ಬರಹ:- ಆತ್ಮ.ಜಿ.ಎಸ್
ಬೆಂಗಳೂರು
ಅಂದು ಅಪ್ಪ ಬೆಂಗಳೂರಿನಿಂದ ಸಾಗರಕ್ಕೆ ರಾತ್ರಿ ರೈಲಿಗೆ ಹೊರಟಿದ್ದರು.ಪ್ರತಿ ಸಲ ನನ್ನ ಪತಿ ಗಣಪತಿ ಅವರು ಕಾರ್ಯ ನಿಮಿತ್ತ ವಿದೇಶ ಪ್ರಯಾಣ ಮಾಡಿದಾಗ ಅಪ್ಪ ನನ್ನೊಂದಿಗೆ ಇರುತ್ತಿದ್ದರು.ಈ ಬಾರಿ ಎಂದಿನಂತೆ ನಾನು ಮಗಳು ಇಬ್ಬರೇ ಅಲ್ಲದೆ ನಾನು ಗರ್ಭಿಣಿ ಆಗಿದ್ದರಿಂದ ಪ್ರತಿ ಸಲಕ್ಕಿಂತ ಹೆಚ್ಚಿನ ಜವಾಬ್ದಾರಿ ಮನೆಯವರ ಮೇಲಿತ್ತು.ಆದರೂ ಕಾರ್ಯ ಒತ್ತಡ ಬೇರೆ ದಾರಿಯಿಲ್ಲದೆ ಅಪ್ಪನ ಉಪಸ್ಥಿತಿಯಲ್ಲಿ ಇವರು ವಿದೇಶಕ್ಕೆ ತೆರಳಿದ್ದರು. ಸ್ವದೇಶಕ್ಕೆ ಅಳಿಯ ಹಿಂತಿರುಗಿ ಬಂದು ಎರಡು ದಿನ ಆಗಿದೆ ಊರಿಗೆ ಹೋಗಿ ಬೇಗ ಅಮ್ಮನನ್ನು ಕಳುಹಿಸುತ್ತೇನೆ ಎಂದು ಅಪ್ಪ ಆ ದಿನ ಊರಿಗೆ ಮರು ಪ್ರಯಾಣಿಸಲು ರೈಲು ಹತ್ತಿದ್ದರು. ಮಗಳಿನ್ನು ಚಿಕ್ಕವಳು ಬೇಗ ಮಲಗಿಸಿ,ನಾನು ಮಲಗಿದರೆ ಎಂದಿನಂತೆ ನಿದ್ದೆ ಬರಲಿಲ್ಲ.ಏನೋ ಅವ್ಯಕ್ತ ಆತಂಕ ಒಂದು ರೀತಿಯ ಚಡಪಡಿಕೆ.ಆಷಾಡದ ಗಾಳಿ ಹೊರಗೆ ಬೀಸುತ್ತಿದೆ.ಜೊತೆಗೆ ರಾತ್ರಿಯಿಡೀ ಮಳೆ ಸುರಿಯುತ್ತಿದೆ. ಕಣ್ಣಿಗೆ ನಿದ್ದೆ ಹತ್ತಲೇ ಇಲ್ಲ. ಬೆಳಗಿನ ಜಾವ ಗಂಡನನ್ನು ಎಬ್ಬಿಸಿ ಸ್ವಲ್ಪ ರಕ್ತಸ್ರಾವ ಆಗುತ್ತಿದೆ,ಡಾಕ್ಟರ್ ಬಳಿ ವಿಚಾರಿಸಲು ಹೇಳಿದಾಗ ಫೋನ್ ಮಾಡಿ ವಿಚಾರಿಸಿದರು. ಪರಿಚಿತ ವೈದ್ಯರು ಯಾವ ಆತಂಕಕ್ಕೂ ಒಳಗಾಗದೆ ಬನ್ನಿ, ಪರೀಕ್ಷಿಸುವ ಎಂದು ಹೇಳಿದ್ದರಿಂದ ಮಗಳನ್ನು ಎಬ್ಬಿಸಿ, ಮುಂಜಾಗ್ರತೆಗಾಗಿ ಸಣ್ಣ ಚೀಲದಲ್ಲಿ ತುರ್ತು ಪರಿಸ್ಥಿತಿಗೆ ಬೇಕಾಗುವುದು ಎಂದು ಪ್ರಾಥಮಿಕ ಬಟ್ಟೆ ಹಾಕಿಟ್ಟು ಹೊರಟೇ ಬಿಟ್ಟೆವು. ಪ್ರಾಥಮಿಕ ಪರೀಕ್ಷೆ ಮಾಡಿದ ವೈದ್ಯರು ಗರ್ಭಚೀಲದಲ್ಲಿ ನೀರು ಕಡಿಮೆ ಆಗಿದೆ ಯಾವುದಕ್ಕೂ ಚಿಕಿತ್ಸೆ ಆರಂಭಿಸುವುದಾಗಿ ಅಲ್ಲಿಯೇ ಅಡ್ಮಿಟ್ ಮಾಡಿಕೊಂಡರು. ಸಾಮಾನ್ಯವಾಗಿ ಮಗು ಸಹಜವಾಗಿ ಜನನ ಆಗಲು 38 ವಾರ ಕಳೆದಿರಬೇಕು. ನನಗೆ ಆದದ್ದು ಕೇವಲ 32 ವಾರ.ಮಗು ತಾಯಿ ಗರ್ಭದಲ್ಲಿ ಸುಸ್ಥಿತಿಯಲ್ಲಿ ಉಳಿಸಿಕೊಳ್ಳುವಂತೆ ಚಿಕಿತ್ಸೆ ಆರಂಭಿಸಿದರು. ಮಧ್ಯಾನ್ಹದ ವೇಳೆಗೆ ನಿರೀಕ್ಷಿತ ಫಲ ಕಾಣಲಿಲ್ಲ. ಅಮ್ಮ ನನ್ನ ಜೊತೆಯಲ್ಲಿ ಇರದ ಕಾರಣ ಅವರನ್ನು ಕರೆಸಲು ಹೇಳಿದರು. ನಾಳೆ ಬೆಳಗ್ಗೆ ಸಿಜೇರಿಯನ್ ಮಾಡಿಬಿಡುತ್ತೇನೆ,ಯಾವುದಕ್ಕೂ ತಯಾರಿರುವಂತೆ ಸಲಹೆ ನೀಡಿ ಹೋದರು.ತಿಂಗಳು ತುಂಬಿರದ ನನಗೆ,ಅನಗತ್ಯವಾಗಿ ರಿಸ್ಕ ಬೇಡ ಎಂಬ ಕಾರಣಕ್ಕೆ ಸಿಜೇರಿಯನ್ ಮಾಡಲು ನಿರ್ಧರಿಸಿದ್ದರು.ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ನನ್ನ ಪುಟ್ಟ ಕಂದ ಸಹಜ ಹೆರಿಗೆ ಆಗಿ ಜುಲೈ 21 ರಂದು ಭೂಮಿಗೆ ಆಗಮಿಸಿದ. ವೈದ್ಯರಿಗೆ ಇಂತಹ ಘಟನೆ ನಿತ್ಯ ನೂತನ. ನಮಗೆ ಒಂದು ರೀತಿಯ ಆತಂಕ .ಮಗು ಕೈಗೆ ಹಿಡಿಯಲು ಸಿಕ್ಕದಷ್ಟು ಸಣ್ಣದು. ಜೊತೆಯಲ್ಲಿ ಅತೀ ಮತುವರ್ಜಿಯಿಂದ ನೋಡಿಕೊಳ್ಳುವ ಹೊಣೆ. ಯಾರಿಗೂ ಬೇಡ ಈ ಕಷ್ಟ ಎಂಬ ಭಾವ ಬಂದದ್ದು ಸುಳ್ಳಲ್ಲ.
ದಿನ ಕಳೆದಂತೆ ಸಮಸ್ಯೆಯ ತೀವ್ರತೆ ನಮಗೆ ಅರಿವಾಯಿತು. ತಾಯಿಯ ಗರ್ಭದಲ್ಲಿ ಬೆಚ್ಚನೆಯ ಭಾವದಲ್ಲಿ ಇರುವ ಮಗು ಭೂಮಿಗೆ ಬಂದು ಹಾಲು ಕುಡಿಯಲು ಕಷ್ಟ ಪಡುತ್ತಿತ್ತು. ದಿನಕ್ಕೆ ಮೂರು ಬಾರಿ ದೇಹದಲ್ಲಿರುವ ಸಕ್ಕರೆ ಅಂಶ ಪರೀಕ್ಷೆ ಮಾಡುವುದು ಈ ಹಂತದಲ್ಲಿ ಜನನವಾದ ಮಕ್ಕಳಲ್ಲಿ ಸಾಮಾನ್ಯ. ಮಗು ಹಾಲು ಕುಡಿದರೆ ಸಕ್ಕರೆಯ ಅಂಶ ದೇಹಕ್ಕೆ ಪೂರೈಕೆ ಆಗುತ್ತದೆ. ಇಲ್ಲದಿದ್ದರೆ ಸಕ್ಕರೆಯ ಅಂಶ ದೇಹಕ್ಕೆ ಹೋಗುವುದೆಂತು. ಮಗುವಿಗೆ ಹಾಲು ಕುಡಿಸಲು ಆಗದೆ ಒಂದು ರೀತಿಯ ಆತಂಕಕ್ಕೆ ಒಳಗಾಗಿದ್ದೆ. ಏನೇ ಮಾಡಿದರೂ ಸಮಾಧಾನ ಇರದ ನಾನು ಈ ಮೊದಲು ಮಗಳನ್ನು ತೋರಿಸಿದ ಮಕ್ಕಳ ವೈದ್ಯರಿಗೆ ಮಗು ತೋರಿಸಬಹುದಾ ಎಂದು ವೈದೈರಲ್ಲಿ ವಿಚಾರಿಸಿದೆ. ಸಾಮಾನ್ಯವಾಗಿ ಯಾವುದೇ ವೈದ್ಯರು ರೋಗಿ ತಮ್ಮ ಆಸ್ಪತ್ರೆಯಲ್ಲಿ ಇರುವಷ್ಟು ದಿನ ಹಾಗೂ ಆಸ್ಪತ್ರೆಯಿಂದ ಬಿಡುಗಡೆ ಆಗದೆ ಬೇರೆ ಕಡೆ ಹೋಗಲು ಒಪ್ಪುವುದಿಲ್ಲ. ಆದರೆ ಅವರೇ ಖುದ್ದಾಗಿ ಮುತುವರ್ಜಿ ವಹಿಸಿ ಮಕ್ಕಳ ವೈದ್ಯರ ಬಳಿ ಸಮಯ ನಿಗದಿ ಪಡಿಸಿ,ಹೋಗಿ ಬರಲು ಅವಕಾಶ ಕಲ್ಪಿಸಿ ಕೊಟ್ಟರು. ಒಂದೆಡೆ ಆಷಾಢದ ಮಳೆ,ತಣ್ಣನೆಯ ಗಾಳಿ,ಈಗ ನಾಲ್ಕು ವರ್ಷದ ಕೆಳಗೆ ಕಾವೇರಿ ನದಿ ನೀರು ಹಂಚಿಕೆಯ ಘಲಾಟೆಗೆ ಬೆಂಗಳೂರು ಸ್ಥಬ್ದವಾಗಿತ್ತು. ಹೊರಗೆ ಜನ ಜೀವನ ಅಸ್ತವ್ಯಸ್ಥ ಆದರೆ ನನ್ನೊಳಗೆ ಪ್ರಪಂಚವೇ ಸ್ಥಬ್ದವಾದ ಭಾವ. ಮೊದಲಿನಿಂದಲೂ ತೀರಾ ಪರಿಚಿತರಾದ ಯಲಹಂಕದ ಶುಶ್ರೂಷ ಆಸ್ಪತ್ರೆಯ ವೈದ್ಯರಾದ ಡಾ.ಸಿ ಎನ್ ರೆಡ್ಡಿ ಅವರ ಬಳಿ ಮಗುವಿನ ಪರಿಸ್ಥಿತಿ ಹೇಳಿ ಅಕ್ಷರಷಃ ಕಣ್ಣೀರು ಹಾಕಿದ್ದೆ. ತಾಯಿ ಕರುಳನ್ನು ಅರಿತಿರುವ ವೈದ್ಯರು,ತಂದೆಯಂತೆ ಹೆಗಲ ಮೇಲೆ ಕೈಯಿಟ್ಟು ಸಾಂತ್ವನ ಹೇಳಿದರು.ಅವಧಿ ಪೂರ್ವ ಜನನ ಆದ ಮಗುವಿನ ಸಾಮಾನ್ಯ ಸಮಸ್ಯೆ ಇದು, ಎಂದು ಇರುವ ಪರಿಸ್ಥಿತಿ ವಿವರಿಸಿ ಸಮಯಕ್ಕೆ ಸರಿಯಾಗಿ ಹಾಲು ಕೊಡುವುದಷ್ಟೇ ನಿಮ್ಮ ಕೆಲಸ, ಇಂತಹ ಮಕ್ಕಳಲ್ಲಿ ಜಾಂಡೀಸ್ ಸಾಮಾನ್ಯ ಸಮಸ್ಯೆ. ಈಗ ಕೊಟ್ಟಿರುವ ಚಿಕಿತ್ಸೆ ಮುಂದುವರೆಸಲು ವೈದ್ಯರ ಬಳಿ ಹೇಳಿ, ಎದೆಗುಂದುವ ಅವಶ್ಯಕತೆಯಿಲ್ಲ, ಭಯ ಬೇಡ ಎಂದು ಅಭಯ ನೀಡಿದರು. ಕೆಲವು ಸಂಧರ್ಭದಲ್ಲಿ ಮಾನವನ ಮನಸ್ಥಿತಿ ಹೇಗೆ ಎಂದರೆ ಸಾಂತ್ವನ ಹೇಳುವ ವ್ಯಕ್ತಿ – ವ್ಯಕ್ತಿತ್ವ ನಮ್ಮ ಮನದ ದುಃಖವನ್ನು ಕಡಿಮೆ ಮಾಡುತ್ತದೆ. ಅಂದು ನನಗಾದದ್ದು ಅದೇ ಭಾವ. ಸಹಜ ಹೆರಿಗೆ ಆದರೆ2-3 ದಿನಕ್ಕೆ ಮನೆಗೆ ಕಳುಹಿಸುವುದು ಸಾಮಾನ್ಯ. ನನ್ನ ಮಗನಿಗೆ ಜಾಂಡೀಸ್ ಆದ್ದರಿಂದ 11 ದಿನ ಆಸ್ಪತ್ರೆಯಲ್ಲಿ ಇರುವಂತೆ ಆಗಿತ್ತು. ಮಗುವಿನಲ್ಲಿ ಚೇತರಿಕೆ ಕಂಡ ಯಲಹಂಕದ ಚೈತನ್ಯ ಆಸ್ಪತ್ರೆಯ ವೈದ್ಯರಾದ ಡಾ.ವಸಂತಕುಮಾರ್ ಮನೆಗೆ ಹೋಗಿ, ಆಸ್ಪತ್ರೆಯ ವಾತಾವರಣಕ್ಕೆ ಹೋಲಿಸಿದರೆ ಮನೆಯಲ್ಲಿ ಬೇಗ ಗುಣಮುಖವಾಗುತ್ತದೆ ಎಂದು ಮನೆಗೆ ಕಳುಹಿಸಿದರು. ಎಷ್ಟೆಂದರೂ ಅದು ಅವರ ಅನುಭವದ ಮಾತು. ನಿಯಮಿತ ಪರೀಕ್ಷೆ ಮಾಡಿಸಿ,ಚಿಕಿತ್ಸೆ ಮುಂದುವರೆದಂತೆ ಮಗು ಚೇತರಿಸಿಕೊಂಡಿತು.
ಸಾಮಾನ್ಯವಾಗಿ ಜನರ ಅಭಿಪ್ರಾಯ ಬೆಂಗಳೂರಿನ ವೈದ್ಯಲೋಕ ಯಾವಾಗಲೂ ಹಣದ ಹಿಂದೆ. ಒಂದೆಡೆ ದುಡ್ಡಿನ ಸುಲಿಗೆಯಾದರೆ ಇನ್ನೊಂದೆಡೆ ಸರಿಯಾದ ಮಾರ್ಗದರ್ಶನ ನೀಡದೆ ಇರುವುದು. ಸಹಜ ಹೆರಿಗೆಗೆ ಪ್ರೋತ್ಸಾಹಿಸದೆ ಸಿಜೇರಿಯನ್ ಮೊರೆ ಹೋಗುತ್ತಾರೆ, ಆರೋಪ ಪಟ್ಟಿ ಉದ್ದವಾಗುವುದೇ ವಿನಃ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಲು ಸಾದ್ಯವಿಲ್ಲ. ನನ್ನ ಅನುಭವಕ್ಕೆ ಬಂದಂತೆ ಅಪರೂಪದ ವೈದ್ಯರೂ ಇರುತ್ತಾರೆ. ಅಂದು ವೈದ್ಯರು ಸರಿಯಾದ ಮಾರ್ಗದರ್ಶನ ಮಾಡದಿದ್ದರೆ ಇನ್ನೆಷ್ಟು ಕಷ್ಟ ಅನುಭವಿಸ ಬೇಕಿತ್ತೋ ?. “ವೈದ್ಯೋ ನಾರಾಯಣೋ ಹರಿಃ ” ವೈದ್ಯರಲ್ಲಿ ದೇವರನ್ನು ಕಾಣುವ ಭಾರತೀಯ ಪರಂಪರೆಯಲ್ಲಿ ವೈದ್ಯ ನಾರಾಯಣನಿಗೆ ಸಮಾನ. ಆದ್ದರಿಂದಲೇ ಗುರುತು, ಪರಿಚಯ ಇರುವ ವೈದ್ಯರ ಬಳಿ ನಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಳ್ಳುವುದು. ವೈದ್ಯರ ಬಳಿ ಯಾವುದೇ ಮುಚ್ಚು ಮರೆಯಿಲ್ಲದೆ ನಮ್ಮ ಸಮಸ್ಯೆ ಹೇಳಿದರೆ ಅವರಿಗೂ ಚಿಕಿತ್ಸೆ ನೀಡಲು ಸಹಕಾರಿ. ಇದಕ್ಕಾಗಿಯೇ ವೈದ್ಯರು ತಮ್ಮ ಬಳಿ ಕೂರಿಸಿ ವಿವರವಾದ ಮಾಹಿತಿ ಕಲೆ ಹಾಕಿ ಚಿಕಿತ್ಸೆ ಕೊಡುತ್ತಾರೆ. ಎಷ್ಟೋ ವೇಳೆ ಸಣ್ಣಪುಟ್ಟ ಖಾಯಿಲೆಗಳು ವೈದ್ಯರ ಸಣ್ಣ ನಗು, ಆತ್ಮ ವಿಶ್ವಾಸ ತುಂಬುವ ಮಾತುಕತೆಗಳಿಂದ ನಮ್ಮ ರೋಗ ವಾಸಿ ಆಗುತ್ತದೆ. ಇನ್ನು ಆಧುನಿಕ ವೈದ್ಯಕೀಯ ಪದ್ದತಿಯಲ್ಲಿ ಎಲ್ಲವೂ ಡಿಜಿಟಲೀಕರಣ ಆಗಿದೆ. ಕಂಪ್ಯೂಟರ್ ಮುಂದೆ ಅಂಕಿ ಅಂಶ ಗಮನಿಸುವುದರಲ್ಲಿ ರೋಗಿಗೆ ತನ್ನ ಕಡೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂಬ ಭಾವ ಬರುತ್ತದೆ. ನಮ್ಮಂಥ ಎಷ್ಟೋ ರೋಗಿಗಳು ವೈದ್ಯರಿಗೆ ಕಾಯುವುದರಿಂದ ಹೇಳುವ ವಿಚಾರವನ್ನು ಚಿಕ್ಕ ಚೊಕ್ಕವಾಗಿ ಹೇಳಿ ಮುಗಿಸುವುದು ಒಳಿತು. ಹೆಚ್ಚು ಅನುಭವ ಇರುವ ವೈದ್ಯರು ರೋಗಿ ಹೇಳುವ ವಿವರಣೆಯಿಂದ ಔಷಧ ಕೊಟ್ಟು ಕಳುಹಿಸುತ್ತಾರೆ. ಅಯ್ಯೋ ಆ ವೈದ್ಯರು ಹೆಚ್ಚು ಮಾತೇ ಆಡುವುದಿಲ್ಲ ,ಆದರೂ ಅವರ ಕೈಗುಣ ಚೆನ್ನಾಗಿದೆ ಅದಕ್ಕೆ ಅವರ ಬಳಿ ಹೋಗುತ್ತೇವೆ. ಕೆಲವು ವೈದ್ಯರ ಬಗ್ಗೆ ಕೇಳಿಬರುವ ಸಾಮಾನ್ಯ ಅಪವಾದ ಹೌದಾದರೂ, ಅಂತೆಯೇ ಅವರಿಂದ ಖಾಯಿಲೆಗಳು ಬೇಗ ಗುಣªುುುಖವಾಗುವುದು ಅಷ್ಟೇ ಸತ್ಯ. ಸಾಮಾನ್ಯವಾಗಿ ಮಕ್ಕಳ ವೈದ್ಯರು ಅವರ ಬಳಿ ಮೊದಲ ಬಾರಿಗೆ ಚಿಕಿತ್ಸೆಗೆ ಮಗುವನ್ನು ಕರೆದೊಯ್ದರೆ ಪದೆ ಪದೇ ವೈದ್ಯರನ್ನು ಬದಲಾಯಿಸ ಬಾರದು ಎಂದು ಹೇಳುತ್ತಾರೆ. ಮಗುವಿನ ದೇಹದ ಹಿನ್ನಲೆ ತಿಳಿದರೆ ಚಿಕಿತ್ಸೆ ನೀಡುವುದು ಸುಲಭ.ಇದು ದೊಡ್ಡವರಿಗೂ ಅನ್ವಯವಾಗುತ್ತದೆ. ವೈದ್ಯರ ಬಳಿ ಭಾಂದವ್ಯ ಬೆಳೆದರೆ ರೋಗಿಗೆ ಮಾನಸಿಕವಾಗಿ ಅರ್ಧ ರೋಗ ಗುಣಮುಖವಾದಂತೆಯೇ ಸರಿ. ಮೊದಲೆಲ್ಲಾ ಸಾಮಾನ್ಯವಾಗಿ ಊರಿಗೆ ಒಬ್ಬರೇ ವೈದ್ಯರು ಇರುತ್ತಿದ್ದರು. ಹೆಚ್ಚಾಗಿ ಒಂದೇ ಊರಿನವರು ಆದ್ದರಿಂದ ಜನರ ಮನೋಭಾವ ಪರಿಚಯ ಇರುತ್ತಿತ್ತು. ಇದು ಆರೋಗ್ಯ ಗುಣ ಪಡಿಸುವ ಹಿನ್ನಲೆಯಲ್ಲಿ ವೈದ್ಯರಿಗೆ ಹಾಗೂ ರೋಗಿಗೆ ಪರಿಚಿತ ವೈದ್ಯರ ಬಳಿ ತನ್ನ ಸಮಸ್ಯೆ ಹೇಳಲು ಸುಲಭವಾಗುತ್ತಿತ್ತು. ಶಿಕ್ಷಣ ಪದ್ದತಿ ಬದಲಾದಂತೆ ಇಂದು ವೈದ್ಯರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.ಇಂದಿನ ಕಾಲಮಾನದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ವೈದ್ಯರನ್ನು ಆಯ್ಕೆ ಮಾಡುವಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ.
ಸಾಮಾನ್ಯವಾಗಿ ಪ್ರತೀ ಹೆಣ್ಣಿಗೂ ತಾಯ್ತನ ಒಂದು ರೀತಿಯ ಪುನರ್ಜನ್ಮ. ತನ್ನೊಡಲಲ್ಲಿ ತನ್ನದೇ ಜೀವ ಹೊತ್ತು ನವಮಾಸ ತುಂಬುವಲ್ಲಿ ಮಹಿಳೆ ವಿವಿಧ ರೀತಿಯ ಅನುಭವ ಪಡೆಯುತ್ತಾಳೆ.ಗರ್ಭಿಣಿ ಸ್ತ್ರೀಯರಿಗೆ ಮನೆ ಮಂದಿಯ ಆರೈಕೆ ಜೊತೆಗೆ ಸರಿಯಾದ ವೈದ್ಯರ ಮಾರ್ಗದರ್ಶನವೂ ಅಗತ್ಯ. ನಾಲ್ಕರ ಹೊಸ್ತಿಲಲ್ಲಿ ಇರುವ ನನ್ನ ಮಗನನ್ನು ಹಾಗೂ ಅತನ ಮನೋ ದೈಹಿಕ ಬೆಳವಣಿಗೆ ನೋಡಿದಾಗ ವೈದ್ಯರ ಸಮಯೋಚಿತ ಸಲಹೆ ಹಾಗೂ ಮಾರ್ಗದರ್ಶನ ನೆನಪಾಗುತ್ತದೆ.
ಇಂದು ಪ್ರಪಂಚವೇ ಕಣ್ಣಿಗೆ ಕಾಣದ ಕೊರೋನ ಕಪಿಮುಷ್ಟಿಯಲ್ಲಿ ಸಿಲುಕಿದೆ. ಹಗಲಿರುಳೂ ಜನರ ಸೇವೆಯಲ್ಲಿ ನಿರತರಾಗಿರುವ ವೈದ್ಯ ವೃಂದಕ್ಕೆ ಎಷ್ಟು ನಮನ ಸಲ್ಲಿಸಿದರೂ ಸಾಲದು. ದಿನೇ ದಿನೇ ಹತಾಶಾ ಮನೋಭಾವಕ್ಕೆ ಜನ ತಲುಪುವ ಹಂತ ಎಲ್ಲೆಡೆ ಇದೆ. ಇಂತಹ ಸಂದರ್ಭದಲ್ಲಿ ವೈದ್ಯರ ಜೊತೆ ಕೈ ಜೋಡಿಸುವ ಹೊಣೆ ಎಲ್ಲಾ ನಾಗರೀಕರದ್ದು. ಪ್ರತಿಯೊಬ್ಬರು ಸಾದ್ಯವಾದಷ್ಟು ಮನೆಯಲ್ಲಿಯೇ ಇದ್ದು ರೋಗ ಹರಡದಂತೆ ತಡೆಯಲು ಅಳಿಲು ಸೇವೆ ಸಲ್ಲಿಸುವ ಅವಕಾಶವನ್ನು ಸದುಪಯೋಗ ಪಡಿಸುವುದು ಉತ್ತಮ. ಪ್ರತಿಯೊಬ್ಬರ ಬದುಕಿನಲ್ಲಿಯೂ ವೈದ್ಯರ ಪ್ರಭಾವ ಇರುವಂತದ್ದು ಸಾಮಾನ್ಯ. ಅಂತಹ ವೈದ್ಯರ ದಿನ ಇಂದು. ಪ್ರಾತಃ ಸ್ಮರಣೀಯರಾದ ಅಂತಹ ವೈದ್ಯರೆಲ್ಲರಿಗೂ ನನ್ನ ನಮನಗಳು..
ಬರಹ:- ಆತ್ಮ.ಜಿ.ಎಸ್.
ಬೆಂಗಳೂರು.