ವಿಚಾರಲಹರಿ

ಭಾರತಾಂಬೆಯ ಒಡಲು ಶುದ್ಧಿಯಾಗವುದೆಂದು?

kannada-writer-dr-doddarange-gowda-photos-clicked-by-chinmaya-m-rao-set-1-26ಡಾ|| ದೊಡ್ಡರಂಗೇಗೌಡ

(ಲೇಖಕರು ಕನ್ನಡದ ಹಿರಿಯ ಸಾಹಿತಿ
ಹಾಗು ಕನ್ನಡ ಟೈಮ್ಸ್ ಪತ್ರಿಕೆಯ
ಗೌರವ ಸಂಪಾದಕರು)
email:[email protected]

ನಮ್ಮ ನಲ್ಮೆಯ ಭಾರತದಲ್ಲಿ ಯಾವ ನಗರವನ್ನು ನೋಡಿದರೂ ಸಾಕು… ಅವುಗಳೆಲ್ಲಾ ಬುರ ಬುರನೆ ಬೆಳೆಯುತ್ತಿವೆ. ಬೃಹದಾಕಾರದಲ್ಲಿ ವಿಸ್ತಾರವಾಗುತ್ತಿವೆ. ಎಲ್ಲೆಲ್ಲೂ ಗಗನ-ಚುಂಬಿಗಳು ! ಎಲ್ಲ ಅಂಕೆ-ಸಂಖ್ಯೆ ಮೀರಿ ಹೆಚ್ಚಾಗುತ್ತಿರುವ ಜನಸಂಖ್ಯಾ ಸ್ಫೋಟಗಳು !

ಫಳ ಫಳ ಹೊಳೆವ ಮನೆಗಳು, ಹಿಗ್ಗಾ ಮುಗ್ಗಾ ಢಾಳಾಗಿ ಹಬ್ಬುತ್ತಿರುವ ಕೊಂಪೆಗಳು ! ಒಂದೆಡೆ ಆಕಾಶದೆತ್ತರದ ಕಟ್ಟಡಗಳು. ಮತ್ತೊಂದೆಡೆ ಸಹರಾ ಮರುಭೂಮಿಯಂತೆ ವಿಸ್ತಾರವಾಗುತ್ತಿರುವ ಗುಡಿಸಲುಗಳು ! ಎಲ್ಲವೂ ಕಣ್ಣಿಗೆ ರಾಚುತ್ತಿವೆ. ಕಕ್ಕಾವಿಕ್ಕಿಯಾಗುತ್ತಿದ್ದಾನೆ ಶ್ರೀ ಸಾಮಾನ್ಯ… ಯಾವುದು ನಿಜ? ಯಾವುದು ಸಹಜ?

ಈ ದೈತ್ಯಾಕಾರದ ಕಟ್ಟಡಗಳಿಗೆ ಎಲ್ಲೆಲ್ಲಿಂದ ಬರುತ್ತಿದೆ ಹಣ? ಹೇಗೆ ಹೇಗೆ ಬರುತ್ತಿದೆ ಹಣ? ಯಾರು ಇದಕ್ಕೆಲ್ಲಾ ಕಾರಣ? ಯಾತಕ್ಕಾಗಿ ಇಂಥ ಮಿಣ ಮಿಣ ಫಳ ಫಳ ಹೊಳೆವ ಕಟ್ಟಡಗಳು? ಇವುಗಳು ಏನೇನು ಹೇಳುತ್ತಿವೆ? ನಮ್ಮ ಹಿರಿಮೆ-ಗರಿಮೆಗಳನ್ನೇ? ಇಲ್ಲಾ ನಮ್ಮ ಪ್ರಗತಿಯ ವೈಭವವನ್ನೇ? ನಮ್ಮ ಎಂಜಿನಿಯರಿಂಗ್ ಸ್ಕೂಲ್‌ಗಳನ್ನೇ?

ಯಾವ ಪುರುಷಾರ್ಥಕ್ಕಾಗಿ ಕಂಗೊಳಿಸುತ್ತಿವೆ? ಮಿತಿ ಮೀರಿದ ಜನಸಂಖ್ಯಾ ಸಮಸ್ಯೆ ನಿಭಾಯಿಸುವ ವಸತಿ ಸಮಸ್ಯೆಯನ್ನೇ? ಏನಿದು ಈ ಕ್ರಾಂತಿ? ಏನೇನಿದು ಈ ಸ್ಫೋಟ? ಬೇಕಾಗಿದೆಯೇನು ಈ ಆಧುನಿಕ ಮಾಟ? ಕಣ್ಕ್ಕುಕ್ಕುತ್ತಿದೆಯಲ್ಲಾ ಈ ಅಂದದ ವೈಯ್ಯಾರದ ಬೆಡಗಿನ ಮಾಟ ! ಬದಲಾಗುತ್ತಿದೆಯೇ ಭಾರತ? ಪಾಶ್ಚಾತ್ಯೀಕರಣಗೊಳ್ಳುತ್ತಿದೆಯೋ ನಮ್ಮ ಪ್ರೀತಿಯ ಭಾರತ? ಅಥವಾ ಇಂಡಿಯಾದ ಇಂಥ ನೋಟ ಈ ಕ್ಷಿಪ್ರಾತಿಕ್ಷಿಪ್ರ ರೂಪಾಂತರವೇ?

ದ್ರವ್ಯಾಲಯಗಳು ಸಮೃದ್ಧವಾಗಿ ನೀಡುತ್ತಿವೆ ಹಣ; ಆದ್ದರಿಂದಲೇ ಝಣ ಝಣ ! ಕೋಟಿ ಕೋಟಿ ಸಾಲ ಪಡೆದು ತಲೆಯೆತ್ತುತ್ತಿವೆ ಈ ನವ್ಯಾತಿನವ್ಯ ವಿನ್ಯಾಸದ ಮೇರು ಗೋಪುರಾಕೃತಿಯ ಬಾನ ಮುತ್ತಿಡುವ ಮಹಲುಗಳು !

ಇದೆಲ್ಲಾ ನವನಾಗರೀಕತೆಯ ಜಾಲ ! ಮಾನವ ತಾನು ಬೆಳೆಯಬೇಕು, ಬದಲಾಗಬೇಕು, ಚೆನ್ನಾಗಿ ಜೀವಿಸಬೇಕು, ವೈಭವೋಪೇತ ಜೀವನ ನಡೆಸಬೇಕೆಂಬ ಮುಗಿಯದ ಹಂಬಲಗಳ ಫಲ.

ಎಲ್ಲೆಲ್ಲೂ ಎಲ್ಲೆ ಕಟ್ಟಿಲ್ಲದ ಕೆಲವರ ಅಭೀಪ್ಸೆಗಳು; ಇದಕ್ಕೆ ತದ್ವಿರುದ್ಧ ಹೇಗಾದರೂ ಮಾಡಿ ನಾವು ಬದುಕಬೇಕೆಂಬ ಸಾಮಾನ್ಯರ ಛಲಗಳು; ಮೂಲಭೂತ ಸವಾಲುಗಳು, ಕನಿಷ್ಠ ಜೀವನಕ್ಕೂ ಪಾಡು ಪಡುವ ತಲ್ಲಣಗಳು; ತುತ್ತು ತುತ್ತಿಗಾಗಿ ಹೋರಾಟದ ಕ್ಷಣಗಳು; ದಿನ ದೂಡುತ್ತಿರುವ ಪ್ರಮೇಯಗಳು ! ಮಹಾಕವಿ ಕುವೆಂಪು ಪದ್ಯ ಕಲ್ಕಿ ನೆನಪಾಗುತ್ತಿದೆ.

ಒಂದೆಡೆ ಮಿನುಗುವ ಧನಿಕರ ಮಹಲುಗಳು..! ಹಲವೆಡೆ ರಾಚುವ ಬಡವರ ಗುಡಿಸಲು ! ಇತ್ತ ದಣಿಗಳು ! ಗರ್ವಗಳು ! ಅತ್ತ ಕೂಲಿಗಳು! ಅಳಲ ಹೊಳೆಗಳು ! ಒಂದು ಭ್ರಮೆ, ಮತ್ತೊಂದು ವಾಸ್ತವ. ಎರಡೂ ಸೇರಿ ಮಾಡ್ರನ್ ಇಂಡಿಯಾ ! ಓ..! ಕವಿಯೇ ಸತ್ಯವ ಕಂಡೆಯಾ? ಎಂದರೆ ಹಲವು ಗೋಜಲು ಗೋಜಲು ಉತ್ತರಗಳು… ಉತ್ತರಿಸಲಾಗದ ಸಶೇಷ ಪ್ರಶ್ನೆಗಳು… ಎರಡೂ ಅಪ್ಪಟ ನಿಜ, ಸತ್ಯಸ್ಯ ಸತ್ಯ. ಅತ್ತ ಶ್ರೀಮಂತಿಕೆಯ ಅಟ್ಟಹಾಸ. ಇತ್ತ ಬದುಕುಳಿಯಲಾಗದ ಪರಿಹಾಸ. ಅದು ಹೊಳೆ ಹೊಳೆವ ಕನಸು ! ಇದು ಸಹಿಸಿಕೊಳ್ಳಲಾಗದ ರೂಕ್ಷಾತಿರೂಕ್ಷ ಕರಾಳ ಸತ್ಯದ ಸೆಲೆ ಸಲೀಸು ! ಇದೇ ನಮ್ಮ ವಿಪರ್ಯಾಸ. ಇದೆಯೋ ಸಮಾನತೆ? ಇದೆಯೇನು ಸಾಮಾಜಿಕ ನ್ಯಾಯ? ಇದ್ದರೆ ಎಲ್ಲಿದೆ? ಅದು ಅವರವರ ಕರ್ಮ ಎಂಬ ಹಣೆ ಬರಹದ ಥಿಯರಿ ! ನಡೆಯುತ್ತಲೆ ಇದೇ ಪೂರ್ವಜನ್ಮದ ಸಿದ್ಧಾಂತ. ಅದರ ವಿರುದ್ಧದ ಪೌರುಷ ಗಾಥೆಯ ಸಂಘರ್ಷ !

ಯಾರು ಸರಿ? ಯಾರು ತಪ್ಪು? ಯಾವುದು ನಿಜ? ಯಾವುದು ಸುಳ್ಳು? ಎರಡೂ ಇರುವಿಕೆಗಳೇ! ಅದೇ ವೈಪರಿತ್ಯ ! ಮುನ್ನಡೆಯುತ್ತಿದೆ ನಾಡು; ಬರಡಾಗುತ್ತಿದೆ ಕಾಡು; ಬೀದಿಗೆ ಬಿದ್ದಿದೆ ಮಾನವನ ದೈನಂದಿನ ಹಾಡು ! ನಾಯಿಪಾಡು. ಎಲ್ಲಿ ತಪ್ಪಿತೋ ನೀತಿ ನೀಯತ್ತಿನ ಜಾಡು?

ಅತ್ತ ವಾಹನ. ಇತ್ತ ವಾಹನ. ಪುಟ್ಟ ಪಥಗಳಲ್ಲೂ ಕೆಟ್ಟವಾಹನ. ಹೊಗೆ ಹೊಗೆಯ ವರ್ತುಲ ವರ್ತುಲ ಮಲಿನಾತಿಮಲಿನ ! ವಿಷಗಾಳಿಯ ಸಂಚಲನ. ಅಸಹ್ಯವಾಗುತಿದೆ ನಗರಾಂರ್ತಗತ ಬದುಕು. ಎಲ್ಲೆಲ್ಲೂ ಮಿತಿಮೀರಿದ ಕೊಳಕು. ಪ್ರಧಾನಿಯು ಹೇಳತ್ತಲೇ ಇದ್ದಾರೆ ಸ್ವಚ್ಛತೆಯ ಅಭಿಯಾನ ! ಘೋಷಣೆಯೂ ಮುಗಿಲು ಮುಟ್ಟಿದೆ ! ಆಂದೋಲನ ಯಾರು ಯಾರನ್ನು ತಟ್ಟಿದೆ? ಸರಿಯಾಗಿ ಅದು ತಟ್ಟಿದ್ದೇ ಆಗಿದ್ದರೆ. ಹೃನ್ಮನ ಮುಟ್ಟಿದ್ದೇ ಆಗಿದ್ದರೆ ಇರುತ್ತಿದ್ದವೇನು ಗಾರ್ಬೇಜು ಸಿಟಿಗಳು? ಬೆಳೆಯುತ್ತಿದ್ದವೇನು ಬೆಟ್ಟದ ಕುಪ್ಪೆ ತಿಪ್ಪೆಗಳು? ಕೊಳೆತು ನಾರುತ್ತಿದ್ದವೇನು ಮಾರುಕಟ್ಟೆಗಳು? ಪ್ರತಿ ಪ್ರಜೆಯ ಎದೆ ಎದೆಗೂ ಬಿದ್ದಿದ್ದರೆ ಸ್ವಚ್ಛತಾ ಆಂದೋಲನದ ಒಳಗಿನೊಳಗಿನ ದನಿ, ಇರುತ್ತಲೇ ಇರಲಿಲ್ಲ ಕಲಾಸಿಪಾಳ್ಯದ ಜಗತ್ಪ್ರಸಿದ್ಧ ಹೊಲಸು ! ಇಲ್ಲಿ ಶುದ್ಧೀಕರಣವೇ ಕನಸು !!

ಹೇಗಾದರೂ ಮಾಡಿ ಹೊರ ಜಗತ್ತಿನ ವಾತಾವರಣವನ್ನು ಶುದ್ಧೀಕರಣಗೊಳಿಸಬಹುದು? ಸಮುದಾಯ ಸಮುದಾಯಗಳ ಅರ್ಬುದ ರೋಗವಾದ ಜಾತೀಯತೆಯ ಕೊಳೆಯನ್ನು ಸ್ವಚ್ಛಗೊಳಿಸುವುದು ಎಂದು? ನಮ್ಮ ನಮ್ಮಲ್ಲಿ ಬೇರೂರಿರುವ ಮಿತಿ ಮೀರಿದ ಭ್ರಷ್ಟಾಚಾರದ ಕ್ರೂರ ಸರಪಳಿಯನ್ನು ಎಲ್ಲಿಯಾದರೂ ತುಂಡರಿಸಲಾದೀತೆ? ಈ ವ್ಯಾಪಕ ಭ್ರಷ್ಟಾಚಾರದ ನಿರ್ಮೂಲನೆ ಮಾಡುವುದು ಹೇಗೆ? ಹೇಗೆ?

ಎತ್ತ ನೋಡಲಿ ಭೂ ಕಬಳಿಕೆ ! ನುಂಗಿ ನೀರು ಕುಡಿದಿದ್ದಾರೆ ರಾಕ್ಷಸರು, ಅವರೆಲ್ಲರೂ ನಮ್ಮ ಪಾಲಿಗೆ ಬಹಿರಂಗ ನುಂಗಾಸುರರೇ ! ಎಲ್ಲಿ ನೋಡಲಿ.. ಅಲ್ಲಿ ಲಂಚಾವತಾರ ! ಪ್ರತಿಯೊಂದಕ್ಕೂ ಲಂಚ ! ಲಂಚ ! ಅದಿಲ್ಲದೆ ಈ ದೇಶದಲ್ಲಿ ಒಂದೂ ಕೆಲಸವಾಗುವುದಿಲ್ಲ ! ಕಂಗಾಲಾಗಿ ಹೋಗಿದ್ದಾನೆ ಶ್ರೀಸಾಮಾನ್ಯ ! ಅದರ ಬೇರೆಲ್ಲಿದೆಯೋ ! ಯಾರೂ ಕಾಣಲಾಗದು. ಮೂಲೋಚ್ಛಾಟನೆ ಮಾಡದೆ ಭಾರತ ಬದುಕದು; ಬೆಳೆಯದು; ಬಲಿಯದು!

ಕಿತ್ತು ಕಿತ್ತು ತಿನ್ನುತಿವೆ ಲಂಚದ ಭಕ್ಷಕ ಕೈಗಳು ! ಆ ದಾಹ ಇಂಗಿಲ್ಲ. ಅದಕ್ಕೆ ಎಗ್ಗಿಲ್ಲ. ಸಕಲ ರಂಗದಲ್ಲೂ ಲಂಚದ್ದೇ ಮೇಲುಗೈ. ಅದರದೇ ವಿಜೃಂಭಣೆ. ನಲುಗಿ ಹೋಗಿದ್ದಾನೆ ಈ ನೆಲದ ಮನುಜ. ಇದನ್ನು ಯಾರು ತಾನೇ ಹೇಳಿಯಾರು ಸಹಜ ಎಂದು. ಬೇಲಿಗಳೇ ಹೊಲ ನುಂಗಿದ ಕರಾಳ ಕಥೆ ಇದು. ಕೆರೆಯ ಏರಿಗಲೇ ನೀರು ಕುಡಿದ ವಿಕೃತ ಕಥನಗಳು ಇವು. ಮಾರ್ಯದೆ ಮಣ್ಣಾಗಿ ಹೋಗಿದೆ ತಾಯಿಯ ಶೀಲದ್ದು ! ಎಂಥ ವಿಕಲ್ಪ ಇದು?

ಎಳೆಯ ಮಕ್ಕಳನ್ನೂ ಬಿಡಲಿಲ್ಲ, ಕಾಮುಕರು ! ವಯಸ್ಸಾದ ಹಿರಿಯರನ್ನು ಬಿಡಲಿಲ್ಲ ಈ ಲಂಪಟರು. ರಾಷ್ಟ್ರದ ಮರ್ಯಾದೆಯನ್ನೇ ತೆಗೆದ ಈ ಜನ ನಮ್ಮ ನಡುವೆ ಬದುಕಿದ್ದಾರೆ. ಇವರನ್ನೂ ಮಟ್ಟ ಹಾಕಲಾಗದ ನಿರ್ವೀರ್ಯ ಸಮಾಜ. ಇಂಥವರ ಹದ್ದು ಬಸ್ತಿಗೆ ತರಲಾಗದ ಸಮಾಜ ಏನು ಕಡಿದು ಕಟ್ಟೆಹಾಕಲಾದೀತು? ಇದು ಆಧುನಿಕತೆಯ ಅಭಿಶಾಪವೇ? ವಿಕೃತಿಯ ವಿಲಾಸದ ನವನಾಟ್ಯವೇ? ಏನಿದುರ ಅರ್ಥ? ಏನಿದರ ಛಾಯೆ? ಸಂಸ್ಕೃತಿ ಧ್ವಂಸವಾಗುತ್ತಿದೆಯೇನು? ಕಾನೂನಿ ಕೈಗಳು ಕೈಚೆಲ್ಲಿ ಕೂತಿವೆಯೇನು? ಇದು ಅಸಹಾಯಕತೆಯ ಲಕ್ಷಣವೋ ! ಇಲ್ಲಾ … ವೈಫಲ್ಯದ ಸಂಕೇತವೋ !

ಇಡೀ ದೇಶ ಈ ಅತ್ಯಾಚಾರಗಳ ದುರ್ವತನೆಗಳ ಅಬ್ಬರದಲ್ಲಿ ಅತ್ಯಂತ ಕೆಟ್ಟ ಹೆಸರು ಪಡೆದಿದೆ. ನಾಗರೀಕರೇ ಕಾಮುಕರಿಗೆ ಪಾಠ ಕಲಿಸಬೇಕು. ದೇಶವಾಸಿಗಳೇ ಮಟ್ಟ ಹಾಕಬೇಕು ಲಂಚಕೋರರನ್ನು ! ಇದು ತಾಯಿ ಭಾರತಾಂಬೆಯ ಒಡಲೊಳಗಿನ ಗಲೀಜು !! ಮೊದಲು ಇದರ ಶುದ್ಧೀಕರಣ ಸಾಧ್ಯವಾಗಬೇಕು.

ನಮ್ಮ ನಲ್ಮೆಯ ಭಾರತ ಯಾವಾಗ ಹೊಳೆಯುತ್ತದೆ ಹೇಳಿ? ಎಂದು ಭ್ರಷ್ಟಾಚಾರದಿಂದ ಮುಕ್ತವಾಗುತ್ತದೋ ಎಂದು ಈ ಲಂಚಾವತಾರ ಕೊನೆಗೊಳ್ಳುತ್ತದೋ ಅಂದು ! ಎಂದು ಅತ್ಯಾಚಾರ ನಿಲ್ಲುತ್ತದೋ ಅಂದು ಶೀಲವಂತ ರಾಷ್ಟ್ರ ! ಆದರೆ ಇದೆಲ್ಲಾ ಆಗವುದೆಂದು? ಭಾರತೀಯರು ಎಚ್ಚೆತ್ತುಕೊಳ್ಳುವುದು ಎಂದು? ಜಾಗೃತ ಭಾರತ ಹೊಳೆ ಹೊಳೆವುದು ಎಂದು? ಎಂದು? ಎಂದು? ಎಂದು?……….!! ನನಗೆ ಈಗ ಹೀಗೆ ಅನ್ನಿಸಿದೆ:
ಪ್ರಸ್ತುತ
ನಾಡ ಹೊರಗು ಎನಿತೆನಿತು ಹೊಳೆದರೇನು?
ಆಮೂಲಾಗ್ರ ನಮ್ಮೊಳಗು – ಹೊಳೆಯ ಬಾರದೇನು?
ದೇಶವೆಂದರೆ ಹೊಳೆ ಹೊಳೆವ ಕಟ್ಟಡಗಳಲ್ಲ !
ಜನತೆಯ ಸಂಸ್ಕೃತಿಯ ಸಾರ ಸರ್ವಸ್ವ !

ಡಾ|| ದೊಡ್ಡರಂಗೇಗೌಡ
ಶ್ರೀಸನ್ನಿಧಿ, # ೧೪೦, ೩ನೇ ಮುಖ್ಯ ರಸ್ತೆ, ಕತ್ತರಿಗುಪ್ಪೆ (ಪೂರ್ವ) ಬೆಂಗಳೂರು ೫೬೦ ೦೮೫ ಜಂಗಮವಾಣಿ: ೯೯೦೦೨೫೩೪೯೫.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.