ಸ್ಯಾಂಡಲ್ ವುಡ್ಹೊತ್ತಿಗೆ ಹೊತ್ತು

ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಹನ್ನೊಂದು ತಿಂಗಳಲ್ಲಿ ನಾಲ್ಕನೇ ಮರುಮುದ್ರಣ ಕಂಡಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಾಲ್ಕನೇ ಆವೃತ್ತಿಯನ್ನು ಇಂದು ಬೆಂಗಳೂರಿನ ಪಿ.ಆರ್.ಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಪುಸ್ತಕದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಲೇಖಕ ಡಾ.ಶರಣು ಹುಲ್ಲೂರು, ಪ್ರಕಾಶಕ ಜಮೀಲ್ ಸಾವಣ್ಣ ಮತ್ತು ಪಿ.ಆರ್.ಕೆಯ ಸತೀಶ್ ಅವರು ಕೂಡ ಹಾಜರಿದ್ದರು.

15 ಮಾರ್ಚ್ 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್, ಸಪ್ನಾ ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.

ಈ ವರ್ಷದಲ್ಲಿ ಕನ್ನಡದಲ್ಲಿ ಬಂದ ಬಯೋಗ್ರಫಿಯಲ್ಲಿ ಹೆಚ್ಚು ಮಾರಾಟಕಂಡ ಪುಸ್ತಕ ಎನ್ನುವ ಹೆಗ್ಗಳಿಕೆ ‘ನೀನೇ ರಾಜಕುಮಾರ್’ ಪುಸ್ತಕದ್ದು. ಪುನೀತ್ ಅವರ ಬಾಲ್ಯದಿಂದ ಅವರ ನಿಧನದವರೆಗೂ ಅವರ ಬದುಕನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪುನೀತ್ ಅವರ ಸಿನಿಮಾ, ಅವರ ಸಮಾಜಸೇವೆ, ಅವರ ಜೀವನದಲ್ಲಿ ನಡೆದ ಘಟನೆಗಳು ಮತ್ತು ಪುನೀತ್ ಅವರ ಜೀವನದ ಜೊತೆಗೆ ಕನ್ನಡ ಸಿನಿಮಾ ರಂಗದ ಸಂಕ್ಷಿಪ್ತ ಚರಿತ್ರೆ ಕೂಡ ಈ ಪುಸ್ತಕದಲ್ಲಿದೆ. ಅಲ್ಲದೇ, ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ.

ಪುನೀತ್ ಅವರ ಸಾಕಷ್ಟು ಸಂದರ್ಶನಗಳನ್ನು ಮಾಡಿದ್ದ ಪತ್ರಕರ್ತ ಶರಣು ಹುಲ್ಲೂರು, ಪುನೀತ್ ಅವರ ಕುರಿತಾಗಿ ಅನೇಕ ಅಪರೂಪದ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರೆಯುತ್ತಾ ಹೋಗಿದ್ದಾರೆ. ಖ್ಯಾತ ಪತ್ರಕರ್ತರಾದ ಮುರಳಿಧರ ಖಜಾನೆ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ, ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.