಂದ. ಹೀಗೆ ಆಂತರಂಗಿಕವಾಗಿ ಗಟ್ಟಿಯಾಗಲಿಕ್ಕೆ ಅವಧಾನ ಒಂದು ಸಾಧನ.

ಪ್ರ-೨: ಇದು ನಿಮ್ಮ ವೈಯಕ್ತಿತ ಜೀವನದಲ್ಲಿ ಪ್ರಯೋಜನಕ್ಕೆ ಬಂದಿದೆಯಾ?

ರಾ.ಗ.: ತುಂಬಾ ಪ್ರಯೋಜನ ಕೊಟ್ಟಿದೆ. ಮುಖ್ಯವಾಗಿ ವಿರೋಧಿಗಳನ್ನ ಸಹಿಸುವುದು; ಅದು ನೆಗೆಟಿವ್ ಆದಂತಹದ್ದು. ವಿರೋಧವನ್ನು ಕಂಡು ಸಂತೋಷ ಏರ್ಪಡುವಂಥದ್ದು; ಇದು ಪಾಸಿಟಿವ್ ಆದ ನೋಟ. ಅಪ್ರಸ್ತುತ ಪ್ರಸಂಗ ಜೀವ ತೆಗೀತಿರೋವಾಗ, ನಿಷೇಧಾಕ್ಷರ ಹಿಂಸೆ ಮಾಡಿದಾಗ, ಘಂಟಾವಾದನ (ಸಂಖ್ಯಾಬಂಧ) ಎಡೆಬಿಡದೆ ಮಾಡಿದಾಗ ಮುಖದ ಪ್ರಸನ್ನತೆಯನ್ನು ಕಳೆದುಕೊಳ್ಳದೆ, ಸಹನೆ ಮೀರದೆ ಇದೆಲ್ಲ ಠಿಚಿಡಿಣ oಜಿ gಚಿme ಅಂತ ತೆಗೆದುಕೊಳ್ಳುವುದು. ಮತ್ತೆ ಅಹಂಕಾರ ಕಡಿಮೆ ಆಗೋದಕ್ಕಾಗುತ್ತೆ. ಇವತ್ತು ಯಾವುದೇ ಒಂದು ಡಿಗ್ರಿ ತಗೊಂಡಮೇಲೆ ಮತ್ತೆ ಆ ಡಿಗ್ರಿ ತಗೊಳ್ಳಬೇಕಾಗಿಲ್ಲ. ಆದರೆ ರಂಗಕಲೆಯಲ್ಲಿ ಹಾಗಲ್ಲ. ದಿನ ದಿನ ರಂಗಸ್ಥಳ ಏರ್‍ತಾ ಇರಬೇಕು, ತನ್ನನ್ನ ತಾನು ಠಿಡಿove ಮಾಡಿಕೊಳ್ಳುತ್ತಿರಬೇಕು. ಇದೊಂದು ನಿತ್ಯಪರೀಕ್ಷೆ. ಇಂಥ ನಿತ್ಯಪರೀಕ್ಷೆಯಿಂದ ವಿನಯ ಬರುತ್ತದೆ.

ಅವಧಾನಕ್ಕೆ higheಡಿ ಟimiಣ ಅನ್ನುವುದೇ ಇಲ್ಲ, ಟoತಿeಡಿ ಟimiಣ ಮಾತ್ರ ಇದೆ. ಹಾಗಾಗಿ ನಿತ್ಯಾಭ್ಯಾಸ ಎನ್ನುವಾಗ ನಾವು ತಾನಾಗಿ ನಮ್ರ ಆಗಿಬಿಡಬೇಕು. ಆಗಲಿಲ್ಲ ಅಂದ್ರೆ ಕಲೆ ಬಂದಿಲ್ಲ ಅಂತರ್ಥ. ಕಲೆಯ ಕಡೆಗೆ ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿಲ್ಲವಾದರೆ ಅದು ನಮ್ಮ ಅಹಂಕಾರ ಹೆಚ್ಚಿಸಿಕೊಳ್ಳುವುದಕ್ಕೆ ಅದನ್ನೊಂದು ಸವಲತ್ತು/ಸಾಧನ ಮಾಡಿಕೊಂಡ್ವಿ ಅಂತ ಆಗುತ್ತೆ. ನಮ್ಮನ್ನು ಕರಗಿಸಿಕೊಳ್ಳದೇ ಇದ್ದಾಗ ಕಲೆ ಬರೋದಿಲ್ಲ. ಆ ದೃಷ್ಟಿಯಲ್ಲಿ ನನಗೆ ತುಂಬಾ ದೊಡ್ಡ ಪ್ರಯೋಜನ ಆಗಿದ್ದೇನೆಂದರೆ ಸ್ವಾಹಂಕಾರ ಖಂಡನೆ ಮಾಡಿಕೊಳ್ಳುವುದಕ್ಕೆ. ಮತ್ತೆ ತತ್ತ್ವ = ಯಥಾರ್ಥ ತಿಳಿದುಕೊಳ್ಳುವುದಕ್ಕೆ ಅವಧಾನ ಒಂದು ಸಾಧನ. ಇದು ನನಗೆ ಆಂತರಿಕವಾಗಿ ಆದ ಪ್ರಯೋಜನ. ಇನ್ನೊಂದು ದೊಡ್ಡ ಸಂತೋಷ ಕೊಟ್ಟಂತಹ ಪ್ರಯೋಜನ ಅಂದರೆ ನಮ್ಮ ರಾಜ್ಯದ, ದೇಶದ ಮೂಲೆ ಮೂಲೆಯ ರಸಜ್ಞರಾದ ಸಹೃದಯರ, ವಿದ್ವಾಂಸರ ಪರಿಚಯ ನನಗೆ ಆಯ್ತು. ಅವಧಾನದಿಂದ ಸ್ನೇಹ ಆಯ್ತು. ಅದು ಬೆಲೆ ಕಟ್ಟಲಾಗದಂಥದ್ದು. ಸಹೃದಯರ ಸಂಪರ್ಕ ಸಿಗ್ತಲ್ಲ, ಅದರ ಮೂಲಕ ನನಗಾಗಿರುವ ಆತ್ಮಸಂಸ್ಕಾರ, ಅವರ ಬದುಕು, ನಯ, ಸಜ್ಜನಿಕೆ, ವಿಶೇಷವಾಗಿ ಉತ್ತರಕನ್ನಡ, ದಕ್ಷಿಣಕನ್ನಡ, ಮಲೆನಾಡಿನ ಪ್ರಾಂತ್ಯಗಳಲ್ಲಿ ಓಡಾಡಿದೆ. ಹಳ್ಳಿಯ ಜನಜೀವನದ ಹತ್ತಿರದ ಪರಿಚಯವಾಯ್ತು. ಯಾವ ಬದುಕು ನನಗೆ ಇಷ್ಟವೋ ಅದನ್ನು ಬಹಳ ಸುಲಭವಾಗಿ ಪಡೆದುಕೊಳ್ಳಲಿಕ್ಕೆ ಸಾಧ್ಯವಾಯ್ತು. ಮಹಾಪುರುಷ ಸಂಶ್ರಯ, ದೊಡ್ಡವರ ಪರಿಚಯಲಾಭವಾಯ್ತು.

ಪ್ರ-೩: ಅವಧಾನದಿಂದ ಅವಧಾನಿ ಮಾತ್ರ ಬೆಳೆಯಲಿಕ್ಕೆ ಸಾಧ್ಯವಾ?

ರಾ.ಗ.: ಬೇರೆಯವರನ್ನ ಬೆಳೆಸಿದ್ದೀನಿ ಅಂತ ನಾನು ಹೇಳಲಾರೆ, ಹಾಗೆ ಹೇಳಲಿಕ್ಕೆ ನನಗೆ ಅಧಿಕಾರ ಇಲ್ಲ.

ಪ್ರ-೪: ಮಹಾಪುರುಷಸಂಶ್ರಯ, ವಿದ್ವತ್ಸಖ್ಯ ಇತ್ಯಾದಿ ಕೇವಲ ನಿಮ್ಮ ವೈಯಕ್ತಿಕ ಅನುಭವ ಆಯ್ತಲ್ಲ!

ರಾ.ಗ.: ನಿಜ. ಇದೇ ಅವಧಾನ ಹಿಂದೆಯೋ, ಇನ್ನು ಮುಂದೆಯೋ ಎಷ್ಟೋ ಜನಕ್ಕೆ ಅಹಂಕಾರಕ್ಕೂ ಸಾಧನ ಆಗುತ್ತದೆ. ಹಾಗೆಯೇ ಆತ್ಮೋದ್ಧಾರಕ್ಕೂ ಕಾರಣ ಆಗುತ್ತದೆ. ಸಂಗೀತವು ತ್ಯಾಗರಾಜರಿಗೆ ಆತ್ಮೋದ್ಧಾರಕ್ಕಾದರೆ, ಬೆಬ್ಬುಲಿ ಕೇಶವಯ್ಯನಿಗೆ ಅಹಂಕಾರಕ್ಕೆ ಸಾಧನವಾಯ್ತು. ಒಟ್ಟಿನಲ್ಲಿ ಯಾರು ಇದನ್ನ ಕಲೆಯಾಗಿ ನೋಡ್ತಾರೋ ಅವರಿಗೆ ಅದರ ಸೌಂದರ್ಯ ಅನುಭವಕ್ಕೆ ಬರತ್ತೆ.

(ಸಂದರ್ಶನ  ಮುಂದುವರಿಯಲಿದೆ)

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.