ವಿಚಾರಲಹರಿ

ರೂಪಾಯಿಗೊಂದು ಹಾಡು..ಇದು ನಮ್ಮ ಸಂಗೀತದ ಪಾಡು?!

deepak-koradi-3ದೀಪಕ್ ಕೋರಡಿ

ನಾ ಮೊದಲು ತಾ ಮೊದಲು ಎಂದು ಪೈಪೋಟಿಯಲ್ಲಿ ನುಸುಳುತ್ತ ಹೊರಟು ಕಲ್ಲು-ಬಂಡೆಗಳ ನಡುವೆ ಸಿಲುಕುವ ಹರಿವ ನದಿಯಲ್ಲಿನ ಕಸ-ಕಡ್ಡಿಗಳಂತೆ ಪ್ರತಿದಿನವೂ ಒದ್ದಾಡಿಕೊಂಡು ಕಛೇರಿಗೆ ತಲುಪಿ, ಸಂಜೆಯವರೆಗೂ ದುಡಿದು ಮತ್ತದೇ ದಾರಿಯಲ್ಲಿ ಹಿಂತಿರುಗಿ ಮನೆಗೆ ಬಂದೊಡನೆ ‘ಅಬ್ಬಾ.. ಅಂತೂ ಜೀವನದೊಡನೆ ಇವತ್ತಿನ ಸೆಣೆಸಾಟ ಮುಗಿಯಿತು’ ಎಂದೆನಿಸುತ್ತದೆ. ಆದರೆ ಅದೆಲ್ಲೋ ನೆಮ್ಮದಿಯ ಛಾಯೆ ನಮಗರಿವಿಲ್ಲದೆ ರಾತ್ರಿಯ ಕತ್ತಲಲ್ಲಿ ಲೀನವಾಗಿರುತ್ತದೆ. ಇಂತಹ ಸಂದರ್ಭದಲ್ಲೂ ನಮಗೆ ಜೊತೆಯಗಿದ್ದು ‘ಸಾಥ್’ ನೀಡುವುದು ಸಂಗೀತ. ಅದೆಷ್ಟೇ ಜಂಜಾಟವಿರಲಿ-ತೊಳಲಾಟವಿರಲಿ ಅದನ್ನೆಲ್ಲ ದೂರ ಸರಿಸಿ ಪಕ್ಕದಲ್ಲಿ ಕೂತು ಮನಕೆ ಮುದನೀಡುವುದು ಸಂಗೀತ. ಎಲ್ಲರ ಬದುಕಿನಲ್ಲಿ ಹಾಡು-ಸಂಗೀತಗಳಿಗೆ ಎಷ್ಟೊಂದು ಪ್ರಾಮುಖ್ಯತೆ ಇದೆ ಎಂದು ತೋರ್ಗೊಡಲು ಈ ಪೀಠಿಕೆ.

ಈಗ ಮುಖ್ಯ ವಿಷಯಕ್ಕೆ ಬರೋಣ. ಸಂಗೀತಾಭಿರುಚಿ ವ್ಯಕ್ತಿ, ವಯಸ್ಸು, ಪರಿಸರ, ಇತ್ಯಾದಿ ವಿಷಯಗಳಿಗನುಗುಣವಾಗಿ ಬದಲಾಗುತ್ತದೆ. ಹಲವರಿಗೆ ಸಿನಿಮಾ ಸಂಗೀತವೇ ಇಷ್ಟವಾದರೆ, ಕೆಲವರಿಗೆ ಬರೀ ಶಾಸ್ತ್ರೀಯ ಮತ್ತು ಕೆಲವರಿಗೆ ಭಾವಗೀತೆ, ಘಜಲ್ಗಳು ಇತ್ಯಾದಿ. ಈ ಭಾವಗೀತೆಗಳೊಂದಿಗೆ ಮೊದಲಿನಿಂದಲೂ ನಂಟು ಬೆಳೆಸಿಕೊಂಡು ಬಂದ ಕೇಳುಗ ವರ್ಗದವರಿದ್ದಾರೆ ಮತ್ತು ಹಲವರು ಈ ವರ್ಗಕ್ಕೆ ಸೇರುತ್ತಿದ್ದಾರೆ. ನಾನೂ ಈ ವರ್ಗದವರಲ್ಲೊಬ್ಬ. ಅಪರೂಪದ ಹಳೆಯ ಭಾವಗೀತೆಗಳನ್ನು ಅರಸುತ್ತಿದ್ದ ನಾನು ಮೊನ್ನೆ ಸಿ.ಡಿ. ಅಂಗಡಿಗೆ ಹೋಗಿ ವಿಚಾರಿಸಿದಾಗ ಅವರು ಕೆಲವು ಹಳೆಯ ಭಾವಗೀತೆಗಳ ಸಮೂಹವಿದ್ದ ಸಿ.ಡಿ.ಯನ್ನು ಕೊಟ್ಟರು. ಕನ್ನಡವನ್ನು ಉತ್ತುಂಗಕ್ಕೇರಿಸಿದ ನಮ್ಮೊಂದಿಗೆ ಪ್ರತ್ಯಕ್ಷವಾಗಿಲ್ಲದಿದ್ದರೂ ನಮ್ಮ ಮನದಲ್ಲಿ ಮನೆಮಾಡಿರುವ ಹಲವಾರು ಕವಿಗಳ, ಅವರ ಕವಿತೆಗಳಿಗೆ ಜೀವ ನೀಡಿದ ಸಂಗೀತಗಾರರ, ಇವರ ಭಾವಕ್ಕೆ ಉಸಿರು ತುಂಬಿದ ಗಾಯಕರ ಸಮೂಹವೇ ನನ್ನ ಅಂಗೈಯಲ್ಲಿತ್ತು. ದಟ್ಟಕಾಡಿನಲ್ಲೆಲ್ಲೋ ಅವಿತಿರುವ ಗುಹೆಯೊಂದರ ಅಂತರಾಳದಲ್ಲಿ ಹುದುಗಿಸಿಟ್ಟ ವಜ್ರಾಭರಣಗಳ ಪುಟ್ಟ ಪೆಟ್ಟಿಗೆಯಂತೆನಿಸುತ್ತಿತ್ತು ಆ ಧ್ವನಿಮುದ್ರಣ.

ಕೆಲವೊಮ್ಮೆ ಕಾಡುವ ಹಾಡುಗಳು ಕೈಗೆಟುಕಿದಾಗ ಒಂದು ಬಗೆಯ ಸಂತಸ ಮನದಲ್ಲಿ ಸಂಕ್ಷಿಪ್ತ ಜಾತ್ರೆಯನ್ನಾಚರಿಸುತ್ತದೆ. ಅದೇ ಸಂತಸದೊಡನೆ ಸಿ.ಡಿ.ಯನ್ನು ಕೊಳ್ಳಲು ಮುಂದಾದೆ. ಅಂಗಡಿಯವರು ‘೩೦ ರೂಪಾಯಿ ಕೊಡಿ ಸರ್’ ಎಂದರು. ಒಮ್ಮೆ ದಿಗಿಲಾಯಿತು. ಒಂದು ಕ್ಷಣ ಯಾವುದೋ ಬೇಸರ ಮನವ ಚಿವುಟಿದಂತಾಯಿತು. ೩೦ ರೂಪಾಯಿಗಳನ್ನು ಕೊಟ್ಟು ತಡ ಮಾಡದೆ ಮನೆಗೆ ಬಂದು ಹಾಡುಗಳನ್ನು ಆಲಿಸತೊಡಗಿದೆ. ಹಾಡುಗಳೇನೋ ಮುದ ನೀಡಿದವು. ಆದರೆ ಆ ಕ್ಷಣಕ್ಕಾದ ಬೇಸರಕ್ಕೆ ಕಾರಣ ಸಿಗಲಿಲ್ಲ. ಮತ್ತೆ ಆ ಸಿ.ಡಿ.ಯ ಲಕೋಟೆನ್ನು ಹಿಂತಿರುಗಿಸಿ ನೋಡಿದೆ. ಈ ಎಲ್ಲಾ ದಿಗ್ಗಜರು ಹಗಲಿರುಳು ಕುಳಿತು ಮಾಡಿದ ಮೂವತ್ತು ಹಾಡುಗಳ ಸಂಕ್ಷಿಪ್ತ ಮಾಹಿತಿಯನ್ನು ಅದರಲ್ಲಿ ಮುದ್ರಿಸಿದ್ದರು. ಇವೆಲ್ಲದರ ಕೆಳಗೆ ೩೦ ರೂಪಾಯಿ ಎಂದು ಬರೆದಿತ್ತು. ಇದರರ್ಥ ಒಂದು ಹಾಡಿಗೆ ಒಂದು ರೂಪಾಯಿ. ಯಾವುದೇ ಒಂದು ಕಲೆ ಸೃಷ್ಟಿಯಾಗಬೇಕಾದರೆ ಅದಕ್ಕೆ ಬೇಕಾಗುವ ಸಮಯ-ಪರಿಶ್ರಮವನ್ನು ಯಾರೂ ಊಹಿಸಲಸಾಧ್ಯ. ಅಂತಹದರಲ್ಲಿ ಇಂತಹ ಸ್ವರ್ಣಗೀತಗಳ ಬೆಲೆ ಕೇವಲ ಒಂದು ರೂಪಾಯಾ? ಅಥವ ಕನ್ನಡ ಹಾಡುಗಳ ಮೌಲ್ಯ ಇಷ್ಟೆಯಾ?

ಅಂಗಡಿಯಲ್ಲಿದ್ದ ೫ ಇಂಗ್ಲೀಷ್ ಗೀತೆಗಳ ಒಂದು ಸಿ.ಡಿ.ಯ ಬೆಲೆ ಇದರ ಹತ್ತರಷ್ಟಿತ್ತು. ಅದಕ್ಕೆ ಅಷ್ಟು ಬೆಲೆ ಇರಬಹುದೇನೋ ಸರಿ. ಆದರೆ ಸಹಸ್ರಾರು ವರ್ಷಗಳ ಇತಿಹಾಸ-ಶ್ರೀಮಂತಿಕೆಯನ್ನು ಹೊಂದಿದ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳಿಗೇಕೆ ಈ ಸ್ಥಾನ? ಬರೀ ದುಡ್ಡಿನಿಂದಲೇ ಕಲೆಗೆ ಬೆಲೆ ಕಟ್ಟಲಾಗುವುದಿಲ್ಲ ಎಂಬುದು ಹಲವರ ವಾದವಿರಬಹುದು. ಆದರೆ ಇವುಗಳನ್ನೇ ನಂಬಿ ಬದುಕುತ್ತಿರುವ ಎಷ್ಟೋ ಸಂಸಾರಗಳಿಗೆ ನಮ್ಮ-ನಿಮ್ಮ ವಿತಂಡವಾದ ಹೊಟ್ಟೆ ತುಂಬಿಸುವುದಿಲ್ಲ. ಇಂತಹ ಸಂದರ್ಭದ ನಡುವೆಯೂ, ಅಂತರ್ಜಾಲದಿಂದ ಹಾಡುಗಳನ್ನು ಕದಿಯುವವರ, ನಕಲಿ ಸಿ.ಡಿ.ಗಳನ್ನು ಮಾಡಿ ಸಂಸ್ಕೃತಿಯನ್ನು ಬೀದಿಗೆಳೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೂ ವಿಷಾದಕರ. ನಮ್ಮತನವನ್ನು ನಮ್ಮ ಸಂಸ್ಕೃತಿಯನ್ನು ಉಳಿಸಲು ನಾವು ಹೋರಾಟಗಳನ್ನೇ ನಡೆಸಬೇಕಂತಿಲ್ಲ. ರೂಪಾಯಿಗೊಂದು ಹಾಡನ್ನು ಕೊಂಡು ಕೇಳಿದರೂ ಸಾಕು. ಬೆಳೆಸಲಾಗದಿದ್ದರೂ ಸಂಸ್ಕೃತಿಯನ್ನು ಉಳಿಸಿಕೊಂಡಾದರೂ ಹೋಗಬಹುದು. ಅಲ್ವೇ?

ದೀಪಕ್ ಕೋರಡಿ
19-8-2012

Related Articles

Back to top button
Close
Close

Adblock Detected

Please consider supporting us by disabling your ad blocker