ಬೆಂಗಳೂರು : ವಿಶ್ವಶಾಂತಿಗಾಗಿ ಸಂಗೀತ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವದಾದ್ಯಂತ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಧಕರನ್ನು ಹುಟ್ಟುಹಾಕುತ್ತಿರುವ ಸ್ವರಮೇಧಾ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಪಾಶ್ಚಾತ್ಯ ಸಂಗೀತದ ಆಕರ್ಷಣೆಗೆ ಮಾರು ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸ್ವರಮೇಧಾ ಸಂಸ್ಥೆ ಏರ್ಪಡಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ “ಸ್ವರಮೇಧಾ ಸಂಗೀತೋತ್ಸವ”ಕ್ಕೆ ಸಾವಿರಾರು ಜನ ಸೇರಿದ್ದಾರೆ ಎಂದರೆ ಅದೊಂದು ಆಶ್ಚರ್ಯಕರ ಹಾಗೂ ಆರೋಗ್ಯಕರ ಬೆಳವಣಿಗೆ, ಇದು ಹೀಗೆಯೇ ಮುಂದುವರೆಯಬೇಕು ಎಂದು ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕುಂಬಳಗೋಡು ಶಾಖಾಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವರಮೇಧಾ ಸಂಗೀತೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡ ಕಾರಣ ಸ್ವರಮೇಧಾ ಸಂಸ್ಥಾಪಕ ಸಂಗೀತಗುರು ಡಾ.ಚಿನ್ಮಯ ರಾವ್ ಅವರಿಂದ ಗುರುವಂದನೆ ಹಾಗೂ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಇಂತಹ ಸಮಾಜಮುಖಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಯುವಸಮುದಾಯವನ್ನು ಕಲಾವಿದರಾಗಲು ಪ್ರೇರೇಪಿಸುತ್ತಿದೆ ಎಂದರು. ಕೆಂಗೇರಿ ಬಿಜಿಎಸ್ ಶಿಕ್ಷಣಸಂಸ್ಥೆಯಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಸ್ವರಮೇಧಾ ಸಂಸ್ಥೆಯ ಶೀಲಾ ಸಿ ರಾವ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಪುಟ್ಟರಾಜು, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಂದ್ರ ಪ್ರಶಾಂತ್, ಬಿಜಿಎಸ್ ಕಾಲೇಜಿನ ಅಧ್ಯಾಪಕರು ಹಾಗೂ ಆಡಳಿತವರ್ಗ ಉಪಸ್ಥಿತರಿದ್ದರು.