ಕನ್ನಡಪುಣ್ಯಕ್ಷೇತ್ರ

ಶ್ರೀರಾಮನ ಪಾಪ ಕಳೆದ ಹೊನ್ನಾವರದ ರಾಮತೀರ್ಥ

-ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ

ನಮ್ಮ ನಾಡಿನ ಅದೆಷ್ಟೋ ದೇಗುಲಗಳ ಚರಿತ್ರೆಯನ್ನು ಹುಡುಕುತ್ತಾ, ಕೆದಕುತ್ತಾ ಸಾಗಿದರೆ ಪುರಾಣ, ರಾಮಾಯಣ ,ಮಹಾಭಾರತ ಕಾಲಗಳ ಘಟನೆಯೊಂದಿಗೆ ಬೆಸೆಯುತ್ತದೆ. ರಾಮಾಯಣದಲ್ಲಿ ರಾವಣ ವಧೆಯ ನಂತರ ಅಯೋಧ್ಯಾ ಮಾರ್ಗದಲ್ಲಿ ಸಾಗುವ ಶ್ರೀರಾಮ ತನ್ನ ಪಾಪ ನಿವೃತ್ತಿಗಾಗಿ ಹಲವೆಡೆ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದ ಉಲ್ಲೇಖಗಳಿವೆ.ಇಂತಹ ಸ್ಥಳಗಳಲ್ಲಿ ಒಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶ್ರೀರಾಮತೀರ್ಥ ಕ್ಷೇತ್ರ ಸಹ ಒಂದಾಗಿದೆ.

ಶ್ರೀರಾಮನ ಬಾಯಾರಿಕೆ ನಿವಾರಿಸಲು ತೀರ್ಥ ನಿರ್ಮಾಣ, ಪಾಪ ನಿವೃತ್ತಿ ಪೂಜೆಗಾಗಿ ಈಶ್ವರ ಬಾಣಲಿಂಗ ಪ್ರತಿಷ್ಠೆ ಇತ್ಯಾದಿ ಹಿನ್ನೆಲೆ ನಂಬಿಕೆಯಿಂದ ಈ ಸ್ಥಳಕ್ಕೆ ನಿತ್ಯ ನೂರಾರು ಭಕ್ತರನ್ನು ಮತ್ತು ದೂರದೂರುಗಳ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ.

ತಾಲೂಕು ಕೇಂದ್ರದಿಂದ ಕುಮಟಾ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಕೇವಲ 2 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ ಹೊನ್ನಾವರ-ಅರೇಅಂಗಡಿ ರಾಜ್ಯ ಹೆದ್ದಾರಿಯಲ್ಲಿದ್ದು ಹಲವು ವೈಶಿಷ್ಟ್ಯಗಳಿಂದ ಜನಪ್ರಿಯತೆ ಗಳಿಸಿದೆ.

ಕ್ಷೇತ್ರದ ಹಿನ್ನೆಲೆ:

ಹಿಂದೆ ತೇತ್ರಾಯುಗದಲ್ಲಿ ಸೀತಾದೇವಿಯನ್ನು ಬಂಧನದಿಂದ ಬಿಡಿಸಿ ತರಲು ಲಂಕೆಗೆ ತೆರಳಿ ದಾನವ ಚಕ್ರವರ್ತಿ ರಾವಣಾದಿಗಳನ್ನು ಸಂಹಾರಗೊಳಿಸಿದ ನಂತರ ಶ್ರೀರಾಮನು ಲಕ್ಷ್ಣ, ಸೀತೆ ಹಾಗೂ ಹನುಮಾದಿಗಳ ಸಹಿತ ಅಯೋಧ್ಯೆಗೆ ಹಿಂತಿರುಗುವಾಗ ಈ ಸ್ಥಳಕ್ಕೆ ಬಂದಿದ್ದನಂತೆ. ಈ ಸ್ಥಳ ಘೋರ ಅರಣ್ಯವಾದ ಕಾರಣ ಬಾಯಾರಿಕೆ ನೀಗಲು ಹನಿ ನೀರೂ ದೊರೆಯಲಿಲ್ಲವಂತೆ. ಆಗ ಶ್ರೀರಾಮನು ಎರಡು ದಿವ್ಯ ಬಾಣಗಳನ್ನು ಪ್ರಯೋಗಿಸಿ ಎರಡು ತೀರ್ಥಗಳನ್ನು ಸೃಷ್ಠಿಸಿದನಂತೆ. ಇದೇ ಮುಂದೆ ರಾಮತೀರ್ಥವೆಂದು ಖ್ಯಾತಿ ಪಡೆಯಿತು.ಈಗಲೂ ಸಹ ದೇಗುಲದ ಬಲ ಭಾಗದಲ್ಲಿ ಈ ತೀರ್ಥ ಪ್ರವಹಿಸುತ್ತಿದೆ. ನಂತರ ದೇವತೆಗಳು ಶ್ರೀರಾಮನಿಗೆ ಶಿವಭಕ್ತನಾದ ರಾವಣನ ಹತ್ಯೆಯ ಪಾಪ ಪರಿಹಾರಕ್ಕಾಗಿ ಶಿವಾಲಯ ನಿರ್ಮಿಸುವಂತೆ ಅಪ್ಪಣೆ ಮಾಡಿದವಂತೆ.ಅಂತೆಯೇ ಶ್ರೀರಾಮನು ಬಾಣಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದನಂತೆ.ಇದರಿಂದಾಗಿ ಈ ದೇವಾಲಯ ರಾಮೇಶ್ವರ ಎಂದು ಕರೆಯಲ್ಪಟ್ಟಿತು. ಈ ಕ್ಷೇತ್ರದಲ್ಲಿರುವ (ರಾಮ)ತೀರ್ಥದಲ್ಲಿ ಸ್ನಾನಗೈದರೆ ಪಾಪ ಕಳೆಯುತ್ತದೆ. ಮಾನಸಿಕ ರೋಗಗಳು ಪರಿಹಾರಗೊಳ್ಳುತ್ತದೆ , ಚರ್ಮ ರೋಗ ಗುಣವಾಗುತ್ತದೆ, ಭಯ ದೂರವಾಗಿ ಬದುಕಿನಲ್ಲಿ ಹೊಸ ಭರವಸೆ ಮತ್ತು ಆತ್ಮ ಸ್ಥೈರ್ಯ ಮೂಡುತ್ತದೆ ಎಂಬ ಪ್ರತೀತಿ ಇದೆ.ಮಳೆಗಾಲದ ಆರಂಭದಿಂದ ಸುಮಾರು ಫೆಬ್ರವರಿ ಅಂತ್ಯದವರೆಗೂ ನೀರು ಜಲಪಾತದಂತೆ ಧುಮುಕುತ್ತಿದ್ದು ಭಕ್ತರು ಸ್ನಾನ ಮಾಡಿ ಪುನೀತರಾಗುತ್ತಾರೆ.ಈ ತೀರ್ಥದ ಜಲವನ್ನು ಸಂಗ್ರಹಿಸಿ ಮನೆಗೆ ಸಾಗಿಸಿ ಕಾಪಾಡಿಕೊಂಡು ತುರ್ತು ಸಂದರ್ಭದಲ್ಲಿ ಭಕ್ತರು ತೀರ್ಥವಾಗಿ ಬಳಸುವುದು ರೂಢಿಯಲ್ಲಿದೆ.

ಇಲ್ಲಿನ ದೇವಾಲಯದ ಗರ್ಭಗ್ರಹದಲ್ಲಿ 5000 ಪಂಚಮುಖಿ ರುದ್ರಾಕ್ಷಿಗಳನ್ನು ಬಳಸಿದ ಶಿವನಿ ಮರದಿಂದ ನಿರ್ಮಿಸಿದ ಅತ್ಯಾಕರ್ಷಕ ಮಂಟಪವಿದೆ.ದೇವಾಲಯದ ಪ್ರಾಕಾರದ ಗೋಡೆಯಲ್ಲಿ ಸುಂದರ ಧಾರ್ಮಿಕ ಚಿತ್ರಗಳು ಮತ್ತು ಗಂಜೀಪಾ ಶೈಲಿಯ ಕಲಾ ರಚನೆ ಇದ್ದು ಆಕರ್ಷಕವಾಗಿದೆ.

ಅವತಾರ ಪುರುಷರೆಂದೇ ಖ್ಯಾತರಾದ ಭಗವಾನ ಶ್ರೀಧರ ಸ್ವಾಮಿಗಳು ಈ ಸ್ಥಳದಲ್ಲಿ ಸುಮಾರು 12 ವರ್ಷಗಳ ಕಾಲ ನೆಲೆಸಿ ತಮ್ಮ ತಪಶ್ಶಕ್ತಿಯನ್ನು ವೃದ್ಧಿಸಿಕೊಂಡಿದ್ದರು. ಇದನ್ನು ಕೇಂದ್ರವಾಗಿರಿಸಿಕೊಂಡು ಸುತ್ತಮುತ್ತಲ ಹಲವು ಸೀಮೆಗಳಲ್ಲಿ ಸಂಚರಿಸಿ ಹತ್ತಾರು ದೇಗುಲಗಳನ್ನು ಪ್ರತಿಷ್ಠಾಪಿಸಿ , ನೂರಾರು ಭಕ್ತರ ಸಮಸ್ಯೆಗಳನ್ನು ನಿವಾರಿಸಿ ಪರಿವ್ರಾಜಕರಾಗಿ ನೆಲೆಸಿದ್ದರು. ದೇವಾಲಯದ ಹಿಂಭಾಗದಲ್ಲಿ ಶ್ರೀಧರ ಸ್ವಾಮಿಗಳಿಂದ ನಿರ್ಮಿತವಾದ ದತ್ತಾತ್ರೇಯ ಮಂದಿರ ಮತ್ತು ಧ್ಯಾನ ಮಂದಿರಗಳಿದ್ದು ಭಕ್ತರು ವಾರಗಟ್ಟಲೆ ನೆಲೆಸಿ ಯೋಗ ,ಧ್ಯಾನ ಮತ್ತು ಪೂಜೆಗಳಲ್ಲಿ ಮನಃಶಾಂತಿ ಗಳಿಸಲು ಸಾಧನೆ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಇಲ್ಲಿನ ತೀರ್ಥದ ಕಟ್ಟೆಯ ಬಳಿಯ ಜಂಬಿಟ್ಟಿಗೆ ಕಲ್ಲಿನ ಬಂಡೆಯಲ್ಲಿ ಆಕರ್ಷಕ ಗುಹೆಯಿದ್ದು ಒಳ ಭಾಗಲದಲ್ಲಿ ಹಲವು ಕವಲುಗಳಾಗಿ ಮುಂದುವರೆದು ಧ್ಯಾನ ಯೋಗ್ಯ ಸ್ಥಳಾವಕಾಶವಿದೆ.ಬರಿಕಾಶ್ರಮದಿಂದ ಆಗಮಿಸಿದ್ದ ಹಲವು ಋಷಿ ಮುನಿಗಳು ತಪಸ್ಸನ್ನಾಚರಿಸಿಸುತ್ತಿದ್ದರೆಂದು ನಂಬಿಕೆಯಿದೆ.

ಪ್ರತಿ ವರ್ಷ ಶ್ರಾವಣ ಮಾಸ, ಕಾರ್ತೀಕ ಮಾಸಗಳಲ್ಲಿ ದಿನ ನಿತ್ಯ ವೈವಿಧ್ಯಮಯ ಪೂಜೆ, ಉತ್ಸವ, ಶಿವರಾತ್ರಿಯಂದು ಪಲ್ಲಕ್ಕಿ ಉತ್ಸವ ಜರುಗುತ್ತದೆ.ದತ್ತ ಜಯಂತಿಯಂದು ಒಂದು ವಾರ ಕಾಲ ಅಖಂಡ ಭಜನೆ ಸಪ್ತಾಹ ,ಸಾಮೂಹಿಕ ಧ್ಯಾನ, ಮಹಾಪೂಜೆ, ಅನ್ನದಾನ ಮಹೋತ್ಸವಗಳು ನಡೆಯುತ್ತಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಿಮಿಸಿ ರಾಮೇಶ್ವರ ದೇವರ ದರ್ಶನ ಪಡೆಯುತ್ತಾರೆ.

-ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.