ಪುರಾಣ ಪ್ರಸಿದ್ಧಿ ಮತ್ತು ಪ್ರಾಕೃತಿಕ ವೈಚಿತ್ರದ ಕಲ್ಲು ಬಂಡೆಗಳಿಂದ ಯಾತ್ರಾ ಸ್ಥಳವಾಗಿ ಬದಲಾಗಿದೆ. ದಿನ ನಿತ್ಯ ಯಾಣಕ್ಕೆ ಭೇಟಿ ನೀಡುವವರು ಸಂಖ್ಯೆ ನಾಲ್ಕಂಕಿಯನ್ನು ಸಮೀಪಿಸುತ್ತಿದೆ.
ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗಡಿಭಾಗದಲ್ಲಿ ಪಶ್ಚಿಮಘಟ್ಟದ ಘೋರ ಅರಣ್ಯದಲ್ಲಿ ಶಿರಸಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಯಾಣ ಪ್ರವಾಸವೇ ಒಂದು ವಿಶಿಷ್ಠ ಅನುಭೂತಿ. ಶಿರಸಿಯಿಂದ ಕುಮಟಾ ಮಾರ್ಗದ ಹೆದ್ದಾರಿಯಲ್ಲಿ ವಾನಳ್ಳಿ, ಮತ್ತಿಘಟ್ಟದ ಮೂಲಕ ಆಗಮಿಸಿದರೆ ರಸ್ತೆ ಮುಕ್ತಾಯಗೊಂಡ ಸ್ಥಳದಿಂದ ಸುಮಾರು 1 ಕಿ.ಮೀ. ನಡೆದುಕೊಂಡೇ ಸಾಗಬೇಕು. ಹಾಗೆ ಬರುವಾಗ ಅತಿವಿಶಿಷ್ಠ ಮರಗಿಡಗಳು, ಅಪರೂಪದ ಬೃಹತ್ ಬಳ್ಳಿಗಳು, ಅಮೂಲ್ಯ ಔಷಧ ಸಸ್ಯಗಳು ,ಅಲ್ಲಲ್ಲಿ ವಿಚಿತ್ರ ಕಲ್ಲು ಬಂಡೆಗಳು ಕಾಣುವುದು ಸಾಮಾನ್ಯ.
ಚಾರಣದ ಹಿತಾನುಭವದ ಮಾರ್ಗ :
ಆದರೆ ಪ್ರಯಾಣದ ದಾರಿಯಲ್ಲಿ ಝುಳು ಝುಳು ನಿನಾನದ ಹಳ್ಳ, ಬೇಸಿಗೆಯ ಬಿರು ಬಿಸಿಲಲ್ಲೂ ನಲಿಯುತ್ತಾ ಹರಿಯುವ ತೊರೆಗಳನ್ನು ನೋಡುವ ಆಸೆಯಿದ್ದರೆ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಕತಗಾಲ ಸನಿಹದ ಆನೆಗೊಂದಿ ಕ್ರಾಸ್ ಮೂಲಕ ಪ್ರಯಾಣಿಸಿಬೇಕು. ಕುಮಟಾದಿಂದ 30 ಕಿ.,ಮೀ.ದೂರದಲ್ಲಿರುವ ಕತಗಾಲ್ ನಿಂದ 1 ಕಿ.ಮೀ ಸ್ವಲ್ಪ ದೂರಕ್ಕೆ ಸಾಗುತ್ತಿದ್ದಂತೆ ಆನೆಗೊಂದಿಯಲ್ಲಿ ಯಾಣಕ್ಕೆ ದಾರಿ ಎಂಂಬ ಪ್ರವಾಸೋಧ್ಯಮ ಇಲಾಖೆಯ ನಾಮ ಫಲಕ ಗೋಚರಿಸುತ್ತದೆ. ಇಲ್ಲಿಂದ 16 ಕಿ.ಮೀ.ಚಲಿಸಿದರೆ ಯಾಣ ತಲುಪಬಹುದು. ಈ ಮಾರ್ಗದಲ್ಲಿ ಸಹ ಉತ್ತಮವಾದ ಟಾರು ರಸ್ತೆ ಇದ್ದು ಟಾರು ಕೊನೆಗೊಂಡ ಸ್ಥಳದಲ್ಲಿ ಅರಣ್ಯ ಇಲಾಖೆಯ ಗೇಟ್ ಇದೆ. ಅಲ್ಲಿಂದ ಮುಂದೆ ಮಣ್ಣು ಕಲ್ಲುಗಳಿಂದ ಕೂಡಿದ ಅಗಲವಾದ ಕಾಲು ರಸ್ತೆ ಎದುರಾಗುತ್ತದೆ. ಈ ಮಾರ್ಗದಲ್ಲಿ ಸಹ ಸುಮಾರು 1 ಕಿ.ಮೀ ನಡೆದುಕೊಂಡೇ ಯಾಣ ತಲುಪಬೇಕಾಗುತ್ತದೆ.
ದಾರಿಯಲ್ಲಿ ಹಳ್ಳ ಮತ್ತು ಸುಂದರ ಝರಿಗಳು
ಈ ಮಾರ್ಗದ ಪ್ರಯಾಣದಲ್ಲಿ ಪ್ರವಾಸಿಗರಿಗೆ ಮತ್ತು ಚಾರಣ ಪ್ರಿಯರಿಗೆ ಹೆಜ್ಜೆಗೂ ಉಲ್ಲಾಸ ನೀಡುವ ಹಳ್ಳದ ತೊರೆ ಮತ್ತು ಪಶ್ಚಿಮ ಘಟ್ಟದ ಘೋರ ಅರಣ್ಯದಿಂದ ಹರಿದು ಬರುವ ಸುಂದರ ನೀರ ಝರಿಗಳು, ಒರತೆಗಳು ಸಿಗುತ್ತವೆ. ಯಾಣದ ಹೊಳೆ ಎಂದೇ ಕರೆಯಲ್ಪಡುವ ಹೊಳೆ ಬಿರು ಬೇಸಿಗೆಯ ದಿನಗಳಾದ ಏಪ್ರಿಲ್ ಮೇ ತಿಂಗಳಲ್ಲಿ ಸಹ ನೀರಿನಿಂದ ಸಮೃದ್ಧವಾಗಿ ಹರಿಯುತ್ತಿರುತ್ತದೆ.ಬೇಸಿಗೆಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಿರುವುದರಿಂದ ಹೊಳೆಯ ಬಂಡೆಕಲ್ಲುಗಳ ಮೇಲೆ ಅಲ್ಲಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬಹುದು. ಹೊಳೆಯಲ್ಲೂ ಸಹ ಅಲ್ಲಲ್ಲಿ 8-10 ಅಡಿ ಎತ್ತರದಿಂದ ನೀರು ಧುಮುಕುತ್ತಿರುವ ಕಾರಣ ಕಿರು ಜಲಪಾತ ಸಂದರ್ಶನ ಮುದ ಸಿಗುತ್ತದೆ. ಹೊಳೆಯಲ್ಲಿ ಕೆಲ ಕಡೆ ಬೃಹತ್ ಗಾತ್ರದ ಮತ್ತು ಉದ್ದನೆಯ ಕಾಡಿನ ಮರಗಳು ಉರುಳಿ ಬಿದ್ದು ಸ್ವಾಭಾವಿಕವಾದ ಸೇತುವೆ ನಿರ್ಮಾಣವಾಗಿರುತ್ತದೆ. ಆ ಮರಗಳ ಮೇಲೆ ಓಡಾಡಿ, ಜೋಕಾಲಿಯಾಡಿ ಸಕತ್ ಮಜಾ ಪಡೆಯಬಹುದಾಗಿದೆ. ಅದೇ ಮಾರ್ಗದಲ್ಲಿ ಮುಂದಕ್ಕೆ ಸಾಗುತ್ತಿದ್ಧಮತೆ ಬೇಸಿಗಯಲ್ಲೂ ಸಹ ಝುಳು ಝುಳು ನಿನಾದದೊಂದಿಗೆ ಸ್ವಚ್ಛ ಜಲದಿಂದ ಹರಿಯುವ ತೊರೆಗಳು ಸಿಗುತ್ತವೆ. ಕಾಡಿನ ಒಡಲಿನಿಂದ ಹರಿದು ಬರುವ ಈ ತೊರೆಗಳಲ್ಲಿ ಸ್ವಲ್ಪ ಕಾಲ ಆಟವಾಡಿ ಸಾಗಿದರೆ ಸಿಗುವ ಖುಷಿಯೇ ಬೇರೆ.
ಯಾಣದ ಯಾನದಲ್ಲಿ ಚಾರಣದ ನೈಜ ಅನುಭವ ಪಡೆಯಲು ಶಿರಸಿ-ಕುಮಟಾ ಮಾರ್ಗದ ಕತಗಾಲ್ ಮೂಲಕ ಪ್ರಯಾಣ ಕೈಗೊಳ್ಳಲು ಕುಮಟಾದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರತಿದಿನ ಮೂರು ಸಲ ಬಸ್ ಸೌಕರ್ಯವಿದ್ದು ಸ್ವಂತ ವಾಹನವಿಲ್ಲದವರು ಬಸ್ ನಲ್ಲಿ ಸಾಗಿ ನಂತರ ಈ ಚಾರಣದ ಸುಖ ಅನುಭವಿಸಬಹುದಾಗಿದೆ.
ಲೇಖನ ಮತ್ತು ಫೋಟೋ-ಎನ್.ಡಿ.ಹೆಗಡೆ ಆನಂದಪುರಂ.
ವಿಳಾಸ- ನಿವಾಸ ರಾಮ ಮಂದಿರ ಪಕ್ಕ
ಅಂಚೆ- ಆನಂದಪುರಂ ತಾಲೂಕು-ಸಾಗರ, ಜಿಲ್ಲೆ-ಶಿವಮೊಗ್ಗ 577412
ಮೊಬೈಲ್- 9449686050 ಮತ್ತು 9632450025