ಡಾ.ಚಿನ್ಮಯ ಎಂ.ರಾವ್ ಸಮಗ್ರ ಕವನ ಸಂಕಲನ

ಪಟಾಕಿ ಯಾರ ಖುಷಿಗೆ?

ಕವಿತೆ-126

ಡಾ. ಚಿನ್ಮಯ ರಾವ್ 

ಹೊನಗೋಡು

22-10-2025

ಕವಿತೆ-126

 

ದೀಪಾವಳಿಗೆ ನಮ್ಮವರದ್ದು ಅಪರಿಮಿತ ಕೊಡುಗೆ

ಬಂಧುಬಾಂಧವರೊಂದಿಗೆ ಬೆಸೆಯಲು ಸಿಹಿಅಡುಗೆ

ಮನೆ ಮಂದಿಗೆಲ್ಲಾ ಸಂಭ್ರಮ, ಧರಿಸಿ ಹೊಸ ಉಡುಗೆ ತೊಡುಗೆ

ಕತ್ತಲೆಯಿಂದ ಬೆಳಕಿನೆಡೆಗೆ ದೀಪದ ಜೊತೆ ನಮ್ಮ ನಡಿಗೆ

 

ದೀಪಾವಳಿಗೆ ನಮ್ಮವರದ್ದು ಈ ಪರಿಸರಕ್ಕೆ ಅಪಾರ ಕೊಡುಗೆ

ಯಾವ ಬೀದಿಗೆ ಹೋದರು ಪಟಾಕಿಯ ವಿಪರೀತ ಹೊಗೆ

ಬಣ್ಣ ಬಣ್ಣದ ಡಬ್ಬಿಗಳಲ್ಲಿ ಎಷ್ಟೊಂದು ಪಟಾಕಿಯ ಬಗೆ

ಹಬ್ಬದ ನೆಪದಲ್ಲಿ ಈ ಸುಂದರ ಪರಿಸರಕ್ಕೆ ದ್ರೋಹ ಬಗೆ

ಈ ಪರಿಯಲ್ಲಿ ಪರಿಧಿ ಮೀರಿ ನಮಗೆ ನಾವೇ ಹಾಕಿಕೊಳ್ಳುವ ಹೊಗೆ!

 

ಮಾತೆತ್ತಿದರೆ ಇದು ನಮ್ಮ ಸಂಪ್ರದಾಯದ ಬಗೆ

ಯಾವ ಶಾಸ್ತ್ರದಲ್ಲೂ ಬರೆಯುದ್ದನ್ನು ಇವರು ಸೇರಿಸಿಕೊಂಡದ್ದು ಹೇಗೆ?!

ಸಾರ್ವಜನಿಕ ಸ್ಥಳದಲ್ಲಿ ಸರ್ವರೂ ಈ ಪಟಾಕಿಯ

ಧೂಮಪಾನ ಮಾಡಿಕೊಳ್ಳುವುದು ಹಬ್ಬದ ಖುಷಿಗೆ

ಒಂದಷ್ಟು ಜನ ಕೈ ಕಾಲು ಸುಟ್ಟುಕೊಂಡು ದೃಷ್ಟಿಗೆ

ಹಾನಿ ಮಾಡಿಕೊಳ್ಳುವುದು ಯಾರ ಖುಷಿಗೆ?

 

ನಮ್ಮ ಸನಾತನ ಪರಂಪರೆಯ ದೃಷ್ಟಿಕೋನವನ್ನು ಹೇಗೆ ಬೇಕೋ ಹಾಗೆ

ಬದಲಾಯಿಸಿಕೊಳ್ಳಲು ಈ ಪಟಾಕಿಯ ಹೊಗೆ

ಬೆಳಕಿನಿಂದ ಕತ್ತಲೆಯಡೆಗೆ ಶಬ್ದ ಮಾಲಿನ್ಯದ ಹೊಗೆಯೊಡನೆ

ನಮ್ಮ ನಿರಂತರ ಅರ್ಥಹೀನ ನಡಿಗೆ

 

ಕತ್ತಲೆಯ ನಡುವಲ್ಲಿ ಹೊಗೆಯ ಬೀಡಿನಲ್ಲಿ

ಕರ್ಕಶ ಸದ್ದಿನಲ್ಲಿ ಹೊಗೆಯಾಡುವುದು

ಸದ್ದಡಗಿಸುವ ಸಮಾನ ಮನಸ್ಕರ ಸಲುಗೆ

ಕತ್ತಲಿನೊಡನೆ ಕತ್ತಲಿಗೆ ಸಲೀಸಾದ ಬೆಸುಗೆ

ಪಟಾಕಿಯ ಸ್ನೇಹದೊಂದಿಗೆ

ವಿಷವನ್ನು ಉಗುಳುವುದೇಕೆ ಈ ಪ್ರಕೃತಿಗೆ?!

ದೀಪಗಳ ಮೂಲಕ ಮಾತ್ರ ದೀಪದಾರತಿಯ ಮಾಡುವ ಈ ಪ್ರಕೃತಿಗೆ

ಆಗ ಮಾತ್ರ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮದು ಅರ್ಥಪೂರ್ಣ ನಡಿಗೆ…

 

ಡಾ. ಚಿನ್ಮಯ ರಾವ್ 

ಹೊನಗೋಡು 

22-10-2025

ಕವಿತೆ-126

 

Related Articles

Back to top button