ಸಂಗೀತ ಸಮಯ

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡ ಸ್ವರಮೇಧಾ ಸಂಗೀತೋತ್ಸವ

ಬೆಂಗಳೂರು : ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ನೆರೆದಿದ್ದ ಸಂಗೀತಪ್ರೇಮಿಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸ್ವರಮೇಧಾ ಸಂಗೀತೋತ್ಸವದಲ್ಲಿ ಸತತವಾಗಿ ಎಂಟು ಗಂಟೆಗಳ ಕಾಲ ಸಂಗೀತವನ್ನು ಆಸ್ವಾದಿಸುವ ಮೂಲಕ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಿದರು.

ಮಧ್ಯಾಹ್ನ 1 ಗಂಟೆಯಿಂದ ಆರಂಭಗೊಂಡು ಸಂಜೆ ಆರು ಗಂಟೆಯವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಹಾಡುವ ಮೂಲಕ ನೂರಾರು ಯುವಪ್ರತಿಭೆಗಳು ತಮ್ಮ ಪ್ರತಿಭಾ ಪ್ರದರ್ಶನವನ್ನು ಮಾಡಿದರು.

ಸಂಜೆ ಆರು ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ 91 ವರ್ಷದ ಹಿರಿಯ ಸಂಗೀತ ವಿದ್ವಾಂಸರಾದ ವಿದ್ವಾನ್ ಟಿ.ಆರ್ ರಂಗಸ್ವಾಮಿ ಅವರಿಗೆ “ಸ್ವರಮೇಧ ಸಂಗೀತರತ್ನ” ಬಿರುದನ್ನು ಪ್ರಧಾನ ಮಾಡಲಾಯಿತು. ಸನ್ಮಾನಿತರಾಗಿ ಮಾತನಾಡಿದ ರಂಗಸ್ವಾಮಿಯವರು ಕಳೆದ ಎಂಟು ದಶಕಗಳಿಂದ ನಡೆಸಿದ ತಮ್ಮ ಅನುಭವ ಸಂಪಾದನೆಯನ್ನು ಸಂಗೀತ ಕ್ಷೇತ್ರದ ಯುವ ವಿದ್ಯಾರ್ಥಿಗಳಿಗೆ ಧಾರೆಯೆರೆದರು. ಗಾಯನದಲ್ಲಿ ಶೃತಿಲಯಶುದ್ಧತೆ ಮಾತ್ರವಲ್ಲದೆ ಸಾಹಿತ್ಯಶುದ್ಧತೆ ಹಾಗೂ ಸಾಹಿತ್ಯದಲ್ಲಿ ಪದವಿಂಗಡಣೆಗಳ ಪ್ರಾಧಾನ್ಯತೆಯ ಬಗ್ಗೆ ಮಾತನಾಡಿದ ಅವರು ತಮಗೆ ಪ್ರಧಾನ ಮಾಡಲಾದ ಈ ಬಿರುದಿನಿಂದಾಗಿ ಸಂಗಿತಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಾದ ಜವಾಬ್ದಾರಿ ಎದುರಾಗಿದೆ ಎಂದರು.

“ಸ್ವರಮೇಧಾ ಸಂಗೀತ ವಿಭೂಷಣ” ಬಿರುದನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಸಂಗೀತ ವಿದುಷಿ ಶ್ರೀಮತಿ ಅವರು ಇಂದಿನ ಪಾಲಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತದ ಕಲಿಕೆಗೆ ಪ್ರಾಶಸ್ತ್ಯ ನೀಡುವುದರಿಂದ  ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಹಾಗೂ ಇಂತಹ ಸಂಸ್ಥೆಗಳು ಇನ್ನೂ ಹೆಚ್ಚಿನ ಸಂಖೆಯಲ್ಲಿ ಬೆಳೆದು ಭಾರತೀಯ ಶಾಸ್ತ್ರೀಯ ಸಂಗೀತದ ಹಿರಿಮೆ ಜಗತ್ತಿಗೆ ತಲುಪುತ್ತಲೇ ಇರಬೇಕು ಎಂದರು.

“ಸ್ವರಮೇಧಾ ಸಂಗೀತಶ್ರೀ” ಬಿರುದನ್ನು ಪಡೆದು ಮಾತನಾಡಿದ ಪ್ರಖ್ಯಾತ ಹಿನ್ನೆಲೆ ಗಾಯಕಿ ಚೈತ್ರ ಅವರು ಇಂದಿನ ಯುವ ಪೀಳಿಗೆ ಬೇರೆಯವರನ್ನು ಅನುಕರಿಸುವುದನ್ನು ಬಿಟ್ಟು ಸ್ವಂತಿಕೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕು. ಸಂಗೀತದ ಕಲಿಕೆಯಲ್ಲಿ ನಿಜವಾದ ಸಂಕಲ್ಪಶಕ್ತಿ ಹಾಗೂ ಶ್ರದ್ಧೆಯಿದ್ದರೆ ಮಾತ್ರ ಸಾಧಿಸಬಹುದು, ಇದು ಸುಲಭಸಾಧ್ಯವಲ್ಲ,ಕಷ್ಟಸಾಧ್ಯ ಎಂದರು. ಈ ಸಂದರ್ಭದಲ್ಲಿ ಅವರ ಸಾಧನೆಯನ್ನೊಳಗೊಂಡ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಸಭಿಕರ ಅಪೇಕ್ಷೆಯಂತೆ ಅಮೃತಧಾರೆ ಚಿತ್ರದ ಜನಪ್ರಿಯ ಗೀತೆ “ಹುಡುಗ ಹುಡುಗ” ಹಾಡನ್ನು ಹಾಡುವುದರ ಜೊತೆಗೆ ಶಾಸ್ತ್ರೀಯ ಸಂಗಿತದ ಕೃತಿಯೊಂದನ್ನೂ ಹಾಡಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದರು. ನಂತರ ಈ ಉತ್ಸವದಲ್ಲಿ ಭಾಗಿಯಾಗಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಚೈತ್ರ ಅವರು ಸ್ಮರಣಿಕೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ನಟ ವಿಜಯ್ ಕಾಶಿ ಅವರು ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಭಾಗದಿಂದ ಇಂತಹ ಮಹಾನಗರಕ್ಕೆ ಬಂದು ಸಂಗೀತದ ಸೇವೆಯಲ್ಲಿ ತೊಡಗಿರುವ ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಚಿನ್ಮಯ ರಾವ್ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಬೆಳೆಸುವಂತಾಗಲಿ ಎಂದು ಶುಭಹಾರೈಸಿದರು.

ಸಭಾಕಾರ್ಯಕ್ರಮದ ನಂತರ ಕಡೆಯ ಅವಧಿಯ ಸಂಗೀತದ ಕಛೇರಿಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ ಡಾ.ಚಿನ್ಮಯ ರಾವ್, ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಭರತ್ ರಾವ್ ಕೆ.ಎಸ್, ಸುಪ್ರಸಿದ್ಧ ಗೋಸೇವಕ ಮಹೇಂದ್ರ ಮುನ್ನೋಟ್ ಹಾಗೂ ಉದ್ಯಮಿ ರಾಜೇಶ್ ಬಾಬು ಈ ಸಂದರ್ಭದಲ್ಲಿ ಹಾಜರಿದ್ದರು. ಪಕ್ಕವಾದ್ಯದಲ್ಲಿ ಹಿರಿಯ ಮೃದಂಗ ವಿದ್ವಾನ್ ರಮೇಶ್, ಪಿಟೀಲಿನಲ್ಲಿ ವಿದ್ವಾನ್ ಸುರೇಶ್ ಹಾಗೂ ಅಮೃತವರ್ಷಿಣಿ ಕೆ.ಎಸ್ ಅವರು ಸಹಕರಿಸಿದರು. ಮೀನಾ ಶಾಂತಲ ಹಾಗೂ ಹಿಮಾ ಶ್ರೀನಿವಾಸ್ ಸಭಾಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.