ಅಂಕಣವಿಚಾರಲಹರಿ

ದೂರ ದಾರಿಯನ್ನು ಸನಿಹಗೊಳಿಸುವ ದೂರದೃಷ್ಟಿ

-ಚಿನ್ಮಯ ಎಂ.ರಾವ್ ಹೊನಗೋಡು

ಮಾನವ ಶಕ್ತಿ-ಯುಕ್ತಿಗಳಿಗಿಂತ ಮಿಗಿಲಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ದಿನೆ ದಿನೆ ಅದೆಂತಹ ಹೊಸ ಯಂತ್ರಗಳು ತಯಾರಾದರೂ ಅವಕ್ಕೆಲ್ಲಾ ಮಾನವ ಯುಕ್ತಿಯಿಂದಲೇ ತಂತ್ರಗಾರಿಕೆ. ಮಾನವನಿಗಿಂತ ವೇಗವಾಗಿ ಪರಿಪಕ್ವವಾಗಿ ಯಂತ್ರಗಳು ಕಾರ್ಯ ನಿರ್ವಹಿಸುವಂತೆ ಮಾಡಿದ್ದು ಮಾನವನೇ. ಅಂದ ಮೇಲೆ ಅಂತಹ ಮಾನವನು ತನ್ನ ಸಮಯದ ಉಳಿತಾಯ, ಸಮಯದ ಸದುಪಯೋಗ, ಅನಾವಶ್ಯಕ ಖರ್ಚುಗಳ ಕಡಿತ, ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ, ಉಪಾಯ ಮಾಡಿ ತೀರಾ ಅವಶ್ಯಕತೆಯಿರುವಷ್ಟು ಮಾತ್ರ ಸೂಕ್ತ ರೀತಿಯಲ್ಲಿ ಬಳಕೆ ಇವನ್ನೆಲ್ಲಾ ಯೋಗ್ಯರೀತಿಯಲ್ಲಿ ಯೋಜನೆ ಮಾಡಿಕೊಂಡು ರೂಪಿಸಿಕೊಂಡರೆ ಅದೇ ಇಡೀ ಸಮುದಾಯಕ್ಕೆ, ನಾಡಿಗೆ, ದೇಶಕ್ಕೆ, ವಿಶ್ವಕ್ಕೆ ಒಂದು ಕೊಡುಗೆಯಾಗುತ್ತದೆ.

ಕಾಲೇಜಿಗೆ ಕಾಲಿಡುವ ಮಕ್ಕಳಿಗೆ ಬಡ ಹಾಗು ಮದ್ಯಮವರ್ಗದ ಪೋಷಕರು ಸಾಮಾನ್ಯವಾಗಿ ಒಂದು ಮಾತು ಹೇಳುತ್ತಾರೆ..”ನೋಡು..ನೀನು ಅನಗತ್ಯವಾಗಿ ಖರ್ಚು ಮಾಡದೆ..ಶೋಕಿ ಮಾಡದೆ ನೂರೇ ರೂಪಾಯಿ ಉಳಿಸಿದರೂ ಸಾಕು ..ಅದೇ ನೂರು ರೂಪಾಯಿಯನ್ನು ನೀನು ದುಡಿದಂತೆ..” ಎಂದು. ಇದು ಹರೆಯದ ಅರಿಯದವರಿಗೆ ಆರಂಭದ ಪಾಠವಾದರೂ ಜೀವನಪೂರ್ತಿ ನಾವೆಲ್ಲಾ ಅನುಸರಿಸಬೇಕಾದ..ಅನುಸರಿಸಬಹುದಾದ..ಅತ್ಯಮೂಲ್ಯ ತತ್ವ. ಒಂದು ಮಟ್ಟಿಗಿನ ಬಡತನ ಉಳಿಸಿ ಬೆಳೆಸುವ ಅನುಭವವನ್ನು ನೀಡುತ್ತದೆ. ಜೀವನದಲ್ಲಿ ಮೇಲ್ಮಟ್ಟಕ್ಕೇರಿದವರಲ್ಲಿ ಹೆಚ್ಚಿನವರು ಬಡತನದ ಬೀಡಿಂದಲೇ ಬಂದವರೆಂಬುದು ಗಮನಾರ್ಹ ಸಂಗತಿ. ಅದಿರಲಿ..ಮಾನವ ಸಂಪನ್ಮೂಲದ ಸದ್ವಿನಿಯೋಗಕ್ಕೆ ವಾತಾವರಣವೂ ಪೂರಕವಾಗಿರಬೇಕೆಂಬುದು ನಮ್ಮೆಲ್ಲರ ಆಶಯ. ಅಂತಹ ಆಶಯಕ್ಕೆ ನಮ್ಮ ಆಡಳಿತ ವ್ಯವಸ್ಥೆಗಳೂ ಸ್ಪಂದಿಸಿದರೆ ಅದೇ ಈ ದೇಶಕ್ಕೆ ದೊಡ್ಡ ಆದಾಯ. ಇಡೀ ಸಮುದಾಯದ ಒಟ್ಟು ಮೊತ್ತವಾಗಿ ಹೊರಹೊಮ್ಮುವ ದೊಡ್ಡ ಆದಾಯಕ್ಕೆ ಮೂಲ ಆರಂಭಿಕ ಹಂತದಿಂದಲೇ ಸಣ್ಣ ಸಣ್ಣ ಉಳಿತಾಯ. ಹೀಗೆ ಜನಸಾಮಾನ್ಯ ತಳಮಟ್ಟದಿಂದ ಸಂಪನ್ಮೂಲ ಉಳಿತಾಯ ಆಗುವಂತೆ ಮಾಡಿ ಜನಮೆಚ್ಚುಗೆಗೆ ಪಾತ್ರವಾಗಿ ಮನಮುಟ್ಟುವಂತಹ ಸಣ್ಣದೊಂದು ಕಾರ್ಯವನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ಆಡಳಿತ ವರ್ಗ. ಆ ಯಶೋಗಾಥೆಯನ್ನು ಚಿಂತನ ಮಂಥನ ಮಾಡಲು ಈ ಲೇಖನ. ಹಾಗಾದರೆ ಏನದು ಎಂದು ನಾವೀಗ ತಿಳಿದುಕೊಳ್ಳೋಣ.

SAGARA NAGARASABHE WORK-3ಶಿವಮೊಗ್ಗದಿಂದ ಸಾಗರದತ್ತ ಸಾಗುವಾಗ ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ…ಸಾಗರ ಪಟ್ಟಣ ಪ್ರವೇಶಿಸುವಾಗ ಗಣಪತಿ ಕೆರೆಯ ಆರಂಭದಲ್ಲಿ ಒಂದು ತಿರುವು ಇದೆ. ಅಲ್ಲಿಂದ ಎಡ ಭಾಗದ ಕಾಲು ದಾರಿಯಲ್ಲಿ ..ಒಳದಾರಿಯಲ್ಲಿ ಸಾಗಿದರೆ ಸೀದಾ ಹೊಸನಗರ ರಸ್ತೆಗೆ ತಲುಪುತ್ತದೆ. ಕಾಲು ದಾರಿ ಸವೆದು ಸವೆದು ಅರ್ಧದಾರಿಯಾದಾಗ ಈ ಭಾಗದ ನಿವೃತ್ತ ಶಿಕ್ಷಕ ಶ್ರೀಧರ ಶರ್ಮ, ನಗರ ಸಭಾ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಸರಸ್ವತಿ ರಾಮಚಂದ್ರ ಮತ್ತಿತರ ಪ್ರಜ್ನಾವಂತ ನಾಗರೀಕರೆಲ್ಲಾ ಪ್ರಯತ್ನ ಪಟ್ಟಿದ್ದರ ಫಲವಾಗಿ ಅದೀಗ ಪೂರ್ಣ ದಾರಿಯಾಗಿದೆ. ನಗರ ಸಭಾ ಸದಸ್ಯರೂ ಅಧಿಕಾರಿಗಳೂ ಆಡಳಿತ ವರ್ಗದವರೂ ಇವರೆಲ್ಲರೂ ಸಕಾಲದಲ್ಲಿ ಎಚ್ಚೆತ್ತುಕೊಂಡು ಕಾರ್ಯೋನ್ಮುಖರಾದ ಪರಿಣಾಮ ಪರಿಣಾಮಕಾರಿಯಾಗಿ ಚರಂಡಿ ಹಾಗು ರಸ್ತೆಯ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ದಾರಿಗಾಗಿ ವೀರಶೈವ ಸಮಾಜ ಕೂಡ ತನ್ನ ಭೂಮಿಯನ್ನು ಒಂದಷ್ಟು ಬಿಟ್ಟು ಕೊಟ್ಟು ಔದಾರ್ಯ ಮೆರೆದಿದೆ. ಈ ದಾರಿ ಈಗ ಮಾದರಿಯಾಗಿದೆ. ಹೇಗೆ ಎನ್ನುವಿರಾ?

ಆ ತಿರುವಿನಿಂದ ಹೆದ್ದಾರಿಯ ಮೂಲಕವೇ ಸಾಗಿ ಹೊಸನಗರ ರಸ್ತೆ ಸೇರಿ ಈ ಒಳದಾರಿ..ಹೊಸದಾರಿ ತಲುಪುವ ಜಾಗ ತಲುಪಲು ಸುತ್ತು ಬಳಸಿ ಹೋದರೆ ಒಂದುವರೆ ಕಿಲೋಮೀಟರ್ ದೂರ ಆಗುತ್ತದೆ. ಹೋಗಿ ಬರುವಾಗ ೩ ಕಿಲೋಮೀಟರ್ ಆಗುತ್ತದೆ. ಅದೇ ಹೊಸ ದಾರಿಯಲ್ಲಿ ಪಯಣಿಗರು ಓಡಾಡಿದರೆ ಕೇವಲ ಒಂದು ಕಿಲೋಮೀಟರ್ ಆಗುತ್ತದೆ. ಅಂದರೆ ಎರಡು ಕಿಲೋಮೀಟರ್ ಉಳಿತಾಯವಾಗುತ್ತದೆ !

ದಿನವೊಂದಕ್ಕೆ ಅಂದಾಜು ೩೦೦ ದ್ವಿಚಕ್ರ ವಾಹನಗಳು, ೫೦ ತ್ರಿಚಕ್ರ ವಾಹನಗಳು ಹಾಗು ೫೦ ಚತುಶ್ಚಕ್ರ ವಾಹನಗಳು ಪ್ರಸ್ತುತ ಈ ರಸ್ತೆಯಲ್ಲಿ ಓಡಾಡುತ್ತಿವೆ. ಅಂದರೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಅನ್ವಯ ವರುಷವೊಂದಕ್ಕೆ ಅಂದಾಜು ಸರಾಸರಿ ೪ ಲಕ್ಷ ರೂಪಾಯಿ ಉಳಿತಾಯವಾಗುತ್ತದೆ. ಈ ವ್ಯವಸ್ಥೆಯಿಂದಾದ ಅನುಕೂಲಗಳನ್ನೂ ಉಪಯೋಗಗಳನ್ನೂ ನಾವು ಈ ಕೆಳಗಿನಂತೆ ನಾವು ಪಟ್ಟಿ ಮಾಡಬಹುದು..

೧-ಪಯಣಿಗರಿಗೆ ಇಂಧನ..ಹಣ..ಸಮಯದ ಉಳಿತಾಯ.
೨-ದೇಶ ಆಮದು ಮಾಡಿಕೊಳ್ಳುತ್ತಿರುವ ಇಂಧನದ ಮಿತವ್ಯಯ.
೩- ವಾಹನಗಳ ಸವಕಳಿ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ.
೪-ವಾಯುಮಾಲಿನ್ಯ ಹಾಗು ಶಬ್ಧಮಾಲಿನ್ಯ ಕೂಡ ತಕ್ಕ ಮಟ್ಟಿಗೆ ಕಡಿಮೆಯಾಗುತ್ತದೆ.
೫-ಆ ಭಾಗದಲ್ಲಿ ನಿತ್ಯ ಓಡಾಡುವ ಕೂಲಿ ಕಾರ್ಮಿಕರಿಗೆ ಕಾಲ್ನಡಿಗೆ ಕಡಿಮೆಯಾಗುತ್ತದೆ..ಅಷ್ಟರ ಮಟ್ಟಿಗಿನ ಶ್ರಮವನ್ನು ಅವರು ತಮ್ಮ ಕೆಲಸಕ್ಕೆ ವಿನಿಯೋಗಿಸಬಹುದು.

ಈ ಮೇಲಿನ ಎಲ್ಲಾ ಸಂಗತಿಗಳೂ ಸಣ್ಣ ಸಣ್ಣವೆಂದು ನಿಮಗನ್ನಿಸಬಹುದು. ಆದರೆ ಹನಿಹನಿಗೂಡಿದರೆ ಹಳ್ಳ ಎಂಬಂತೆ ಇವುಗಳ ಲೆಕ್ಕಾಚಾರವನ್ನು ಎಲ್ಲಾ ಕೋನಗಳಿಂದ ಪರಿಶೀಲಿಸಿದರೆ ವಾರ್ಷಿಕವಾಗಿ …ದಶವಾರ್ಷಿಕವಾಗಿ ಮೊತ್ತ ದೊಡ್ಡದಾಗುತ್ತದೆ. ಅಷ್ಟಕ್ಕೂ ನಗರವೊಂದರ ಈ ಒಂದು ದಾರಿಯ ಕುರಿತಾಗಿ ನಾವು ಚರ್ಚಿಸುತ್ತಿದ್ದೇವೆ. ನಮ್ಮ ದೇಶದ ಎಲ್ಲಾ ನಗರಸಭೆಗಳೂ ಇದೇ ರೀತಿಯಲ್ಲಿ ವಿವಾದಾತೀತ ಜಾಗಗಳನ್ನೂ..ದಾರಿಗಳನ್ನೂ ಗುರುತಿಸಿ ನೇರ ಒಳರಸ್ತೆಗಳನ್ನು ನಿರ್ಮಿಸಿದರೆ ಸ್ಥಳಗಳ ಅಂತರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ರಾಷ್ಟ್ರೀಯ ಉಳಿತಾಯವಾಗುತ್ತದೆ ಅಲ್ಲವೆ? ಸಾಗರ ನಗರಸಭೆಯ ಈ ಮಹತ್‌ಕಾರ್ಯ ಮಾದರಿ ಎಂದೆನಿಸುವುದಿಲ್ಲವೆ? ದೂರ ದಾರಿಗಳನ್ನು ಸನಿಹಗೊಳಿಸುವ ದೂರದೃಷ್ಟಿ ನಮಗೆ ಬೇಕಲ್ಲವೆ?

ಇಂಧನ ಉಳಿತಾಯದ ಉಪದೇಶ ನೀಡಲು ಕತ್ತೆ ಮೇಲೆ ಮೆರವಣಿಗೆ, ಸೈಕಲ್ ಹಾಗು ಎತ್ತಿನಗಾಡಿಗಳ ಮೆರವಣಿಗೆ ಮಾಡಿ ತೋರಿಕೆಗಾಗಿ ಜಾತಾ ನಡೆಸಿ ಮರುದಿನ ಪತ್ರಿಕೆಗಳಲ್ಲಿ ತಮ್ಮ ಭಾವಚಿತ್ರ ಹಾಗು ಹೆಸರು ಬಂತಾ? ಎಂದು ಹುಡುಕುವ ಬದಲು ಈ ರೀತಿ ಹೊಸ ಉಪಾಯಗಳನ್ನು ಹುಡುಕಿ ಅದನ್ನು ಕಾರ್ಯಗತಗೊಳಿಸಲು ಸಂಘಟಿತವಾಗಿ ಪ್ರಯತ್ನ ಮಾಡಿದರೆ ಒಳಿತಾಗುತ್ತದೆ ಎಂಬುದಕ್ಕೆ ಈ ದಾರಿ ನಿರ್ಮಾಣವಾಗಲು ನೂರಾರು ಬಾರಿ ಅಲೆದವರೇ ನಮಗೆಲ್ಲಾ ಸ್ಪೂರ್ತಿಯ ಸೆಲೆಯಾಗಬೇಕಲ್ಲವೇ?
ಸಾವಿರ ಪದಗಳ ಮಾತಿಗಿಂತ ಸಾವಿರಾರು ರೂಪಾಯಿ ಉಳಿಸುವ ಯೋಜನೆ ಕೃತಿರೂಪಕ್ಕಿಳಿದರೆ ಅದಕ್ಕಿಂತ ಅನುಕರಣೀಯ ಮತ್ತಿನ್ನೇನಿದೆ?

-ಚಿನ್ಮಯ ಎಂ.ರಾವ್ ಹೊನಗೋಡು

10-2-2012

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.