ಸಾಗರ : ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿಯ ಹೊನಗೋಡಿನಲ್ಲಿ ಇದೇ ಶನಿವಾರ ಸಂಜೆ ಪ್ರಪ್ರಥಮ ಬಾರಿಗೆ ಆಯೋಜನೆಯಾಗಿದ್ದ “ಹೊನಗೋಡು ಸ್ವರಮೇಧಾ ಉತ್ಸವ”, ಗ್ರಾಮೀಣ ಭಾಗದಲ್ಲಿಯೂ ಕಲಾ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಬಹುದೆಂಬುದಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ಗಾಯಕ ಗುಡ್ಡಪ್ಪ ಜೋಗಿ ಅವರು ಹಳ್ಳಿಗಳಲ್ಲಿ ನೆಲೆಸಿರುವ ರೈತಾಪಿ ವರ್ಗದ ಜನಗಳಿಗೂ ಕಲಾಸಕ್ತಿ, ಕಲೆಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡುವಂತಾಗಲು ಹಳ್ಳಿಯಲ್ಲಿಯೇ ನಡೆಯುತ್ತಿರುವ ಇಂತಹ ಕಲಾ ಉತ್ಸವಗಳು ಸಹಕಾರಿಯಾಗುತ್ತವೆ. ಎಲ್ಲಾ ಉತ್ಸವಗಳೂ ನಗರ ಕೇಂದ್ರೀಕೃತವಾಗಿ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸ್ವರಮೇಧಾ ಸಂಸ್ಥೆ ಮಾತ್ರ ಇಂತಹ ವಿಶಿಷ್ಠ ಉತ್ಸವವನ್ನು ಹೊನಗೋಡು ಎಂಬ ಈ ಕುಗ್ರಾಮದಲ್ಲಿ ಆಯೋಜಿಸಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ, ಈ ಪ್ರಯತ್ನ ನಿರಂತರವಾಗಿ ಮುನ್ನಡೆಯಲಿ ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಸ್ವರಮೇಧಾ ಸಂಗೀತ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ನೂತನವಾಗಿ ನಿರ್ಮಾಣಗೊಂಡಿರುವ “ಸ್ವರಮೇಧಾ ವಿಶ್ವಸಂಗೀತ ಸಭಾಂಗಣಮ್” ಎಂಬ ಹೆಸರಿನ ಹೊರಾಂಗಣ ವೇದಿಕೆಯನ್ನು ಲೋಕಾರ್ಪಣೆಗೊಳಿಸಿದರು. ಈ ಮೂಲಕ ಒಂದು ಸಂಗೀತ ಶಾಲೆಯ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಆ ಶಾಲೆಯ ಹೊರಾಂಗಣ ವೇದಿಕೆಯೊಂದನ್ನು ತಾವೇ ಲೋಕಾರ್ಪಣೆಗೊಳಿಸಿದ್ದು ಲೋಕದಲ್ಲಿಯೇ ವಿಶೇಷವೆನಿಸಿತ್ತು.
ಆಶಯ ನುಡಿಯನ್ನು ನುಡಿದ ಸಾಗರದ ಪರಿಣಿತಿ ಕಲಾಕೇಂದ್ರದ ನಾಟ್ಯಾಚಾರ್ಯರಾದ ವಿದ್ವಾನ್ ಗೋಪಾಲ್ ಅವರು ಎಲ್ಲೇ ಕಲಾ ಉತ್ಸವಗಳು ನಡೆದರೂ ಕಲಾಪ್ರೇಮಿಗಳು ಅಲ್ಲೆಲ್ಲಾ ಭಾಗವಹಿಸಿ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಸಾವಿರಾರು ವರ್ಷಗಳಿಂದ ಕಲೆಯೆಂಬುದು ಪರಂಪರಾಗತವಾಗಿ ಉಳಿದುಕೊಂಡಿದ್ದು ಇಂತಹ ಉತ್ಸವಗಳಿಂದಾಗಿಯೇ ಎಂದು ಸ್ವರಮೇಧಾ ಸಂಸ್ಥೆಯ ಈ ಹೊಸಪ್ರಯತ್ನಕ್ಕೆ ಶುಭಾಶಯ ಕೋರಿದರು.
ಸ್ವರಮೇಧಾ ಸಂಸ್ಥೆಯ ಸಂಸ್ಥಾಪಕ, ವಿಶ್ವದಾಖಲೆ ವಿಜೇತ ಯುವ ಸಂಗೀತ ನಿರ್ದೇಶಕ, ಗಾಯಕ ಹಾಗೂ ಸಂಗೀತ ಗುರು ಡಾ. ಚಿನ್ಮಯ ಎಂ ರಾವ್ ಅವರು ಮಾತನಾಡಿ, ಸಂಗೀತದರೆ ಪ್ರಕೃತಿ. ಪ್ರಕೃತಿಯಲ್ಲೇ ಸಂಗೀತವಿದೆ. ಪ್ರಕೃತಿಯಲ್ಲೇ ಜಾತಿ, ಧರ್ಮ, ದೇಶ, ಭಾಷೆ, ಮೇಲು ಕೀಳು, ಬಡವ ಬಲ್ಲಿದ ಎಲ್ಲವನ್ನೂ ಮೀರಿದ ಸೌಂದರ್ಯವಿದೆ. ಆ ಸೌಂದರ್ಯದಲ್ಲೇ ಆಧ್ಯಾತ್ಮವಿದೆ. ಪ್ರಕೃತಿಯಲ್ಲೇ ಸಂಗೀತ, ಸಂಗೀತದಲ್ಲೇ ಸೌಂದರ್ಯ, ಸೌಂದರ್ಯದಲ್ಲೇ ಆಧ್ಯಾತ್ಮ ಎಲ್ಲವೂ ಒಂದರೊಳಗೊಂದು ಅಡಕವಾಗಿದೆ.
ಮಲೆನಾಡಿನ ಮಡಿಲಿನಲ್ಲಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊನಗೋಡು ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಪ್ರಕೃತಿಯ ಸೌಂದರ್ಯದೊಳಗಿರುವ ಸಂಗೀತದ ಆಧ್ಯಾತ್ಮವಿದೆ. ಸ್ವರಮೇಧಾ ಎಂಬ ವಿಶಿಷ್ಠ ಚಿಂತನೆಯಿಂದ ಕೂಡಿದ ಸಂಗೀತದ ಪರಂಪರೆಯೊಂದು ಇಲ್ಲಿ ಜನಿಸಿರುವುದೇ ಇದಕ್ಕೆ ಬಹು ದೊಡ್ಡ ಸಾಕ್ಷಿ. ಇಂತಹ ಪ್ರಕೃತಿ, ಇಂತಹ ಸಂಗೀತ, ಇಂತಹ ಸೌಂದರ್ಯ, ಇಂತಹ ಆಧ್ಯಾತ್ಮವನ್ನು ಹೊನಗೋಡಿನಿಂದ ವಿಶ್ವದಾದ್ಯಂತ ತಲುಪಿಸುವ ಉತ್ಸವವೇ “ಹೊನಗೋಡು ಸ್ವರಮೇಧಾ ಉತ್ಸವ” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವರಮೇಧಾ ಸಂಸ್ಥೆಯ ಗೌರವ ಸಲಹೆಗಾರರಾದ ಪ್ರಗತಿಪರ ಕೃಷಿಕ ಎಸ್ ಮೃತ್ಯುಂಜಯ ರಾವ್, ಪಿ.ಟಿ ಶಂಕರನಾರಾಯಣ ಹೆಗಡೆ, ಕೃಪಾನಂದ್, ಸುಬ್ರಾವ್, ಯುವನರ್ತಕಿ ಮಹತಿ ಆರ್ ಭಟ್ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಜೆ 4-30ಕ್ಕೆ ಆರಂಭವಾದ ಈ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಯುವ ಕಲಾವಿದರು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನವನ್ನು ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಸುಶ್ರುತ ಭಾರದ್ವಾಜ್ ಅವರ ಪಿಟೀಲು ಹಾಗೂ ಶ್ರೀನಿಧಿ ಬಿ.ಜಿ ಅವರ ಮೃದಂಗ ಮನಮೋಹಕವಾಗಿತ್ತು.
ಕಡೆಯದಾಗಿ ನಾಲ್ಕು ಗಂಟೆಗಳ ಕಾಲ ಪ್ರಮುಖ ಆಕರ್ಷಣೆಯಾಗಿ ಪ್ರಖ್ಯಾತ ಹರಿಕಥಾ ಕಲಾವಿದರಾದ ಹಡಿನಬಾಳಿನ ಹಿರಿಯ ಹರಿದಾಸರಾದ ವಿದ್ವಾನ್ ಗಣಪತಿ ಹೆಗಡೆ ಇವರಿಂದ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳವರ ಶ್ರೀ ಶ್ರೀಧರ ಗುರುಚರಿತ್ರೆಯ ಹರಿಕಥಾ ಕಾರ್ಯಕ್ರಮ ನಡೆಯಿತು. ಸಂವಾದಿನಿಯಲ್ಲಿ ಅರುಣ್ ಭಟ್ ಮೂರೂರು ಹಾಗೂ ತಬಲಾದಲ್ಲಿ ಗಜಾನನ ಯಾಜಿ ಮಣ್ಣಿಗೆ ಪಕ್ಕವಾದ್ಯದಲ್ಲಿ ಸಹಕರಿಸದರು. ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳ ಜೀವನಚರಿತ್ರೆಯಲ್ಲಿ ಭಾವಪರವಶರಾಗಿದ್ದ ಸಭಿಕರಿಗೆ ಸಮಯದ ಅರಿವೇ ಇರದೆ ಕಾರ್ಯಕ್ರಮ ತಡರಾತ್ರಿ 11-30ಕ್ಕೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
HONAGODU SWARAMEDHA NATIONAL FESTIVAL 2024 SELECTED VIDEO CLIPS – YouTube