-ಚಿನ್ಮಯ.ಎಂ.ರಾವ್
ಹೊನಗೋಡು
ನಾದ ಆನಂದದ ಸ್ವರೂಪ
ದೈವ..ಮತ್ತೆಲ್ಲಿ..? ಇಲ್ಲೇ..!
ನಾದ ಆಂತರ್ಯವ ತೋರುವ ದೀಪ
ಜೀವತಂತಿ ಮೀಟುವ ಕಲೆ
ನಾದ ರಾಗಸೋನೆಯ ತುಂತುರು
ಜೀವಸ್ವರಶೋಧನೆಯ ಧಾರಾಕಾರ
ನಿತ್ಯಹರಿದ್ವರ್ಣದ ತವರು
ಬಗೆದವರಾರು ಪೂರ್ಣ ಈ ಸಾಗರ?
ನಾದ ಭಾವೈಕ್ಯದ ಅನುಸಂಧಾನ
ಅನುಷ್ಠಾನಗೊಳಿಸುವ ಸಹಜ
ಸವಿನಗುವರಳಿಸಲು ಸಾಧನ
ಅಂತರಂಗವದು ನೈಜ
ನಾದ ಮುದ್ದುಮಕ್ಕಳಾಡುವ
ಮುದ್ದಾದ ಮಾತುಗಳು
ಮೈಮನದ ಅಸ್ತಿತ್ವ ಮರೆತು
ಕುಣಿದಾಡುವ ಬಗೆ
ಸ್ವರದಾಟಿಕೆಗಳ ಪಾಲಿಸಿ
ಲಾಲಿಸುವ ತೆವಲು
ತಾಯ ಮಡಿಲಲ್ಲಿ ಸದಾ
ಬೆಸೆದುಕೊಳ್ಳುವ ಬೆಸುಗೆ
ನಾದ ಮೇಲುಕೀಳೆಂಬ
ಮೇರೆಮೀರಿದ ವೇದ
ಇದಕಿಲ್ಲ ಜಾತಿಮತ ಬೇಧ ವಾದ
ಯಾರೂ ಸಿದ್ಧಿಸಿಕೊಳ್ಳಬಹುದಾದ
ಅತ್ಯಪರೂಪದ ಕಷ್ಟಸಾಧ್ಯವಿಧ
ನಾದ ಅಗಾಧನಾದ ಬಾನಲ್ಲಿ
ಹಾರಾಡುವ ಪುಟ್ಟಹಕ್ಕಿ
ಮುಂದಾಗಲು ಬೀಸುವ
ರೆಕ್ಕೆಗಳೇ ಸ್ವರಕಂಪನ
ಸುಖವಾದ ತೀರದಲ್ಲಿ ಇಳಿದು
ಸಮಾಧಾನವಾಗಿ ಅನುಭವಿಸುವ
ಅಸಾಧಾರಣ ವಾಂಛೆ
ನಾದ ಹರಿಯುವ ನದಿ
ಅದರ ಆದಿ ಅನಾದಿ
ಸಂಗಮಿಸುವಲ್ಲಿ
ಸಾಗುವ ತುದಿ
ನಡುವೆ ಅಗಣಿತ
ತಿರುವು ಏರಿಳಿತ
ನಾದ ಗಾಡಾಂಧಕಾರದಲ್ಲಿನ
ಹಣತೆಯಲ್ಲಿರುವ ಪುಟ್ಟದೀಪ
ತನ್ನಿಂದ ಲೋಕಕ್ಕೆ ಬೆಳಕಾಗಿಸುವ
ನಿರಂತರ ಮಹಾಯಾಗ
ಸಾಧಕನ ಸಾಧನೆಯ
ತೈಲಧಾರೆಯೇ
ದೀಪದುಳಿವಿಗೆ ಮೂಲಕಾರಣ
ನಾದ ನಿರಾಭರಣ
ಸ್ವಚೈತನ್ಯದಿಂದ ಪರರ
ಆಲಂಗಿಸಿಕೊಳ್ಳುವ ಅಂತಃಕರಣ
ನಾದ ಸಾಗರದಲಿ ವಿಹರಿಸಲು
ಪುಟ್ಟದೋಣಿ..ಪುಟ್ಟದನಿ
ಹರಿವ ಜಲರಾಶಿಯ ನಡುವೆ
ನಮ್ಮದು ದಡ ಹುಡುಕುವ
ದೋಣಿಯ ಪರಿ
ಸಾಗುವಾಗ ಗುರುತಾಗಬಹುದು
ನಮ್ಮ ದಾರಿಯ ರೇಖೆ
ಅದು ನಿರಂತರವಲ್ಲ
ಮುಂದಾಗದಂತೆ ಹಿಂದೆ ಹಿಂದೆ
ಬೆಂಬಿಡದೆ ಹಿಂಬಾಲಿಸುವುದು
ಅಲೆಅಲೆಗಳ ಶಾಖೆ…!
ನಾದ ಶೋಧಿಸಿಕೊಳ್ಳುವ
ಆನಂದದಾಯಕ ಕಾಯಕ
ಹಂತಹಂತವಾಗಿ ವೇದ್ಯ
ಹಂತಗಳು ಅನಂತ
ವಿಶಾಲ ಮನೋದಿಗಂತದೊಳು
ನಾದ “ಅನವರತ ಅನಾಹತ”.
-ಚಿನ್ಮಯ.ಎಂ.ರಾವ್
ಹೊನಗೋಡು
*********************