-ಚಿನ್ಮಯ ಎಂ.ರಾವ್ ಹೊನಗೋಡು
ಬಿಳಿ ಹಾಳೆ ನೀನು ಬರೆಯಲಾ ನಾನು?
ಖಾಲಿ ಪುಟದಲೆ ಕುಳಿತು
ಖಾಲಿಯಾಗುವೆ ನೀನು.. ಖಾಲಿಯಾಗುವೆ ನೀನು..
ಪ್ರತಿ ಪುಟದ ತುಂಬೆಲ್ಲ ನಿನ್ ಹೆಸರ ಜಪವು
ಜಪ ಮಾಲೆ ತೊಡಿಸುವುದು ನನ್ನಯಾ ತಪವು
ತಪದ ತಾಪದಿ ಬೆಂದು ಬಳಲುವ ಮುನ್ನ
ಮುದ್ದಿಸಿ ಮನಸಾರೆ ಆಲಂಗಿಸೆನ್ನ
ಬಿಳಿ ಹಾಳೆ ನೀನು ಬರೆಯಲಾ ನಾನು?
ಬರೆಯ ಹೊರಡುವೆ ನಾನು ಅಣಿಗೊಳಿಸು ನೀನು
ಸ್ವಚ್ಛಂದ ನೀನು..ಏನ್ ಚಂದ ನೀನು.. -೧
ನಡು ಪುಟದಲೇ ನಲಿವ ನವಿಲು ಗರಿಯು ನೀನು
ಬಚ್ಚಿಟ್ಟು ಬಳಲುತಿಹ ಬರಿ ವಿರಹ ನೀನು
ವಿಹರಿಸು ಪುಟಗಳಲಿ ಅಕ್ಷರಾಂತರವಾಗಿ
ನಗ್ನವಾಗಿಸಿ ಅರಳು ಒಲುಮೆ ಚಿಲುಮೆಯು ಆಗಿ !
ಬಿಳಿ ಹಾಳೆ ನೀನು ಬರೆಯಲಾ ನಾನು?
ನಗ್ನಸತ್ಯದ ಕದವ ತೆರೆಯಲಾ ನಾನು
ತೆರೆಯಲಾ ನಾನು..? ಬೆರೆಯಲಾ ನಾನು..? -೨
ಅತಿ ನಿಗೂಢದ ಹೊನಲು ನನ್ನೆಡೆಗೆ ಬಾ ಎನಲು
ನಡೆಯ ನಡೆಸದೆ ಹೃದಯ ಮಿಡಿಸುವೆ ನೀನು
ಎದೆಯ ತುಡಿತವ ತಿಳಿವ ಸಂಚ ಗೊಂಚಲ ನೀನು
ಏನೊಂದನರಿಯದೆ ಬಾಡುವೆ ನಾನು
ಬಿಳಿ ಹಾಳೆ ನೀನು ಬರೆಯ ಬಯಸಿಹೆ ನಾನು
ತಂಗಾಳಿ ಬಂತೆಂದು ತೇಲದಿರು ನೀನು
ತಂಪೆರೆಯಲೂ ಬಲ್ಲೆ ನಿನ್ನೊಳಗೆ ನಾನು -೩
ಬಿಳಿ ಹಾಳೆ ತುಂಬೆಲ್ಲ ಪ್ರೆಶ್ನೆಗಳೆ ತುಂಬಿಹುದು
ಉತ್ತರದ ಹತ್ತಿರಕು ಬರಲು ಬಯಸೆಯ ನೀನು?
ಬವಣೆ ಬಾನೆತ್ತರಕೆ ಬೆಳೆಸುವೆಯ ನೀನು?
ಉಳಿವೆನಾ ನಾನು..? ಉಳಿವೆನಾ ನಾನು…?
ಬಿಳಿ ಹಾಳೆ ನೀನು ಬರೆಯಲಾ ನಾನು?
ಉತ್ತರಕೆ ಉತ್ತರವ ಕೊಡಲಾರೆ ನೀನು
ಕೊಡಲಾರೆ ನೀನು…ಬಿಡಲಾರೆ ನಾನು… -೪
ಬರೆಯುವ ದಾಹಕ್ಕೆ ನೀರೆರೆಯೆ ನೀರೆ
ತುಟಿಯಂಚ ಅಕ್ಷರಕೆ ಹದ ನೀಡಿ ಸೇರೆ
ಬೇರೆ ಭಾವವ ಕಳಚಿ ನನ್ನಲ್ಲಿ ಬೆರೆವ
ಮನಸು ಮಾಡೆಯ ನೀನು ಗೊಳಿಸುತ್ತ ತೆರವ
ಬಿಳಿ ಹಾಳೆ ನೀನು ಬರೆಯ ಬಂದಿಹೆ ನಾನು
ತೆರೆದು ತೇರಲಿ ಮೆರೆಸೆ ನಾನು ನಿನ್ನವನು
ನೀನು ನನ್ನವಳು…ಎಕಿನ್ನು ಕವಲು?! -೫
ಬಿಳಿ ಹಾಳೆ ಗೆರೆಗಳದು ಪಂಜರದ ತಂತಿ
ಕಂಬಿ ನಡುವಲಿ ಆಸೆ ಕಂಗಳಲಿ ಕಾಂತಿ
ನಾ ಹೋಗುವ ಮುನ್ನ ಬಯಕೆಗಳು ನಂದಿ
ನನ್ನೊಳಗೆ ನೀನಾಗು ಆನಂದ ಬಂಧಿ…
ಬಿಳಿ ಹಾಳೆ ನೀನು ಬರೆಯಲಾ ನಾನು?
ಪಂಜರದ ಗಿಣಿಯನ್ನು ಮುಕ್ತಗೊಳಿಸುವೆ ನಾನು
ಯುಕ್ತಿ ನೀಡುವೆ ನಾನು…ಭಕ್ತಿ ನೀಡುವೆ ನಾನು…-೬
ಬರೆಯಲೇ ಬೇಕೆಂಬ ಬಾಂಧವ್ಯ ನನಲಿ
ಬರೆಸಿಕೊಳ್ಳುವ ಬಯಕೆ ನಿನ್ನಲ್ಲು ಬರಲಿ
ಏನನ್ನು ಬರೆಯದೆ ಬಿಡುವೆನಾ ಖಾಲಿ?
ಹಾಡುವೆನಾ ಸ್ವರಗಳನು ನಿನ್ನನ್ನು ಕೇಳಿ?
ಬಿಳಿ ಹಾಳೆ ನೀನು ಬರೆಯಲಾ ನಾನು?
ಖಾಲಿ ತುಂಬಿದ ಪುಟವ ಖಾಲಿಗೊಳಿಸುವೆ ನಾನು
ಪೂರ್ಣತೆಯು ನೀನು…ಪರಿಪೂರ್ಣ ನಾನು..! -೭
ಪ್ರತಿ ಸಾಲ ಮೇಲೆಲ್ಲ ಹೊಂಗನಸ ಪದವ
ಬರೆಯಲೇ ಬೇಕೆಂಬ ಛಲದಲ್ಲಿ ಇರುವ
ಹೆಣಗಾಡುತಿರೆ ಮಣಿದು ಮನ್ನಿಸಲು ಬರವಾ?!
ಹೆಣವಾಗುವ ಮುನ್ನ ಮಿಲನಿಸಲು ಮರೆವಾ?
ಬಿಳಿ ಹಾಳೆ ನೀನು ಬರೆಯಲಾ ನಾನು?
ಹೆಣವಲ್ಲ ನಾನಿನ್ನು ಹವಣಿಸೇ ನೀನು
ಹಾರೈಸೆ ನೀನು…ಒಲುಮೆ ಹಾರೈಸೆ ನೀನು.. -೮
-ಚಿನ್ಮಯ ಎಂ.ರಾವ್ ಹೊನಗೋಡು
15-2-2014