-ಡಾ.ಚಿನ್ಮಯ ಎಂ ರಾವ್ ಹೊನಗೋಡು
ಊರು ಸಮೀಪಿಸುತ್ತಿದೆ
ಅದೆಷ್ಟು ಬೇಗ ಕೂಡಿಕೊಳ್ಳುತ್ತಿದೆ
ಮತ್ತೆರಡು ಮಾತು ಮುಗಿವ ಮುನ್ನವೇ
ಅಂತರ ನಾಶವಾಗಿದೆ
ತಲುಪುವ ತಾಣವು
ಹೊರಟ ಜಾಗವೇ ಆಗಿದೆ !
ದೂರವೆಂಬುದು ದೂರವಾಗಿ
ಸನಿಹವೆಂಬುದು ಸನಿಹವಾಗಿ
ಎರಡೂ ಒಂದೇ ಆಗಿದೆ
ಇನ್ನು ಮಾತು ಮುಗಿಸಿ
ಮೌನದಲ್ಲೇ ಕಾರ್ಯಾಚರಣೆಯನ್ನು
ಯಶಸ್ವೀಗೊಳಿಸುವ ಕಲೆಯನ್ನು
ಕರಗತ ಮಾಡಿಕೊಳ್ಳಬೇಕಿದೆ
ನೆನಪಿರಲಿ…
ನಮ್ಮ ಹುಟ್ಟು ಹಾಗೂ ಸಾವಿನ ಅಂತರವು
ಕಡಿಮೆಯಾಗುತ್ತಿದೆ
ಸನ್ನಡತೆಯೊಂದಿಗೆ ಸದಾ ಸುಖಿಸುವ ಸಂಭ್ರಮ
ನಮ್ಮ ಪಯಣದಲ್ಲಿ
ಪ್ರಣಯದ ಪರಾಕಾಷ್ಠೆಯನ್ನು ತಲುಪಿಸಲಿದೆ
ನಮ್ಮ ಸಂಚಾರದಲ್ಲಿ ಸಾಗುವಾಗ
ಇಂತಹ ತಾಣಗಳಲ್ಲಿ ಮನತಣಿವವರೆಗೂ
ಬಿಸಿಯನ್ನು ಆರಿಸಿಕೊಳ್ಳುವ ಬೆಸುಗೆಯನ್ನು
ಬೇರ್ಪಡಿಸಲಾಗದಂತೆ ಬೆಸೆಯಬೇಕಿದೆ
ಇಂತಹ ತಾಣಗಳಲ್ಲಿ ಎರಡೂ ಊರಿನ
ಇಂಚಿಂಚೂ ಪ್ರೇಕ್ಷಣೀಯ ಸ್ಥಳಗಳ
ಅನನ್ಯ ಅನುಭೂತಿಯನ್ನು ನಾವು
ಅನವರತ ಅನುಭವಿಸಬೇಕಿದೆ
ಅನಿರ್ದಿಷ್ಟಾವಧಿಯವರೆಗೆ ಕಾಲ ಕಳೆದು
ತಳ ಮಟ್ಟದ ಆಳ ಅಗಲಗಳನ್ನು ಸ್ಪರ್ಷಿಸುತ್ತಾ
ಸಾವಧಾನವಾಗಿ ರಸಭರಿತವಾಗಿಸಿ
ರೋಮಾಂಚನಗೊಳಿಸಿಕೊಳ್ಳಬೇಕಿದೆ
ವಿರಸಕ್ಕೆ ಆಸ್ಪದವೇ ಇಲ್ಲದಂತಾಗಿಸಿ
ಸರಸದ ಆಸ್ವಾದವನ್ನೇ ಆರಾಧಿಸಬೇಕಿದೆ
ಈ ಪರಿಯನ್ನು ಮಾದರಿಗೊಳಿಸಬೇಕಿದೆ
ನಮ್ಮ ಹುಟ್ಟು ಸಾವಿನ ಅಂತರವನ್ನು
ಅಂತರಗೊಳಿಸುತ್ತಾ
ಪಯಣದ ಅವಧಿಯನ್ನು ವಿಸ್ತರಿಸುತ್ತಾ
ವಿಸ್ತಾರವಾಗಿ ಸವಿಯಬೇಕಿದೆ
ಪಯಣ ಪೂರ್ಣಗೊಳ್ಳುವುದರೊಳಗೇ
ಇದನ್ನು ಇನ್ನಷ್ಟು ಮತ್ತಷ್ಟು
ಅರ್ಥಪೂರ್ಣವಾಗಿಸಬೇಕಿದೆ
“ಜೊತೆಗೆ” ಸಹಕರಿಸಬೇಕಿದೆ
ಇನ್ನೇಕೆ ವಿಳಂಬ?
ಪಯಣ ಈಗಾಗಲೇ ಆರಂಭವಾಗಿದೆ
ಮನಸ್ಸನ್ನು ಮಮತೆಯೊಂದಿಗೆ ಚಲಿಸಿಬಿಡು
ಅನುಮಾನದ ಅರಿವೆಯನ್ನು
ಸಾವಧಾನವಾಗಿ ಎತ್ತಿಟ್ಟು
ಎಲ್ಲ ಎಲ್ಲೆಗಳನ್ನೂ ಮೀರಿ
ನನ್ನದೆಲ್ಲವೂ ನಿನ್ನದೆಂದೂ
ನಿನ್ನದೆಲ್ಲವೂ ನನ್ನದೆಂದೂ
ಭಾವಿಸಿ, ಮುಂದೆ ಸಂಭವಿಸುವ
ಭವದ ಪರಮಾನಂದದ ಭಾಷ್ಯವನ್ನು
ಅರಿತುಬಿಡು..ಅರಿತುಬಿಡು..
********
Feb 8, 2021