ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

ಕವಿತೆ-13 : ಹಬ್ಬ ಮಾಡಲು..

ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

– ಡಾ.ಚಿನ್ಮಯ ಎಂ.ರಾವ್

(73ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಚಿನ್ಮಯ ಎಂ.ರಾವ್ ಅವರ ವಿಶ್ವಚೇತನ ಕವನ ಸಂಕಲನದಿಂದ ಆಯ್ದ ಕವಿತೆ)

 

ಭಾವನಗರಿಯಿಂದ ಒಂದಷ್ಟು

ಕಲ್ಪನೆಯ ಹಣತೆ ತರಿಸಬೇಕು ನಾ

ಭಾವನೆಯ ಗರಿಬಿಚ್ಚಿ ಕುಣಿದಾಡಲು

ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಯ

ತೈಲಸುರಿದು ಬತ್ತಿ ಎಂಬ ಲೇಖನಿ-

ಯಂಚಿನಿಂದ ಸಾವಿರಾರು ಕವನದೀಪವ

ಬೆಳಗಲು ಈ ದೀಪಾವಳಿಯ ಹೊತ್ತಿಗೆ

ತಮದ ಹೊತ್ತ ಮುಗಿಸಿ ಜ್ಞಾನದ ಹೊತ್ತಿಗೆ

ತೆರೆದು ಓದಲು; ಹಬ್ಬ ಮಾಡಲು

 

 

ಸಂಧಿಸಬೇಕೊಂದಿಷ್ಟು ಸೌಂದರ್ಯವ

ಜೊತೆಜೊತೆಯಾಗಿ ಹೆಜ್ಜೆ ಇಡಲು

ಆ ಕಾಂತಿಯತ್ತ ಜಾರಿ ಹೂನಗೆಯ ಬೀರಲು

ಸಂಭ್ರಮಿಸಲು ಸಂಕ್ರಮಣಕ್ಕನ್ವರ್ಥವಾಗಲು

ಬರುವ ಸಂಕ್ರಾಂತಿಯ ಹೊತ್ತಿಗೆ

ತಮದ ಹೊತ್ತ ಮುಗಿಸಿ ಜ್ಞಾನದ ಹೊತ್ತಿಗೆ

ತೆರೆದು ಓದಲು; ಹಬ್ಬ ಮಾಡಲು

 

 

ಸವಿಕಹಿಗಳ ಸವಿಯಬೇಕು ಆದಷ್ಟು

ಕಹಿ ಬರದಿದ್ದರೆ ನಾನೇ ಆಲಂಗಿಸಬೇಕೊಂದಿಷ್ಟು

ಸಾಧನೆಯಲ್ಲಿ ಬಾಧಕಗಳ ಅಲ್ಪಸ್ವಲ್ಪ

ಕಸರತ್ತು ಮಾಡಿ ಅಲವತ್ತುಕೊಂಡು

ನವಚೇತನಕ್ಕೆ ಭದ್ರಬುನಾದಿ ಹಾಕಲು

ಮುಂದಿನ ಯುಗಾದಿಯ ಹೊತ್ತಿಗೆ

ತಮದ ಹೊತ್ತ ಮುಗಿಸಿ ಜ್ಞಾನದ ಹೊತ್ತಿಗೆ

ತೆರೆದು ಓದಲು; ಹಬ್ಬ ಮಾಡಲು

 

 

ಕಾವ್ಯ ಮುಂಗಾರಿನಲ್ಲಿ ನೆನೆಯಬೇಕು ನಾನೊಂದಿಷ್ಟು

ನೆನೆಸಿಕೊಂಡಿದ್ದ ಕೊನೆಯಿಲ್ಲದ ಕವನವಾಗಿಸಲು

ಮೇಘದೂತನಲ್ಲಿ ತಿಳಿಯಬೇಕು ಕಾಳಿದಾಸನ ಬಗ್ಗೆ

ಮೇಘನಾದಗಳಿಂದ ಸ್ವರಪಾಠ ಮಾಡಿಸಿಕೊಂಡು

ನವರಾಗದಲ್ಲಿ ಪ್ರೇಮಾನುರಾಗ ಹೊಂದಿ

ಹೊಸ ಹಾಡಕಟ್ಟಿ ಹಾಡಿತೋರಿಸಬೇಕು ನಾ

ನಿಮಗೆಲ್ಲಾ; ಇದನ್ನೆಲ್ಲಾ ಮಾಡುವುದು

ಆನಂದದ ಲಹರಿಯಲ್ಲಿ ಕುಣಿದಾಡಲು

ಆ ಭಾವಸಂಭ್ರಮದ ಹೊತ್ತಿಗೆ

ತಮದ ಹೊತ್ತ ಮುಗಿಸಿ ಜ್ಞಾನದ ಹೊತ್ತಿಗೆ

ತೆರೆದು ಓದಲು; ಹಬ್ಬ ಮಾಡಲು

 

ಚಿನ್ಮಯ ಎಂ ರಾವ್

2005

*******************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.