ವಿಶ್ವದಾಖಲೆ ವಿಜೇತ ಯುವ ಸಂಗೀತ ನಿರ್ದೇಶಕ ಹಾಗೂ ಗಾಯಕ ಡಾ.ಚಿನ್ಮಯ ಎಂ.ರಾವ್ ಅವರಿಗೆ ಕಳೆದ ಡಿಸೆಂಬರ್ ೩೦, ಭಾನುವಾರದಂದು ಬೆಂಗಳೂರಿನ ಅರಮನ ಮೈದಾನದಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ “ಹವ್ಯಕ ಸಾಧಕ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಚಿನ್ಮಯ ಎಂ.ರಾವ್ ಅವರು, ಗುರು ದತ್ತಾತ್ರೇಯ ಪರಂಪರೆಯ ಯತಿವರೇಣ್ಯರಾದ ಶ್ರೀ ವಾಸುದೇವಾನಂದ ಸರಸ್ವತಿ ವಿರಚಿತ “ಶ್ರೀ ಗುರುಸಂಹಿತಾ” ಎಂಬ ಹೆಸರಿನ ಪವಿತ್ರ ಗ್ರಂಥದಲ್ಲಿನ ಒಟ್ಟು ೬,೬೨೧ ಸಂಸ್ಕೃತ ಶ್ಲೋಕಗಳನ್ನು ನನ್ನ ಗಾಯನದಲ್ಲಿ ಹಾಡಿ ಧ್ವನಿಮುದ್ರಿಕೆಯನ್ನು ಬಿಡುಗಡೆಗೊಳಿಸಿದ್ದೆ, ಇದು ಹಲವಾರು ವಿಶ್ವದಾಖಲೆಗಳಿಗೆ ಸೇರ್ಪಡೆಯಾಗಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿರುವುದಾಗಿ ವಿಶ್ವ ಹವ್ಯಕ ಸಮ್ಮೇಳನದ ಆಯೋಜಕರು ನನಗೆ ತಿಳಿಸಿದ್ದರು. ಹಾಗಾಗಿ ಇದು ಅಖಿಲ ಹವ್ಯಕ ಮಹಾಸಭಾ ದತ್ತ ಪರಂಪರೆಗೆ ನೀಡಿರುವ ಗೌರವ ಎಂದು ಭಾವಿಸಿ ನಾನು ಇದನ್ನು ವಿನಮ್ರವಾಗಿ ಸ್ವೀಕರಿಸಿದ್ದೇನೆ. ಈ ಪ್ರಶಸ್ತಿ ನನ್ನದೆಂದು ನಾನು ಭಾವಿಸಿಲ್ಲ. ಇದು ನನ್ನ ಮೂಲಕ ದತ್ತ ಪರಂಪರೆಗೆ ಅರ್ಪಣೆಯಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸಮ್ಮೇಳನದ ಗೌರವಾಧ್ಯಕ್ಷರಾದ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಶ್ರೀ ಜಿ.ಭೀಮೇಶ್ವರ ಜೋಶಿ, ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ್ ಖಜೆ, ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ ರವಿ, ಹಿರಿಯ ಚಲನಚಿತ್ರ ನಿರ್ದೇಶಕ ಹೆಚ್.ಆರ್ ಭಾರ್ಗವ, ಡಾ.ಕೆ.ಪಿ ಪುತ್ತುರಾಯ ಹಾಗೂ ಮುಂತಾದವರು ಉಪಸ್ಥಿತರಿದ್ದರು.