-ತೃಪ್ತಿ ಹೆಗಡೆ
ಯುವಲೇಖಕಿ-ಪತ್ರಕರ್ತೆ
ನೆರಳಿಗೆ ಬೆಳಕಾಗೋ ಹಂಬಲ
ಬಿಸಿಲೋ, ಬೆಳದಿಂಗಳೋ
ಕಪ್ಪು ಕಪ್ಪೇ…
ಬಿಳಿಯಾದೀತೇ ನೆರಳು?
ಹಣತೆ ನಕ್ಕಾಗೆಲ್ಲ ಅಸೂಯೆ
ತಾನೂ ಬೆಳಗುವ ವಾಂಛೆ
ವಾಸ್ತವದ ಅರಿವಿಲ್ಲ…
ಬೆಳಕಿನ ಭ್ರಮೆಯೇ ಬದುಕು
ಗುಡಿಯ ಹಣತೆಗೆ ನಗು
ತಾನು ಬೆಳಗುತ್ತೇನೆ ನಿರಂತರವಾಗಿ
ಅಡಿಯಲ್ಲಿ ಕತ್ತಲು
ಒಡಲಲ್ಲಿ ನಿಗಿ ನಿಗಿ ಕೆಂಡ !
ಒಂದೊಂದು ಹಿಡಿ ಬೆಳಕಿಗೂ
ಕರಕಲಾಗುವ ಬಸಿರು
ಅಡಿಯಲ್ಲಿ ಗಾಢಾಂಧಕಾರ
ತಾನು ನೆರಳಾಗಿದ್ದರೇ ಚೆನ್ನಿತ್ತು..!
ಹಣತೆಯ ಕಣ್ಣಲ್ಲಿ ತೆಳುವಿಷಾದ!
ನಿರಂತರ ಈ
ನೆರಳು ಬೆಳಕಿನ ತೊಳಲಾಟ
ದೂರದ ಬೆಟ್ಟ ಸಮೀಪಿಸುವವರೆಗೂ !
(22-1-2014)