ಸಂಗೀತ ಸಮಯ

ಶಾಸ್ತ್ರೀಯ ಸಂಗೀತವನ್ನು ಸಾಧನೆ ಮಾಡುವ ವಿದ್ಯಾರ್ಥಿಗಳು ಜಗತ್ತಿಗೇ ಪ್ರಭೆ ಚೆಲ್ಲುವ ಪ್ರಖರ ಸೂರ್ಯನಂತೆ

ರಾಜರಾಜೇಶ್ವರಿನಗರದಲ್ಲಿ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ೨೦೧೭-೧೮ನೆಯ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ

ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ೨೦೧೭-೧೮ನೆಯ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಕಳೆದ ಭಾನುವಾರ ಜನವರಿ ಇಪ್ಪತ್ತೊಂದರಂದು ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಟೌನ್ ಶಿಪ್ ನ ಗುಡ್ಡದ ಮೇಲಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಒಳಾಂಗಣ ಸಭಾಂಗಣದಲ್ಲಿ ನಡೆಯಿತು.

 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಜಯನಗರದ ಹೆಚ್.ಎನ್ ರಾಘವೇಂದ್ರ ರಾವ್ ಗುರೂಜಿ ಶಾಸ್ತ್ರೀಯ ಸಂಗೀತವನ್ನು ಸಾಧನೆ ಮಾಡುವ ವಿದ್ಯಾರ್ಥಿಗಳು ತಾರೆಗಳಿಗೂ ಮಿಗಿಲಾಗಿರುವ ಪ್ರಖರವಾದ ಪ್ರಭೆಯನ್ನು ಜಗತ್ತಿಗೆ ಚೆಲ್ಲುವ ಸೂರ್ಯನಂತೆ, ಇಂದು ಈ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿಲ್ಲ, ಬದಲಿಗೆ ತಾವು ಕಲಿತ ಸಂಗೀತ ವಿದ್ಯೆಯನ್ನು ಗುರು ಹಿರಿಯರಿಗೆ ಸಮರ್ಪಣೆ ಮಾಡುತ್ತಿದ್ದಾರೆ ಎಂದರು.

 

ಉದ್ಯೋಗ ನಿಮಿತ್ತ ವೃತ್ತಿಪರ ಶಿಕ್ಷಣಕ್ಕೇ ಮುಗಿ ಬೀಳುತ್ತಿರುವ ಇಂತಹ ಸ್ಪರ್ಧಾತ್ಮಕ ಯುಗದಲ್ಲೂ ಶಾಸ್ತ್ರೀಯ ಸಂಗೀತಕ್ಕೆ ತಮ್ಮ ಮಕ್ಕಳನ್ನು ಸೇರಿಸಿ ಅದರಲ್ಲಿ ಅವರ ಪಾಂಡಿತ್ಯವನ್ನು ನೋಡುವ ಆಸೆಯಿದೆ ಎನ್ನುವಂತಹ ಮನೋಭಾವದ ಪಾಲಕರಿಗೊಂದು ದೊಡ್ಡ ಸಲಾಮ್ ಎಂದ ಖ್ಯಾತ ಹಿನ್ನೆಲೆ ಗಾಯಕಿ ಸುಮಾ ಎಲ್.ಎನ್ ಶಾಸ್ತ್ರಿ ಸಂಗೀತವೆಂಬುದು ಅಂತರಾತ್ಮಕ್ಕೆ ಸಂಬಂಧಿಸಿದ ಒಂದು ಘನವಿದ್ಯೆ, ಕೇವಲ “ಸ” ಎಂಬ ಒಂದೇ ಒಂದು ಸ್ವರವನ್ನು ಶೃತಿಗೆ ಸೇರಿಸಿ ಹಾಡಿದರೆ ಆಗುವ ಆನಂದಾನುಭೂತಿಯೇ ಬೇರೆ ಎಂದು ವಿದ್ಯಾರ್ಥಿಗಳಿಗೆ ಸಂಗೀತದ ಮಹತ್ವವನ್ನು ಹೇಳಿದರು. ಶಾಸ್ತ್ರೀಯ ಸಂಗೀತದ ನಿರಂತರ ಸಾಧನೆಯಿಂದ ಮಾತ್ರ ಒಬ್ಬ ಒಳ್ಳೆಯ ಗಾಯಕರಾಗಿ ಹೊರಹೊಮ್ಮಬಹುದು. ನಿತ್ಯ ಮುಂಜಾನೆ ಸಂಗೀತದ ಬಾಲಪಾಠಗಳನ್ನು ಅಕಾರ ಮಾಡುವ ಮೂಲಕ ಶೃತಿ ಶುದ್ಧಿ, ಸ್ವರ ಶುದ್ಧಿ ಹಾಗೂ ಭಾವ ಶುದ್ಧಿಯನ್ನು ಹೊಂದಿ ಜಗತ್ತಿನ ಯಾವ ಪ್ರಕಾರದ ಸಂಗೀತವನ್ನೂ ಲೀಲಾಜಾಲವಾಗಿ ಹಾಡಬಹುದು ಎಂದು ಸಂಗೀತ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

 

ಕರ್ನಾಟಕ ರಕ್ಷಣಾ ವೇದಿಕೆಯ ಯುವನಾಯಕ ಧರ್ಮರಾಜಗೌಡ ಮಾತನಾಡಿ ಕನ್ನಡದ ಪ್ರತಿಭೆಗಳು ನಮ್ಮ ಕನ್ನಡತನವನ್ನು ಉಳಿಸಿಕೊಂಡು ವಿಶ್ವದೆಲ್ಲೆಡೆ ಕೀರ್ತಿ ಪಡೆದರೆ ಮಾತ್ರ ಅದು ಅರ್ಥಪೂರ್ಣ ಎಂದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ ಲಹರಿ ವೇಲು ಹಲವು ವಾಹಿನಿಗಳ ರಿಯಾಲಿಟಿ ಶೋಗಳಿಂದ ಅತಿ ಶೀಘ್ರದಲ್ಲಿ ಕೀರ್ತಿ ಪಡೆಯುವ ಕೆಲವು ಮಕ್ಕಳು ಶಾಸ್ತ್ರೀಯ ಸಂಗೀತದ ಸಾಧನೆಯಿಂದ ವಿಮುಖರಾಗುತ್ತಿದ್ದಾರೆ. ಅಂತಹ ಮಕ್ಕಳು ಒಳ್ಳೆಯ ಕಲಾವಿದರಾಗಿ ಬೆಳೆಯಲು ಸಾಧ್ಯವಿಲ್ಲ. ಈ ಬಗ್ಗೆ ಪಾಲಕರೂ ಗಮನ ಹರಿಸಬೇಕಾಗಿದೆ ಎಂದರು.

 

ಈ ಸಂದರ್ಭದಲ್ಲಿ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿರುವ ರಾಮಚಂದ್ರ ಮಾರ್ಕಾಂಡೆ, ನೀಲಕಂಠ ನಾಯ್ಡು ಹಾಗೂ ಕೇಶವ ಮೂರ್ತಿ ದಂಪತಿಗಳನ್ನು ಸನ್ಮಾನಿಸಲಾಯಿತು. ಚಂದನ ಮುರಳಿ, ಚಿರಾಗ್ ಕಾರ್ತೀಕ್ ಹಾಗೂ ಅನಘ ವಿ.ಭಟ್ ಈ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

 

ಮದ್ಯಾಹ್ನ ೨ ರಿಂದ ರಾತ್ರಿ ೯ ಗಂಟೆಯವರೆಗೆ ಅಂದರೆ ಸುಮಾರು ಏಳು ಗಂಟೆಗಳ ಕಾಲ ವಿದ್ಯಾಲಯದ ಹಲವು ವಿದ್ಯಾರ್ಥಿಗಳ ಸಂಗೀತ ಕಛೇರಿಗಳು ನಡೆಯಿತು. ವಿದ್ವಾನ್ ಬಳ್ಳಾರಿ ಸುರೇಶ್ ಕೆ. ಪಿಟೀಲಿನಲ್ಲಿ ಹಾಗೂ ವಿದ್ವಾನ್ ಜಿ.ಎಲ್ ರಮೇಶ್ ಮೃದಂಗದಲ್ಲಿ ಸಹಕರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

 

ವಿದ್ಯಾಲಯದ ಸಂಸ್ಥಾಪಕ ಹಾಗೂ ಪ್ರಾಂಶುಪಾಲಕ ಚಿನ್ಮಯ ಎಂ.ರಾವ್, ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್, ಅಕಾಡೆಮಿಯ ಗೌರವ ಸಲಹೆಗಾರರಾದ ಉದ್ಯಮಿ ರಾಜೇಶ್ ಬಾಬು, ಎಲ್.ಎನ್ ಶರ್ಮಾ, ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಸಂಗೀತಾಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ದೀಪಕ್ ಸಾಗರ್ ಹಾಗೂ ಕವಿತಾ ಪರ್ವತಿಕರ್ ನಿರೂಪಣೆ ಮಾಡಿದರು.

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.