ಹಿರಿಯ ಪತ್ರಕರ್ತ ಕಗ್ಗೆರೆ ಪ್ರಕಾಶ ರಚಿಸಿರುವ ಕನ್ನಡ ಚಿತ್ರೋದ್ಯಮದ ಸುಮಾರು ೬೦ ಜನ ಕಲಾವಿದರ ಸಂದರ್ಶನ ಲೇಖನಗಳನ್ನೊಳಗೊಂಡ “ಕಲಾವಿದರ ಕಥಾನಕ” ಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯರವರು ಲೋಕಾರ್ಪಣೆ ಮಾಡಿದರು.
ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ನಾಲ್ಕು ದಿನಗಳ ಪುಸ್ತಕಮೇಳದಲ್ಲಿ ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ತುಂಬಾ ಸರಳವಾಗಿ ಮಾಡಲಾಯಿತು. ಪುಸ್ತಕವನ್ನು ಮೆಚ್ಚಿ, ಕಲಾವಿದರ ಬದುಕನ್ನು ಕಟ್ಟಿಕೊಟ್ಟಂತಹ ಈ ಪುಸ್ತಕಕ್ಕೆ ಕಂಬಾರರು ಶುಭಕೋರಿದರು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಡಾ.ಸಿದ್ದಲಿಂಗಯ್ಯನವರು ಕಗ್ಗೆರೆ ಪ್ರಕಾಶರ ಜೊತೆಗಿನ ಹಿಂದಿನ ದಿನಗಳನ್ನು ನೆನೆಪಿಸಿಕೊಂಡರು. ಪ್ರಕಾಶ್ ನನ್ನ ಆತ್ಮೀಯ ಸ್ನೇಹಿತ, ಜೊತೆಗೆ ಒಳ್ಳೆಯ ಬರಹಗಾರ ಕೂಡ. ಇದುವರೆಗೆ ಹಲವಾರು ಕೃತಿಗಳನ್ನು ಬರೆದಿದ್ದು, ಇದರಲ್ಲಿ ಕಲಾವಿದರ ಕಥಾನಕ ಕೂಡ ಅವರ ಸಾಹಿತ್ಯ ಕೃಷಿಯ ಸೇವೆಗೆ ಸೇರಿಕೊಂಡಿದೆ. ಈ ಕೃತಿಯ ಮೂಲಕ ೬೦ ಜನ ಕಲಾವಿದರನ್ನು ಸಂದರ್ಶಿಸಿ ಅವರ ಬಣ್ಣದ ಬದುಕನ್ನು ಒಂದು ವೇದಿಕೆಯಲ್ಲಿ ಕಟ್ಟಿಕೊಡಲಿಕ್ಕೆ ಪ್ರಯತ್ನಿಸಿದ್ದಾರೆ. ಕನ್ನಡ ಪುಸ್ತಕ ಓದುವ ವರ್ಗ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಲಾವಿದರ ಕಥಾನಕದಂತಹ ಕೃತಿಗಳು ಹೆಚ್ಚೆಚ್ಚು ಜನರನ್ನು ತಲುಪುವುದಂತೂ ನಿಶ್ಚಿತ. ಈ ಕೃತಿಗೆ ಒಳ್ಳೆಯದಾಗಲಿ ಅಂತ ಹರಸಿದರು.
ಪಂಚಮಿ ಪಬ್ಲಿಕೇಷನ್ಸ್ ಹೊರತಂದಿರುವ ಕಲಾವಿದರ ಕಥಾನಕ ಕೃತಿ ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಯ ಒಂದು ನೋಟವನ್ನು ನಿರೂಪಿಸುತ್ತದೆ. ಅಂದಿನ ಚಿತ್ರೋದ್ಯಮ, ನಿರ್ಮಾಪಕ, ನಿರ್ದೇಶಕರು, ಕಲಾವಿದರು, ಸಿನಿಮಾ ನಿರ್ಮಾಣ ಹೀಗೆ ಅಂದಿನಿಂದ ಇಂದಿನವರೆಗೆ ನಡೆದು ಬಂದ ದಾರಿಯ ಒಳನೋಟವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ ಎಂದು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಬಂದಿದ್ದ ಖ್ಯಾತ ಜೋತಿಷಿ ಮಹರ್ಷಿ ಶ್ರೀಜಯಶ್ರೀನಿವಾಸನ್ ಗುರೂಜಿ ಪ್ರಶಂಸೆಯ ಮಾತುಗಳನ್ನಾಡಿದರು.
ಪ್ರಾಧಿಕಾರ ಹಮ್ಮಿಕೊಂಡಿದ್ದ ಡಾ.ಚಂದ್ರಶೇಖರ್ ಕಂಬಾರರ ಸನ್ಮಾನ ಕಾರ್ಯಕ್ರಮ ಹಾಗೂ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೊ.ಶಾಂಭವಿ, ಪುಸ್ತಕ ಪ್ರಾಧಿಕಾರದ ಹಿರಿಯ ಅಧಿಕಾರಿ ಬಿ.ಹೆಚ್.ಮಲ್ಲಿಕಾರ್ಜುನ್, ಲೇಖಕ ಕಗ್ಗೆರೆ ಪ್ರಕಾಶ್ ಹಾಗೂ ಪಂಚಮಿ ಪಬ್ಲಿಕೇಷನ್ಸ್‌ನ ಶ್ರೀಧರ್.ಜಿ.ಸಿ.ಬನವಾಸಿ ಉಪಸ್ಥಿತರಿದ್ದರು.
ಕೃತಿಯ ಬಗ್ಗೆ : ಕಲಾವಿದರ ಕಥಾನಕ ಹೆಸರಿನ ಈ ಪುಸ್ತಕವು ಈ ಹಿಂದೆ `ವಿಕ್ರಾಂತ ಕರ್ನಾಟಕ’ದಲ್ಲಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದ್ದ `ಬಣ್ಣದ ನೆನಪು ಕಾಲಂನ ಸಮಗ್ರ ಸಂದರ್ಶನದ ಚಿತ್ರಣವು ಈ ಹೊತ್ತಿಗೆಯಲ್ಲಿ ಅಡಕವಾಗಿದೆ. ೭೫ ವರ್ಷಗಳ ಕನ್ನಡ ಸಿನಿಮಾ ರಂಗದಲ್ಲಿ ದೈತ್ಯ ಪ್ರತಿಭೆಗಳಾಗಿ, ಕಲಾವಿದರಾಗಿ, ತಂತ್ರಜ್ಞರಾಗಿ ದುಡಿದ ಸುಮಾರು ೬೦ ಜನ ಪ್ರತಿಭಾವಂತರ ಸಂದರ್ಶನ ಹಾಗೂ ಸಂಕ್ಷಿಪ್ತ ಜೀವನಚರಿತ್ರೆ ಇದೆ. ಆರ್.ಎನ್.ಜಯಗೋಪಾಲ್, ಬಿ.ಸರೋಜಾದೇವಿ, ಜಯಂತಿ, ಶ್ರೀನಿವಾಸಮೂರ್ತಿ, ರಾಮಕೃಷ್ಣ, ದುನಿಯಾ ವಿಜಿ, ಹಂಸಲೇಖ, ವಿನಯ್‌ಪ್ರಸಾದ್, ಜೂಲಿ ಲಕ್ಷ್ಮಿ, ಅಶ್ವಥ್, ಎ.ಎಸ್ ಮೂರ್ತಿ, ಗಾಯತ್ರಿ ಅನಂತ್‌ನಾಗ್ , ಪಂಡರಿ ಬಾಯಿ, ಶಂಕರ್‌ನಾಗ್ ಹೀಗೆ ಸುಮಾರು ೬೦ ಜನ ಕಲಾವಿದರು ಹಾಗೂ ತಂತ್ರಜ್ಞರ ಸಮಗ್ರ ಚಿತ್ರಣ ಈ ಕಲಾವಿದರ ಕಥಾನಕದಲ್ಲಿ ಕಟ್ಟಿಕೊಡಲಾಗಿದೆ.
ಲೇಖಕರ ಬಗ್ಗೆ: ಕಗ್ಗೆರೆ ಪ್ರಕಾಶ್ ಕಳೆದ ೨೦ ವರ್ಷಗಳಿಂದ ಪತ್ರಿಕೋದ್ಯಮ ಹಾಗೂ ಸಾಹಿತ್ಯಕ ವಲಯದಲ್ಲಿ ತೊಡಗಿಸಿಕೊಂಡವರು. ಇದುವರೆಗೂ ಸುಮಾರು ೧೬ ಕೃತಿಗಳನ್ನು ಕನ್ನಡ ಸಾಹಿತ್ಯ ವಲಯಕ್ಕೆ ನೀಡಿದ್ದಾರೆ. ಕಳೆದ ವರ್ಷ ಇವರು ರಚಿಸಿದ ನಟಿ ಶೃತಿಯ ಜೀವನ ಚರಿತ್ರೆ ಶೃತಿ ಪ್ರೇಮಾಯಣ ಅತ್ಯಂತ ಜನಪ್ರಿಯತೆಯನ್ನು ಪಡೆಯುವುದರ ಜೊತೆಗೆ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಕಲಾವಿದರ ಕಥಾನಕ ಕೃತಿಯನ್ನು ನೀಡುವುದರ ಮೂಲಕ ಕನ್ನಡ ಚಿತ್ರೋದ್ಯಮ ಬೆಳೆದು ಬಂದ ಹಾದಿಯ ನೆನಪಿಗೆ ಬೆಳಕನ್ನು ಚೆಲ್ಲಿದ್ದಾರೆ.
ಧನ್ಯವಾದಗಳೊಂದಿಗೆ
ವಿಶ್ವಾಸಪೂರ್ವಕವಾಗಿ
ಪಂಚಮಿ ಪಬ್ಲಿಕೇಷನ್ಸ್, ಬೆಂಗಳೂರು
15-2-2011