ಕವಿಸಮಯ

ಜೀವ ಜಾಲಾಡುತಾ…

Jeeva Jaalaaduta-Poem of Dr.Chinmaya Rao

ಡಾ.ಚಿನ್ಮಯ ಎಂ.ರಾವ್ ಹೊನಗೋಡು

12-12-2019

ಎಲ್ಲವನು ತೆರೆದಿಟ್ಟೆ ನಿನ್ನೆದುರು
ಮುಚ್ಚಿಡಲು ಇನ್ನೇನು ಇರದಿರಲು
ಹಚ್ಚಿಕೊಳ್ಳುವ ತವಕ ಹೆಚ್ಚಾಗಿ ಬಂದಾಗ
ಚುಚ್ಚಿ ಹೋಗುವ ತವಕ ನಿನಗೇಕೆ?!
ಮೆಚ್ಚಿ ಬಂದವ ಮರುಗಿ ಅಳಬೇಕೆ?

Related Articles

ಮೇಲಿನವ ಎಲ್ಲವನು ಬಲ್ಲವನು
ನಗುವಾಗ ಅಳುವಾಗ ನಗುವವನು
ಕಹಿ ಅದೆಲ್ಲವನು ಸಿಹಿಮಾಡಿ ಸವಿಮಾಡಿ
ಚಿತ್ತ ಚಾಂಚಲ್ಯದಲೆ ಸಹಿಸುವನು, ತ-
-ನ್ ಎದುರ ತವಕವನೆ ತಣಿಸುವನು
ಮನಬಿಚ್ಚಿ ತನು ಬಿಚ್ಚಿ ಬೆತ್ತಲಾಗಿಸಿ ಸತ್ಯ
ಯಾರಾದರೇನೆಂದು ಜೀರ್ಣಿಸುವನು
ನಂದು ನಿಂದೆಲ್ಲವೂ ಒಂದೆನುತ ಅನವರತ
ದಹಿಸುತ್ತ ಕತ್ತಲೆಗೆ ಬೆಳಕಿವನು

ಚಿರವಾದ ಪ್ರೇಮವನು ಯಾಚಿಸುವ ನಿ-
-ನ್ ಎದುರು, ಎಲ್ಲವನು ಎದುರಲ್ಲೆ ಹರಗುವನು
ಮಕರಂದವಲ್ಲವದು ದುರ್ಗಂಧವೆಂದೆನುತ
ಯಾನವನೆ ಕೊನೆಗೊಳಿಸೊ ನಿನ ಪರಿಯ
ಮೇಲಂದು ಕೆಳಗಿಂದು ಮುಡಿ ಅಡಿಯಾ..?
ನನದಲ್ಲ ಈ ಮುದವು ಹಣೆಬರಹದೀ ಹದವು
ಕನಸ ಕೊಲ್ಲುವ ತವಕ ನನಗೀಗ? ಇಲ್ಲ…
ಚಿರವಾಗಿ ಇರಲೆಂಬ ಒಳತವಕ !
ರಮಿಸುವಂದದಿ ಅದು ಬರುವನಕ
ಪ್ರೇರಣಾರೂಪದಲೆ ಪ್ರೇಮವದು ಪಯಣಿಸುತ
ಮನ ಕರಗಿ ತನು ಸೊರಗಿ ಒಂದಾಗುತಾ…!
ಬೆಳಕಲ್ಲೆ ಕತ್ತಲೆಯು ಹಿಂದಾಗುತಾ..
ಕತ್ತಲೆಯೆ ಬೆಳಕಲ್ಲಿ ಮುಂದಾಗುತಾ…
ಹಿಂದುಮುಂದಿನ ಚಲನೆ ಹಿತವಾಗಿ ಮಿತವಾಗಿ
ಅಮಿತ ಆನಂದಕೆ ಜೀವ ಜಾಲಾಡುತಾ…!
ಅನವರತ ಮುದಸಹಿತ ಜಾಲಾಡುತಾ..
ಜೀವ ಜಾಲಾಡುತಾ..ಜೀವ ಜಾಲಾಡುತಾ…

-ಡಾ.ಚಿನ್ಮಯ ಎಂ.ರಾವ್ ಹೊನಗೋಡು

12-12-2019

Related Articles

Back to top button

Adblock Detected

Please consider supporting us by disabling your ad blocker