-ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ
ಅಡಿಕೆ ತೋಟ ಅಥವಾ ವೀಳ್ಯದೆಲೆ ಹಬ್ಬಿಕೊಳ್ಳಲು ಅನುಕೂಲವಾದ ಮರಗಳನ್ನು ಬೆಳೆಸಿ ವೀಳ್ಯದೆಲೆ ಕೃಷಿ ನಡೆಸುವುದು ಎಲ್ಲೆಡೆ ಸಾಮಾನ್ಯ. ಆದರೆ ಹೊಲದಲ್ಲಿರುವ ಸಹಜ ಕಾಡಿನ ಮರಗಳಲ್ಲಿ ವೀಳ್ಯದೆಲೆ ಹಬ್ಬಿಸಿ ಸಮೃದ್ಧ ಎಲೆ ಪಡೆಯುವವರು ಅತಿ ವಿರಳ.ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ ಮುಗಳಿ ಗ್ರಾಮದ ಗಂಗಾಧರ ಗಣಪ ಗೌಡ ಎಂಬ ಯುವ ರೈತ ಹೊಲದಲ್ಲಿನ ಹಲಸು, ಮಾವು, ನೇರಳೆ ಮತ್ತಿ ಇತ್ಯಾದಿ ಕಾಡಿನ ಮರಗಳಿಗೆ ವೀಳ್ಯದೆಲೆ ಸಸಿ ಬೆಳೆಸಿ ಕಳೆದ ೪-೫ ವರ್ಷಗಳಿಂದ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.
ಇವರು ತೋಟದ ಸಾಲಿನಲ್ಲಿ, ಮನೆಯ ಎದುರಿನ ಮರಗಳ ಸನಿಹ ಎಲೆ ಬಳ್ಳಿ ನೆಟ್ಟು ವಿಫುಲವಾದ ಎಲೆ ಬೆಳೆ ಪಡೆಯುತ್ತಿದ್ದಾರೆ. ಕೊಳವೆ ಬಾವಿ ಹೊಂದಿರುವ ಇವರು ಸಾಕಷ್ಟು ನೀರಿನ ಸೌಲಭ್ಯ ಹೊಂದಿದ್ದಾರೆ. ಅಡಿಕೆ ತೋಟಕ್ಕೆ ಸ್ಪಿಂಕ್ಲರ್ ಮೂಲಕ ನೀರಾವರಿ ಮಾಡಿರುವ ಇವರು ಈ ಬಳ್ಳಿಗಳಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿಲ್ಲ. ಸ್ಪಿಂಕ್ಲರ್ ನೀರು ಸಾಕಷ್ಟು ಸಿಂಪಡಣೆಯಾಗಿ ಬಳ್ಳಿ ಬೆಳೆಯಲು ಅನುಕೂಲವಾಗಿದೆ.
ಮಾವು ಹಲಸು ಇನ್ನಿತರ ಮರಗಳಿಗೆ ಬುಡದಿಂದ ರೆಂಬೆ ರೆಂಬೆಗಳ ವರೆಗೆ ಚಿಗುರಿ ಹಬ್ಬಿ ನಿಂತಿರುವ ವೀಳ್ಯದೆಲೆ ಬಳ್ಳಿ ಇವರಿಗೆ ಸಾಕಷ್ಟು ಆದಾಯ ನೀಡುತ್ತಿದೆ. ಪ್ರತಿ ೨ ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ೬ ಸಲ ಎಲೆ ಕೊಯ್ಲು(ಎಲೆ ಕಟಾವು) ಮಾಡುತ್ತಾರೆ. ಜನವರಿ, ಮಾರ್ಚ, ಮೇ, ಜುಲೈ,ಸಪ್ಟೆಂಬರ್, ನವೆಂಬರ್ ತಿಂಗಳುಗಳ ಕೊನೆ ವಾರದ ಸುಮಾರಿಗೆ ಕೊಯ್ಲು ನಡೆಸುತ್ತಾರೆ. ಇವರು ಒಂದು ಮರಕ್ಕೆ ಹಬ್ಬಿರುವ ಬಳ್ಳಿಯಿಂದ ಒಂದು ಪೊಟ್ಟಲೆ(೬೦ ಕಟ್ಟು ) ಎಲೆ ಸಿಗುತ್ತದೆ. ಒಂದು ಕಟ್ಟು ಎಲೆ ಅಂದರೆ ೧೦೦ ಎಲೆಗಳು. ಒಂದು ಕಟ್ಟಿಗೆ ಸರಾಸರಿ ರೂ.೨೫ ರಿಂದ ೩೫ ಧಾರಣೆಗೆ ಮಾರುತ್ತಾರೆ. ಒಂದು ಮರಕ್ಕೆ ಹಬ್ಬಿಕೊಂಡಿರುವ ಮರದಿಂದ ವರ್ಷಕ್ಕೆ ರೂ.೯೦೦೦ ಕ್ಕೂ ಅಧಿಕ ಆದಾಯ ಪಡೆಯುತ್ತಾರೆ. ಗೊಬ್ಬರ, ನೀರು, ವೀಳ್ಯದೆಲೆ ಕೊಯ್ಲು ಮಾಡಿದ ಕೂಲಿ ಎಲ್ಲಾ ಲೆಕ್ಕ ಹಾಕಿದರೂ ಒಂದು ಮರದ ಬಳ್ಳಿಗೆ ವರ್ಷಕ್ಕೆ ೩೦೦ ರಿಂದ ೫೦೦ ಖರ್ಚು ಕಳೆದರೂ ರೂ.೮೫೦೦ ಲಾಭ ಸಿಗುತ್ತದೆ ಎಂದು ಗಂಗಾಧರ ಗೌಡ ಲಾಭದ ಲೆಕ್ಕಾಚಾರ ವಿವರಿಸುತ್ತಾರೆ. ಈ ರೀತಿಯ ಕೃಷಿಯಿಂದ ಹಲಸು, ಮಾವು, ಸಂಪಿಗೆ ಇತ್ಯಾದಿ ಮರಗಳ ಫಸಲಿನಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಅವುಗಳ ಬೆಳೆ ಸಹ ಚೆನ್ನಾಗಿಯೇ ಇವೆ ಎಂದು ಫಸಲನ್ನು ತೋರಿಸುತ್ತಾರೆ ಅವರು.
ತೋಟ ಅಥವಾ ಹೊಲದ ಸುತ್ತ ಇರುವ ಕಾಡು ಜಾತಿಯ ಮರ, ಮನೆ ಅಂಗಳ , ಬೇಲಿ ಸಾಲುಗಳಲ್ಲಿ ಇರುವ ಮಾವು ಹಲಸು ಇತ್ಯಾದಿ ಮರಗಳನ್ನು ಹಾಗೇಯೇ ಉಳಿಸುವುದಕ್ಕಿಂತ ವೀಳ್ಯದೆಲೆ, ಕಾಳು ಮೆಣಸು, ವೆನಿಲ್ಲಾ, ಮಲ್ಲಿಗೆ ಬಳ್ಳಿ ಇತ್ಯಾದಿ ಕೃಷಿ ನಡೆಸಿ ಕೈ ತುಂಬಾ ಆದಾಯ ಗಳಿಸಬಹುದು ಎಂಬುದಕ್ಕೆ ಗಂಗಾಧರ ಗೌಡ ಸುತ್ತ ಮುತ್ತ ರೈತರಿಗೆ ಮಾದರಿಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ತಮ್ಮ ಅಡಿಕೆ ತೋಟದ ನಡುವೆ ಕ್ರಮವಾಗಿ ಅನಾನಸ್, ಪೊಪ್ಪಾಯಿ, ಸುವರ್ಣಗಡ್ಡೆ, ಬಾಳೆ, ವೆನಿಲ್ಲಾ, ಕೋಕೋ , ಶೇಂಗಾ ಇತ್ಯಾದಿ ಬೆಳೆ ಬೆಳೆದು ಸಾಕಷ್ಟು ಆದಾಯ ಪಡೆದಿದ್ದ ಇವರು ತೋಟದ ಕೃಷಿಯಲ್ಲಿ ವಿನೂತನ ಶ್ರಮ ಪ್ರದರ್ಶಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅವರ ಮೊಬೈಲ್ ನಂಬರ್ ೯೭೩೮೩೫೭೨೫೫ ಅನ್ನು ಸಂಪರ್ಕಿಸಬಹುದಾಗಿದೆ.
ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ