ಲೇಖನ : ಆತ್ಮ.ಜಿ.ಎಸ್
ಚಿತ್ರ : ಅರುಂಧತಿ ಎಸ್
ಅಮ್ಮಾ ಬಾಲ್ಕನಿಯಲ್ಲಿ ಯಾವುದೋ ಹಕ್ಕಿ ಕೂಗುತ್ತಿದೆ ನೋಡು ಬಾ ಎಂದು ಅಲ್ಲಿಯೇ ಆಡುತ್ತಿದ್ದ ಮಗ ಓಡಿ ಬಂದು ಹೇಳಿದ. ಒಳಮನೆಯಲ್ಲಿದ್ದ ನನಗೆ ಕೂಗು ಕೇಳಿಸಿದರೂ ಅದರ ಧ್ವನಿ ಗುರುತಿಸಲಾಗಲಿಲ್ಲ. ನೋಡೋಣ ಎನ್ನುವಷ್ಟರಲ್ಲಿ ಹಕ್ಕಿ ಹಾರಿ ಹೋಗಿತ್ತು. ಎರೆಡು ದಿನಗಳ ನಂತರ ಅದೇ ಹಕ್ಕಿ ತಂತಿಯ ಮೇಲೆ ಕುಳಿತಿತ್ತು. ಮೈನ ಹಕ್ಕಿಯ ಹಾಗೆ ದೊಡ್ಡದು, ಗುಬ್ಬಿಯ ಹಾಗೆ ಚಿಕ್ಕದು ಆಗಿರದ ಚಂದದ ಹಕ್ಕಿಯ ಮಾಹಿತಿ ಹುಡುಕಿದಾಗ ತಿಳಿಯಿತು ಬುಲ್ ಬುಲ್ ಎಂದು.
ನಮ್ಮ ಮನೆಯಲ್ಲಿ ಇರುವ ”ರೆಡ್ ವಿಸ್ಕರ್ಡ” ಬುಲ್ ಬುಲ್ ”ಪೆಸೆರಿಯನ್” ವರ್ಗಕ್ಕೆ ಸೇರುತ್ತದೆ. ಈ ಹಕ್ಕಿಯ ಕಾಲಿನ ಮೂರು ಬೆರಳುಗಳು ಮುಂದೆ ಚಾಚಿದ್ದು,ಇನ್ನೊಂದು ಹಿಂಭಾಗದಲ್ಲಿ ಇರುತ್ತದೆ. ಇದು ಗಿಡದ ಮೇಲೆ ಕಾಲೂರಿ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ. ಸಣ್ಣ ಗಾತ್ರದ ರೆಕ್ಕೆ ಹೊಂದಿದ್ದು ವೃತ್ತಾಕಾರದ ಚೂಪಾದ ರೀತಿಯ ಬಾಲ ಹೊಂದಿದೆ. ಕಂದು ಬಣ್ಣದ ಬೆನ್ನು,ಹೊಟ್ಟೆಯ ತಳ ಭಾಗ ಬಿಳಿ ಬಣ್ಣ. ಕುತ್ತಿಗೆಯ ಸುತ್ತ ಇರುವ ಕೆಂಪು ಬಣ್ಣ ಹಕ್ಕಿಯ ಅಂದವನ್ನು ಹೆಚ್ಚಿಸಿದೆ. ತಲೆಯ ಮೇಲಿರುವ ಕಿರೀಟದಂತಹ ಜುಟ್ಟು ಆಚೆ ಈಚೆ ತಿರುಗಾಡುವಾಗ ಹಕ್ಕಿಗೆ ಜಂಬದ ಆಯಾಮ ಕಲ್ಪಿಸುವುದು.
ಕನ್ನಡದಲ್ಲಿ ಕೆಮ್ಮೀಸೆ ಪಿಕಳಾರ ಎಂದು ಕರೆದರೆ ಕೊಡಗು ಪ್ರಾಂತ್ಯದಲ್ಲಿ ಕೊಟ್ರುಮಡ್ಚ ಎಂದೇ ಪ್ರತೀತಿ. ಹಳ್ಳಿ, ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಹಕ್ಕಿ ಕೆರೆ ದಂಡೆ ಅಂಚು,ಸಣ್ಣ ಪುಟ್ಟ ಗಿಡಗಳು,ಕುರುಚಲು ಗಿಡಗಳ ಪೊದೆಯಲ್ಲಿ ಗೂಡು ಕಟ್ಟುತ್ತದೆ. ಗೂಡು ನೋಡಲು ಹೆಚ್ಚು ಆಕರ್ಷಕವಲ್ಲದಿದ್ದರೂ ಗೂಡು ಕಟ್ಟುವ ಕಾರ್ಯವೈಖರಿ
ಬೆರಗು ಮೂಡಿಸುವಂತದ್ದು.
ಈ ಹಿಂದೆ ಇದೇ ಹಕ್ಕಿ ನಮ್ಮ ಬಾಲ್ಕನಿಗೆ ಬಂದಿತ್ತು. ಡು ಕಟ್ಟಲು ಸಿದ್ಧತೆಮಾಡಿ ನಾಪತ್ತೆ.ಹೂವಿನ ಕುಂಡಗಳಿಗೆ ನೀರುಹಾಕುವಾಗ ಗಮನಿಸುತ್ತಲೇ ಇದ್ದೆ.ಆದರೆ ಹಲವು ದಿನಗಳವರೆಗೂ ಬಾರದಿದ್ದನ್ನು ನೋಡಿಮತ್ತೆ ಬರಲಾರದೆಂದು ಅಲ್ಪ ಸ್ವಲ್ಪ ಇದ್ದ ಕಡ್ಡಿಗಳನ್ನು ತೆಗೆದು ಹಾಕಿದೆ.ತಾನು ಮೊದಲು ಆಯ್ದ ಜಾಗವೇ ಸೂಕ್ತ ಎನಿಸಿರಬೇಕು ಮತ್ತೆ ಅದೇ ಜಾಗದಲ್ಲಿ ಗೂಡು ಕಟ್ಟಲು ಸಿದ್ದತೆ ಮಾಡಿತು.ಹೆಚ್ಚಾಗಿ ಬೆಳಗಿನ ವೇಳೆಯಲ್ಲಿ ಚುರುಕು ಕಾರ್ಯಾಚರಣೆ.ಪುಟ್ಟ ಕೊಕ್ಕಿನಲ್ಲಿ ಸಣ್ಣ ಪೇಪರ್ ಚೂರು ಹಾಗೂ ಪ್ಲಾಸ್ಟಿಕ್ ಹಾಳೆಯನ್ನು ಗೂಡಿನ ತಳಹದಿಯಾಗಿ ಮಾಡಿದೆ.ಸುತ್ತಲೂ ಗೂಡು ಹೆಣೆದಿದ್ದು ಸಣ್ಣ ಕಡ್ಡಿ,ತೆಂಗಿನ ನಾರು..ಅದೆಲ್ಲಿಂದನೋ ಹಸಿ ಕಡ್ಡಿ ಹಿಡುಕಿ ತರುತ್ತಿತ್ತು.ಪ್ರತಿ ದಿನ ಗೂಡು ಕಟ್ಟುವಾಗ ತಾನು ಅದರ ಮೇಲೆ ಕುಳಿತು ಮೊಟ್ಟೆ ಇಟ್ಟುಕಾವು ಕೊಡಲು ಜಾಗ ಸಾಕಾಗುತ್ತದೆಯೇ ಎಂದು ಪರೀಕ್ಷೆ ಮಾಡುತ್ತಿತ್ತು.
ಸದಾ ಗಂಡು ಹೆಣ್ಣು ಜೊತೆಯಲ್ಲಿಯೇ ಇರುತ್ತವೆ.ಆರಂಭದಲ್ಲಿ ನಾವು ಮನೆಯವರುಇದ್ದರೆ ತಿರುಗಿ ಹೋಗುತ್ತಿತ್ತು.ದಿನ ಕಳೆದಂತೆ ನಮ್ಮ ಇರವುಅದಕ್ಕೆ ತೊಂದರೆ ಇಲ್ಲ ಭಾವ ಬಂದಿತೇನೋ ನಿರ್ಭೀತಿಯಿಂದ ಓಡಾಡಲು ಶುರು ಮಾಡಿತು.ಗೂಡಿನಲ್ಲಿ ತಾಯಿ ಹಕ್ಕಿ ತನ್ನ ಒಡಲಲ್ಲಿ ಮೊಟ್ಟೆಗೆ ಕಾವು ಕೊಡುವುದು ನೋಡುವುದೇ ಅಂದ.ಕಾವು ಕೊಡುವಾಗ ತನ್ನ ರೆಕ್ಕೆಯನ್ನು ಮುಳ್ಳು ಹಂದಿಯ ಹಾಗೆ ಸೆಟೆದು ಕುಳಿತಿರುತ್ತದೆ.ಸದಾ ಸದ್ದು ಮಾಡಿ ತಮ್ಮ ಅಸ್ತಿತ್ವವನ್ನು ಸಾರುತ್ತಿದ್ದಜೋಡಿ ಹಕ್ಕಿಗಳದ್ದು ಈಗ ಮೌನ ಸಂಭಾಷಣೆ.ಆಗೊಮ್ಮೆ ಈಗೊಮ್ಮೆ ತಾಯಿ ಹಕ್ಕಿ ಗೂಡು ಬಿಟ್ಟು ಆಚೆ ಹೋಗುವಾಗ ಗಂಡು ಹಕ್ಕಿಯ ಕಾವಲು.
ನನ್ನ ಚಿಕ್ಕ ಮಕ್ಕಳಿಬ್ಬರಿಗೂ ಹಕ್ಕಿ ಜೊತೆಯೇ ಸಂಭಾಷಣೆ.ಸದಾ ಆಟ, ಮಾತು ಇದರಲ್ಲೇ ಇರುವ ಮಗಳು ಗೆಳತಿಯ ಹಾಗೆ ಅದರ ಹತ್ತಿರ ಮಾತನಾಡುತ್ತಾಳೆ.ಅದೇನಾದರೂ ಉತ್ತರ ಕೊಡುತ್ತಿದ್ದರೆ ಇನ್ನೆಷ್ಟು ಮಾತನಾಡುತ್ತಿದ್ದಳೋ ಕಲ್ಪನೆಗೂ ಮೀರಿದ್ದು.ಕಳೆದ ವರ್ಷ ಇದೇ ಸಮಯಕ್ಕೆ ಬಾಲ್ಕನಿಯಲ್ಲಿ ಜೇನು ಗೂಡು ಕಟ್ಟಿತ್ತು.ಮಗ ಚಿಕ್ಕವನು,ಆಡುವಾಗ ಏನಾದರೂ ಹೆಚ್ಚು ಕಡಿಮೆಯಾದರೆ ಎಂಬ ಭಯ.ಕ್ರಮೇಣ ಹೊಂದಿಕೆ ಆಗಿ ಅದು ತತ್ತಿ ಕಟ್ಟಿ ತುಪ್ಪಮಾಡಿ ಹಾರಿ ಹೋಗಿತ್ತು.ಈ ವರುಷ ಕೊರೋನಾದಿಂದಾಗಿ ಒಂದು ರೀತಿ ಆತಂಕ ಮನೆಮಾಡಿದ್ದರೂ ಹಕ್ಕಿಯ ಸಂಸಾರ ಬಂದುದು ನಮ್ಮಲ್ಲಿ ಜೇವನೋತ್ಸಾಹ ತುಂಬಿದೆ.ಪ್ರಕ್ರತಿ ಯಾವುದೇ ಬಂಧಗಳಿಲ್ಲದೆ ಅರಳುವ ಪರಿ ಸೋಜಿಗ.ಸಣ್ಣ ಕಡ್ಡಿ ತಂದು ಗೂಡು ಕಟ್ಟಿ ಹಾರಲು ಕಲಿಸಿದ ನಂತರವೇ ತಾಯಿ ಹಕ್ಕಿಗೆ ಮುಕ್ತಿ ಹಾಗೂ ಪುಟ್ಟ ಮರಿಗೆ ಬಾನೆತ್ತರಕ್ಕೆ ಹಾರುವ ಸ್ವಾತಂತ್ರ್ಯ.ಮಾನವ ತನ್ನದೇ ಪರಿಧಿಯಲ್ಲಿ ಸದಾ ಬಂಧಿ.ಎಂದಿಗೂ ಮುಗಿಯದ ಭವ ಬಂಧನಗಳು ಮನದಲ್ಲೂ ಹಾಗೂ ಕಾರ್ಯಗಳಲ್ಲೂ….
ಲೇಖನ : ಆತ್ಮ.ಜಿ.ಎಸ್
ಚಿತ್ರ : ಅರುಂಧತಿ ಎಸ್