ಅಂಬಾವಿಲಾಸದ ಅಂಗಳದಿಂದ…|ಭಾಗ-1
-ರಾಮಗೋಪಾಲ ಚಕ್ರವರ್ತಿ
|| ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ ||
೨೦೧೫ರ ಫೆಬ್ರವರಿ ೨೩ ರಂದು ಕೇಳಿ ಬಂದ ಈ ಮಂತ್ರಘೋಷಗಳನ್ನು ಅಂಬಾವಿಲಾಸದ ವೈಭವಯುತಕಂಬಗಳು ಸುಮಾರು ೧೫೦ ವರ್ಷಗಳ ನಂತರ ಮತ್ತೆ ಆಲಿಸಿಕೊಂಡವು…ಬೆಟ್ಟದ ಕೋಟೆಯ ಅರಸು ವಂಶದ ಒಂದು ಕುಡಿ,ಯದುವಂಶವನ್ನು ಮುಂದುವರೆಸುವ ನಾಂದಿಘೋಷವದು!! ಎಲ್ಲವೂ ಮುಗಿದಿದೆ ಎನಿಸಿದಾಗ ಬೂದಿಯಿಂದಲೂ ಎದ್ದುಬರುವ ಗಂಡಭೇರುಂಡದಂತೆ, ಅಲಮೇಲಮ್ಮನ ಶಾಪದಿಂದ ಪರಿಸಮಾಪ್ತಿ ಎನಿಸಿದರೂ ಮೈಸೂರು ಸಂಸ್ಥಾನದ ವಂಶವೃಕ್ಷದಲ್ಲಿ ಮತ್ತೆ ಚಿಗುರೊಡೆದ ಆಶಾಗೋಪುರವೇ “ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್”.
ಪ್ರಾಯಶಃ ಆರು ಶತಮಾನಗಳಷ್ಟು ಭವ್ಯ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು-ಬೆಳೆಸಿಕೊಂಡು ಬಂದಿರುವ ಸಾಮ್ರಾಜ್ಯ “ಮೈಸೂರು ಸಂಸ್ಥಾನದ ಒಡೆಯರ್ ವಂಶ ಅಂದರೆ ಅತಿಶಯೋಕ್ತಿ ಅಲ್ಲ. ಇವರು ನಡೆದು ಬಂದು ಹಾದಿ ಖಂಡಿತಾ ಸುಗಮವಾಗಿರಲಿಲ್ಲ. ಆದರೂ ಎಲ್ಲಾ ಅಡೆತಡೆಗಳನ್ನು ಎದುರಿಸಿ ಸುಮಾರು ೪೦೦ ವರ್ಷಗಳಿಂದ ಅವಿರತವಾಗಿ ಮುಂದುವರೆಸಿಕೊಂಡು ಬಂದಿರುವ ರಾಜವಂಶವೆಂದರೆ ಇದೊಂದೇ.!!!
ಲಲಿತಕಲೆಗಳಿಗೆ ಆದ್ಯತೆ, ಅವುಗಳ ಪೋಷಣೆ, ಸಾಧನೆಗಳನ್ನು ಆವಾಹನೆ ಮಾಡಿಕೊಂಡಿರುವ ಮೈಸೂರಿಗೆ “ಸಾಂಸ್ಕೃತಿಕ ರಾಜಧಾನಿ” ಎಂಬ ಹೆಸರು ಅನ್ವರ್ಥವಾಗೇ ಇದೆ. ಇದಕ್ಕೆ ಒಡಯರ ಕೊಡುಗೆ ಇದ್ದೇ ಇದ್ದದ್ದರಿಂದ ಮೈಸೂರು ತನ್ನ ಇಂದಿನ ಭವ್ಯತೆಯನ್ನು ಉಳಿಸಿಕೊಂಡು ಬರುವಲ್ಲಿ ಫಲಕಾರಿಯಾಗಿದೆ. ಮೈಸೂರಿನ ಪಾರಂಪರಿಕ ಕಟ್ಟಡಗಳು, ಅರಮನೆಗಳು, ವಸ್ತುಸಂಗ್ರಹಾಲಯಗಳುಹಾಗು ನಾಡಹಬ್ಬವಾದ ದಸರಾ ಉತ್ಸವಗಳು ಮೈಸೂರನ್ನು ಪ್ರಪಂಚದ ಭೂಪಟದಲ್ಲಿ ತನ್ನದೇ ಸ್ಥಾನ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ. ಮೈಸೂರಿನ ಒಡೆಯರು, ಪರಂಪರೆಯ ಸುರಕ್ಷತೆ, ಸಾಂಸ್ಕೃತಿಕ ಕಲಾಪಗಳು ವಾಸ್ತು ಶಿಲ್ಪಕ್ಕೆ ಹಾಗು ಸಾಹಿತ್ಯ ಪ್ರಾಕಾರಗಳಿಗೂ ಆದ್ಯತೆ ನೀಡಿದ್ದರಿಂದ, ಮೈಸೂರು ಇಂದು ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಗಳಿಸಿದೆ.
ಮೈಸೂರು ತನ್ನ ಭವ್ಯ ಪರಿಂಪರೆಯನ್ನು ಉಳಿಸಿಕೊಂಡಿರುವುದರಿಂದ ಇಂದಿಗೂ ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ಭವ್ಯವಾದ ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಇದಕ್ಕೆ ಇಂದು ಪಾರಂಪರಿಕ ಸ್ಥಾನಮಾನವನ್ನು ತಂದುಕೊಟ್ಟು, ಪ್ರಪಂಚದಾದ್ಯಂತ ಪ್ರವಾಸಿಗಳ್ನು ಆಕರ್ಷಿಸುತ್ತಿರುವುದರಿಂದ, ಮೈಸೂರಿನ ಅರಸರಿಗೆ ಎಷ್ಟೇ ಧನ್ಯವಾದಗಳನ್ನು ಅರ್ಪಿಸಿದರೂ ಅದು ಅಲ್ಪವೇ. ನಾಡಹಬ್ಬವಾಗಿರುವ ದಸರಾ ಉತ್ಸವಗಳು ವಿಶ್ವ ವಿಖ್ಯಾತವಾಗಿರುವುದು. ವಿವಿಧ ರೀತಿಯ ಅನುಭವಗಳನ್ನು ಅರಸಿ ಬರುವವರಿಗೆ, ಇತಿಹಾಸ ಪ್ರಿಯರಿಗೆ, ಪಾರಂಪರಿಕ, ಸಾಹಿತ್ಯಕ, ಕಲಾತ್ಮಕ ಸಂಶೋಧಕರಿಗೆ ಮೈಸೂರು, ರಸದೌತಣ.
೨೦೧೩ರಲ್ಲಿ ಮೈಸೂರಿನ ಮಹಾರಾಜರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರವರು ದೈವಾಧೀನರಾದ ನಂತರ ಕೆಲ ತಿಂಗಳು ರಾಜ ಸಿಂಹಾಸನದಲ್ಲಿ ಶೂನ್ಯ ವಾತಾವರಣ ಸೃಷ್ಠಿಯಾಗಿತು. ಹಾಗಾಗಿ, ೨೦೧೫ ರ ಫೆಬ್ರವರಿ ೨೩ರಂದು ಮಹಾರಾಣಿಯವರಾದ ರಾಣಿ ಪ್ರಮೋದಾದೇವಿಯವರು ಯದುವೀರ ಗೋಪಾಲರಾಜ ಅರಸ್ ಅವರನ್ನು ಕೆಲವೇ ಸಂಬಂಧಿಕರ ಹಾಗು ಹಿತೈಷಿಗಳ ಸಮ್ಮುಖದಲಿ ಶಾಸ್ತ್ರೋಕ್ತ ರೀತ್ಯಾ ದತ್ತು ಸ್ವೀಕರಿಸಿದರು. ಯದುವೀರ ಅರಸರು, ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಹಿರಿಯ ಪುತ್ರಿ ಯುವರಾಣಿ ಗಾಯತ್ರಿ ದೇವಿಯವರ ಮಗಳಾದ ತ್ರಿಪುರಸುಂದರಿ ದೇವಿ ಹಾಗೂ ಸ್ವರೂಪ ಆನಂದ ಗೋಪಾಲರಾಜ ಅರಸ್ ಅವರ ಪುತ್ರ. ಸುಮಾರು ೨೦೦ ವರ್ಷಗಳಷ್ಟು ಹಳೆಯ ಸಂಬಂಧವಾದ ಬೆಟ್ಟದ ಕೋಟೆ ಮನೆತನದವರು. ಮೈಸೂರಿನ ರಾಜಮನೆತನದ ಪರಂಪರೆಯಲ್ಲಿ ಯದುವೀರರು ೨೭ನೇಯ ಮಹಾರಾಜರು.೧೨ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದನ್ನು ಮುಗಿಸಿ ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್‌ಗೆ ತೆರಳಿದ್ದರು. ಬಾಸ್ಟನ್‌ನ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲೀಷ್‌ನಲ್ಲಿಬಿ.ಎ. ಮಾಡಿಕೊಂಡಿದ್ದಾರೆ. ರಾಜ ಪರಂಪರೆಯಂತೆ ಯದುವೀರರಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್” ಎಂದು ಮರು ನಾಮಕರಣ ಮಾಡಲಾಯಿತು. ಹಿಂದೆ ದತ್ತು ಸ್ವೀಕಾರ ಆಗಿದ್ದು ೧೮೬೫ರಲ್ಲಿ ಅಂದರೆ ಸರಿಯಾಗಿ ೧೫೦ ವರ್ಷಗಳ ಹಿಂದೆ!!!
“ಮಹಿಷಾಸುರನ ಊರು” ಎಂಬುದು ಕಾಲಕ್ರಮೇಣ ಮೈಸೂರು ಎಂದಾಗಿದೆ. ದೇವಿ ಚಾಮುಂಡಶ್ವರಿಯು ಮೈಸೂರಿನ ಸಮೀಪವಿರುವ ಮಹಾಬಲಗಿರಿಯ (ಈಗಿನ ಚಾಮುಂಡಿ ಬೆಟ್ಟ)ಮೇಲೆ ಅಸುರನಾದ ಮಹಿಷಾಸುರನನ್ನು ಸಂಹರಿಸಿದಳು ಎಂಬುದು ಪೌರಾಣಿಕ ಹಿನ್ನಲೆ. ಹಾಗಾಗಿ ದೇವಿ ಚಾಮುಂಡಶ್ವರಿಯನ್ನು ಮೈಸೂರಿನ ಜನರು ನಾಡದೇವಿಯಂತೆ ಪೂಜಿಸುತ್ತಾ ಬಂದಿದ್ದಾರೆ.
ಒಡೆಯರ ವಂಶಾವಳಿಯ ಹಿನ್ನಲೆ ಗಮನಿಸಿದರೆ ಅದು ಕ್ರಿ.ಶ.೧೩೯೯ರಲ್ಲಿ ಪ್ರ್ರಾರಂಭವಾಗುತ್ತದೆ. ಯದುಕುಲದ ಅರಸು ಯದುರಾಯರು ತಮ್ಮ ಸಹೋದರ ವಿಜಯರೊಡನೆ ಚಾಮುಂಡಿ ಬೆಟ್ಟಕ್ಕೆ ತೀರ್ಥಯಾತ್ರೆಗೆಂದು ಬಂದವರು, ದಣಿವಾರಿಸಿಕೊಳ್ಳಲು ದೊಡ್ಡಕೆರೆಯ ಸಮೀಪವಿರುವ ಕೋಡಿ ಭೈರವನ ಗುಡಿಯಲ್ಲಿ ನೆಲೆಸಿದ್ದರು. ಆಗ ಇಲ್ಲಿನ ಪ್ರಾಂತೀಯ ಸಂಸ್ಥಾನವು ಒಂದು ದೊಡ್ಡ ಆಪತ್ತಿನಲ್ಲಿರುವುದು ತಿಳಿಯಿತು. ಇಲ್ಲಿನ ರಾಜನ ಮರಣದಿಂದಾಗಿ, ಪಕ್ಕದೂರಿನ ರಾಜನಾದ ಮಾರನಾಯಕನು ಇಲ್ಲಿನ ರಾಣಿಗೆ ತೊಂದರೆ ಕೊಡುತ್ತಿರುವ ವಿಷಯ ತಿಳಿದುಕೊಂಡರು. ಮಾರನಾಯಕನು ಸ್ಥಳೀಯ ರಾಜಕುಮಾರಿಯನ್ನು ಬಲವಂತವಾಗಿ ಮದುವೆಯಾಗಲು ಒತ್ತಾಯಿಸುತ್ತಿದ್ದನು. ಹಾಗಾಗಿ ಇಲ್ಲಿನ ರಾಣಿ ಮತ್ತು ರಾಜಕುಮಾರಿ ಅಸಹಾಯಕ ಪರಿಸ್ಥಿತಿ ತಲುಪಿದ್ದರು. ಆಗ ರಾಣಿಯವರು ಈ ಸಹೋದರರ ಸಹಾಯದಿಂದ ಮಾರನಾಯಕನನ್ನು ಸೋಲಿಸಿ ತಮ್ಮ ಮಗಳನ್ನು ಒಡೆಯರರಿಗೆ ಧಾರೆಯರೆದು ಒಂದು ಹೊಸ ಸಂಸ್ಥಾನದ ಉದಯಕ್ಕೆ ನಾಂದಿ ಹಾಡಿದರು.ಇದು ಭಾರತವು ೧೯೪೭ ರಲ್ಲಿ ಸ್ವಾತಂತ್ರ್ಯ ಪಡೆಯುವವರಿಗೆ ವೈಭವಯುತವಾಗಿ ನಡೆದು ಬಂದಿತು.
ಯದುರಾಯ ಒಡೆಯರು ಮೈಸೂರು ಸಂಸ್ಥಾಪಕರಾದಾಗ ಇದು ಚಿಕ್ಕ ಪ್ರಾಂತ್ಯವಾಗಿ ವಿಜಯನಗರ ಸಾಮ್ರಾಜ್ಯದ ಒಂದು ಭಾಗವಾಗಿದ್ದಿತು.೧೫೬೫ರಲ್ಲಿ ವಿಜಯನಗರದ ಪತನವಾದ ನಂತರ ರಾಜ ಒಡೆಯರು (೧೫೭೮-೧೬೧೭) ಮೈಸೂರು ಸಂಸ್ಥಾನವನ್ನು ಬಲಗೊಳಿಸಿ ಇದರ ಪರಿಧಿಯನ್ನು ವಿಸ್ತರಿಸಿದರು. ೧೬೧೦ರಲ್ಲಿ ಸಂಸ್ಥಾನದ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿದರು.
ಸಂಸ್ಥಾನದ ನಂತರದ ಪ್ರಮುಖ ರಾಜರುಗಳಲ್ಲಿ ಒಬ್ಬರಾದ ಕಂಠೀರವ ನರಸರಾಜ ಒಡೆಯರು (೧೬೩೮- ೧೬೫೯). ಮೈಸೂರು ಎಲ್ಲೆಯನ್ನು ತಮಿಳುನಾಡಿನ ತಿರುಚ್ಚಿವರೆಗೆ ಹಬ್ಬಿಸಿದ್ದರು. ಮೈಸೂರು ತನ್ನ ಅತ್ಯಂತ ಯಶಸ್ಸು ಕಂಡಿದ್ದು ಚಿಕ್ಕದೇವರಾಜರ ಕಾಲದಲ್ಲಿ. ಈ ಸಂದರ್ಭದಲ್ಲಿಯೇ ಆಡಳಿತವನ್ನು ೧೮ ವಿಭಾಗ ಮಾಡಿ ಸುವ್ಯವಸ್ಥೆ ಕಾಪಾಡಿದ್ದರು. ಇವುಗಳಿಗೆ ಚಾವಡಿ’ ಎಂದು ಹೆಸರಿತ್ತು. ತೆರಿಗೆ ವಿಭಾಗದಲ್ಲೂ ಸುಸ್ಥಿತಿ ಇದಿದ್ದು ಗಮನಾರ್ಹ.
೧೭೬೦ ರಿಂದ ೧೭೯೯ ರವರೆಗೆ ಮೈಸೂರು ಸಂಸ್ಥಾನವುಅಕ್ಷರಶಃ ದಳವಾಯಿಗಳ ಆಳ್ವಿಕೆಯಲ್ಲಿಯೇ ಉಳಿದುಬಿಟ್ಟಿತ್ತು. ಅದೇ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಕಾಲ. ಇವರಿಬ್ಬರೂ ಸೇರಿ ಮೈಸೂರನ್ನು ಮತ್ತಷ್ಟು ವಿಸ್ತರಿಸಿದ್ದರು. ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ದಂಗೆ ಎತ್ತಿದ್ದು ಅವನಿಗೇ ಮುಳುವಾಯಿತು. ೧೭೯೯ ಟಿಪ್ಪುವಿನ ಅಂತ್ಯದ ನಂತರ ಈಸ್ಟ್‌ಇಂಡಿಯಾ ಕಂಪನಿಯು, ಒಡೆಯರಿಗೇ ಮೈಸೂರನ್ನು ಹಿಂತಿರುಗಿಸಿತು. ಆದರೆ ಕಂಪನಿಯವರು ಈ ಬಾರಿ ಇಡೀ ಸಂಸ್ಥಾನವನ್ನು ಕೊಡದೆ ಕೆಲವೇ ಪ್ರಾಂತ್ಯಗಳನ್ನು ಹಿಂತಿರುಗಿಸಿದ್ದರು. ಸಂಸ್ಥಾನವನ್ನು ಹಿಂಪಡೆದ ನಂತರ ಒಡೆಯರು ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮತ್ತೆ ಮೈಸೂರಿಗೆ ವರ್ಗಾಯಿಸಿದರು. ೮ನೇ ಖಾಸಾ ಚಾಮರಾಜಒಡೆಯರವರ ೪ ವರ್ಷದ ಪುಟ್ಟಬಾಲಕ ಮುಮ್ಮಡಿ ಕೃಷ್ಣರಾಜಒಡೆಯರನ್ನು ಮೈಸೂರಿನ ಸಿಂಹಾಸನಾಧೀಶನನ್ನಾಗಿ ಕೂರಿಸಲಾಯಿತು. ಬ್ರಿಟೀಷ್ ರಾಜನ ಅಧೀನರಾಗಿ ಮೈಸೂರು ಸಂಸ್ಥಾನವು ಅವರಿಗೆ ವರ್ಷಾವಧಿ ತೆರಿಗೆ ಕಟ್ಟಲೇಬೇಕಾಗಿತ್ತು.
೧೮೩೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ತೆರಿಗೆ ಕಟ್ಟಲು ನಿರಾಕರಿಸಿದಾಗ ಬ್ರಿಟೀಷ್ ರಾಜ್ಯವು ಮೈಸೂರನ್ನು ಹಿಂಪಡೆದು ಆಡಳಿತವನ್ನು ನಡೆಸಲು ಕಮಿಷನರ್‌ಗಳನ್ನು ನೇಮಿಸಿತು. ಇಡೀ ಸಂಸ್ಥಾನದ ಆಡಳಿತವು ಈ ಕಮಿಷನರ್‌ಗಳ ಅಧೀನದಲ್ಲಿ ಇರುತ್ತಿತ್ತು. ಬ್ರಿಟೀಷ್ ಕಮಿಷನರ್‌ಗಳು ಮೈಸೂರಿನ ಆಡಳಿತವನ್ನು೧೮೩೧ರಿಂದ ೧೮೮೧ ರವರೆಗೆ ನಡೆಸಿದರು. ಇವರಲ್ಲಿ ಮಾರ್ಕ್‌ಕಬ್ಬನ್ (೧೮೩೪-೧೮೬೧) ಮತ್ತು ಎಲ್.ಬಿ.ಬೌರಿಂಗ್ (೧೮೬೧-೧೮೭೦) ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿದ ಕಮಿಷನರ್‌ಗಳಾಗಿದ್ದರು.
೧೮೬೮ರಲ್ಲಿ ಸಂಸ್ಥಾನದ ಕರೆಗೆ ಓಗೊಟ್ಟು ಮತ್ತೆ ರಾಜ್ಯಭಾರವನ್ನು ದತ್ತು ಪುತ್ರನಾದ ಎಂಟನೇ ಚಾಮರಾಜ ಒಡೆಯರಿಗೆ ಒಪ್ಪಿಸಲು ನಿರ್ಧರಿಸಿತು. ಈ ಹಸ್ತಾಂತರವು ಮೈಸೂರು ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಯಿತು. ಮೊಟ್ಟಮೊದಲನೆಯ ಬಾರಿಗೆ ಭಾರತದಲ್ಲಿ ರಾಜಪ್ರಮುಖರಿಂದ ಪ್ರಜಾಡಳಿತದ ರೀತಿ ರಾಜ್ಯಭಾರ ಮಾಡುವ ಪ್ರಯತ್ನಕ್ಕೆ ನಾಂದಿಯಾಯಿತು. ನಂತರ ಬಂದ ನಾಲ್ವಡಿ ಕೃಷ್ಣರಾಜ ಒಡೆಯರ ರಾಜ್ಯಾಡಳಿತ ಅತ್ಯಂತ ಅಭ್ಯುದಯ ಸಾಧಿಸಿ ಇವರಿಗೆ ರಾಜಋಷಿ’ ಎಂಬ ಬಿರುದು ತಂದುಕೊಟ್ಟಿತ್ತು. ಇವರ ಆಡಳಿತಾವಧಿಯಲ್ಲಿ “ಮೈಸೂರು ರಾಮ ರಾಜ್ಯವಾಗಿದೆ” ಎಂದು ಸ್ವತಃ ಮಹಾತ್ಮಾಗಾಂಧಿಯವರೇ ನುಡಿದಿದ್ದರು.
ಬ್ರಿಟೀಷರ ಕೈವಶದಲ್ಲಿಯೇ ಇರುವುದರಿಂದ ಮೈಸೂರು ಸಂಸ್ಥಾನವು ರಾಜ್ಯದ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಕೊಡದೆ, ಅದೇ ಸಮಯವನ್ನು ಲಲಿತಕಲೆಗಳ ಬೆಳವಣಿಗೆಗಳ ಕಡೆಗೆ ಹೆಚ್ಚಿನ ಒಲವು ತೋರಿಸಿತು. ಇದಕ್ಕೆಂದೇ ಮೈಸೂರು ಅನೇಕ ಹೆಸರಾಂತ ಕಲಾವಿದರಿಗೆ,ಸಂಗೀತಗಾರರಿಗೆ, ಕವಿಗಳಿಗೆ ಹಾಗು ಚಿತ್ರಕಾರರಿಗೆ ರಾಜಾಶ್ರಯ ನೀಡಿತ್ತು.
ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ತನಕ ಮೈಸೂರು ಸಂಸ್ಥಾನವು ಕೊನೆಯ ಮಹಾರಾಜರಾದ ಜಯಚಾಮರಾಜ ಒಡೆಯರ ಆಳ್ವಿಕೆಯಲ್ಲಿತ್ತು. ಸ್ವಾತಂತ್ರ್ಯದ ನಂತರ ಮೈಸೂರನ್ನು ಭಾರತ ಸರ್ಕಾರಕ್ಕೇ ಒಪ್ಪಿಸಲಾಯಿತಾದರೂ, ಭಾರತ ಗಣರಾಜ್ಯವಾಗುವವರೆಗೆ ಮಹಾರಾಜರು ರಾಜಪ್ರಮುಖರಾಗಿ ತಮ್ಮ ಆಡಳಿತ ನಡೆಸುತ್ತಲಿದ್ದರು. ಭಾಷಾಧಾರಿತವಾಗಿ ಭಾರತವು ವಿಂಗಡಿಸಲ್ಪಟ್ಟಾಗ ಮೈಸೂರು ಸಂಸ್ಥಾನದ ಮಹಾರಾಜರಾದ ಜಯಚಾಮರಾಜ ಒಡೆಯರು ಗವರ್ನರ್ ಪದವಿ ಪಡೆದು ಈಗಿನ ಕರ್ನಾಟಕದ ಪ್ರಾಂತ್ಯದಲ್ಲಿ ೧೯೫೬ರಿಂದ ೧೯೬೪ರವರೆಗೆ ಆಡಳಿತ ನಡೆಸಿದರು. ಇವರು ಎರಡು ವರ್ಷಗಳವರೆಗೆ ಮದರಾಸು ರಾಜ್ಯಕ್ಕೂ ಗವರ್ನರ್ ಆಗಿದ್ದರು. ೧೯೭೧ರಲ್ಲಿ ಇಂದಿರಾ ಗಾಂಧಿಯವರು ಭಾರತದ ಸುಮಾರು ೫೬೦ ಮಹಾರಾಜರುಗಳ ಬಿರುದುಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವವರೆಗೆ ಜಯಚಾಮರಾಜರು ಮೈಸೂರಿನ ಮಹಾರಾಜರಾಗಿಯೇ ಉಳಿದಿದ್ದರು. ೧೯೭೪ರಲ್ಲಿ ಇವರು ದೈವಾಧೀನರಾದಾಗ ಇವರ ಏಕಮಾತ್ರ ಪುತ್ರ ಯುವರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಸಿಂಹಾಸನವನ್ನೇರಿದರು.