ಕೃಷಿ-ಖುಷಿ

ಪುತ್ತೂರಿನ ಈ ಕೃಷಿಕ ಹತ್ತೂರಿನ ರೈತರಿಗೆ ಮಾದರಿ

ಭಾರತ ಹಳ್ಳಿಗಳ ದೇಶ. ಇಲ್ಲಿ ಕೃಷಿಯೇ ವಿಶೇಷ. ಒಂದೆಡೆ ತನ್ನ ಬೆವರ ಹನಿಗಳಿಂದ ಭೂಮಿಯನ್ನು ತಂಪಾಗಿಸಿ ಬೆಳೆ ತೆಗೆಯುತ್ತಿರುವ ರೈತ. ಇನ್ನೊಂದೆಡೆ ಮಧ್ಯವರ್ತಿಯೊಬ್ಬ ರೈತನ ಉತ್ಪನ್ನಗಳನ್ನು ತನಗೆ ಬೇಕಾದ ಬೆಲೆಗೆ ಮಾರಿ ಏ.ಸಿ.ರೂಮಿನಲ್ಲಿ ತಂಪಾಗಿ ಕುಳಿತು ನೊಟಿನ ರಾಶಿಗಳನ್ನೆಣಿಸುತ್ತಿರುವುದು ದುರಂತ! ಹಾಗಾದರೆ ಇದಕ್ಕೆಲ್ಲಾ ಪರಿಹಾರ ಏನು? ಈ ಕರಾಳ ವ್ಯವಸ್ಥೆಗೆ ಅಂತ್ಯ ಹಾಡುವುದು ಹೇಗೆ? ಉತ್ತರವಿದೆಯೆಂದು ಉತ್ಸಾಹದಿಂದ ಉತ್ತರಿಸುತ್ತಾರೆ ನಮ್ಮ ಕರಾವಳಿ ತೀರದ ಜನಪ್ರಿಯ ಕೃಷಿಕ ಸಿ.ಎಂ ಶ್ಯಾಮ ಶಾಸ್ತ್ರಿ.

ಪುತ್ತೂರು ಸಮೀಪದ ಇವರ ೪ ಜನ ಅಣ್ಣಂದಿರು ೨ ದಶಕಗಳ ಹಿಂದೆಯೇ ಉದ್ಯೋಗವನ್ನರಸಿ ಮಹಾನಗರಿಗಳತ್ತ ಮುಖಮಾಡಿ ಯಶಸ್ವಿಯಾದರು. ಅವರ ಪ್ರೀತಿಯ ಕಿರಿಯ ಸಹೋದರ ಶ್ಯಾಮ ಮಾತ್ರ ಅವರೆಲ್ಲರ ಆಶಯದಂತೆ ಮೂಲನೆಲೆಯಲ್ಲೇ ನಿಂತು ತೋಟವನ್ನು ನೋಡಿಕೊಳ್ಳುತ್ತಾ ಸಸ್ಯಸಂಕುಲವನ್ನು ಮಾತನಾಡಿಸುತ್ತಾ ಯಶಸ್ವಿಯಾಗಿದ್ದಾರೆ. ಅವರನ್ನು ಈ ಲೇಖಕ ಮಾತನಾಡಿಸಿದಾಗ ಹತ್ತುಹಲವು ಚಿಂತನೆಗಳು ಹಂತಹಂತವಾಗಿ ಹೊರಬಿತ್ತು. ನಾಡಿನ ಒಬ್ಬ ರೈತನಿಗೆ ಎಂತಹ ನಿಖರವಾದ ಮುಂದಾಲೋಚನೆ ಇರುತ್ತದೆ ಎಂಬುದಕ್ಕೆ ಶ್ಯಾಮ ಶಾಸ್ತ್ರಿಯವರು ಮಂಡಿಸುವ ಸಿದ್ಧಾಂತಗಳೇ ಸಾಕ್ಷಿ.

ರೈತರ ಯೂನಿಯನ್

ಅವರ ಪ್ರಕಾರ ರೈತರು ಬೆಳೆಯುವ ಬೆಳೆಗಳಿಗೆ ಯಾರೋ ಎಲ್ಲೋ ಕುಳಿತು ಅವರ ಅನೂಕೂಲಕ್ಕೆ ತಕ್ಕಂತೆ ದರ ನಿಗದಿ ಪಡಿಸುವುದರ ಬದಲು ರೈತರೇ ಧಾರಣೆಯನ್ನು ನಿಗದಿಪಡಿಸುವಂತಾಗಬೇಕು. ಇದಕ್ಕೆ ಸರಕಾರಗಳೇ ನೀತಿಯೊಂದನ್ನು ರೂಪಿಸಬೇಕು. ಪ್ರತೀ ತಾಲೂಕು ಕೇಂದ್ರಗಳಲ್ಲಿ ರೈತರಿಂದಲೇ ರೈತರಿಗಾಗಿ ನಡೆಯುವ ಯೂನಿಯನ್‌ಗಳು ಸ್ಥಾಪನೆಯಾಗಬೇಕು. ಬೇಡಿಕೆಗೆ ಅನುಗುಣವಾಗಿ ರೈತರಿಗೂ ಅನ್ಯಾಯವಾಗದಂತೆ ಕೃಷಿ ಉತ್ಪನ್ನಗಳಿಗೆ ಸ್ಥಿರಮಾರುಕಟ್ಟೆಯನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಸರಕಾರ ಹಾಗು ರೈತರ ನಡುವೆ ನೇರ ಸಂಪರ್ಕ ಏರ್ಪಡಬೇಕು. ಆ ಮೂಲಕ ಮಧ್ಯವರ್ತಿಗಳಿಂದಾಗುವ ಬೆಲೆಯ ಏರಿಳಿತ,ರೈತರ ಅನಾಹುತ ಎಲ್ಲವೂ ತಪ್ಪುತ್ತದೆ. ರೈತರಿಗೆ ನಿರಂತರವಾಗಿ ಒಳ್ಳೆಯ ಬೆಲೆ ಸಿಗುತ್ತದೆ. ಆರ್ಥಿಕವಾಗಿ ಆತ ಸಬಲನಾಗುತ್ತಾನೆ. ಇದರಿಂದ ಆತ ಕೆಲಸದವರಿಗೂ ಒಳ್ಳೆಯ ದಿನಸಂಬಳವನ್ನು ಕೊಡಬಲ್ಲ. ಆಗ ಶ್ರಮಜೀವಿಗಳ ಶ್ರಮಕ್ಕೂ ಒಂದು ಒಳ್ಳೆಯ ಬೆಲೆ ಸಿಗುತ್ತದೆ. ಕೃಷಿಕರು ನಗರದತ್ತ ಮುಖಮಾಡುವುದು ತಪ್ಪುತ್ತದೆ. ಕೃಷಿಉತ್ಪನ್ನಗಳು ಹೆಚ್ಚಾಗಿ ನಾವು ಆಮದು ಮಾಡಿಕೊಳ್ಳುವ ಬದಲು ರಫ್ತುಮಾಡುವಂತಾಗುತ್ತದೆ. ಹೀಗೆ ಈ ಪ್ರಕ್ರಿಯೆ ಸರಪಳಿಯಂತೆ ಕೆಲಸಮಾಡುತ್ತದೆ. ಕೊಂಡಿ ಆರಂಭದಲ್ಲೇ ತುಂಡಾದರೆ ರೈತನ ಜೀವನ ಅಸ್ತವ್ಯಸ್ತವಾಗಿ ದೇಶದಲ್ಲಿ ಕೃಷಿ ಉತ್ಪನ್ನಗಳ ಕೊರತೆ ಆರಂಭವಾಗುತ್ತದೆ ಎಂದು ನಿರರ್ಗಳವಾಗಿ ಶ್ಯಾಮ ತಮ್ಮ ವಿಚಾರಲಹರಿಯನ್ನು ಹರಿಬಿಡುತ್ತಾರೆ.

ಹೊಸ ಪ್ರಯೋಗ

ಅಡಿಕೆ,ತೆಂಗು ಮುಖ್ಯಬೆಳೆಯಾದರೂ ಉಪಬೆಳೆಯಾಗಿ ಇವರ ತೋಟದಲ್ಲಿ ಜಾಯಿಕಾಯಿ,ಕಾಳುಮೆಣಸು,ಬಾಳೆ,ಏಲಕ್ಕಿ ಇನ್ನಿತರ ಬೆಳೆಗಳೂ ಇವೆ. ಒಂದೊಂದು ಉತ್ಪನ್ನಗಳಿಗೆ ಒಂದೊಂದು ವರುಷ ಉತ್ತಮ ಬೆಲೆ ಬರುವುದರಿಂದ ಒಬ್ಬ ಆದರ್ಶ ಕೃಷಿಕ ತನ್ನ ತೋಟದಲ್ಲಿ ಸಾಧ್ಯವಾದಷ್ಟು ಉಪಬೆಳೆಗಳನ್ನು ಬೆಳೆಯಬೇಕೆಂಬುದು ಶ್ಯಾಮಾನುಭವ. ಅದರ ಜೊತೆಗೆ ಏನನ್ನಾದರೂ ವಿಭಿನ್ನಪ್ರಯೋಗ ಮಾಡಬೇಕೆಂದು ಶ್ಯಾಮ ಅಣ್ಣಂದಿರ ಸಹಕಾರ ಪಡೆದು ಮೂರು ವರುಷಗಳ ಹಿಂದೆ ಇಪ್ಪತ್ತು ಎಕರೆ ಜಾಗವನ್ನು ಖರೀದಿಸಿ ಶ್ರಿಗಂಧದ ಸಸಿಗಳನ್ನು ನೆಟ್ಟೇಬಿಟ್ಟರು. ಸ್ನೇಹಿತರ ಸಂಬಂಧಿಗಳ ಹಿಂಜರಿಕೆಯ ಮಾತುಗಳಿಗೆ ಕಿವಿಕೊಡದೆ ಮುನ್ನಡೆದುಬಿಟ್ಟರು. ನೆಟ್ಟ ಆರಂಭದಲ್ಲಿ ಸಸಿಗಳ ಪಕ್ಕದಲ್ಲಿರುವ ಗಿಡಮರಗಳಿಂದ ಮಳೆಗಾಲದಲ್ಲಿ ಹನಿಸುವ ನೀರಿನಿಂದಾಗಿ ಸಾವಿರಾರು ಸಸಿಗಳು ಸತ್ತುಹೋದವು. ಆದರೂ ಧೃತಿಗೆಡದೆ ಚಿಕ್ಕಚಿಕ್ಕ ಮರಗಳ ತಲೆಗಳನ್ನು ಸವರಿ ಮತ್ತೆ ಹೊಸ ಸಸಿಗಳನ್ನು ನೆಟ್ಟು ಪೋಸಿದರು.ಈಗ ಗಂಧದ ಗಿಡಗಳು ಅವರ ಎತ್ತರವನ್ನೂ ದಾಟಿ ಅವರನ್ನು ಕೃಷಿಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತಿದೆ! ಈಗ ಈ ಭಾಗದ ಕೆಲವು ರೈತರು ಗಂಧದ ಸಸಿಗಳನ್ನು ನೆಡುತ್ತಾ ಇವರ ದಾರಿ ಹಿಡಿಯುತ್ತಿದ್ದಾರೆ. ಶ್ರೀಗಂಧವನ್ನು ಬೆಳೆಸುವ ಧೈರ್ಯ ಮಾಡುತ್ತಿದ್ದಾರೆ.

ಹತ್ತೇ ವರುಷದಲ್ಲಿ ಕಡಿತಲೆ ಹಾಗು ಮಾರಾಟಕ್ಕೆ ಅಣಿಯಾಗುವ ಮರಗಳಿಗೆ ಆರನೇ ವರ್ಷದಿಂದ ವಿಶೇಷ ಕಾವಲು ಬೇಕೆನ್ನುತ್ತಾರೆ ಶ್ಯಾಮ. ಎಲ್ಲರೂ ಬೆಳೆಯುವಂತಾದರೆ ಅದೊಂದು ಸಾಮಾನ್ಯಸಂಗತಿಯಾಗಿ ಕಳ್ಳತನವೂ ಆಗುವುದಿಲ್ಲ. ಒಂದೊಂದು ಮರವೂ ಕನಿಷ್ಠ ಒಂದುಲಕ್ಷ ರೂಪಾಯಿ ಬೆಲೆಬಾಳುವುದರಿಂದ ರೈತರು ಆರ್ಥಿಕಸಂಕಷ್ಟದಿಂದ ಪಾರಾಗಲು ಇದೇ ಸುಲಭೋಪಾಯ. ಇದರಿಂದ ಶ್ರೀಗಂಧದ ಕೊರತೆಯೂ ನೀಗುತ್ತದೆ. ಗಂಧದಿಂದ ತಯಾರಾಗುವ ಸಾಬೂನು ಕೈಗಾರಿಕೆಗಳನ್ನು ಸರಕಾರ ಮುಚ್ಚುವುದೂ ತಪ್ಪುತ್ತದೆ. ಗುಡಿಕೈಗಾರಿಕೆಯ ಕುಶಲಕರ್ಮಿಗಳಿಗೂ ಗಂಧ ಯಥೇಚ್ಛವಾಗಿ ಕಡಿಮೆ ಬೆಲೆಗೆ ಸಿಗುವಂತಾಗುತ್ತದೆ. ಆ ಮೂಲಕ ಅವರ ಬಾಳೂ ಹಸನಾಗುತ್ತದೆ ಎನ್ನುವುದು ಅವರ ಅಭಿಮತ. ಮಕ್ಕಳು ಹುಟ್ಟಿದಾಕ್ಷಣ ವಿಮೆ ಮಾಡಿಸುವಂತೆ ಮನೆಯ ಎದುರಿಗೆ ಅವರ ಹೆಸರಿನಲ್ಲೊಂದು ಗಂಧದ ಸಸಿ ನೆಟ್ಟು ಪೋಷಿಸಬೇಕು. ಆ ಮೂಲಕ ಮುಂದೆ ಬೆಳೆದ ಮಕ್ಕಳಿಗೆ ಬೆಳೆದ ಗಂಧದ ಮರಗಳೇ ಶಿಕ್ಷಣ ಹಾಗು ಮದುವೆ ಖರ್ಚಿಗೆ ಆರ್ಥಿಕವಾಗಿ ಆಸರೆಯಾಗಬಲ್ಲದೆಂಬ ಭಾವನೆ ಶ್ಯಾಮ ಅವರದು.

ಕರ್ನಾಟಕ ಸರ್ಕಾರದ ತೋಟಗಾರಿಕ ಇಲಾಖೆಯು ಶ್ರೀಗಂಧದ ಕೊರತೆಯನ್ನು ತುಂಬಬೇಕೆಂದು ರೈತರು ತಮ್ಮ ಸ್ವಂತ ಜಾಗದಲ್ಲಿ ಗಂಧವನ್ನು ಬೆಳೆಯಲು ಅನುಮತಿ ಕೊಟ್ಟಿದೆ. ಇದಕ್ಕೆ ಸಹಾಯಧನ ಹಾಗು ಪ್ರೋತ್ಸಾಹವನ್ನೂ ಈಗಾಗಲೇ ನೀಡುತ್ತಿದೆ. ಇದರ ಸದುಪಯೋಗವನ್ನು ಪಡೆದು ರೈತರು ಕನ್ನಡನಾಡನ್ನು ಹೆಸರಿಗೆ ತಕ್ಕಂತೆ ಗಂಧದ ಗುಡಿಯನ್ನಾಗಿಸಬೇಕೆಂಬುದೇ ಶ್ಯಾಮ (೯೪೪೮೬೧೮೫೫೦ )ಅವರ ಆಶಯ. ಗಡಿನಾಡಿನ ಈ ಸಾಧಕನ ಸಾಧನೆಯನ್ನು ಈಗಾಗಲೇ ಕೇರಳದ ವಾಹಿನಿಗಳು,ಪತ್ರಿಕೆಗಳು ರೈತರಿಗೆ ಮಾದರಿಯಾಗಲೆಂದು ಬಿತ್ತರಿಸುತ್ತಿವೆ!

ಕೃಷಿನೀತಿಯನ್ನು ರೂಪಿಸುವ ಮಂತ್ರಿಗಳು,ಅಧಿಕಾರಿಗಳು ಇಂತಹ ನೂರಾರು ಆದರ್ಶ ಕೃಷಿಕರನ್ನು ಸದಾ ಸಂಪರ್ಕದಲ್ಲಿರಿಸಿಕೊಂಡು ಮುನ್ನಡೆದರೆ ಖಂಡಿತಾ ನಾಡಿನ ರೈತರಿಗೆ ಅನುಕೂಲವಾಗಿ ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತದೆ. ಹಸಿದ ರೈತನ ಬಾಳು ಹಸನಾಗುತ್ತದೆ.

ಲೇಖನಚಿನ್ಮಯ.ಎಂ.ರಾವ್ ಹೊನಗೋಡು

Wednesday, ‎May ‎18, ‎2011

**************************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.