ಲೇಖನ-ಚಿತ್ರಗಳು : ಚಿನ್ಮಯ.ಎಂ.ರಾವ್ ಹೊನಗೋಡು
ಅದೇನು ಆಶ್ಚರ್ಯವೋ ತಿಳಿಯದು. ನೀವು ಹೆಚ್ಚು ಹೆಚ್ಚು ದೇವಾಲಯಗಳನ್ನು ದರ್ಶನಮಾಡಬೇಕೆಂದರೆ ದಕ್ಷಿಣಕನ್ನಡ ಹಾಗು ಕಾಸರಗೋಡು ಜಿಲ್ಲೆಗಳಿಗೆ ಹೋಗಬಹುದು. ಮಾರುಮಾರಿಗೊಂದು ದೇವರು, ಜನಗಳಿಗಿಂತ ದೇವರೇ ನಿಮ್ಮನ್ನು ತಡೆದು ಮಾತನಾಡಿಸುವರು. ಮನೆಮನೆಯ ಪಕ್ಕದಲ್ಲಿ ಯಾವುದಾದರೊಂದು ಗುಡಿ,ಪ್ರತೀ ಮನೆಯೂ ಆಗಿಹೋಗಿದೆ ದೇವರ ಗುಡಿ! ಹೌದು ಅಳತೆಗೂ ಮೀರಿದಷ್ಟು ದೇವಾಲಯಗಳು ಈ ಜಿಲ್ಲೆಗಳಿಗೆ ಕಳೆಕೊಟ್ಟು ಭಕ್ತಾದಿಗಳನ್ನು ಸೆಳೆಯುತ್ತಲೇ ಇದೆ.ಇಲ್ಲಿಯ ಜನರಿಗೆ ದೇವರ ಮೇಲೆ ಪ್ರೀತಿಯೋ,ದೇವಾನುದೇವತೆಗಳಿಗೆ ಇಲ್ಲಿಯ ಜನರ ಮೇಲೆ ಪ್ರೀತಿಯೋ ಅಥವ ಎರಡೂ ಇರಬಹುದು.ಈ ಭಾಗದ ಎಲ್ಲಾ ಕ್ಷೇತ್ರಗಳ ಮಹಿಮೆಯೂ ಅಪಾರ. ಆದರೂ ಕೆಲವು ದೇಗುಲಗಳು ಮಾತ್ರ ಪ್ರಚಲಿತವಾದವು ಕಾರಣ ಭಕ್ತಾದಿಗಳ ಬಾಯಿಮಾತಿನ ಪ್ರಚಾರ. ಮುಖ್ಯಭೂಮಿಕೆಯಲ್ಲಿ ಹೆಚ್ಚು ಪ್ರಸಾರವಾಗದೆ ತನ್ನ ಮೂಲಸಾರವನ್ನುಳಿಸಿಕೊಂಡು ಪರಂಪರಾಗತವಾಗಿ ಹಲವು ದೇವಾಲಯಗಳು ದೇವರಸೇವೆಯಲ್ಲಿ ನಿರತವಾಗಿವೆ! ಹಿಂದಿನಿಂದ ನಡೆದುಕೊಂಡು ಬಂದ ಆಚರಣೆಗಳು ಇಂದೂ ಹಾಗೆಯೇ ಮುನ್ನಡೆಯುತ್ತಿದೆ. ಅಂತಹ ಒಂದು ಅಪರೂಪದ ದೇವಾಲಯ, ಪರಿಸರದ ಆಲಯ, ಭಕ್ತಿಯನ್ನು ಪಸರಿಸುತ್ತಿರುವ ಹರಿಹರಾಲಯ ಕುಂಟಿಕಾನಮಠದ ಶ್ರೀಶಂಕರನಾರಾಯಣ ದೇವಾಲಯ.
ಎಲ್ಲುಂಟು ಕುಂಟಿಕಾನಮಠ?
ಮಂಗಳೂರಿನಿಂದ ಕಾಸರಗೋಡಿಗೆ ಸಾಗುವ ಕಡಲತೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ೪೦ ಕಿಲೋಮೀಟರ್ ಪಯಣಿಸಿದರೆ ಕುಂಬಳೆ ಸಿಗುತ್ತದೆ.ಅಲ್ಲಿ ಎಡಕ್ಕೆ ತಿರುಗಿ ಬದಿಯಡ್ಕ ರಸ್ತೆಯಲ್ಲಿ ೧೪ ಕಿಲೋಮೀಟರ್ ಸಾಗಿದರೆ ಕನ್ಯಪ್ಪಾಡಿ ಎಂಬ ಒಂದು ಊರು ಸಿಗುತ್ತದೆ. ಅಲ್ಲಿ ಮತ್ತೆ ಎಡರಸ್ತೆಯಲ್ಲಿ ೪ ಕಿಲೋಮೀಟರ್ ಚಲಿಸಬೇಕು. ಪುಟ್ಟಪುಟ್ಟ ಗುಡ್ಡಗಳ ನಡುವೆ ದಟ್ಟ ಕಾಡಿನಲ್ಲಿ ಅಂಕುಡೊಂಕಾದ ದಾರಿ. ಹಸಿರ ತೇರಿನಲ್ಲಿ ತಂಪಾದ ಗಾಳಿ. ವಿಹಂಗಮನೋಟದೋಕುಳಿಯ ಸವಾರಿ. ವನರಾಶಿಯ ಮಡಿಲಲ್ಲಿ ವರದಾನದಿಯತೀರದಲ್ಲಿ ಕಟ್ಟಕಡೆಯದಾಗಿ ಸಿಗುತ್ತದೆ ಕುಂಟಿಕಾನಮಠ.
ಕುಂಟಿಕಾನ ಹೆಸರು ಬಂದದ್ದು ಹೇಗೆ?
ಪ್ರಾಚೀನಕಾಲದಲ್ಲಿ ಇಲ್ಲಿಯ ಭಕ್ತರಿಗೆ ಭಕ್ತಿ ಉಕ್ಕಿಬಂದು ದೇವರಗಾನ ಮಾಡುತ್ತಿರುವಾಗ ಕಂಠವು ಗದ್ಗದಿತವಾಗಿ ಗಾನವು ಕುಂಠಿತವಾತಂತೆ. ಆದ್ದರಿಂದ ಕುಂಠಂ ಗಾನಂ ಯಸ್ಮಿನ್ ಸಃ=ಕುಂಠಗಾನಃ, ಕುಂಠಗಾನಶ್ಚಾಸೌ ಮಠಶ್ಚ=ಕುಂಠಗಾನಮಠಃ. ಹೀಗೆ ಸಂಸ್ಕೃತದ ಕುಂಠಗಾನವು ಕನ್ನಡದಲ್ಲಿ ಕುಂಟಿಕಾನವಾತೆಂಬ ಪ್ರತೀತಿ ಇದೆ.
ಕ್ಷೇತ್ರದ ಇತಿಹಾಸ
ಸುಮಾರು ೪೦೦ ವರುಷಗಳ ಹಿಂದೆ ಈ ಪ್ರದೇಶಗಳನ್ನಾಳುತ್ತಿದ್ದ ಬಲ್ಲಾಳದ ಅರಸರಿಗೆ ತುಂಬ ತೊಂದರೆಗಳಾತಂತೆ. ಪರಿಹಾರಕಾರ್ಯಕ್ಕಾಗಿ ಕಾಶ್ಯಪಗೋತ್ರೋತ್ಪನ್ನ ವೈದಿಕ,ತಾಂತ್ರಿಕ ವಿದ್ವಾಂಸರಾದ ಮಹಾತಪಸ್ವಿಗಳಾದ ಗಂಗಾಧರಭಟ್ಟರನ್ನು ಪರಸ್ಥಳದಿಂದ ಕರೆದುಕೊಂಡು ಬಂದರು. ಕುಂಟಿಕಾನವನ್ನು ದಾನವಾಗಿ ನೀಡಿ ಆಶ್ರಯವನ್ನಿತ್ತರು. ಭಟ್ಟರು ಅನುಷ್ಠಾನವಂತರಾದರೂ ಸಂತಾನವಾಗದ ಕಾರಣ ಜ್ಯೋತಿಗಳನ್ನು ಕೇಳಿದಾಗ ಕೋಳ್ಯೂರಿನ ಮನೆದೇವರಾದ ಶ್ರೀಶಂಕರನಾರಾಯಣನಿಗೆ ಮೊರೆಹೋಗುವಂತೆ ಸಲಹೆ ನೀಡಿದರು. ಅದರಂತೆ ಭಟ್ಟರು ಉಗ್ರತಪಗೈದರು. ಕನಸಲ್ಲಿ ಕಂಡ ದೇವರು ವರಬೇಡುವಂತೆ ಕೇಳಿದಾಗ ಭಟ್ಟರು “ನನಗೆ ಸಂತಾನವಾಗಲಿ,ನನ್ನ ಸಂತತಿಯವರೆಲ್ಲಾ ನಿನ್ನನ್ನು ಚಿರಕಾಲ ಆರಾಧಿಸುವಂತಾಗಲಿ. ಹಾಗಾಗಿ ನೀನು ನನ್ನೊಂದಿಗೆ ನಮ್ಮ ಮನೆಗೆ ಬರಬೇಕು” ಎಂದಾಗ ತಥಾಸ್ತು ಎಂದು ವರವನ್ನಿತ್ತ ದೇವರು ತಾನು ಮಾತ್ರ ಅಲ್ಲಿಗೆ ಬರಲು ಒಪ್ಪಲಿಲ್ಲ.ಬದಲಾಗಿ ಕೇರಳದ ಕೊಲ್ಲಂ ಬಳಿ ಇರುವ ತನ್ನ ಪರಮಭಕ್ತನೊಬ್ಬನು ಆರಾಧಿಸುತ್ತಿರುವ ತನ್ನ ಪರಿಪೂರ್ಣ ಸಾನ್ನಿಧ್ಯವಿರುವ ಪಂಚಲೋಹದ ವಿಗ್ರಹವನ್ನು ಆತನಿಂದ ಪಡೆದು ಮನೆಯಲ್ಲಿಟ್ಟು ಪೂಜಿಸಬೇಕೆಂದು ಅನುಗ್ರಹವಾಯಿತು. ಆ ಭಕ್ತನಿಗೂ ಸ್ವಪ್ನದಲ್ಲೇ ದೇವರಿಂದ ಪ್ರೇರಣೆಯಾಯಿತು. ಗಂಗಾಧರಭಟ್ಟರು ಬರುತ್ತಿದ್ದಂತೆಯೇ ಅದನ್ನು ಆತ ಅರ್ಪಣೆಮಾಡಿದ. ಕುಂಟಿಕಾನದ ಮನೆಗೆ ತಂದು ನಿತ್ಯಪೂಜೆಗಳನ್ನು ಮಾಡಿ ಸಂತಾನಪ್ರಾಪ್ತಿಯಾಗಿ ಸಂಸಾರ ಸುಖವಾಗಿ ಸಾಗಿತು. ಆದರೆ ಅವರ ಮಗ ನಿಷ್ಠಾವಂತನಾಗದೆ ಅನುಷ್ಠಾನಹೀನನಾಗಿ ಮನೆಯಲ್ಲಿ ದುರಿತಗಳಾಯಿತು. ತಜ್ನರನ್ನು ಕೇಳಿದಾಗ ದೇವರಿಗೆ ಪ್ರತ್ಯೇಕ ಗುಡಿಯನ್ನೇ ನಿರ್ಮಿಸಬೇಕೆಂದು ಅಪ್ಪಣೆಯಾತು. ಅಂತೆಯೇ ಮೇಷಮಾಸದ ಆರಿದ್ರಾ ನಕ್ಷತ್ರದ ದಿನ ಶ್ರೀಶಂಕರನಾರಯಣನ ವಿಗ್ರಹ ಪ್ರತ್ಯೇಕ ಆಲಯದಲ್ಲಿ ಪ್ರತಿಷ್ಠಾಪನೆಗೊಂಡಿತು. ಅಂದಿನಿಂದ ಇಂದಿನವರೆಗೂ ಕುಂಟಿಕಾನದಲ್ಲಿ ಅದೇ ದಿನ ರ್ವಾಷಿಕೋತ್ಸವ,ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು
ಕೋಳ್ಯೂರು ಶಂಕರನಾರಾಯಣ ದೇವರ ಅನುಗ್ರಹ,ಆಶಯದಿಂದಲೇ ಉದ್ಭವಿಸಿದ ಕುಂಟಿಕಾನಮಠದಲ್ಲಿ ಆ ದೇವರ ಮಧುರ ಸ್ಮರಣೆಗಾಗಿ ವರ್ಷಂಪ್ರತಿ ಧನುರ್ಮಾಸದ ೧೮ಕ್ಕೆ ಕೋಳ್ಯೂರಿನ ಮಂಡಲಪೂಜೆಯ ದಿನವೇ ಇಲ್ಲಿಯೂ ಸಹ ಶತರುದ್ರಾಭಿಷೇಕ ಸಹಿತ ವಿಶೇಷ ಅರ್ಚನೆಗಳು ಮಠದ ಮನೆಯವರಿಂದ ನಡೆದುಕೊಂಡು ಬರುತ್ತಿದೆ. ವೃಶ್ಚಿಕ ಮಾಸದ ಎಲ್ಲಾ ಸೋಮವಾರಗಳಲ್ಲಿಯೂ ನಡೆಯತಕ್ಕ ವಿಶೇಷ ಪೂಜೆಗಳನ್ನು ಇಲ್ಲಿ ೧-ಮಠದ ವರ್ಗ,೨-ಕೈಲಂಕಜೆ ವರ್ಗ,೩-ಕುಂಟಿಕಾನ ವರ್ಗ,೪-ಅಂಬಟೆಗಯ ವರ್ಗ ಎಂಬ ನಾಲ್ಕು ವರ್ಗದವರೂ ನಡೆಸಿಕೊಂಡು ಬರುತ್ತಿದ್ದಾರೆ.
ಇನ್ನು ಪ್ರತೀವರ್ಷ ರ್ವಾಷಿಕೋತ್ಸವದಂದು ಅಯನೋತ್ಸವ,ಹರಕೆಸೇವೆ,ಭೂತಕೋಲ,ಯಕ್ಷಗಾನ ಹಾಗು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದುಕೊಂಡು ಬರುತ್ತಿದೆ.
ವರದಾ ಜಲಾಭಿಷೇಕ
ಗತಕಾಲದಿಂದಲೂ ದೇವಾಲಯದ ಎದುರು ಭಾಗ ಹರಿಯುತ್ತಿರುವ ವರದಾನದಿಯ ನೀರೇ ದೇವರಿಗೆ ಪ್ರಿಯವಾಗಿ ಅಭಿಷೇಕವಾಗುತ್ತಿದೆ.ಈ ನದಿಯು ಮುಂಡೋಳು ಶ್ರೀದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಹುಟ್ಟಿ ಹರಿಯುತ್ತಾ ತನ್ನ ತೀರದಲ್ಲಿರುವ ಕೃಷಿಕ್ಷೇತ್ರಗಳಿಗೆ ನಿರುಣಿಸಿ ಸಮೃದ್ಧಿಗೊಳಿಸುತ್ತಾ ಹಲವಾರು ಪುಣ್ಯಕ್ಷೇತ್ರಗಳನ್ನು ಹಾದು ಅಂತಿಮವಾಗಿ ಸಿರಾಕ್ಷೇತ್ರದ ಮಹಲಿಂಗೇಶ್ವರನ ಸನ್ನಿಧಿಯಲ್ಲಿ ಸಾಗರವನ್ನು ಸೇರುತ್ತದೆ. ಬೇಸಿಗೆಯಲ್ಲಿ ದೇವಸ್ಥಾನದ ಎದುರು ವರದಾ ನದಿಗೆ ಒಡ್ಡನ್ನು ಹಾಕಿದಾಗ ಒಡ್ಡಿನ ಮೇಲ್ಭಾಗ ತುಂಬಿ ಉಕ್ಕುವ ನೀರು ಸುಂದರ ಜಲಪಾತವಾಗುತ್ತದೆ! ನದಿಯ ತಟದಲ್ಲಿ ಎತ್ತರದಲ್ಲಿರುವ ದೇವಾಲಯವನ್ನು ತಲುಪಲು ಹದಿನೆಂಟು ಮೆಟ್ಟಿಲುಗಳನ್ನೇರುವಾಗ ಶಬರೀಮಲೆಯ ನೆನಪಾಗಿ ಹರಿಹರಾಲಯಗಳ ಸಾಮ್ಯತೆ ಗೋಚರವಾಗುತ್ತದೆ.
ಅನ್ನಪೂರ್ಣೆಶ್ವರಿಯೂ ಇದ್ದಾಳೆ
೧೯೭೫ರಲ್ಲಿ ನಡೆಸಿದ ಅಷ್ಟಮಂಗಲಪ್ರೆಶ್ನೆಯಿಂದಲೇ ಗೊತ್ತಾಗಿದ್ದು ಗರ್ಭಗುಡಿಯಲ್ಲಿ ದೇವರ ಪಕ್ಕ ಅನ್ನಪೂರ್ಣೇಶ್ವರಿಯೂ ಇದ್ದಳೆಂದು. ಶತಮಾನಗಳ ಹಿಂದೆ ಮಂತ್ರವಾದಿಗಳಾಗಿದ್ದ ಮಠದ ಮನೆಯವರೊಬ್ಬರು ಸಾನಿಧ್ಯಪೂರ್ಣ ಅನ್ನಪೂರ್ಣೆಯ ವಿಗ್ರಹವನ್ನು ಸಂಪಾದಿಸಿ ಪೀಠದಲ್ಲಿರಿಸಿ ಸ್ವಾಮಿಯಪೂಜೆಯ ಜೊತೆಗೆ ನಿತ್ಯ ದೇವಿಯಪೂಜೆಯನ್ನೂ ರಹಸ್ಯವಾಗಿ ನಡೆಸಿಕೊಂಡುಬಂದಿದ್ದರು. ಇದರ ಅರಿವಿರದ ಕುಟುಂಬದವರು ಸುಬ್ರಹ್ಮಣ್ಯಸ್ವಾಮಿಯ ವಿಗ್ರಹವೆಂದು ಭಾವಿಸಿ ಅದಕ್ಕೂ ಪೂಜೆ ಮಾಡುತ್ತಿದ್ದರು. ಈಗ ನೋಡಿದರೆ ಅದು ಅನ್ನಪೂರ್ಣೆ! ಹಾಗಾಗಿ ನಿತ್ಯಪೂಜೆಯೊಡನೆ ನವರಾತ್ರಿಯಲ್ಲೂ ದೇವಿಗೆ ವಿಶೇಷ ಅರ್ಚನೆ. ಈಗ ದೇವಸ್ಥಾನದ ಆವರಣದಲ್ಲಿಯೇ ಅನ್ನಪೂರ್ಣೆಗೊಂದು ಪ್ರತ್ಯೇಕ ಗುಡಿ ನಿರ್ಮಿಸುವ ಯೋಜನೆ.
ಗುರು ಹಿರಿಯರ ಆಶಿರ್ವಾದದಿಂದ ಮಠದ ಮನೆಯವರ ಆಡಳಿತ
ಗಂಗಾಧರಭಟ್ಟರ ಕಾಲದಿದಂದಲೇ ಕುಂಟಿಕಾನದ ಮನೆ ಮಠವಾಗಿ ಮಾರ್ಪಾಡಾಗಿತ್ತು.ಇಲ್ಲಿ ವೇದವಿದ್ಯಾ ಪಾಠಶಾಲೆ ಉಚಿತವಾಗಿ ನಡೆಯುತ್ತಿತ್ತು. ದೇವರ ಆರಾಧನೆ ಉತ್ಸವಾದಿಗಳಿಂದ ಕಂಗೊಳಿಸುತ್ತಿದ್ದ ಮನೆ ಮಠದಂತೆ ಭಾಸವಾಗುತ್ತಿತ್ತು. ಆ ಕಾಲದಿದಂದಲೇ ಈ ಸ್ಥಳ ಸುತ್ತಲಿನ ಭಕ್ತಾದಿಗಳಿಗೆ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. “ಮಠದ ಮನೆಯವರಾದ ನಾವು ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರದಲ್ಲಿ ಆಡಳಿತ ಮಾಡುತ್ತಿದ್ದೇವೆ ಎಂಬುದಕ್ಕಿಂತ ಧಾರ್ಮಿಕ ಕಾರ್ಯಗಳನ್ನು ಎಲ್ಲ ವರ್ಗದ ಸಹಕಾರದೊಂದಿಗೆ ಪರಂಪರಾಗತವಾಗಿ ದೇವರಿಗೆ ಅಪಚಾರವಾಗದಂತೆ ನಡೆಸಿಕೊಂಡು ಬರುತ್ತಿದ್ದೇವೆ,ಆ ಮೂಲಕ ಕುಂಟಿಕಾನಮಠದ ಸಂಪೂರ್ಣ ಅಭಿವೃದ್ಧಿ ಹಾಗು ಅಭ್ಯುದಯ ನಮ್ಮ ಮುಂದಿದೆ” ಎನ್ನುತ್ತಾರೆ ಈ ತಲೆಮಾರಿನ ಈ ಮನೆತನದ ಯುವಕ ಕುಮಾರ್. ಕಳೆದ ಹತ್ತು ವರುಷಗಳಿಂದ ಲಂಡನ್ ನಗರದಲ್ಲಿ ಉದ್ಯಮಿಯಾಗಿರುವ ಕುಮಾರ್ ಅದೇನೇ ಕೆಲಸಗಳಿದ್ದರೂ ಪ್ರತೀವರುಷವೂ ವಾರ್ಷಿಕೋತ್ಸವಕ್ಕೆ ತಪ್ಪದೇ ಹಾಜರಾಗುತ್ತಾರೆ. ನಮ್ಮ ಮನೆಯ ಹಿರಿಯರಿಂದ ಸ್ಥಾಪಿಸಲ್ಪಟ್ಟ ದೇವರು ಎಂದಾಕ್ಷಣ ಇದು ನಮ್ಮದಲ್ಲ. ಶಿವ ಜಗತ್ತಿಗೇ ಈಶ್ವರ,ನಾವೆಲ್ಲಾ ನಶ್ವರ. ಆದರೆ ಅನುವಂಶಿಕವಾಗಿ ನಮ್ಮ ಕುಟುಂಬದಿಂದ ದೇವರಿಗೆ ಪೂಜೆ ನಡೆಯುತ್ತಿದೆ.ಇದು ಮುಂದೂ ಹೀಗೆ ನಡೆಯುತ್ತದೆ. ಯಾರಿಂದಲೂ ಇದನ್ನು ತಡೆಯಲು ಸಾಧ್ಯವಿಲ್ಲ.ಇದು ದೈವೇಚ್ಛೆ ಎನ್ನುವ ಅವರು ದೇವರ ಮಹಿಮೆಯನ್ನು ಉದಾಹರಣೆ ಸಮೇತ ವಿವರಿಸುತ್ತಾರೆ. ಹಿಂದಿನಂತೆ ಮತ್ತೆ ವೇದವಿದ್ಯಾಲಯವನ್ನು ಪುನರಾರಂಭಿಸುವ ತವಕ ಅವರಲ್ಲಿದೆ. ಸ್ವತಃ ಯಕ್ಷಗಾನ ಕಲಾವಿದರಾದ ಕುಮಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಕುಂಟಿಕಾನದಲ್ಲಿ ಸ್ಥಾಪಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.
ಕುಂಟಿಕಾನಮಠದ ಮನೆಯವರು ಆಡಳಿತವನ್ನು ತಲೆತಲಾಂತರದಿಂದ ಗುರುಗಳ,ತಂತ್ರಿಗಳ ಹಾಗು ಪುರೋಹಿತರ ಆಶಿರ್ವಾದದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇದೇ ಕುಟುಂಬದ ಕುಂಟಿಕಾನಮಠದ ನಿವಾಸಿ ಸಾಹಿತಿ ಬಾಲಕೃಷ್ಣ ಭಟ್ ಹಾಗು ಅವರ ಪುತ್ರ ಕುಮಾರ್ ಇವರು ಕುಂಟಿಕಾನಮಠದ ಕುಟುಂಬದ ಸುಮಾರು ೪೦೦ ಜನ ಸದಸ್ಯರ ಬೆಂಬಲದೊಂದಿಗೆ,ಊರ ಹಾಗು ಪರ ಊರಿನ ಭಕ್ತರ ಸಹಕಾರದೊಂದಿಗೆ ದೇವಸ್ಥಾನದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ.
ರಾಮಚಂದ್ರಾಪುರದ ಶ್ರೀಗಳು,ಸ್ವರ್ಣವಲ್ಲಿ ಶ್ರೀಗಳು,ಶೃಂಗೇರಿ ಶ್ರೀಗಳು,ಎಡೆನೀರು ಶ್ರೀಗಳು,ಒಡಿಯೂರು ಶ್ರೀಗಳು,ಮಾನಿಲ ಶ್ರೀಗಳು ಈ ಮಠಕ್ಕೆ ಸಂಪೂರ್ಣ ಅಭಯವನ್ನಿತ್ತಿದ್ದಾರೆ.
ಒಟ್ಟಿನಲ್ಲಿ ಕುಂಟಿಕಾನಮಠವೆಂಬ ನಯನಮನೋಹರ ಕ್ಷೇತ್ರ ಸ್ಥಳೀಯ ಸಂಸ್ಕೃತಿ,ಆಚಾರಣೆಗಳನ್ನು ಪರಂಪರಾಗತವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಾ ಭಾರತದ ವೈವಿಧ್ಯತೆಯನ್ನು ಜಗತ್ತಿಗೆ ಸಾರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂಬುದೇ ಸಂತಸದ ಸಂಗತಿ.
ಲೇಖನ-ಚಿನ್ಮಯ.ಎಂ.ರಾವ್ ಹೊನಗೋಡು.
ಚಿತ್ರಗಳು-ಚಿನ್ಮಯ.ಎಂ.ರಾವ್ ಹೊನಗೋಡು.
12-5-2011
****************************************************
Visit For More Details :
https://www.youtube.com/channel/UCW4aN1dG1ogZ6YISQR38PSA
https://www.facebook.com/kuntikanamata/
http://kuntikanamatakumar.blogspot.in