ಕವಿತೆಯಲ್ಲರಳ ಬೇಕಾದ ಪದಗಳು
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ
ಬಂದು ಬಿಡು ಗೆಳತಿ !!
ತಿಳಿಯಾಗಸದಲ್ಲಿ
ಕಂಠಪೂರ್ತಿ ಸಮುದ್ರವ ಕುಡಿದ
ಚಂದ್ರ ಮೇಲೆ ಬರುವ ಮುನ್ನ
ಬಂದು ಬಿಡು ಗೆಳತಿ !!
ಬೆಂಕಿ ಕಡ್ಡಿಯ ಕಿಚ್ಚು
ಬೆರಳ ತುದಿಯ ಸೋಕುವ ಮುನ್ನ
ಬಂದು ಬಿಡು ಗೆಳತಿ !!
ಒಬ್ಬಂಟಿ ತನುವು
ಅಬ್ಬೇಪಾರಿ ಹೃದಯವ
ಇಡಿಯಾಗಿ ಇರಿದು
ಖೂನಿಗೈಯುವ ಮುನ್ನ
ಬಂದು ಬಿಡು ಗೆಳತಿ !!
ಸತ್ತ ನನ್ನ ತನದ
ಚಿತಾಭಸ್ಮವನ್ನು ಚರಂಡಿಯಲ್ಲಿ
ಹರಿ ಬಿಡುವ ಮುನ್ನ
ಬಂದು ಬಿಡು ಗೆಳತಿ !!
ನೆನಪುಗಳು ಊಳಿಟು
ಹೆಜ್ಜೇನು ದಾಳಿ ಮಾಡಿ
ನಾನು ಅರ್ಧ ಮಡಿಯುವ ಮುನ್ನ
ಬಂದು ಬಿಡು ಗೆಳತಿ !!
ನಶೆ ಏರಿದ ಸೂರ್ಯ
ನಿದ್ರೆ ಇರದೆ ಕಂಗೆಟ್ಟು
ಮುಗಿಲಿಗೆ ಏರುವ ಮುನ್ನ
ಬಂದು ಬಿಡು ಗೆಳತಿ !!
ಕಾಲದ ಹೆಜ್ಜೆ
ಸಪ್ಪಳದ ಪ್ರತಿಧ್ವನಿಯು
ಎದೆಯೊಳಗೆ ನಿಲ್ಲುವ ಮುನ್ನ
ಬಂದು ಬಿಡು ಗೆಳತಿ !!
ಹಳೆ ಜೀವನದ ಮುಳ್ಳು
ಗಡಿಯಾರದಂತೆ ತಿರುಗಿ
ಯಾವ ಕ್ಷಣದಲ್ಲಾದರೂ
ಬಾಂಬ್ ಅಂತೆ ಸಿಡಿಯುವುದು
ನಾ ಸಾಯುವ ಮುನ್ನ
ಬಂದು ಬಿಡು ಗೆಳತಿ !!
ಸ್ನೇಹದ ಗೂಡಿನಲ್ಲಿ
ಕುಳಿತು ಹಾಡುತ್ತಿರುವ
ಕೋಗಿಲೆಮರಿ ಕಾಗೆಯಾಗಿ
ನನ್ನ ಕುಕ್ಕಿ ಕೊಲ್ಲುವ ಮುನ್ನ
ಬಂದು ಬಿಡು ಗೆಳತಿ !!
-ರಶ್ಮಿ ಹೆಜ್ಜಾಜಿ