ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ವ್ರತಾ |
ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರ: ||
ಸರ್ವಾಸ್ವಪಿ ಜಯಂತೀಷು ಪೂಜಾಕಾರ್ಯಾ ವಿಶೇಷತ: |
ಸಾನ್ನಿಧ್ಯಂ ಏವ ಕರ್ತವ್ಯಂ ಉಪವಾಸೋ ನ ದೂರಗ: ||
“ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಯದುಕುಲ ತಿಲಕನ” ಎಂದು ಎಲ್ಲರ ಮನೆಯಲ್ಲೂ ಕೇಳಿ ಬರುವ ದಿನವೇ ಈ ದಿನ. ಅಂದರೆ ನಮ್ಮ ತಂದೆ ಶ್ರೀ ಕೃಷ್ಣ ಅವತರಿಸಿದ ದಿನ. ಗೋಕುಲಾಷ್ಟಮೀ ಎಂತಲೂ ಕರೆಯುತ್ತಾರೆ.
ಮುಖಕ್ಕೆ ತಿಳಿ ನೀಲಿ ಬಣ್ಣ, ಕಂಗಳಿಗೆ ಕಪ್ಪು ಕಾಡಿಗೆ, ತುಟಿಗೆ ಲಿಪ್ಸ್ಟಿಕ್, ಹಣೆಯ ಮೇಲೆ ನಾಮ, ತಲೆ ಮೇಲೆ ಕಿರೀಟ, ಕಿರೀಟಕ್ಕೆ ಒಂದು ಚಂದಾದ ನವಿಲು ಗರಿ, ಕೈಯ್ಯಲ್ಲೊಂದು ಕೋಳಲು ಹಿಡಿದ ಪುಟ್ಟ ಹುಡುಗ ಹಾಗೇ ಪಕ್ಕದಲ್ಲಿ ಗಡಿಗೆ ಹಿಡಿದ ಪುಟ್ಟ ರಾಧೆ. ಈ ದಿನ ಇದು ಎಲ್ಲೆಲ್ಲೂ ಸಾಮಾನ್ಯವಾಗಿ ಕಂಡು ಬರುವ ದೃಶ್ಯ.
ಶ್ರೀ ಕೃಷ್ಣನ 5244 ನೇ ಜನ್ಮ ದಿವಸವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಎಲ್ಲರೂ ಈ ದಿನ ಉಪವಾಸವಿದ್ದು ಶ್ರೀಕೃಷ್ಣನ ನಾಮಸ್ಮರಣೆ ಮಾಡಬೇಕು. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಯಾವುದೇ ಮತ ಬೇಧವಿಲ್ಲದೇ ಸಂಬ್ರಮದಿಂದ ಆಚರಿಸಬಹುದು. ಇದಕ್ಕೆ ಆಧಾರವೆಂದರೆ ಶ್ರೀಕೃಷ್ಣನೇ ಹೇಳಿದ್ದಾನೆ
“ ವಸುಧೈವ ಕುಟುಂಬಕಮ್ ”. ಈ ಭೂಮಿಯಲ್ಲಿರುವವರೆಲ್ಲಾ ನನ್ನ ಕುಟುಂಬದವರೇ ಎಂದು.
ಉದಾ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಡಾ. ಎಸ್.ಅಹ್ಮದ್ ಎಂಬುವರ ಕುಟುಂಬದಲ್ಲಿ 31ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಶ್ರೀಕೃಷ್ಣನ ಆರಾಧನೆಯಿಂದ ಸಂತೃಪ್ತಿ ಸಿಕ್ಕಿದೆ ಎಂದು ಡಾ.ಅಹ್ಮದ್ ಹೇಳಿದ್ದಾರೆ. ಮಥುರಾದಲ್ಲಿಯೂ ಕೂಡ ಮುಸ್ಲೀಮರು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾರೆ.
“ ಏಕಾದಶೀನಾಂ ವಿಶಂತ್ಯ: ಕೋಟ್ಯೋ ಯಾ: ಪರಿಕೀರ್ತಿತಾ: |
ತಾಭಿ: ಕೃಷ್ಣಾಷ್ಟಮೀ ತುಲ್ಯಾ ||”(ಬ್ರಹ್ಮವೈವರ್ತ ಪುರಾಣ)
ಈ ದಿನ ಪೂರ್ತಿ ಉಪವಾಸವಿದ್ದು ಶ್ರೀಕೃಷ್ಣನ ಅರ್ಚನೆ ಮಾಡಿದರೆ ಇಪ್ಪತ್ತು ಕೋಟಿ ಏಕಾದಶೀ ಅನುಷ್ಠಾನ ಮಾಡಿದ ಪುಣ್ಯ ಲಭಿಸುತ್ತದೆ. ಅಂದರೆ ಎರಡು ಮಹಾಯುಗದಲ್ಲಿ ಎಕಾದಶಿಯ ದಿನ ಉಪವಾಸ ಮಾಡಿದ ಮಹಾಪುಣ್ಯ.
“ಅದ್ಯ ಸ್ಥಿತ್ವಾ ನಿರಾಹಾರ: ಶೋಭಿತೇ ಪರಮೇಶ್ವರ |
ಭೋಕ್ಷ್ಯಾಮಿ ಪುಂಡರೀಕಾಕ್ಷ ಅಸ್ಮಿನ್ ಜನ್ಮಾಷ್ಟಮೀ ವ್ರತೆ ||”
ಅಂದರೆ ಇಂದು ಉಪವಾಸ ಇದ್ದು ಜನ್ಮಾಷ್ಟಮಿಯನ್ನು ಆಚರಿಸಿ ಆನಂತರ ಊಟ ಮಾಡುತ್ತೇನೆ ಎಂದರ್ಥ.
“ವಾಸುದೇವಂ ಸಮುದ್ದಿಶ್ಯ ಸರ್ವಪಾಪ ಪ್ರಶಾಂತ0iÉುೀ |
ಉಪವಾಸಂ ಕರಿಷ್ಯಾಮಿ ಕೃಷ್ಣಾಷ್ಟಮ್ಯಾಂ ನಭಸ್ಯಹಮ್ ||”
ನಭಸಿ ಅಂದರೆ ಈ ಶ್ರಾವಣ ಮಾಸದಲ್ಲಿ ಎಂದರ್ಥ. ಅಂದರೆ ಶ್ರಾವಣ ಮಾಸದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಉಪವಾಸವಿದ್ದು ಕೃಷ್ಣನನ್ನು ಆರಾಧಿಸಿದರೆ ಸರ್ವ ಪಾಪಗಳೂ ನಾಶವಾಗುತ್ತವೆ.
ಜನ್ಮಾಷ್ಟಮೀ ದಿವಸಿ ಪ್ರಾಪ್ತೇ 0iÉುೀನ ಭುಕ್ತಂ ದ್ವಿಜೋತ್ತಮ |
ತ್ರೈಲೋಕ್ಯಂ ಸಂಭವಂ ಪಾಪಂ ತೇನ ಭುಕ್ತಂ ನ ಸಂಶಯ: ||
ಈ ಶ್ಲೋಕದ ಪ್ರಕಾರ ಯಾರು ಈ ದಿನ ಉಪವಾಸವಿದ್ದು ಜನ್ಮಾಷ್ಟಮಿಯನ್ನು ಆಚರಿಸುವುದಿಲ್ಲವೋ ಅವನಿಗೆ ಮೂರೂ ಲೋಕದಲ್ಲಿರುವ ಮಹಾಪಾಪವು ಬರುತ್ತದೆ. ಮುಂದಿನ ಪೀಳಿಗೆಯವರಿಗೆ ಅಂದರೆ ಅವನ ಮಗನಿಗೆ, ಮೊಮ್ಮಗನಿಗೆ ತೊಂದರೆಯುಂಟಾಗಬಹುದು.ಅಂದರೆ ಈ ದಿನ ಉಪವಾಸ ಮಾಡಲೇಬೇಕು ಎಂಬುದು ಶಾಸ್ತ್ರೋಕ್ತವಾದ ಮಾತು. ಈ ಹಬ್ಬವನ್ನು ಆಚರಿಸದಿದ್ದರೆ `ಪಾತಿತಂ ನರಕಂ ಘೋರೇ ಭುಂಜತ ಕೃಷ್ಣವಾಸರೆ |’ ನರಕದಂತಹ ಮಹಾ ಘೋರವಾದ ಸ್ಥಳದಲ್ಲಿ ಬೀಳುತ್ತಾನೆ. ನಮ್ಮೆಲ್ಲರನ್ನು ಉದ್ಧಾರ ಮಾಡಲು ಅವತರಿಸಿದ ಈ ಪರಬ್ರಹ್ಮ ಶ್ರೀ ಕೃಷ್ಣನನ್ನು ನೆನೆಯದಿರುವುದಕ್ಕಿಂತ,ಪೂಜಿಸದೇ ಇರುವುದಕ್ಕಿಂತ ಮಿಗಿಲಾದ ಪಾಪವಿದೆ0iÉುೀ ?
ನಿಯಮಗಳು: ಸರ್ವೋತ್ತಮ ವ್ರತವೆಂದರೆ ಶ್ರೀಕೃಷ್ಣ ಜನ್ಮಾಷ್ಟಮೀ ವ್ರತ. ಮನೆಯವರೆಲ್ಲಾ ಬೇಗ ಎದ್ದು ಸ್ನಾನಾದಿಗಳನ್ನು ಮುಗಿಸಿ ಭಕ್ತಿಯಿಂದ ಭಗವಂತ ಶ್ರೀ ಕೃಷ್ಣನನ್ನು ಧ್ಯಾನಿಸಬೇಕು. ವೃದ್ಧಿ (ಯಾರದ್ದೋ ಹುಟ್ಟಿನಿಂದ ಬಂದಂತಹ ಅಶೌಚ)ಬಂದವರು, ಸೂತಕ(ಯಾರದ್ದೋ ಸಾವಿನಿಂದ ಬಂದಂತಹ ಅಶೌಚ) )ಬಂದವರು, ರಜಸ್ವಲೆಯರಾದ ಸ್ತ್ರೀಯರೂ ಕೂಡ ಉಪವಾಸ ಮಾಡಲೇಬೇಕು. ಇವರು ಮಂತ್ರಸಹಿತ ಸ್ನಾನ ಮಾಡಬಾರದು ಹಾಗೂ ಅರ್ಘ್ಯ ನೀಡಬಾರದು. `ಸಪ್ತಮ್ಯಾಂ ಲಘುಭುಕ್ ‘ ಸಪ್ತಮಿಯ ದಿನವೂ ಅನ್ನ ನಿಷಿದ್ಧ ಅಂದರೆ ಅನ್ನ ತಿನ್ನಲೇಬಾರದು. ಲಘು ಉಪಹಾರ ಸೇವಿಸಬೇಕು ಅಷ್ಟೆ. ಸಪ್ತಮೀ ಹಾಗೂ ಅಷ್ಟಮಿಯಂದು ಎಷ್ಟೇ ಕಷ್ಟವಾದರೂ ಕೂಡ ಬ್ರಹ್ಮಚರ್ಯವನ್ನು ಪಾಲಿಸಬೇಕು. ಅಂದರೆ ಸಪ್ತಮೀ ಹಾಗೂ ಅಷ್ಟಮಿಯಂದು ಸಂಭೋಗ ನಿಷಿದ್ಧ. ಅಷ್ಟಮಿಯ ದಿನ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗು ರಾತ್ರಿ ಈ ನಾಲ್ಕೂ ಕಾಲಗಳಲ್ಲಿ ಸ್ನಾನ ಕಡ್ಡಾಯವಾಗಿದೆ. ಸ್ನಾನ ಮಾಡುವಾಗ `ಕಾಶೀ ಗಂಗಾ ಭವಾನೀ ಭಾಗೀರಥೀ ಮಣಿಕರ್ಣಿಕಾ ಜ್ನಾನವಾಪೀ ಪ್ರಯಾಗೀ ಶ್ರೀ ಕಾಶೀ ಗಂಗಾ’ ಎಂದು ಪಠಣ ಮಾಡಬೇಕು.
ಆಚರಿಸುವ ವಿಧಾನ : ಬೆಳಿಗ್ಗೆ ಬೇಗನೆ ಎದ್ದು ಮನೆಯನ್ನು ಸ್ವಚ್ಛ, ಶುದ್ಧ, ಪವಿತ್ರಗೊಳಿಸಬೇಕು. ಸ್ವಚ್ಛ ಎಂದರೆ ಗುಡಿಸಿ ಮನೆಯನ್ನು ಶುಭ್ರಗೊಳಿಸುವುದು. ಶುದ್ಧ ಎಂದರೆ ಮನೆಯನ್ನು ಬಟ್ಟೆಯಿಂದ ಒರೆಸಿ ಶುಭ್ರಗೊಳಿಸುವುದು. ಪವಿತ್ರ ಎಂದರೆ ಮಂತ್ರೋಕ್ತವಾಗಿ ಶುಭ್ರಗೊಳಿಸುವುದು.ಸ್ವಚ್ಛ, ಶುದ್ಧ, ಪವಿತ್ರಕ್ಕೆ ಇರುವ ವ್ಯತ್ಯಾಸ ಇದೇ ಆಗಿದೆ. ತುಳಸಿಯನ್ನೂ, ಗೋವನ್ನೂ(ಹಸುವನ್ನು) ಪೂಜಿಸಬೇಕು. ಇದು ನಿತ್ಯ ಕರ್ಮವಾಗಿದೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಶ್ರೀ ಕೃಷ್ಣನ ಸ್ತೊತ್ರ, ಧ್ಯಾನ ಮಾಡಬೇಕು. ರಾತ್ರಿಯಲ್ಲಿ ಮಾತ್ರ ಶ್ರೀ ಕೃಷ್ಣನಿಗೆ ಷೋಡಶೋಪಚಾರ ಪೂಜೆ ಮಾಡಿ ದೇವರ ಕೃಪೆಗೆ ಪಾತ್ರರಾಗಬೇಕು.
ಅದ್ಯ ಕೃಷ್ಣಾಷ್ಟಮೀಂ ದೇವೀಂ ನಭಶ್ಚಂದ್ರಂ ಸರೋಹಿಣೀಂ |
ಅರ್ಚಯಿತ್ವೋಪವಾಸೇನ ಭೋಕ್ಷೇಹಂ ಅರೇಹನಿ ||
ಅಂದರೆ ಇಂದು ಶ್ರೀ ಕೃಷ್ಣ , ದುರ್ಗೇ , ವಸುದೇವ, ದೇವಕಿಯನ್ನು, ಶ್ರಾವಣ ಮಾಸದ ಅಭಿಮಾನಿ ದೇವತೆಯನ್ನೂ, ರೋಹಿಣೀ ಸಮೇತನಾದ ಚಂದ್ರನನ್ನೂ ಭಕ್ತಿಯಿಂದ ಅರ್ಚಿಸುತ್ತೇನೆ. ನಾಳೆ ಪಾರಾಯಣಮಾಡುತ್ತೇನೆ ಎಂದರ್ಥ.
ಸಂಕಲ್ಪವಿಲ್ಲದೇ ಯಾವುದೇ ಕೆಲಸವೂ ಫಲ ಕೊಡುವುದಿಲ್ಲ. ಆದ್ದರಿಂದಲೇ
ಶ್ರೀ ಕೃಷ್ಣನನ್ನು ಪೂಜಿಸುವ ಮೊದಲು ?ಮಮ ಸರ್ವ ಪಾಪ ಕ್ಷಯಾರ್ಥಂ ವಿಷ್ಣುಪ್ರೀತಿಕರಂ ಶ್ರೀ ಕೃಷ್ಣಾಷ್ಟಮೀ ವ್ರತಂ ಕರಿಷ್ಯೆ? ಎಂದು ಸಂಕಲ್ಪ ಮಾಡಿಕೊಳ್ಳಬೇಕು.
ಅಂದರೆ ನನ್ನ ಎಲ್ಲ ಪಾಪಗಳೂ ಕಳೆಯುವುದಕ್ಕಾಗಿ ಈ ಜನ್ಮಾಷ್ಟಮೀ ವ್ರತವನ್ನು ಆಚರಿಸುತ್ತೇನೆ ಎಂದು. ಮಧ್ಯಾಹ್ನದ ವರೆಗೂ ದೇವರ ಜಪ, ಸ್ತೋತ್ರ, ಭಜನೆ ಮಾಡಬೇಕು. ಸ್ವಲ್ಪ ಫಲ(ಹಣ್ಣು, ಹಾಲು ಇತ್ಯಾದಿ) ಆಹಾರವನ್ನು ತಿನ್ನಬಹುದು.ಇದಾದ ಬಳಿಕ ಮತ್ತೆ ಭಜನೆ, ಸ್ತೋತ್ರದಲ್ಲಿ ತೊಡಗಬೇಕು. ಪುನ: ಸಾಯಂಕಾಲದಲ್ಲಿ ಸ್ನಾನ ಮಾಡಿ ಶ್ರೀ ಕೃಷ್ಣನನ್ನು ಭಜಿಸಬೇಕು. ರಾತ್ರಿಯಲ್ಲಿ ಸ್ನಾನ ಮಾಡಿ ಶ್ರೀ ಕೃಷ್ಣನ ಮೂರ್ತಿಯನ್ನು ಷೋಡಶ ಉಪಚಾರಗಳಿಂದ ಪೂಜಿಸಬೇಕು. ಷೋಡಶ ಎಂದರೆ ಹದಿನಾರು ಎಂದರ್ಥ. ಹದಿನಾರು ಉಪಚಾರವೆಂದರೆ ಧ್ಯಾನ, ಆವಾಹನೆ, ಆಸನ, ಪಾದ್ಯ, ಅರ್ಘ್ಯ,ಆಚಮನೀಯ, ಸ್ನಾನ, ಪುನರಾಚಮನೀಯ, ಗಂಧ,ವಸ್ತ್ರ,ಅಕ್ಷತ, ಪುಷ್ಪಾಣಿ,ಧೂಪ, ದೀಪ, ನೈವೇದ್ಯ, ಮಂಗಳಾರತಿ.ದೇವರನ್ನು ನಮ್ಮ ಮನೆಗೆ ಬಂದ ಅತಿಥಿಯನ್ನು ಹೇಗೆ ಉಪಚರಿಸುತ್ತೇವೋ ಅದೇ ರೀತಿ ಉಪಚಾರ ಮಾಡಬೇಕು.
ಮೊದಲು ದೇವರನ್ನು ಭಕ್ತಿಯಿಂದ ಧ್ಯಾನಿಸಬೇಕು. ತದನಂತರ ದೇವರಿಗೆ ಅಹ್ವಾನ ನೀಡಬೇಕು. ನಾವು ಹೇಗೆ ಬಂಧುಗಳಿಗೆ ಆಹ್ವಾನ ಪತ್ರಿಕೆ ಕೊಟ್ಟು ಯಾವ ರೀತಿ ಕರೆಯುತ್ತೇವೋ ಅದೇ ರೀತಿಯಲ್ಲಿ ಭಗವಂತನನ್ನು ಭಕ್ತಿಯಿಂದ ಅಹ್ವಾನಿಸಬೇಕು. ಅಹ್ವಾನವೂ ಕೂಡ ಉಪಚಾರವೇ ಎಂದು ಹಿರಿಯರು ಆಚರಿಸಿದ್ದಾರೆ ಅವರನ್ನು ನಾವು ಅನುಸರಿಸಲೇಬೇಕು. ಬಂದ ನೆಂಟರಿಗೆ ಹೇಗೆ ನಾವು ಕೂರಲು ಚಾಪೆಯನ್ನೋ ಅಥವಾ ಕುರ್ಚಿಯನ್ನೋ ನೀಡುತ್ತೇವೆ ಅದೇ ರೀತಿ ದೇವರಿಗೂ ಕೂಡ ಕೂರಲು ವ್ಯವಸ್ಥೆಯನ್ನು ಮಾಡಬೇಕು. ಇದು ಷೋಡಶೋಪಚಾರದಲ್ಲಿ ಮೂರನೇಯ ಉಪಚಾರವಾಗಿದೆ. ಇದೇ ರೀತಿ ಎಲ್ಲ ಉಪಚಾರಗಳನ್ನು ಮಾಡಿ ಪೂಜಿಸಬೇಕು. ಪೂಜೆಯ ನಂತರದಲ್ಲಿ ಹಾಡು, ನೃತ್ಯದಿಂದ ದೇವರನ್ನು ಸಂತೋಷಪಡಿಸಬೇಕು. ಆಗಲೇ ಈ ಅಷ್ಟಮೀ ದಿನವು ಸಾರ್ಥಕ್ಯವನ್ನು ಪಡೆಯುವುದು.
ಕೃಷ್ಣ ಜಯಂತಿಗೂ ಮತ್ತು ಕೃಷ್ಣಾಷ್ಟಮಿಗೂ ಇರುವ ವ್ಯತ್ಯಾಸವೇನು ?
ಕೃಷ್ಣ ಜಯಂತಿ ಅಂದರೆ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ರೋಹಿಣೀ ನಕ್ಷತ್ರವಿದ್ದರೆ ಆ ದಿನವನ್ನು ಕೃಷ್ಣ ಜಯಂತಿ ಎಂದು ಕರೆಯುತ್ತಾರೆ. ಅದೇ ರೀತಿ ಶ್ರಾವಣ ಮಾಸದ ಅಷ್ಟಮಿಯ ದಿನ ರೋಹಿಣಿ ನಕ್ಷತ್ರವಿರದೆ ಬೇರೆ ನಕ್ಷತ್ರವಿದ್ದರೆ ಆ ದಿನವವನ್ನು ಕೃಷ್ಣ ಜನ್ಮಾಷ್ಟಮೀ ಎಂದು ಕರೆಯುತ್ತಾರೆ. ಏಕೆಂದರೆ ಭಗವಂತ ಶ್ರೀ ಕೃಷ್ಣ ಹುಟ್ಟಿದ ಅಷ್ಟಮಿಯ ದಿನ ರೋಹಿಣೀ ನಕ್ಷತ್ರವಾಗಿತ್ತಂತೆ. ಅಂದರೆ ಕೃಷ್ಣನ ನಕ್ಷತ್ರ ರೋಹಿಣೀ ನಕ್ಷತ್ರ. ರೋಹಿಣೀ ನಕ್ಷತ್ರವೆಂದರೆ ವೃಷಭ ರಾಶಿಯಾಗುತ್ತದೆ. ಆದ್ದರಿಂದ ಯಾರದ್ದು ರೋಹಿಣೀ ನಕ್ಷತ್ರ, ವೃಷಭ ರಾಶಿಯೋ ಅವರು ನಾನು ಕೃಷ್ಣನ ನಕ್ಷತ್ರ ರಾಶಿಯಲ್ಲಿ ಹುಟ್ಟಿದ್ದೇನೆ ಎಂದು ಬೀಗಬಹುದು, ಖುಷಿಪಡಬಹುದು.
ಉತ್ತರ ಪ್ರದೇಶದ ವೃಂದಾವನದಲ್ಲಿ, ಮಥುರಾದಲ್ಲಿ ಹಬ್ಬ ವಿಜೃಂಭಣೆಯಾಗಿ ನಡೆಯುತ್ತದೆ. ಗುಜರಾತಿನ ದ್ವಾರಕಾದಲ್ಲಿ ದೇವಸ್ಥಾನಗಳಿಗೆ ‹ಭೇಟಿ ಕೊಟ್ಟು ಹಬ್ಬವನ್ನಾಚರಿಸುತ್ತಾರೆ. ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈನಲ್ಲಿ ದಹಿ ಹುಂಡಿ ಎಂಬ ಆಚರಣೆ ಮಾಡುತ್ತಾರೆ. ಪೂರ್ವ ಭಾರತವಾದ ಓರಿಸ್ಸಾದ ಪುರಿ, ನಭದ್ವೀಪಗಳಲ್ಲಿ ಈ ದಿನ ಉಪವಾಸ ಮಾಡಿ ಶ್ರೀ ಮದ್ಭಾಗವತದ 10ನೇ ಅಧ್ಯಾಯ ಓದುವುದು ಸಂಪ್ರದಾಯವಾಗಿದೆ. ಜಮ್ಮುವಿನಲ್ಲಿ ಹಿಂದುಗಳು ಗಾಳಿಪಟವನ್ನು ಹಾರಿಸಿ ಹಬ್ಬವನ್ನು ಆಚರಿಸುವುದು ಅಲ್ಲಿನ ಸಂಪ್ರದಾಯವಂತೆ. ಆಸ್ಸಾಂ ನಲ್ಲಿನ ಜನರು ಪ್ರಸಾದವಿತರಿಸಿ ಹಬ್ಬಕ್ಕೆ ಮೆರುಗು ನೀಡುತ್ತಾರೆ. ದಕ್ಷಿಣ ಭಾರತದಲ್ಲಿ ಅಂದರೆ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ದೇವರಿಗೆ ಹೂವಿನ ಅಲಂಕಾರ ಮಾಡಿ, ಭಕ್ತಿಗೀತೆಗಳನ್ನು ಹಾಡಿ ಭಗವದ್ಗೀತಾ ಪಠಣ ಮಾಡಿ ಮಧುರ ಖಾದ್ಯವನ್ನು ದೇವರಿಗೆ ನೈವೇದ್ಯ ಮಾಡಿ ಅದನ್ನು ತಾವು ಪ್ರಸಾದದ ರೂಒಅದಲ್ಲಿ ತಿಂದು ಹಬ್ಬವನ್ನು ಆಚರಿಸುವುದೇ ಶ್ರೀ ಕೃಷ್ಣಾಷ್ಟಮಿಯ ಸಂಪ್ರದಾಯ.
ನ ದೌರ್ಭಾಗ್ಯಂ ನ ವೈಧವ್ಯಂ ನ ತಸ್ಯ ಕಲಹೋ ಗೃಹೇ |
ಸಂತತೇ ರವಿ ಯೋಗಶ್ಚ ನ ಪಶ್ಯತಿ ಯಮಾಲಯಮ್ ||
ಸಂಪರ್ಕೇಣಾಪಿ ಯ: ಕುರ್ಯಾತ್ ಕೃಷ್ಣಜನ್ಮಾಷ್ಟಮೀ ವ್ರತಮ್ |
ಚಿತ್ತೇಪ್ಸಿತ ಫಲ ಪ್ರಾಪ್ತಿ: ಸಪ್ತ ಜನ್ಮಸು ಅಪಿ ಜಾಯತೆ ||
ಅಂದರೆ ಯಾರು ತಮಗೆ ಇಷ್ಟವಿಲ್ಲದಿದ್ದರೂ ಕೇವಲ ಬೇರೆಯವರ ಮಾತು ಕೇಳಿ ಈ ಜನ್ಮಾಷ್ಟಮೀ ವ್ರತವನ್ನು ಮಾಡುತ್ತಾರೋ ಅಥವಾ ಆಚರಿಸುತ್ತಾರೋ ಅವರ ಮನಸ್ಸಿನಲ್ಲಿ ಅಂದುಕೊಂಡಂತ ಆಸೆ ನೆರವೇರುತ್ತದೆ ಹಾಗೂ ವ್ರತದ ಫಲವೂ ಏಳೂ ಜನ್ಮದಲ್ಲೂ ಕೂಡ ಪ್ರಭಾವ ಬೀರುತ್ತದೆ ಎಂದು ಶ್ಲೋಕದ ತಾತ್ಪರ್ಯ. ಇಷ್ಟವಿಲ್ಲದೆ0iÉುೀ ಆಚರಿಸಿದ ಈ ವ್ರತ ಇಷ್ಟು ಫಲ ಕೊಡುವುದಾದರೆ ಇಷ್ಟ ಪಟ್ಟು ಆಚರಿಸಿದರೆ ಇನ್ನೆಷ್ಟು ಫಲ ಕೊಟ್ಟೀತು ಅಲ್ಲವೇ.
ಆದ್ದರಿಂದ ಎಲ್ಲರೂ ಈ ದಿನವಾದರೂ ಈ ದೂರದರ್ಶನ, ಮೊಬೈಲ್, ಫೇಸ್ ಬುಕ್, ವಾಟ್ಸ್ ಆಪ್ ಗಳಿಂದ ದೂರವಿದ್ದು ಹಬ್ಬದ ಸಡಗರದಲ್ಲಿ ತೊಡಗಿ ಭಗವಂತನ ಕೃಪೆಗೆ ಪಾತ್ರರಾಗೋಣ.