ವಿಚಾರಲಹರಿ

ಮನೆಯೇ ಮೊದಲ ಪಾಠ ಶಾಲೆ

ಚಿತ್ರ- ಲೇಖನ : ಆತ್ಮ.ಜಿ.ಎಸ್.
ಬೆಂಗಳೂರು

ಮಗಳು ಅವನಿ ಹಾಗೂ ಆದಿತ್ಯ ಸ್ನೇಹಿತರು. ಲಾಕ್ ಡೌನ್ ಸಡಿಲದಿಂದಾಗಿ ಮಕ್ಕಳನ್ನು ಪೋಷಕರು ಸ್ವಲ್ಪ ಹೊತ್ತು ಆಟ ಆಡಲು ಅನುಮತಿ ಕೊಟ್ಟಿದ್ದರು. ಮಕ್ಕಳಿಗೆ ಅದೇ ಖುಷಿ ಬಹಳ ದಿನಗಳಿಂದ ಒಬ್ಬರಿಗೊಬ್ಬರು ನೋಡಲು ಅವಕಾಶ ಇಲ್ಲದಿದ್ದರಿಂದ ಈಗ ಅವಕಾಶ ಸಿಕ್ಕಿದೆ. ಪರಸ್ಪರ ಕುಶಲೋಪರಿ ನಡೆಸುತ್ತಿದ್ದರು ಹೇಯ್ ಅವನಿ,ಲಾಕ್ ಡೌನ್ ಆದಾಗ ಮನೆಯಲ್ಲಿ ಹೇಗೆ ಸಮಯ ಕಳೆದೆ? ಆಗ ನಮ್ಮ ಶಾಲೆಯಲ್ಲಿ ಆನ್ ಲೈನ್ ಕ್ಲಾಸ್ ಮಾಡಿದ್ದರು. ನಿಮ್ಮ ಶಾಲೆಯಲ್ಲಿಯೂ ಮಾಡಿದ್ದರಾ? ಹೌದಾ ಆದಿತ್ಯ, ಕ್ಲಾಸ್ ಮಾಡುತ್ತಿದ್ದರಾ? ಮೇಡಂ ನೋಡೋಕೆ ಆಗುತ್ತಾ? ನಿನ್ನ ಗೆಳೆಯರು ಇರುತ್ತಾರಾ?ಎಲ್ಲರನ್ನೂ ನೋಡಬಹುದಾ? ನನ್ನ ಮಗಳಿಗೆ ಇದು ಹೊಸದು. ಹೌದು ಅವನಿ ಎಲ್ಲರೂ ಇರುತ್ತಾರೆ, ಎಲ್ಲರ ಹತ್ತಿರ ಮಾತನಾಡಿದೆ. ಯಾಕೆ ನಿಮ್ಮ ಶಾಲೆಯಲ್ಲಿ ಮಾಡಿಲ್ವಾ? ಆರಂಭದಲ್ಲಿ ಖುಷಿ ಆಯಿತು. ಸ್ವಲ್ಪ ದಿನ ಮಾಡಿದರು, ಈಗ ನಿಲ್ಲಿಸಿದ್ದಾರೆ.ಈ ವರ್ಷ ತರಗತಿ ಬೇಗ ಶುರು ಆಗಲ್ವಂತೆ, ಆನ್ ಲೈನ್ ಕ್ಲಾಸ್ ಮಾಡ್ತಾರಂತೆ ಅಮ್ಮ ಹೇಳುತ್ತಿದ್ದರು. ಏನಂದ್ರೂ ಶಾಲೆಗೆ ಹೋದಷ್ಠು ಖುಷಿ ಕೊಡಲ್ವೇ.. ಶಾಲೆ ಇರಬೇಕಪ್ಪಾ, ಹೇ ಇರಲಿ ಬನ್ನಿ ಆಟ ಆಡೋಣ, ಅಮ್ಮ ಬೇಗ ಬನ್ನಿ ಎಂದು ಹೇಳಿದ್ದಾರೆ.ನಿಮ್ಮ ಅಮ್ಮನೂ ಕರೆಯುತ್ತಾರೆ,ಅಷ್ಟರಲ್ಲಿ ಆಟ ಆಡೋಣ.ನಿನ್ನ ತಮ್ಮ ಅಥರ್ವ ಮಾಸ್ಕ ತೆಗೆದ,ಸರಿ ಹಾಕೇ ಅವನಿ, ಅವನೂ ಆಡಲು ಬರಲಿ,ಬನ್ನಿ ಸೇರಿ ಆಟ ಆಡೋಣ.

ಮಕ್ಕಳ ಕುತೂಹಲದ ಪ್ರಶ್ನೆ ಉತ್ತರ ಸರಣಿ ನಮ್ಮ ವಸತಿ ಸಮುಚ್ಚಯದ ಹೊರಜಗಲಿಯಲ್ಲಿ ನಡೆಯುತ್ತಿತ್ತು.ಮನೆಯೊಳಗೆ ದಿನಪತ್ರಿಕೆ ಓದುತ್ತಾ ಆಲಿಸುತ್ತಿದ್ದೆ.ಲಾಕ್ ಡೌನ್ ಎಂದು ಮನೆಯಿಂದ ಹೊರಗೆ ಆಡಲು ಹೋಗದೆ ಇದ್ದ ಮಕ್ಕಳಿಗೆ ಪೋಷಕರು ಆಡಲು ಬಿಟ್ಟಿದ್ದು ಇಂದು ಬಂಧನದಿಂದ ಬಿಡುಗಡೆ ಹೊಂದಿದವರಂತೆ ಕಂಡರು.ನಿತ್ಯ ಶಾಲೆಯಿಂದ ಬ್ಯಾಟು ಬಾಲು ಹಿಡಿದು ಆಡಲು ಹೋಗುತ್ತಿದ್ದ ಮಕ್ಕಳು ಇಂದು ಮುಖಗವಸು ಹಾಕಿ ಹೊರಟಿದ್ದು ನೋಡಿ ಪಾಪ ಅನ್ನಿಸಿದ್ದು ಸುಳ್ಳಲ್ಲ. ಇತರ ಶಾಲೆಯಂತೆ ಮಗಳ ಶಾಲೆಯಲ್ಲಿ ಅನ್‍ಲೈನ್ ಕ್ಲಾಸ್ ಆರಂಭಿಸಿದರೆ ಹೇಗೆ? ಎಂದು ಮನ ಚಿಂತನೆ ನಡೆಸುತ್ತಿತ್ತು. ನಾಲ್ಕನೇ ತರಗತಿ ಓದುವ ಮಗಳಿಗೆ ಆನ್ಲೈನ್ ಕ್ಲಾಸ್ ಪರವಾಗಿಲ್ಲ. ಕಳೆದ ವರ್ಷ ಈ ದಿನಗಳಲ್ಲಿ ಮಗ ಹಾಗೂ ಇದೇ ವಯಸ್ಸಿನ ಮಕ್ಕಳು ಇನ್ನೂ ನರ್ಸರಿ ಶಾಲೆ ಸೇರಿದ್ದು ನೆನಪಾಯಿತು.ಅಮ್ಮನ ಸೆರಗಿನಿಂದ ಶಾಲೆಗೆ ಹೋಗುವುದು ಎಂದರೆ ಮಕ್ಕಳಿಗೆ ಆತಂಕ ಅದರಂತೆಯೇ ತಾಯಿಗೂ. ಆರಂಭದಲ್ಲಿ ಎಲ್ಲರಂತೆಯೇ ಶಾಲೆಗೆ ಹೋಗಲು ತಕರಾರು ಮಾಡುತ್ತಿದ್ದ ಮಗ ವಾರ ಕಳೆಯುವುದರೊಳಗೆ ಶಾಲೆಯ ಪರಿಸರಕ್ಕೆ ಹೊಂದಿಕೊಂಡ. ಅದರ ನೆನೆಪೇ ಇನ್ನೂ ಮಾಸುವುದರೊಳಗೆ ಮನೆಯಲ್ಲಿಯೇ ಶಿಕ್ಷಣ ಕೊಡುವುದಕ್ಕೆ ಮತ್ತೆ ತಯಾರು ಮಾಡಬೇಕಲ್ಲಾ ಎಂಬ ಸಣ್ಣ ಆತಂಕ ಮನಸ್ಸಿಗೆ ಬಂದು ದಿನಪತ್ರಿಕೆ ಗಮನವಿಟ್ಟು ಓದಲಾಗದೆ ಎತ್ತಿಟ್ಟೆ.

ಜೂನ್ ತಿಂಗಳೆಂದರೆ ಒಂದು ರೀತಿ ಬದುಕಿಗೆ ಚೈತನ್ಯ ತುಂಬುವ ದಿನಗಳು. ಬೇಸಿಗೆಯ ಬಿರು ಬಿಸಿಲು ಕಳೆದು ಮಳೆಯ ಹನಿ ಧರೆಗಿಳಿದು, ಭೂಮಿಯ ಒಡಲನ್ನು ಹಸಿರುಗೊಳಿಸುವ ದಿನಗಳು. ಫಸಲನ್ನು ಬಿತ್ತಿ ಬೆಳೆಯುವ ರೈತ ಒಂದೆಡೆ, ಮತ್ತೊಂದೆಡೆ ಪಾಟಿ ಚೀಲ ಹಿಡಿದು ಔಪಚಾರಿಕ ಶಿಕ್ಷಣ ಪಡೆಯಲು ಶಾಲಾ ಮೆಟ್ಟಿಲೇರುವ ಮುಗ್ಧ ಮಕ್ಕಳು. ಭಾರತೀಯ ಪರಂಪರೆಯಲ್ಲಿ ಶಾಲೆ ಒಂದು ರೀತಿಯ ಭಾವನಾತ್ಮಕ ಸಂಬಂಧ. ಮಕ್ಕಳು ಮನೆಯ ಪರಿಸರದಿಂದ ಮೊದಲ ಬಾರಿಗೆ ಹೊಸ ಪ್ರಪಂಚವನ್ನು ನೋಡಲು ಹತ್ತುವ ಮೊದಲ ಮೆಟ್ಟಿಲು ಹಾಗೆಯೇ ಸಣ್ಣ ಬೆಳಕಿನ ಕಿಂಡಿ. ಸದಾ ತಾಯಿಯ ಹಿಂದೆ ಮುಂದೆ ತಿರುಗುವ ಮಕ್ಕಳು ಆರಂಭದಲ್ಲಿ ಶಾಲೆಗೆ ಹೊಂದಿಕೊಳ್ಳಲು ಕಷ್ಟಪಟ್ಟರೂ ದಿನ ಕಳೆದಂತೆ ಶಿಕ್ಷಕಿ ತಾಯಿಯ ಹಾಗೆ ಆಗುತ್ತಾರೆ. ಆರಂಭದ ಈ ತಳಹದಿ ವ್ಯಕ್ತಿಯ ಬದುಕಿಗೆ ಭದ್ರ ಬುನಾದಿ.

ಸಮಾಜದಲ್ಲಿ ಎಲ್ಲರ ಬದುಕು ಈ ವರ್ಷ ಬದಲಾವಣೆಗೆ ಒಳಪಟ್ಟಿದೆ. ಅಂತೆಯೇ ಮಕ್ಕಳು ಹಾಗೂ ಅವರ ಶಿಕ್ಷಣ ವ್ಯವಸ್ಥೆ. ಮೊದಲಿನ ಗುರುಕುಲ ಪದ್ದತಿ ಈಗ ಇಲ್ಲದಿದ್ದರೂ ಒಂದು ರೀತಿಯ ಮನೆ ಶಿಕ್ಷಣಕ್ಕೆ ಸಮಾಜ ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಆಧುನಿಕ ಪರಿಕರಗಳಾದ ಮೊಬೈಲ್,ಲ್ಯಾಪ್ ಟಾಪ್,ಜೂಮ್ ಮುಂತಾದ ದೂರ ಸಂಪರ್ಕದ ಉಪಯೋಗ ಪಡೆದು ಶಿಕ್ಷಣ ಪಡೆಯುವುದು ಆನ್ ಲೈನ್ ಶಿಕ್ಷಣ. ಮಕ್ಕಳು ಶಾಲಾ ಶಿಕ್ಷಣದಿಂದ ವಂಚನೆಗೆ ಒಳಗಾಗದಿರಲಿ ಎಂದು ಮಾಡಿಕೊಂಡ ಬದಲಿ ವ್ಯವಸ್ಥೆ ಎಂದರೆ ತಪ್ಪಾಗಲಾರದು. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸರಿ,ನರ್ಸರಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣವೇ? ಸಹಜವಾಗಿ ಎಲ್ಲೆಡೆ ಆತಂಕ ಹಾಗೂ ನಂಬಲು ಅಸಾಧ್ಯವಾದ ವಿಚಾರ. ಅದ್ದರಿಂದಲೇ ಇಂದು ಕೆಲವು ಶಾಲೆಗಳಲ್ಲಿ ಹೋಂ ಸ್ಕೂಲಿಂಗ್ ಬಗ್ಗೆ ವಿಚಾರ ಚಾಲನೆಯಲ್ಲಿದೆ. ಪೋಷಕರು ಮಕ್ಕಳಿಗೆ ಬೇಕಾದ ಕೆಲವು ಪ್ರಾಥಮಿಕ ವಿಚಾರ ಕಲಿತು ಮಕ್ಕಳಿಗೆ ಮನನ ಮಾಡುವುದು.

ಪೋಷಕರ ಪಾತ್ರ:

1 ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುವುದು ಪೋಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಬೆರೆತಾಗ ಮಾತ್ರ ಸಾಧ್ಯ. ಇಂದಿನ ಧಾವಂತದ ಯುಗದಲ್ಲಿ ಮಕ್ಕಳ ಜೊತೆಂiÀsುಲ್ಲಿ ಕೂತು ಊಟ ಮಾಡಲು ವಾರಾಂತ್ಯಕ್ಕೆ ಕಾಯುವ ಮಂದಿ ಎಷ್ಟೋ. ಊಟ ಇಲ್ಲಿ ಕೇವಲ ಹೊಟ್ಟೆ ತುಂಬುವ ವಿಚಾರವಾಗಿರದೆ ಇಬ್ಬರ ನಡುವೆ ಬಿಡಿಸಲಾರದ ಬಂದ ಏರ್ಪಡಿಸುತ್ತದೆ. ಆದ್ದರಿಂದಲೇ ಹಿಂದಿನ ಕಾಲದಲ್ಲಿ ಎಷ್ಟೇ ಒತ್ತಡವಿದ್ದರೂ ದಿನದ ಒಂದು ಹೊತ್ತಾದರೂ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಪದ್ದತಿ ಇತ್ತು.

2.ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಾಗ ಮಾತ್ರ ಸಮತೋಲನ ಬೆಳವಣಿಗೆ ಸಾಧ್ಯ. ಶಾಲೆಯಲ್ಲಿ ಕಲಿತ ಎಷ್ಟೋ ವಿಚಾರಗಳಿಗೆ ಮನೆ ಒಂದು ರೀತಿಯ ಪ್ರಯೋಗ ಶಾಲೆ.ಕಲಿಕೆಯಲ್ಲಿ ಮಕ್ಕಳಿಗೆ ಆಯ್ಕೆ ಮಾಡಲು ಅವಕಾಶ ನೀಡುವುದರಿಂದ ಮಕ್ಕಳ ಗ್ರಹಿಕೆ ಸುಲಭವಾಗಿ ಆಗುತ್ತದೆ.

ಉದಾ:-ಬಣ್ಣ ತುಂಬುವಲ್ಲಿ ಮಕ್ಕಳಿಗೆ ಬಣ್ಣದ ಆಯ್ಕೆಗೆ ಬಿಡುವುದು.

3.ಮಕ್ಕಳನ್ನು ಮುಕ್ತ ಮನದಿಂದ ಪ್ರಶಂಸಿಸುವುದು. ಪ್ರಪಂಚವನ್ನು ಸದಾ ಕುತೂಹಲದಿಂದ ನೋಡುವ ಮಕ್ಕಳಲ್ಲಿ ತಪ್ಪು ಸಾಮಾನ್ಯ.ಸಣ್ಣ ಪುಟ್ಟ ವಿಚಾರಕ್ಕೆ ಗದರದೇ ಮುಕ್ತವಾಗಿ ಪ್ರೋತ್ಸಾಹ ನೀಡಬೇಕು.ಇದು ಮಕ್ಕಳಲ್ಲಿ ವಿಶ್ವಾಸ ಹೆಚ್ಚಿಸುತ್ತದೆ.ಸುಲಭವಾಗಿ ಕಲಿಯಲು ಯಾ ಬರೆಯಲು ಸಾಧ್ಯವಾಗದಿದ್ದರೂ ಮತ್ತೆ ಪ್ರಯತ್ನಿಸಿ ಕಲಿಯುವ ಉತ್ಸಾಹ ತೋರುತ್ತಾರೆ.

4.ಉತ್ತಮ ಶ್ರೋತೃ ;-ಸದಾ ಕುತೂಹಲದಲ್ಲಿ ಪ್ರಪಂಚವನ್ನು ನೋಡುವ ಮಕ್ಕಳಲ್ಲಿ ಪ್ರಶ್ನೆಗಳು ಸಹಜವಾಗಿ ಜಾಸ್ತಿ.ಮಕ್ಕಳ ಮಾತುಗಳನ್ನು ಗಮನವಿಟ್ಟು ಕೇಳಿ.ಇದರಿಂದ ಮಕ್ಕಳ ಮನಸ್ಥಿತಿ ಅರಿವಿಗೆ ಬರುತ್ತದೆ. ಇದರಂತೆ ಪೋಷಕರು ಮಕ್ಕಳನ್ನು ಮಾತನಾಡಿಸಿ ಅವರ ಮಾತುಗಳನ್ನು ಆಲಿಸುವುದರಿಂದ ಮಕ್ಕಳಲ್ಲಿರುವ ವಿಚಾರಧಾರೆ ಹೊರಬರಲು ಸಾದ್ಯವಾಗುತ್ತದೆ.

ಶಿಕ್ಷಕರ ಪಾತ್ರ:-

ನಮ್ಮ ಶಿಕ್ಷಣ ಪದ್ದತಿಯಲ್ಲಿ ಮಕ್ಕಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಗುರು ಶಿಷ್ಯರ ಸಂಬಂಧ ಕೇವಲ ಶಾಲೆಗೆ ಮಾತ್ರ ಮೀಸಲಾಗದೆ ಬದುಕಿನ ಕೊನೆಯ ಹಂತದವರೆಗೆ ಮಾರ್ಗದರ್ಶನ ಮಾಡುವ ಶಿಕ್ಷಕರನ್ನು ನೋಡುತ್ತೇವೆ. ಅಂತಹದರಲ್ಲಿ ಶಾಲಾ ಆರಂಭದ ಶಿಕ್ಷಕಿ ತಾಯಿಯ ಹಾಗೆ ಮಕ್ಕಳ ಕಣ್ಣಲ್ಲಿ. ಮಕ್ಕಳು ಆಡಿ ನಲಿದು ಶಾಲೆಯಲ್ಲಿ ಇರಬೇಕಾದ ಇಂದಿನ ದಿನಗಳಲ್ಲಿ ಮನೆಯಲ್ಲಿ ಇರುವುದು ಒಂದು ರೀತಿಯ ಉಗುಳಲಾರದ ಬಿಸಿ ತುಪ್ಪ.

1. ಮನೆಯಲ್ಲಿ ಶಿಕ್ಷಣ ಕೊಡುವುದು ಪೋಷಕರಿಗೆ ಒಂದು ರೀತಿಯ ಸವಾಲೇ ಸರಿ. sಶಾಲೆಯಲ್ಲಿ ಹೊಂದಿಕೊಳ್ಳುವ ಮಕ್ಕಳಿಗೆ ಮನೆ ಎಂದರೆ ಕಲಿಯುವ ಸ್ಥಳವಲ್ಲ ಎಂಬ ಭಾವನೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಮಾರ್ಗದರ್ಶನ ಮುಖ್ಯ. ಆದ್ದರಿಂದಲೇ ಕೆಲವು ಶಾಲೆಗಳಲ್ಲಿ ಪೋಷಕರಿಗೆ ಮಾರ್ಗದರ್ಶನ ಮಾಡಿದ್ದಾರೆ.ಪೋಷಕರ ಮತ್ತು ಮಕ್ಕಳ ನಡುವಿನ ಬಾಂದವ್ಯವನ್ನು ಶಿಕ್ಷಣ ನೀಡುವ ಹಿನ್ನಲೆಯಲ್ಲಿ ಸಹಾಯವಾಗುತ್ತದೆ
.
2.ನಿಗದಿತ ವಿಚಾರದ ಬಗ್ಗೆ ಪೋಷಕರಿಗೆ ಮನನ ಮಾಡುವುದು. ಉದಾ;ನಿಗದಿತ ಸಮಯದಲ್ಲಿ ಕಥೆ ಹೇಳುವುದು.ಹಣ್ಣು,ತರಕಾರಿ ಪರಿಚಯ ಇತ್ಯಾದಿ.

3.ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು. ಈಗಿನ ಸಂಪರ್ಕ ಕ್ರಾಂತಿಯಿಂದ ಎಲ್ಲವೂ ಸುಲಭ ಸಾದ್ಯ, ಮಕ್ಕಳು ಮಾಡಬೇಕಾದ ಚಟುವಟಿಕೆಗಳ ಕುರಿತು ದ್ವನಿ ಮುದ್ರಿಕೆ ಕಳುಹಿಸುವುದು,ವಾರಕ್ಕೊಮ್ಮೆ ಮಕ್ಕಳೊಂದಿಗೆ ದೂರವಾಣಿಯಲ್ಲಿ ಮಾತನಾಡುವುದು ಇತ್ಯಾದಿ..ಇದರಿಂದ ಮಕ್ಕಳಿಗೆ ಶಿಕ್ಷಕರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಬರುತ್ತದೆ.

4.ಶಾಲೆಯಲ್ಲಿ ಇರುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯನ್ನು ಮಕ್ಕಳಿಗೆ ಮಾಡಿಸಲು ಪೋಷಕರಿಗೆ ವಿಚಾರ ವಿನಿಮಯ ಮಾಡುವುದು.ಶಿಕ್ಷಕರಿಗೂ ಮಕ್ಕಳಿಲ್ಲದೆ ಪಾಠ ಮಾಡುವುದು ತೀರ ಉತ್ಸಾಹ ತರುವ ವಿಚಾರವಲ್ಲ.ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳು ಚಟುವಟಿಕೆಯಿಂದ ಇರಲಿ ಎಂಬ ಉದ್ದೇಶವೇ ಹೊರತು,ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುತ್ತೇವೆ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಮಾಡಿಕೊಂಡಿರುವ ತಾತ್ಕಾಲಿಕ ವ್ಯವಸ್ಥೆ ಅಷ್ಟೆ.ಮಕ್ಕಳು ಶಾಲೆಯಲ್ಲಿ ಕುಳಿತಂತೆ ಒಂದೆಡೆ ಮನೆಯಲ್ಲಿ ಕೂರುವುದಿಲ್ಲ.ಪೋಷಕರಿಗೆ ಇದೂ ಒಂದು ಸವಾಲಿನ ವಿಚಾರವೇ ಸರಿ.

ಆಧುನಿಕ ಯುಗದಲ್ಲಿ ನರ್ಸರಿ ಶಾಲೆಗಳು ಔಪಚಾರಿಕ ಶಿಕóಣಕ್ಕೆ ತಯಾರಿ ನಡೆಸಲು ಸೂಕ್ತ ವೇದಿಕೆ ಎಂದರೆ ತಪ್ಪಲ್ಲ.ಮೊದಲೆಲ್ಲಾ ಮಕ್ಕಳಿಗೆ ಆರು ವರ್ಷ ಆಗುವತನಕ ಶಾಲೆಗೆ ಪ್ರವೇಶ ಮಾಡುತ್ತಿರಲಿಲ್ಲ.ಪಾಶ್ಚಾತ್ಯ ಕಲ್ಪನೆಯೋ,ಬದಲಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪೋಷಕರಿಬ್ಬರೂ ಹೊರಗೆ ದುಡಿಯುವ ಪರಿಸ್ಥಿತಿ,ವಿಭಕ್ತ ಕುಟುಂಬದಿಂದ ಮಕ್ಕಳನ್ನು ಒಬ್ಬರೇ ಬಿಡಲು ಸಾದ್ಯವಾಗದೇ ಇರುವುದು ಹಂತ ಹಂತವಾಗಿ ನರ್ಸರಿ ಶಿಕ್ಷಣ ಅನಿವಾರ್ಯ ಎಂಬಂತೆ ಅಗಿದೆ. ಪ್ರಚಲಿತ ವಿದ್ಯಮಾನÀದಲ್ಲಿ ದೊಡ್ಡವರು ಅನಿವಾರ್ಯ ಅಲ್ಲದಿದ್ದಲ್ಲಿ ಮನೆಯಲ್ಲಿ ಇರುವುದು ಸೂಕ್ತ.ಹೀಗಿರುವಾಗ ಮಕ್ಕಳನ್ನು ಶಾಲೆಗೆ ಕಳುಹಿಸುವ ಧೈರ್ಯ ಮಾಡುವುದು ದೂರದ ಮಾತೇ ಸರಿ.ಭಾರತೀಯರ ಮನೋಭಾವ ಶಾಲೆ ಎಂದರೆ ಕೇವಲ ಓದು ,ಬರೆಯುವುದು ಅಲ್ಲ. ಮಕ್ಕಳು ತನ್ನ ಓರಗೆಯ ಮಕ್ಕಳ ಜೊತೆ ಆಡಿ-ನಲಿಯಲಿ, ದೈಹಿಕ ,ಮಾನಸಿಕ ಬೆಳವಣಿಗೆಗೆ ಶಾಲೆ ಪೂರಕವಾಗಿರಲಿ ಎಂಬುದು. ಹಾಗೆಂದು ಈಗಿನ ಪರಿಸ್ಥಿತಿಯಲ್ಲಿ ಶಾಲೆಗೆ ಕಳುಹಿಸಲು ಆಗದು. ಹೋಂ ಸ್ಕೂಲಿಂಗ್ ತನ್ನದೇ ಆದ ಇತಿಮಿತಿಗಳಿದ್ದರೂ ಈಗಿರುವ ಪರಿಸ್ಥಿತಿಗೆ ತಾತ್ಕಾಲಿಕ ವ್ಯವಸ್ಥೆ ಎಂದು ಪೋಷಕರು ಒಪ್ಪಿಕೊಂಡರೆ ಅನಗತ್ಯ ಗೊಂದಲ ದೂರವಾದಂತೆಯೇ ಸರಿ .”ಮನೆಯೇ ಮೊದಲ ಪಾಠಶಾಲೆ,ಜನನಿ ತಾನೆ ಮೊದಲ ಗುರುವು” ಇಂದಿನ ಅಗತ್ಯ. ಹಾಗೂ ಅವಶ್ಯಕತೆಯೂ ಹೌದು. ಹೊಂದಿಕೊಂಡು ಹೋಗುವ ಗುಣ ಭಾರತೀಯರಲ್ಲಿ ರಕ್ತಗತವಾಗಿ ಬಂದಿದೆ. ಹಾಗಾಗಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವ್ಯವಸ್ಥೆಗೆ ಸಕಾರಾತ್ಮಕವಾಗಿ ಹೆಜ್ಜೆ ಹಾಕೋಣ.

ಚಿತ್ರ- ಲೇಖನ :- ಆತ್ಮ.ಜಿ.ಎಸ್.
ಬೆಂಗಳೂರು.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.