ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿ ಪರಂಪರೆಯು ಅಪೂರ್ವ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ಆದಿ ಶಂಕರಾಚಾರ್ಯರ ಅದ್ವೈತ ಪರಂಪರೆಗೆ ಈ ಮಹಾಸಂಸ್ಥಾನ ಸೇರಿದೆ. ರಾಜಾಶ್ರಯದಲ್ಲಿ ಬೆಳೆದು ಬಂದ ಈ ಮಹಾಸಂಸ್ಥಾನದಲ್ಲಿ ಇದುವರೆಗೆ 53 ಯತಿಗಳು ಆಗಿಹೋಗಿದ್ದಾರೆ. 54 ನೇ ಯತಿವರೇಣ್ಯರಾಗಿ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪ್ರಸ್ತುತ ಪೀಠವನ್ನು ಮುನ್ನಡೆಸುತಿದ್ದಾರೆ. ಪ್ರಸ್ತುತ ಮಹಾಸ್ವಾಮಿಗಳವರ ಹಾಗೂ ಹಿಂದಿನ 6 ಯತಿಗಳ ಕುರಿತು ಲಭ್ಯವಿರುವ ದಾಖಲೆಗಳ ಆಧಾರದಿಂದ ಮಾಹಿತಿ ನೀಡಲಾಗಿದೆ. ಮತ್ತು ಹಿಂದಿನ ಯತಿಗಳ ದಾಖಲೆಗಳಿದ್ದರೂ ಅವಕಾಶದ ಮಿತಿಯಿಂದಾಗಿ ಇಲ್ಲಿ ಅವನ್ನು ಪ್ರಸ್ತಾಪಿಸಲಾಗುತ್ತಿಲ್ಲ.
ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1778-ಕ್ರಿಶ 1816) (48 ನೇ ಪೀಠಾಧಿಪತಿಗಳು) ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಪೀಠ ಪರಂಪರೆಯ 48ನೇ ಯತಿವರೇಣ್ಯರಾಗಿದ್ದರು. ಇವರು 38 ವರ್ಷಗಳ ಕಾಲ ಕ್ರಿಶ 1816 ರವರೆಗೆ ಪೀಠಾಧಿಪತಿಗಳಾಗಿ ಈ ಮಹಾಸಂಸ್ಥಾನವನ್ನು ಅಭಿವೃದ್ಧಿಪಡಿಸಿದರು. ಶ್ರೀಮಠದ ಆರಾಧ್ಯ ದೇವರುಗಳ ಪೂಜೆ, ನಿತ್ಯ ನೈಮಿತ್ತಿಕ ಉತ್ಸವಾದಿಗಳನ್ನು ಸಾಂಗವಾಗಿ ನೆರವೇರಿಸಿಕೊಂಡು ಬಂದಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಶಿಷ್ಯರಿಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.
ಆಗ ರಾಜಕೀಯವಾಗಿ ಬ್ರಿಟಿಷ್ ಕಂಪನಿ ಸರಕಾರದ ಕಾಲವಾಗಿತ್ತು. ಹೈದರ್ ಅಲಿ ಟಿಪ್ಪು ಸುಲ್ತಾನರ ಆಡಳಿತವನ್ನು ಇವರು ಕಂಡಿದ್ದಾರೆ. ಟಿಪ್ಪು ಸುಲ್ತಾನನ ಆಳ್ವಿಕೆಗೆ ಸಂಬಂಧಿಸಿದ 8 ಕಡತಗಳು ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಲಭ್ಯವಿವೆ. ಟಿಪ್ಪುವಿನ ಆಳ್ವಿಕೆಗೂ ಪೂರ್ವದಲ್ಲಿ ಸೋದೆಯ ಅರಸ 2ನೇ ಅರಸಪ್ಪ ನಾಯಕನು ಶ್ರೀಮಠಕ್ಕೆ ಎರಡು ತಾಲೂಕುಗಳಲ್ಲಿಯೆ ಒಟ್ಟೂ 75 ಗ್ರಾಮಗಳನ್ನು 1556 ರಲ್ಲಿಯೇ ಇನಾಮು ಜಮೀನುಗಳಾಗಿ ಧರ್ಮ-ಸಾಧನವನ್ನು ಬರೆಸಿಕೊಟ್ಟಿದ್ದನು. ಟಿಪ್ಪುವಿನ ಕಾಲದಲ್ಲಿ ಪುನಃ 33 ಹಳ್ಳಿಗಳನ್ನು ಇನಾಮು ಜಮೀನೆಂದು ನೀಡಿದ ಬಗ್ಗೆ ದಾಖಲೆಗಳಿವೆ. ವಿವಿಧ ಸೀಮೆಗಳ ಕೃಷಿಕರು ವಾರ್ಷಿಕವಾಗಿ ಶ್ರೀಮಠಕ್ಕೆ ಕಂದಾಯ ರೂಪದಲ್ಲಿ ಕಾಣಿಕೆ ನೀಡುವದಾಗಿ ಧರ್ಮಶಾಸನ ಬರೆದುಕೊಟ್ಟ ಬಗ್ಗೆ ದಾಖಲೆ ಪತ್ರಗಳಿವೆ. ಜಯಂತಿ ಉತ್ಸವದಲ್ಲಿ ಸೀಮಾ ಶಿಷ್ಯರಿಗೆ ರಾಯಸ ಕಳಿಸಲಾಗುತ್ತಿತ್ತು. ಹಿಂದೆಂದಿಗಿಂತಲೂ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಕಾಲದಲ್ಲಿ ದೇವರ ಜಯಂತಿ, ರಥೋತ್ಸವ, ಕಾರ್ತೀಕ ದೀಪಾರಾಧನೆ, ಶ್ರೀಗಳವರ ಪಾದಸೇವೆ ಮುಂತಾದ ಕಾರ್ಯಕ್ರಮಗಳು ಹೆಚ್ಚು ವಿಜ್ರಂಭಣೆಯಿಂದ ನಡೆಯುತ್ತಿದ್ದವು. ಶಿಷ್ಯರೂ ಕೂಡ ತಮ್ಮ ಪಾಲಿನ ವಾರ್ಷಿಕ ಕಾಣಿಕೆಗಳನ್ನು ಸಮರ್ಪಕವಾಗಿ ಶ್ರೀ ಮಠಕ್ಕೆ ಸಲ್ಲಿಸುತ್ತಿದ್ದರು.
ಕ್ರಿಶ 1801 ಮಾರ್ಚ 13ರಂದು ಡಾ|| ಫ್ರಾನ್ಸಿಸ್ ಬುಕಾನನ್ ಸೋಂದಕ್ಕೆ ಆಗಮಿಸುತ್ತಾನೆ ಮತ್ತು ಶ್ರೀಗಳವರನ್ನು ಸಂದರ್ಶಿಸಲು ಬಯಸುತ್ತಾನೆ. ಆದರೆ ಕಾರಣಾಂತರಗಳಿಂದ ಶ್ರೀಗಳವರನ್ನು ಭೆಟ್ಟಿಯಾಗಲಿಲ್ಲ ಎಂದು ಉಲ್ಲೇಖಿಸುತ್ತಾನೆ. ಇವರ ಕಾಲದಲ್ಲಿ ಗೋಕರ್ಣದ ವಿಘ್ನೇಶ್ವರ ಉಪಾಧ್ಯಾಯರ ಮಗ, ದಾಮೋದರ ಉಪಾಧ್ಯಾಯನಿಗೆ ಕೋಟಿತೀರ್ಥದ ಕಟ್ಟೆಯ ಮೇಲಿರುವ ಮಠದ ಸ್ಥಳವನ್ನು ಮೂಲಕ್ಕೆ ಬರೆಸಿಕೊಟ್ಟಿದಕ್ಕೆ ಕ್ರಿಶ 1802 ರ ಮೂಲಸಾಧನಪಟ್ಟಿ ಲಭ್ಯವಿದೆ. ಮಂಕಿ, ಗೇರುಸೊಪ್ಪೆ, ಕುದ್ರಿಗೆ, ನಗರೆ, ಬೈಲೂರು ಸ್ಥಳಗಳ ಕ್ಷತ್ರಿಯ ವರ್ಗದವರು ಗುರುಕಾಣಿಕೆ ಮತ್ತು ಮದುವೆಗೆ ಸಂಬಂಧಿಸಿ ಕಾಣಿಕೆ ಸಲ್ಲಿಸುವದಾಗಿ ಬರೆಸಿ ಒಪ್ಪಿಸಿದ ಧರ್ಮಸಾಧನವಿದೆ. ಸವಣೂರು, ಮೈಸೂರು ಜಿಲ್ಲೆಗಳಲ್ಲಿ ಹೊನ್ನಳ್ಳಿ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಂಚಾರ ಮಾಡುವದರಿಂದ, ಅವರನ್ನು ಅಟಕಾಯಿಸದೆ ಬಿಡುವಂತೆ ಕಾನಡಾ ಜಿಲ್ಲಾ ಮೆಜಿಸ್ಟ್ರೇಟ್ ಅಧಿಕಾರ ಸ್ಥಾನದಿಂದ ದಿನಾಂಕ 15.10.1813 ರಂದು ರಹದಾರಿ ಪತ್ರ ನೀಡಿದ್ದರು.
ಶ್ರೀ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1817- ಕ್ರಿಶ 1826) 49 ನೇ ಪೀಠಾಧಿಪತಿಗಳು. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 49ನೇ ಪೀಠಾಧಿಪತಿಗಳು ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳಾಗಿದ್ದರು. ಇವರು ಕ್ರಿಶ 1817 ರಿಂದ 9 ವರ್ಷಗಳ ಕಾಲ ಈ ಪೀಠದಲ್ಲಿ ವಿರಾಜಮಾನರಾಗಿದ್ದರು. ಇವರ ಪೂರ್ವಾಶ್ರಮ ತೋಟದಸೀಮೆಯ ಹುಳಗೋಳವಾಗಿತ್ತು. ಈ ವೇಳೆಗೆ ಬ್ರಿಟಿಷ ಕಂಪನಿ ಸರಕಾರದ ಪ್ರಾಬಲ್ಯ ಸಾಕಷ್ಟಿತ್ತು. ಇವರು ಪೀಠಾಧಿಪತಿಗಳಾಗಿದ್ದಾಗ ಥಾಮಸ್ ಹ್ಯಾರಿಸ್‌ರವರು ಕಾನಡಾ ಜಿಲ್ಲಾ ಕಲೆಕ್ಟರರಾಗಿದ್ದರು. ನರಸಿಂಹ ಭಟ್ರು ಅಂದಿನ ಶ್ರೀ ಮಠದ ಪಾರುಪತ್ಯಗಾರರಾಗಿದ್ದರು. ಭೂ ವ್ಯವಹಾರ, ಕಂದಾಯ, ಕಾಣಿಕೆ ಇತ್ಯಾದಿ ವ್ಯವಹಾರಗಳು ನಡೆದ ಬಗ್ಗೆ ದಾಖಲೆಗಳು ಲಭ್ಯವಿದೆ.
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1826 ರಿಂದ ಕ್ರಿಶ 1864) 50ನೇ ಪೀಠಾಧಿಪತಿಗಳು. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 50ನೇ ಪೀಠಾಧಿಪತಿಗಳು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳಾಗಿದ್ದರು. ಇವರ ಪೂರ್ವಾಶ್ರಮ ಯಲ್ಲಾಪುರ ಸೀಮೆ ಕವಡಿಕೆರೆಯಾಗಿದೆ. ಇವರು ಕ್ರಿಶ 1864 ರ ವರೆಗೆ ಸುಮಾರು 38 ವರ್ಷಗಳ ಕಾಲ ಈ ಸಂಸ್ಥಾನದ ಪೀಠಾಧಿಪತಿಗಳಾಗಿದ್ದರು.
ಧರ್ಮಸಾಧನ, ಜಾಹಿರನಾಮೆ, ರಾಯಸ, ಬಿನ್ನವತ್ತಳೆ, ರಾಜೀನಾಮೆ, ಮೂಲಗೇಣಿ ಇತ್ಯಾದಿ ವಿಷಯಗಳಲ್ಲಿ ಸಾಕಷ್ಟು ಪತ್ರ ವ್ಯವಹಾರಗಳು ನಡೆಯುತ್ತಿದ್ದ ಬಗ್ಗೆ ಐತಿಹಾಸಿಕ ದಾಖಲೆಗಳಿವೆ. ನೃಸಿಂಹ ಜಯಂತಿ ಉತ್ಸವದ ಸಂಬಂಧ ಚಂದಾವರ, ಹಳದೀಪುರ, ಹೊನ್ನಾವರ, ಹೊಸಪಟ್ಟಣ, ಹೆಗಡೆ, ಮಿರ್ಜಾನ, ಗೇರುಸೊಪ್ಪೆ, ಕುದ್ರಿಗೆ ಭಾಗದ ಕ್ಷತ್ರಿಯ ವರ್ಗದ ಸಮಸ್ತರು ಕ್ರಿಶ 1827 ರಲ್ಲಿ ಧರ್ಮಸಾಧನ ಬರೆಸಿಕೊಟ್ಟಿದ್ದರು.
ಶಿಷ್ಯವಿಚಾರಣೆ ಮುಂತಾದ ಕೆಲಸದ ಬಗ್ಗೆ ಹೊನ್ನಳ್ಳಿ ಮಠದ ಸ್ವಾಮಿಗಳು ಸಂಚಾರ ಮಾಡುವದರಿಂದ ಅವರಿಗೆ ಯಾರೂ ಹರಕತ್ತು ಮಾಡದಂತೆ ಕಾನಡಾ ಜಿಲ್ಲಾ ಸಬ್ ಕಲೆಕ್ಟರ್ ರಹದಾರಿ ಪತ್ರ ನೀಡಿದ್ದರು. 1853 ರಲ್ಲಿ ಶೀಲಿಗ ಸಮಾಜದ ಗಣ್ಯರು ಶ್ರೀ ದೇವರ ನೈವೇದ್ಯದ ಬಗ್ಗೆ ವರ್ಷಂಪ್ರತಿ ಎರಡು ವರಹ (8ರೂಪಾಯಿ)ಗಳನ್ನು ಕೊಡುವದಾಗಿ ಕರಾರು ಪತ್ರ ನೀಡಿದ್ದರು. ದುರ್ಮರಣ, ಘಟಕ್ರಿಯೆ ಇತ್ಯಾದಿಗಳಲ್ಲಿ ಪ್ರಾಯಶ್ಚಿತ ಕುರಿತು ಸ್ವಾಮಿಗಳಿಗೆ ಬಿನ್ನಹ ಪತ್ರ ಬರೆದುಕೊಳ್ಳುವದು ರೂಢಿಯಲ್ಲಿತ್ತು. (ಸೀಮೆಯಲ್ಲಿ ವೈದಿಕ ಕ್ರತ್ಯಗಳು ಸರಿಯಾಗಿ ನಡೆಯುತ್ತಿಲ್ಲವೆಂದು ಶ್ರೀಗಳವರಲ್ಲಿ ದೂರು ನೀಡಿದ ದಾಖಲೆಗಳಿವೆ.
ಶ್ರೀ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1865 ರಿಂದ ಕ್ರಿಶ 1880) 51ನೇ ಪೀಠಾಧಿಪತಿ. ಇವರ ಪೂರ್ವಾಶ್ರಮ ತೋಟದಸೀಮೆಯ ಹುಳಗೋಳವಾಗಿತ್ತು. ಶ್ರೀ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಪೀಠದ 51ನೇ ಪೀಠಾಧಿಪತಿಗಳಾಗಿದ್ದಾರೆ. ಇವರು ಕ್ರಿಶ 1865 ರಿಂದ 15 ವರ್ಷಗಳ ಕಾಲ ಈ ಪೀಠದಲ್ಲಿ ವಿರಾಜಮಾನರಾಗಿದ್ದರು. ಭೂ ವ್ಯವಹಾರ, ಮೂಲಗೇಣಿ, ದೀಪಾರಾಧನೆ ಕಾಣಿಕೆ, ನೃಸಿಂಹ ಜಯಂತಿ ಉತ್ಸವ ಕಾಣಿಕೆ ಇತ್ಯಾದಿ ವ್ಯವಹಾರಗಳು ನಡೆದುಕೊಂಡು ಬಂದ ಬಗ್ಗೆ ದಾಖಲೆಗಳಿವೆ. ಕೆಲವು ಜನರು ತಮ್ಮ ಗೇಣಿ ಜಮೀನನ್ನು ರಾಜೀನಾಮೆ ನೀಡಿ ಶ್ರೀಗಳವರಿಗೆ ಬರೆದು ಕೊಟ್ಟ ಬಗ್ಗೆ ದಾಖಲೆಗಳು ಲಭ್ಯವಿದೆ.
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1880 ರಿಂದ ಕ್ರಿಶ 1918) 52ನೇ ಪೀಠಾಧಿಪತಿಗಳು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 52ನೇ ಪೀಠಾಧಿಪತಿಗಳ ಅಭಿದಾನವು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಎಂದಾಗಿತ್ತು. ಇವರ ಪೂರ್ವಾಶ್ರಮ ತೋಟದ ಸೀಮೆಯ ಅರಸಾಪುರವಾಗಿತ್ತು. ಇವರು ಸುಮಾರು 38 ವರ್ಷಗಳ ಕಾಲ ಕ್ರಿಶ 1918 ರ ವರೆಗೆ ಪೀಠಾಧಿಪತಿಗಳಾಗಿದ್ದರು. ಶ್ರೀ ಮಹಾಸಂಸ್ಥಾನಕ್ಕೆ ಸಂಬಂಧಿಸಿದ ಇದುವರೆಗಿನ ಐತಿಹಾಸಿಕ ದಾಖಲೆಗಳು, ಆಡಳಿತ ವ್ಯವಹಾರ ಸಂಬಂಧಿ ದಾಖಲೆಗಳು, ಲೇವಾ-ದೇವಿ ದಾಖಲೆಗಳು ಇವುಗಳನ್ನು ಇವರು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟಿದ್ದರು. ಇವು ಆ ಕಾಲದ ಸ್ವರ್ಣವಲ್ಲೀ ಮಹಾಸಂಸ್ಥಾನದ ಬೆಳವಣಿಗೆಯನ್ನರಿಯಲು ಸಹಾಯಕವಾಗಿವೆ. ಸಂಸ್ಥಾನದಲ್ಲಿ ವ್ಯವಸ್ಥಿತ ಆಡಳಿತ ರೂಪಿಸಿ, ಆರ್ಥಿಕ ಪ್ರಗತಿಗಾಗಿ ಶ್ರಮಿಸಿ, ನಿತ್ಯ ನೈಮಿತ್ತಿಕ ಧರ್ಮಾಚರಣೆಗಳನ್ನು ಕೈಕೊಂಡು ಶಿಷ್ಯರ ಕ್ಷೇಮಾಭ್ಯುದಯಕ್ಕೆ ಸದಾ ಚಿಂತಿಸುತ್ತಾ ಸಕಲಧರ್ಮ ಸಮನ್ವಯ ದೃಷ್ಟಿಯನ್ನು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಅನುಸರಿಸಿದ್ದರು.
ಇವರ ಅವಧಿಯಲ್ಲಿ ಒಂದು ಮಹತ್ವದ ಘಟನೆ ನಡೆಯಿತು. ಪ್ರಾಚೀನ ಸ್ಮಾರಕಗಳ ರಕ್ಷಣೆಯ 1904 ರ ಕಾಯಿದೆ ಪ್ರಕಾರ ಹೊನ್ನೆಹಳ್ಳಿ ಮಠವು ಸರಕಾರದ ಅಧೀನದಲ್ಲಿ ರಕ್ಷಿಸಲ್ಪಡಬೇಕೆಂದು ಬ್ರಿಟೀಷ ಸರಕಾರವು 13.09.1909 ರಂದು ನೋಟಿಸ ಜಾರಿಗೊಳಿಸಿತ್ತು. ಇದಕ್ಕೆ ಶ್ರೀಗಳವರು ಈ ಮಠವು ಇಲ್ಲಿಯ ಪೀಠಾಧಿಪತಿಗಳಿಗೆ ಸೇರಿದ ಸ್ವತಂತ್ರ ಆಸ್ತಿಯೇ ಹೊರತು ಸಾರ್ವಜನಿಕ ಆಸ್ತಿಯಲ್ಲ. ಒಂದು ವೇಳೆ ಸರಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾದಲ್ಲಿ ಅಪಾರ ಶಿಷ್ಯರ ಭಾವನೆಗಳಿಗೆ ನೋವುಂಟಾಗುತ್ತದೆ. ಆದ್ದರಿಂದ ಈ ಆದೇಶ ರದ್ದುಪಡಿಸಬೇಕೆಂದು ವಿನಂತಿಸಿಕೊಂಡಿದ್ದರು.
ಇವರು ಸ್ವರ್ಣವಲ್ಲೀ ಮಠದ ಗುರುವಂಶಾವಳಿ ಮತ್ತು ಸಂಸ್ಥಾನದ ಪೂರ್ವ ಚರಿತ್ರೆಯನ್ನು ಲಭ್ಯವಿದ್ದ ಆಕರ ಸಾಮಗ್ರಿಗಳ ಆಧಾರದಿಂದ ಮತ್ತೊಮ್ಮೆ ಬರಸಿದರೆಂದು ತಿಳಿಯುತ್ತದೆ. ಶಿಷ್ಯರ ಅಭ್ಯುದಯಕ್ಕಾಗಿ ಶ್ರೀಗಳು ಅನೇಕ ಪ್ರಗತಿಪರ ಕಾರ್ಯಗಳನ್ನು ಹಮ್ಮಿಕೊಂಡರು. ಸಂಸ್ಥಾನದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು ಆಡಳಿತ ಮಂಡಳಿಯನ್ನು ಸ್ಥಾಪಿಸಿ, ಅನುಗುಣವಾದ ನಿಯಮಾವಳಿಯನ್ನು ರೂಪಿಸಿದರು ಇವರ ಅವಧಿಯಲ್ಲಿ ಶ್ರೀ ಮಠದ ಮೇಲೆ ಕಳ್ಳರ ದಾಳಿ ನಡೆದು ಅಪಾರ ನಷ್ಟ ಉಂಟಾಯಿತು. ಶ್ರೀಗಳವರು ಹತಾಶರಾಗದೆ ಶಿಷ್ಯರಲ್ಲಿ ಧೈರ್ಯ ಮತ್ತು ಸ್ಫೂರ್ತಿ ತುಂಬಿ ಸಂಸ್ಥಾನದ ಕೆಲಸ ಕಾರ್ಯಗಳನ್ನು ಮುನ್ನಡೆಸಿದರು.
ವಾರ್ಷಿಕ ಉತ್ಸವಗಳು, ರಥೋತ್ಸವ, ಧರ್ಮಶಿಷ್ಟಾಚಾರ, ಪೌರೋಹಿತ್ಯ, ಆಚಾರ ವಿಚಾರ, ಪ್ರಾಯಶ್ಚಿತ್ತ, ಕ್ರಿಯಾಚರಣೆ, ತ್ರಿರಾತ್ರಾಶೌಚ, ವೃಷೋತ್ಸರ್ಗ ಮುಂತಾದ ಧಾರ್ಮಿಕ ವಿಷಯಗಳ ಬಗ್ಗೆ ಶ್ರೀಗಳು ಸಾಕಷ್ಟು ಗಮನ ಹರಿಸುತ್ತಿದ್ದರು. ಕರಾವಳಿ ಪ್ರದೇಶದ ರಾಮಕ್ಷತ್ರಿಯ ಶಿಷ್ಯರಿಗೆ ಪುರೋಹಿತರಾಗಿ ಕಾರ್ಯನಿರ್ವಹಿಸಬೇಕೆಂದು ಗೋಕರ್ಣ ಹೊಸಮನೆ ಶಿವರಾಮ ಭಟ್ಟರಿಗೆ ಶ್ರೀಗಳವರು ನಿರೂಪ ಕಳಿಸಿದ ದಾಖಲೆ ಇದೆ.
ಶ್ರೀ ಗಂಗಾಧರೇಂದ್ರ ಸರಸ್ವತಿಗಳ ಕಾಲದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪೀಠವು ಸ್ಪಂದಿಸುತ್ತಿದ್ದ ಬಗ್ಗೆ ದಾಖಲೆಗಳಿವೆ. ಅಂದಿನ ದಿನಗಳಲ್ಲಿ ಬಹಳಷ್ಟು ಜನರು ಅನಕ್ಷರಸ್ಥರಾಗಿದ್ದುದರಿಂದ ಅವರನ್ನು ಸುಶಿಕ್ಷಿತರನ್ನಾಗಿ ಮಾಡಲು ಸಂಸ್ಥಾನವು ಪ್ರಯತ್ನಿಸುತ್ತಿತ್ತು. ಸ್ವರ್ಣವಲ್ಲೀ ಮಠಕ್ಕೆ ಪೂಜೆ-ಪುನಸ್ಕಾರ, ಯತಿಗಳ ಭಿಕ್ಷೆ, ಸಂತರ್ಪಣೆ, ಧರ್ಮ ಕಾರ್ಯಗಳಿಗೋಸ್ಕರ ಕಾಲಕಾಲಕ್ಕೆ ರಾಜಮಹಾರಾಜರಿಂದ ನೀಡಲ್ಪಟ್ಟ ಭೂಮಿಯನ್ನು ಸಂಸ್ಥಾನದ ಯತೀಶ್ವರರು ತಮ್ಮ ಶಿಷ್ಯರಿಗೆ ಮೂಲಗೇಣಿ ಅಥವಾ ಚಾಲಗೇಣಿ ಕರಾರಿನ ಮೇರೆಗೆ ದಯಪಾಲಿಸುತ್ತಿದ್ದರು. ಮಠದ ಭೂಮಿಯನ್ನು ಚಾಲಗೇಣಿ ಕರಾರಿನನ್ವಯ ಸೋಂದಾ ಮುಸಲ್ಮಾನರಿಗೂ ನೀಡುತ್ತಿದ್ದರೆಂದು ತಿಳಿದು ಬರುತ್ತದೆ.
ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1918 ರಿಂದ ಕ್ರಿಶ 1990 ) 53 ನೇ ಪೀಠಾಧಿಪತಿಗಳು. ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ 53ನೇ ಪೀಠಾಧಿಪತಿಗಳಾಗಿದ್ದರು. ಇವರು ಕ್ರಿಶ 1990 ರ ವರೆಗೆ ಸುದೀರ್ಘ 72 ವರ್ಷಗಳ ಕಾಲ ಈ ಪೀಠವನ್ನಲಂಕರಿಸಿದ್ದರು. ಇವರು ಪೂರ್ವಾಶ್ರಮದಲ್ಲಿ ಭರತನಹಳ್ಳಿ ಸೀಮೆಯ ಅರಳಿಮಕ್ಕಿಯವರಾಗಿದ್ದರು. ಇವರು 11ನೇ ವಯಸ್ಸಿನಲ್ಲಿ ದಿನಾಂಕ 31.1.1917 ರಂದು ಅಂದಿನ ಪೀಠಾಧಿಪತಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಇವರನ್ನು ಶಿಷ್ಯರನ್ನಾಗಿ ಸಕಲ ವೈಭವಗಳೊಂದಿಗೆ ಸ್ವೀಕರಿಸಿದರು. “ಈ ಮಠ, ಈ ಆಸ್ತಿ ಸಂಪತ್ತು, ಈ ದೇವರು ಸಹಿತ ಶಿಷ್ಯರದ್ದು. ನಾವು ಸನ್ಯಾಸಿಗಳು, ದಂಡ ಕಮಂಡಲಗಳಷ್ಟೇ ನಮ್ಮ ಆಸ್ತಿ. ಕೌಪೀನ, ಕಾಷಾಯ ವಸ್ತ್ರಗಳೇ ನಮ್ಮ ಸಂಪತ್ತು ” ಎಂದು ತಮ್ಮ ಗುರುಗಳು ನಿರ್ದೇಶನ ನೀಡುತ್ತಿದ್ದರು. ಎಂದು ಶ್ರೀ ಸರ್ವಜ್ಞೇಂದ್ರ ಸರಸ್ವತೀಗಳು ಹೇಳುತ್ತಿದ್ದರು.
ಹಿಂದಿನ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಬ್ರಹ್ಮೀಭೂತರಾದಾಗ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳಿಗೆ ಕೇವಲ 13 ವರ್ಷ ವಯಸ್ಸು. ಆದ್ದರಿಂದ ಅವರ ಪೂರ್ವಾಶ್ರಮದ ತಾಯಿ ಮತ್ತು ಅಣ್ಣ ತಮ್ಮಂದಿರನ್ನು ಮಠದಲ್ಲಿಯೇ ವಾಸ್ತವ್ಯ ಮಾಡುವಂತೆ ಆಡಳಿತ ಮಂಡಳಿಯವರು ವ್ಯವಸ್ಥೆ ಮಾಡಿದ್ದರು. ಹಾನಗಲ್ ಮಹಾದೇವ ಶಾಸ್ತ್ರಿಗಳು ಗುರುಗಳಿಗೆ ವೇದಾಂತ ಪಾಠ ಮಾಡಿದರು. ಶ್ರೀಗಳವರು ಸಂಸ್ಕೃತ ವಾಜ್ಮಯದಲ್ಲಿ ಪಾಂಡಿತ್ಯ ಸಂಪಾದಿಸಿಕೊಂಡಿದ್ದರು. ಮುಂದೆ ಅವರು “ಪ್ರಹ್ಲಾದ ಚರಿತಂ” ಎಂಬ ಸಂಸ್ಕೃತ ನಾಟಕ ರಚಿಸಿದರು. ಕೂಡ್ಲಿ ಶೃಂಗೇರಿ ಮಠದ ವಿದ್ಯಾಭಿನವ ವಾಲುಕೇಶ್ವರ ಭಾರತಿ ಮಹಾಸ್ವಾಮಿಗಳಲ್ಲಿ ಶ್ರೀ ಸರ್ವಜ್ಞೇಂದ್ರರು ವೇದ ಮತ್ತು ವೇದಾಂತವೇ ಮೊದಲಾದ ಶಾಸ್ತ್ರಗಳನ್ನು ಅಧ್ಯಯನ ಮಾಡಿದರು.
ಅಂದಿನ ಮಠದ ಆರ್ಥಿಕ ಪರಿಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಅಡಿಕೆಗೆ ಬಂಗಾಲಿ ಮಣಕ್ಕೆ 3 ರೂಪಾಯಿ ದರವಿದ್ದಕಾಲ. ಗುರುಗಳು ವಿದ್ಯಾಭ್ಯಾಸಕ್ಕೂ ಪರದಾಡಬೇಕಾದ ಸ್ಥಿತಿ ಇತ್ತು. ಶಿರಸಿಯ ನೀಲಕಂಠರಾವ್ ಪಟವರ್ಧನ ಕುಟುಂಬವೇ ಶ್ರೀಗಳವರ ವಿದ್ಯಾಭ್ಯಾಸಕ್ಕೆ ಮುಂದಾಗಿ ವ್ಯವಸ್ಥೆ ಮಾಡಿತ್ತು. ಕೂಡ್ಲಿ ಶೃಂಗೇರಿ ಸ್ವಾಮಿಗಳೇ ಸರ್ವಜ್ಞೇಂದ್ರರಿಗೆ ಶ್ರೀಚಕ್ರವನ್ನು ಮಾಡಿಸಿಕೊಟ್ಟರು. ಅಂದು ಪುನಃ ಪ್ರಾರಂಭವಾದ ಶ್ರೀಚಕ್ರಪೂಜೆ ಇಂದಿನವರೆಗೂ ಸಾಗಿ ಬಂದಿದೆ. ಪೂಜಾನುಷ್ಠಾನಗಳಲ್ಲಿ ಸಮಯ ಪಾಲನೆ, ಯತಿಗಳಲ್ಲಿರಬೇಕಾದ ಆಶ್ರಮ ಧರ್ಮಶ್ರದ್ಧೆ, ಪಾಂಡಿತ್ಯ ಮತ್ತು ಕರ್ತವ್ಯ ನಿಷ್ಠೆ ಈ ವಿಷಯಗಳಲ್ಲಿ ಶ್ರೀ ಸರ್ವಜ್ಞೇಂದ್ರರು ಹೆಸರುವಾಸಿಯಾಗಿದ್ದರು.
1956 ರಲ್ಲಿ ಶ್ರೀರಾಜರಾಜೇಶ್ವರೀ ಸಂಸ್ಕೃತ ವಸತಿ ಪಾಠ ಶಾಲೆಯನ್ನು ಶ್ರೀಗಳವರು ಪ್ರಾರಂಭಿಸಿದರು. 1961 ರ ಡಿಸೆಂಬರ ದಿನಾಂಕ 8ರಿಂದ ದಿನಾಂಕ 15ರ ವರೆಗೆ 8 ದಿನಗಳ ಕಾಲ ಶ್ರೀಮಠದಲ್ಲಿ ಶ್ರೀಗಳವರ ಸಂಕಲ್ಪದಂತೆ ಸಹಸ್ರಚಂಡಿಯಾಗ ನೆರವೇರಿತು. ಶಿಷ್ಯರು ಸೇರಿ ಶ್ರೀಗಳವರ ಸಂಕಲ್ಪವನ್ನು ಅತ್ಯಂತ ಉತ್ಸಾಹದಿಂದ ಪೂರೈಸಲು ಹಗಲಿರುಳೂ ಶ್ರಮಿಸಿದರು. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿತ್ತು.
ಶ್ರೀ ಮಠದ ಜೀರ್ಣೋದ್ಧಾರ ಕಾರ್ಯವನ್ನೂ ಶ್ರೀಗಳವರು ಕೈಕೊಂಡರು. ನೃಸಿಂಹ ದೇವರ ಎದುರಿನ ಘಂಟೆ ಮಂಟಪವನ್ನು ಶ್ರೀರಾಮ ಕ್ಷತ್ರೀಯ ಶಿಷ್ಯರು, ಮುಖ ಮಂಟಪವನ್ನು ತೋಟದ ಸೀಮಾಧ್ಯಕ್ಷ ಹುಳಗೋಳದ ವೆಂಕಟ್ರಮಣ ಹೆಗಡೆಯವರು, ಮತ್ತು ಗಂಗಾ ವಿಶ್ವೇಶ್ವರ ಮಂದಿರದ ಮುಖ ಮಂಟಪವನ್ನು ಭರತನಹಳ್ಳಿ ಸೀಮೆಯ ಭಂಡೀಮನೆ ರಾಮಚಂದ್ರ ಹೆಗಡೆಯವರು ಕಟ್ಟಿಸಿದ್ದರು.
1963 ರಲ್ಲಿ ಶ್ರೀಗಳವರು ಕಾಶಿಯಾತ್ರೆ ಕೈಕೊಂಡಿದ್ದರು. ಆ ಸಂದರ್ಭದಲ್ಲಿ ದೆಹಲಿಯ ಅಂದಿನ ರಾಷ್ಟ್ರಪತಿ ಡಾ|| ರಾಧಾಕೃಷ್ಟನ್ ರು ಭೇಟಿಯಾಗಿ ಆಶೀರ್ವಾದ ಪಡೆದರು. ಧರ್ಮ ಸಂಬಂಧಿ ವಿಷಯಗಳು ಸಂಸ್ಥಾನದಲ್ಲಿ ಪ್ರಸ್ತಾಪಿಸಲ್ಪಟ್ಟಾಗ, ಅಂಥ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಂಬಂಧಿಸಿದ ವ್ಯಕ್ತಿಗಳನ್ನು ಸಂಸ್ಥಾನಕ್ಕೆ ಕರೆಸಲಾಗುತ್ತಿತ್ತು. ವಿಚಾರಣೆ ನಡೆಸಿ ಅಪ್ಪಣೆಕೊಡುವ ಪರಮಾಧಿಕಾರ ಶ್ರೀಗಳವಾರದಾಗಿತ್ತು. ಮಹಾಸಂಸ್ಥಾನದ ಆಡಳಿತ ನಿರ್ವಹಣೆಗಾಗಿ ಅಂಗೀಕರಿಸಿದ ಘಟನೆ ಮತ್ತು ನಿಯಮಾವಳಿಗಳನ್ನೊಳಗೊಂಡ 8 ಪುಟಗಳ ಕಿರುಹೊತ್ತಿಗೆಯನ್ನು 1963 ರಲ್ಲಿ ಪ್ರಕಟಿಸಲಾಯಿತು. ಸೀಮೆಗಳಲ್ಲಿಯ ಅನೇಕ ಭೂಮಿಗಳು ಮಠಕ್ಕೆ ಸೇರಿದ್ದರಿಂದ ಮಠಕ್ಕೆ ವಾರ್ಷಿಕ ಗೇಣಿ ಕೊಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಈ ಪದ್ದತಿ ಈಗ ರದ್ದಾಗಿದೆ.
ಳೆದ ಶತಮಾನದ ಆರಂಭದಲ್ಲಿ ಸ್ವರ್ಣವಲ್ಲೀಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು ಏಳು ದಶಕಕ್ಕೂ ಹೆಚ್ಚುಕಾಲ(1917-1990) ಶ್ರೀಮಠದ ಸರ್ವತೋಮುಖ ಬೆಳವಣಿಗೆಗೆ ಕಾರಣವಾದರು.ಆರ್ಥಿಕವಾಗಿ ತುಂಬ ಸಂಕಟಕಾಲದಲ್ಲಿ ತಮ್ಮ ತಪಸ್ಸಿನ ಪ್ರಭಾವದಿಂದ ಈ ಧರ್ಮಸಂಸ್ಥಾನ ಅಭಿವೃದ್ಧಿ ಹೊಂದುವಂತೆ ಮಾಡಿದರು. ಶ್ರೀಮಠದ ಆರಾಧ್ಯ ದೇವರಾದ ಶ್ರೀ ರಾಜರಾಜೇಶ್ವರಿಯ ಆರಾಧನೆಯನ್ನು 55 ವರ್ಷಗಳ ಕಾಲ ಮಾಡುವ ಮೂಲಕ ಶ್ರೀಚಕ್ರಪೂಜೆಯ ಮಹಾಸ್ವಾಮಿಗಳೆಂದೂ ಪ್ರಸಿದ್ಧರಾದರು.ಶ್ರೀಲಲಿತಾ ಆರಾಧನೆ, ತಪಸ್ಸು ಕಠಿಣವಾದ ಅನುಷ್ಠಾನ ಪರಂಪರೆಯನ್ನು ಅವರು ಕೈಗೊಂಡರು.ತ್ರಿಕಾಲ ಪೂಜೆ ಮಾಡುವ ಮೂಲಕ ಶ್ರೀ ಸರ್ವಜ್ಞೇಂದ್ರರು ದಿವ್ಯ ತಪಸ್ವಿಗಳಾಗಿ ಖ್ಯಾತರಾದರು. ಗುರುಗಳು ಮಾಡಿದ ಸಹಸ್ರ ಚಂಡಿ ಯಾಗ ಅಭೂತಪೂರ್ವವಾಗಿತ್ತು. ಸರ್ವಧರ್ಮ ಸಮನ್ವಯದೃಷ್ಟಿಯ ಗುರುಗಳು ದ್ವೈತಪೀಠವಾದ ಉಡುಪಿಗೆ ತೆರಳಿ ಕೃಷ್ಣಾರ್ಚನೆ ಮಾಡಿದವರು.ಕಾಶಿಗೆ ತೆರಳಿ ವಿಶ್ವನಾಥನನ್ನು ಆರಾಧಿಸಿದವರು. ಭಾರತದ ರಾಷ್ಟ್ರಪತಿ ಶ್ರೇಷ್ಠ ತತ್ತ್ವಜ್ಞಾನಿ ಡಾ. ರಾಧಾಕೃಷ್ಣನ್ ಅವರನ್ನೂ, ಜ್ಞಾನಪೀಠಪ್ರಶಸ್ತಿ ಪುರಸ್ಕೃತ ವರಕವಿ ಬೇಂದ್ರೆಯವರನ್ನೂ ಆಶೀರ್ವದಿಸಿದವರು. ಸಾಮಾಜಿಕ ಕಾರ್ಯಗಳಲ್ಲೂ ಗುರುಗಳು ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇಂದಿನ ಶಿರಸಿ ಭಾಗದ ಅನೇಕ ಶೈಕ್ಷಣಿಕ ಸಹಕಾರಿ ಧಾರ್ಮಿಕ ಸಂಸ್ಥೆಗಳನ್ನು ಆರಂಭಿಸಲು ಆಶೀರ್ವದಿಸಿದವರು. ಶಿರಸಿಯ ತೋಟಗಾರರ, ಸೊಸಾಯಿಟಿ, ಎಮ್. ಎಮ್. ಕಾಲೇಜಿನ ಉದ್ಘಾಟನೆ ಮಾಡಿದ ಶ್ರೀ ಶ್ರೀ ಸರ್ವಜ್ಞೇಂದ್ರರ ಕೃಪೆಯಿಂದ ಅವು ಬೆಳೆದು ನಿಂತಿವೆ. ವೇದವಿದ್ಯಾ ವ್ಯಾಸಂಗಕ್ಕೆ ಉತ್ತೇಜನ ನೀಡಿದ ಗುರುಗಳು ಮಠದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ವೇದಾಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟು ಉಚಿತ ಪ್ರಸಾದ ನಿಲಯ ಸ್ಥಾಪಿಸಿದರು.
ಶ್ರೀ ಶ್ರೀ ಸರ್ವಜ್ಞೇಂದ್ರರು ಬರೆದ “ಪ್ರಹ್ಲಾದ ಚರಿತಮ್” ನಾಟಕ “ಯತಿಪರಿಚಯ” ವೆಂಬ ಸಂಸ್ಕೃತ ಕಾವ್ಯ ಅವರ ಪ್ರತಿಭೆ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.
ಮಾಹೇಂದ್ರೋ ವೈದಿಕೇಂದ್ರೋ ವಿಯದಮಲ ತನುರ್ವೈಭವೇಂದ್ರಶ್ಚಿದೇಂದ್ರೋ
ಭಾಲೇಭಾಭಾವಕೇಂದ್ರೋ ಭವಭಯತಮಸೋಭಾಸ್ಕರೇಂದ್ರೋ ಭವೇಂದ್ರಃ|
ಇಂದ್ರಃ ಪ್ರಾಣೇಶ್ವರಾಣಾಂ ಗಗನ ಚರಮರುಜ್ಜೀವನೇಂದ್ರೋ ಕವೀಂದ್ರೋ
ಸರ್ವಜ್ಞೇಂದ್ರೋ ದ್ವಿಜೇಂದ್ರೋ ಮಮ ಸ ಗಣಪತಿ ರ್ವೈದ್ಯುತೇಂದ್ರೋ ಹೃದೀಂದ್ರಃ ||
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು (ಕ್ರಿಶ 1991 ರಿಂದ ಪೀಠಾಧಿಪತಿಗಳಾಗಿದ್ದಾರೆ) 54ನೇ ಪೀಠಾಧಿಪತಿಗಳು ಇಂದಿನ ಶ್ರೀ ಗಂಗಾಧರೇಂದ್ರರು ಪೂರ್ವಾಶ್ರಮದಲ್ಲಿ ತೋಟದ ಸೀಮೆಯ ನಿಡಗೋಡಿನ ವೈದಿಕ ಮನೆತನದವರಾಗಿದ್ದಾರೆ. ಮುಮುಕ್ಷುವಾಗಿದ್ದ ಅವರಿಗೆ ಸನ್ಯಾಸಾಶ್ರಮ ಈ ಸಾಧನೆಗೆ ಸರಿಯಾದ ದಾರಿಯೆಂದು ದೃಢವಾಗಿತ್ತು. ಇವರು ದಿನಾಂಕ 2.2.1991 ರಂದು ತಮ್ಮ 22ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾಗಿ ರಾರಾಜಿಸುತ್ತಿದ್ದಾರೆ. ಅಂದಿನಿಂದ ಈ 25 ವರ್ಷಗಳಲ್ಲಿ ಶ್ರೀಗಳವರು ಕೈಕೊಂಡ ಕಾರ್ಯ ಚಟುವಟಿಕೆಗಳು ಬಹುಮುಖವಾಗಿದ್ದು ಚರಿತ್ರೆ ನಿರ್ಮಿಸಿವೆ. ಪರಂಪರೆಯನ್ನು ಉಳಿಸಿಕೊಂಡು ಆಧುನಿಕತೆಗೆ ಸ್ಪಂದಿಸುತ್ತಿರುವ ಶ್ರೀಗಳವರ ನಡೆ ರಾಷ್ಟ್ರವ್ಯಾಪಿ ಜನಮನ್ನಣೆಯನ್ನು ಗಳಿಸಿದೆ.
ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶ್ರೀಗಳವರ ಸಾಧನೆ ಅಸಾಧಾರಣವಾಗಿದೆ. ತ್ರಿಕಾಲ ದೇವತಾರ್ಚನೆ ಹಾಗೂ ಪ್ರತಿನಿತ್ಯ ತಪಸ್ಸಾಧನೆ ಇವುಗಳ ಬಲದಿಂದ ಶ್ರೀಗಳವರು ಆತ್ಮೋನ್ನತಿಯನ್ನು ಪಡೆದು ಕೊಳ್ಳುವದರ ಜೊತೆಗೆ ಶಿಷ್ಯ ಕಲ್ಯಾಣಕ್ಕಾಗಿಯೂ ಪ್ರಾರ್ಥಿಸುತ್ತಿದ್ದಾರೆ. ಯುಗಾದಿ, ಶ್ರೀ ಲಕ್ಷ್ಮೀ ನೃಸಿಂಹ ಜಯಂತಿ, ಶಂಕರ ಜಯಂತಿ, ಶರನ್ನವರಾತ್ರಿ, ಇತ್ಯಾದಿ ವಾರ್ಷಿಕ ಉತ್ಸವಗಳನ್ನು ಪರಂಪರೆಗೆ ಚ್ಯುತಿ ಬರದಂತೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
Source : http://swarnavalli.in/