ಅರಿವೇ ಗುರುಜೀವನ ಕಲೆ

ಮಾತಾ ಮಮತಾಮಯಿ ಗುರುವಾಗಿ ಮಾತೆ

PRATIBHA RAGHAVENDRA-ಪ್ರತಿಭಾ ರಾಘವೇಂದ್ರ, ಪುರಪ್ಪೇಮನೆ, ಮೊ: ೮೭೬೨೯೩೦೨೧೨

ಮಾತೆಯ ಮಮತೆಯ ಮಡಿಲು ನಮ್ಮ ಈ ಸ್ಥೂಲ ದೃಷ್ಟಿಗೆ ಪುಟ್ಟದಾಗಿ ಗೋಚರಿಸಿದರೆ, ಅವಳ ಅಂತರಂಗದ ಭಾವದ ಮಡಿಲು ಅನನ್ಯವಾದದ್ದು, ಅನಂತವಾದದ್ದು. ಪುಟ್ಟ ಮಮತೆಯ ಮಡಿಲಿನಲ್ಲಿ ಅನಂತ ಕಡಲಿನ ಮೊರೆತವಿದೆ. ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನ ಭವತಿ ಆಚಾರ್ಯ ಶ್ರೀ ಶ್ರೀ ಶಂಕರರ ಮಾತಿನಂತೆ ಎಷ್ಟೇ ಕೆಟ್ಟ ಮಕ್ಕಳಾದರೂ ಅವರ ಒಳಿತಿಗಾಗಿ, ಅವರಲ್ಲಿ ಒಳ್ಳೆಯ ಗುಣಗಳ ಬೆಳೆಸುವಿಕೆಯಲ್ಲಿ ತಾಯಿಯ ಹೃದಯ ಸದಾ ತುಡಿಯುತ್ತಿರುತ್ತದೆ. ಇದು ಜಗಜ್ಜನನಿಗೂ, ಲೌಕಿಕದ ಮಾತೆಯರಿಗೂ ಅನ್ವಯವಾಗುವಂಥದ್ದು. ಹಾಗಾಗಿ ಜಗಜ್ಜನನಿಯನ್ನು ಶ್ರೀಮಾತೆ ಎಂದರೆ ನಾವುಗಳು ಶ್ರೀಮತಿಯರಾಗಿ ಗುರುತಿಸಲ್ಪಟ್ಟೆವು.

ಗುರುಮೂರ್ತಿರ್ಗುಣನಿಧಿರ್ಗೋಮಾತಾ ಗುಹಜನ್ಮಭೂಃ ಎಂದು ಲಲಿತಾ ಸಹಸ್ರನಾಮದಲ್ಲಿ ಹೇಳಲ್ಪಟ್ಟಂತೆ ತಾಯಿ ಮಮತಾಮಯಿಯೂ ಹೌದು, ಗುರುಸ್ವರೂಪಳೂ ಹೌದು. ಗು ಎಂದರೆ ಅಂಧಕಾರ, ರು ಎಂದರೆ ಅದನ್ನು ನಿವಾರಿಸುವವರು. ಅಜ್ಞಾನವೆಂಬ ಅಂಧಕಾರವನ್ನು ನಿವಾರಿಸುವವರು ಗುರುಸ್ವರೂಪರು. ಮಾರ್ಕಾಂಡೇಯ ಪುರಾಣದಲ್ಲಿ ಹೇಳಿದಂತೆ ಯಾದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ಸರ್ವಭೂತಗಳಲ್ಲೂ ಮಾತೃಸ್ವರೂಪಿಣಿಯಾಗಿರುವವಳು ಶ್ರೀಮಾತೆ. ಹಾಗಾಗಿಯೇ ನಮ್ಮ ಹಿರಿಯರು ಯಾವುದರಲ್ಲೆಲ್ಲಾ ಗುರುತ್ವ ಇದೆಯೋ ಅದನ್ನೆಲ್ಲಾ ತಾಯಿ ಎಂದು ಕರೆದರು.

ಭರತಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು ಎಂದು ಮನತುಂಬಿ ಕವಿ ಹಾಡುವಲ್ಲಿ ಸತ್ಯತೆ ಅಡಕವಾಗಿದೆ. ನಿಜವಾಗಿಯೂ ಅವಳು ಸಂಸ್ಕೃತಿ ಎಂಬ ತೊಟ್ಟಿಲಲ್ಲಿಟ್ಟು ಸಂಸ್ಕಾರವನ್ನು ಕೊಟ್ಟು ನಮ್ಮನ್ನೆಲ್ಲಾ ಪೋಷಿಸುತ್ತಾಳೆ. ಸನಾತನ ಹಿಂದು ಸಂಸ್ಕೃತಿಯ ಬೇರಿರುವುದು ಈ ನಮ್ಮ ಪುಣ್ಯಭೂಮಿಯಲ್ಲಿ. ಆಚಾರ್ಯಶ್ರೇಷ್ಠರಾದ ಶ್ರೀ ಶ್ರೀ ಶಂಕರರು, ಮಧ್ವರು, ರಾಮಾನುಜಾಚಾರ್ಯರಂಥವರನ್ನು, ರಾಮಕೃಷ್ಣ ಪರಮಹಂಸ, ಶಾರದಾಮಾತೆ, ಸ್ವಾಮಿ ವಿವೇಕಾನಂದ, ರಮಣಮಹರ್ಷಿಗಳಂಥವರನ್ನು, ವಾಲ್ಮೀಕಿ, ಕುಮಾರವ್ಯಾಸ, ಪಂಪ, ರನ್ನ, ಕನಕದಾಸ, ಪುರಂದರದಾಸ, ತುಲಸೀದಾಸರಂತೆ ದಾಸಶ್ರೇಷ್ಠರನ್ನು, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿಯಂಥವರನ್ನು-ಹೀಗೆ ಅನೇಕಾನೇಕ ಸುಪುತ್ರರನ್ನು ಪಡೆದಂತಹ ಪುಣ್ಯಭೂಮಿ ಇದು. ಅವರುಗಳಲ್ಲಿ ಒಬ್ಬರ ಜೀವನಗಾಥೆಯೇ ನಮ್ಮನ್ನು ಪರಿಪೂರ್ಣ ವ್ಯಕ್ತಿ-ಶಕ್ತಿಯುತರನ್ನಾಗಿ ರೂಪಿಸಬಲ್ಲದು. ಹಾಗಾಗಿ ಭಾರತಾಂಬೆ ತಾಯಿಯಾಗಿ ಪೋಷಿಸುತ್ತಾ, ಗುರುವಾಗಿ ಮುನ್ನಡೆಸುವವಳು.

ವ್ಯಕ್ತವಾಗಿ ಅನ್ನಾಹಾರವನ್ನು ಕೊಟ್ಟು ಸಲಹುವ ಭೂಮಾತೆ, ಪ್ರಕೃತಿಮಾತೆಯರು ಅವ್ಯಕ್ತವಾಗಿ ಗುರುವಾಗಿ ನಮಗೆ ಪೂಜನೀಯರಾಗುತ್ತಾರೆ. ಎಷ್ಟೊಂದು ಶಿಸ್ತು, ನಿಃಸ್ವಾರ್ಥತೆ, ಸಹಕಾರತತ್ವ ಪ್ರಕೃತಿಯಲ್ಲಿ ಅಡಕವಾಗಿದೆ. ಯಾವೊಂದು ಪ್ರಾಣಿಯೂ ಒಡೆತನಕ್ಕಾಗಿ ಬಡಿದಾಡೋದಿಲ್ಲ. ಯಾವ ಕ್ರೂರಪ್ರಾಣಿಯೂ ತನ್ನ ಅವಶ್ಯಕತೆಗಿಂತ ಹೆಚ್ಚಿನದನ್ನು ಕೊಲ್ಲೋದಿಲ್ಲ, ಸ್ವೀಕರಿಸೋದಿಲ್ಲ. ಒಂದು ಸಣ್ಣ ಜೇನುಹುಳು ಕೂಡಾ, ಯಾವ ರೀತಿಯಿಂದಲೂ ಹೂವಿಗೆ ಘಾಸಿಯಾಗದಂತೆ ಮಕರಂದವನ್ನು ಹೀರುವುದನ್ನು ಕಾಣುತ್ತೇವೆ. ಮಕರಂದ ಹೀರಿಕೊಂಡಿರುವುದಕ್ಕೆ ಪರಾಗಸ್ಪರ್ಶಕ್ರಿಯೆಯಿಂದ ಪ್ರತ್ಯುಪಕಾರವನ್ನು ಮಾಡೋದನ್ನೂ ಕಾಣುತ್ತೇವೆ. ಗಾಳಿ, ನೀರು, ಬೆಳಕು, ಹೂ, ಹಣ್ಣು, ಮರ, ಗಿಡಗಳೆಲ್ಲಾ ನಮಗೆ ಜೀವನವನ್ನು ನಿಃಸ್ವಾರ್ಥತತೆಯಿಂದ ಸಾರ್ಥಕಗೊಳಿಸಿಕೊಳ್ಳುವ ಸಂದೇಶವನ್ನು ನೀಡುತ್ತವೆ.

ಕ್ರಮಯಾ ಧರಿತ್ರಿಯಾದ ಭೂಮಾತೆ ಮಾತೃತ್ವದ ಮೇರುವಾಗಿ ನಮ್ಮೆದುರು ನಿಲ್ಲುತ್ತಾಳೆ. ತನ್ನ ಗರ್ಭದಲ್ಲಿರುವ ನಿಧಿ ನಿಕ್ಷೇಪಗಳನ್ನು, ಜಲವನ್ನು ಅಗೆದು ತೆಗೆದಾಗಲೂ ಸಹನೆಯಿಂದ ತನ್ನಲ್ಲಿರುವುದನ್ನೆಲ್ಲಾ ಪ್ರಪಂಚದ ಹಿತಕ್ಕಾಗಿ ನೀಡುತ್ತಾಳೆ. ಆದರೆ ಸ್ವಾರ್ಥಿಯಾದ ಮನುಷ್ಯ ಮಾತ್ರ ಅತಿ ದುರಾಸೆಯಿಂದ, ಸ್ವಾರ್ಥಲಾಲಸೆಯಿಂದ ಅವಳಿಗೆ ಅಪಚಾರವೆಸಗುತ್ತಿದ್ದಾನೆ. ಪಾದಸ್ಪರ್ಶಂ ಕ್ಷಮಸ್ವಮೇ ಎಂಬ ಒಂದು ಸಣ್ಣ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸದಷ್ಟು ಮೂರ್ಖನಾಗಿದ್ದಾನೆ. ಅವಳು ನಮ್ಮ ನಮನಗಳನ್ನಾಗಲಿ, ಹೊಗಳಿಕೆಗಳನ್ನಾಗಲಿ ಬಯಸೋದಿಲ್ಲ. ಆದರೆ ತನ್ನ ಮಕ್ಕಳು ಸುಸಂಸ್ಕೃತರಾಗಿ ಬಾಳಿ ಬದುಕಬೇಕೆಂಬುದನ್ನು ಬಯಸುತ್ತಾಳೆ. ಭೂಮಿಪೂಜೆಯ ದಿನದಂದು ಹೇಳುವ ಸಂಪ್ರದಾಯದ ಹಾಡೊಂದಿದೆ. ಅದರ ಸಾರ ಹೀಗಿದೆ-ಒಮ್ಮೆ ಭೂದೇವಿ ವಿಷ್ಣುವಿನಲ್ಲಿ ಹೋಗಿ ತನ್ನ ಅಳಲನ್ನು ತೋಡಿಕೊಳ್ತಾಳೆ. ಯಾರ್‍ಯಾರನ್ನ ಈ ಭೂಮಿಯ ಮೇಲೆ ಹೊರುತ್ತೇನೆ, ಯಾರ್‍ಯಾರನ್ನ ಹೊರೋದಿಲ್ಲ ಅಂತ ಪಟ್ಟಿ ಮಾಡಿ ಹೇಳ್ತಾಳೆ. ಕೊನೆಯಲ್ಲಿ ಪಾಪಿಗಳನು ನಾ ಕಲ್ಲಂತೆ ಹೊತ್ತೆನು, ಸಾಧು ಸಜ್ಜನರನು ಪುಷ್ಪಗಳೆಂದು ಮುಡಿದೆನು ಅಂತ. ಹಾಗಾಗಿ ನಮ್ಮ ಸನ್ನಡತೆಯನ್ನು ಸದಾ ಬಯಸುವವಳು ಭೂಮಾತೆ.

ಗೋಮಾತೆ, ಗಂಗಾಮಾತೆಯರು ನಮ್ಮನ್ನು ಪವಿತ್ರಗೊಳಿಸಲಿಕ್ಕಾಗಿ, ಹಾಲು-ಅನ್ನವನ್ನು ಕೊಟ್ಟು ಪೋಷಿಸುವುದಕ್ಕಾಗಿ ಧರೆಗಳಿದುಬಂದ ಪರಮಪವಿತ್ರ ಮಾತೆಯರು. ಹಿಂದಿನ ಕಾಲದಲ್ಲಿ ಸಿರಿತನದ ದ್ಯೋತಕವಾಗಿದ್ದವಳು ಗೋಮಾತೆ. ಇಂದು ಕಸಾಯಿಖಾನೆಗಳನ್ನು ಶ್ರೀಮಂತಗೊಳಿಸುತ್ತಿರುವುದು ನಮ್ಮ ಅಧಃಪತನಕ್ಕೆ ಸಾಕ್ಷಿಯಾಗಿದೆ.

ಚಿದಗ್ನಿಕುಂಡಸಂಭೂತಾ. . . ಚಿತ್ ಎಂಬ ಅಗ್ನಿಕುಂಡದಲ್ಲಿ ಜ್ಞಾನಾಗ್ನಿಯಾಗಿ ಪ್ರಜ್ವಲಿಸುವಂತೆ ಅಂದರೆ ನಮ್ಮಲ್ಲಿ ಧೀಶಕ್ತಿಯು ವೃದ್ಧಿಸುವಂತೆ ಮಾಡುವವಳು ವೇದಮಾತೆ.
ನಾವುಣ್ಣುವನ್ನಗಳು ನಾವು ಕುಡಿವುದಕಗಳು |
ನಾವುಸಿರುವೆಲರುಗಳು ನಾವುಡುವ ವಸ್ತ್ರ ||
ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು |
ಜೀವವೆರಡರ ಶಿಶುವು. . ಮಂಕುತಿಮ್ಮ ||
ಅಂತ ಡಿ.ವಿ.ಜಿ.ಯವರು ಹೇಳಿದಂತೆ ಪ್ರಕೃತಿಯ ಎಲ್ಲ ರಹಸ್ಯಗಳು ಅಡಗಿರುವುದು ವೇದಗಳಲ್ಲಿ, ಉಪನಿಷತ್ತುಗಳಲ್ಲಿ. ನಾಲ್ಕು ವೇದಗಳನ್ನೂ, ಹತ್ತು ಉಪನಿಷತ್ತುಗಳನ್ನೂ ಅಧ್ಯಯನ ಮಾಡಿ ಅರಗಿಸಿಕೊಳ್ಳುವುದು ನಮ್ಮಂಥ ಸಾಮಾನ್ಯರಿಗೆ ಅಸಾಧ್ಯವಾದುದಾಗಿರಬಹುದು. ಆದರೆ ನಾವೇನನ್ನು ಈಗ ಅಧ್ಯಯನ ಮಾಡುತ್ತಿದ್ದೇವೆಯೋ ಅದೇ ನಮಗೆ ವೇದಮಾತೆ. ಶ್ರದ್ಧಾವಾನ್ ಲಭತೇ ಜ್ಞಾನಂ ಶ್ರದ್ಧೆಯಿಂದ ನಿಷ್ಠರಾಗಿ ಸಾಧನೆಯಲ್ಲಿ ತೊಡಗಿಕೊಂಡರೆ ನಾವೇನಾಗಬಯಸುತ್ತೇವೆಯೋ ಅದನ್ನು ಅವಳು ನೀಡಬಲ್ಲಳು. ಸತತ ಪ್ರಯತ್ನದಿಂದ ತಪಸ್ಸಿನಂತೆ ಅವಳನ್ನು ಸೇವಿಸಿದಲ್ಲಿ ಗುರಿ ತಲುಪಬಲ್ಲೆವು. ಸಾಧನೆಯಲ್ಲಿ ಸೋಲು ಉಂಟಾಗುವುದು ಸಹಜ. ಅದರಿಂದ ಧೃತಿಗೆಡದೆ, ವಿಮುಖರಾಗದೇ [ಆತ್ಮಹತ್ಯೆಗೆ ಶರಣಾಗದೇ] ಮತ್ತೆ ಮತ್ತೆ ಪ್ರಯತ್ನಶೀಲರಾಗಬೇಕು. ಕಗ್ಗ ಹೇಳುವಂತೆ-
ಏಸು ಸಲ ತಪಗೈದೇಸು ಚನ್ನವನಾಂತು |
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್ ||
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ |
ಲೇಸಾಗಿಸಾತ್ಮವನು. . ಮಂಕುತಿಮ್ಮ ||

ವಿಶ್ವಾಮಿತ್ರರಂತೆ, ಭಗೀರಥನಂತೆ ಸರಿಯಾದ ದಾರಿಯಲ್ಲಿ ಮುನ್ನಡೆದರೆ ಗುರಿ ತಲುಪುವುದು ನಿಶ್ಚಿತ. ಅದಕ್ಕೆ ಪ್ರಬಲವಾದ ಇಚ್ಛಾಶಕ್ತಿ ಬೇಕು. ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಸ್ವರೂಪಿಣೇ| ಅಂತ ಲಲಿತಾ ಸಹಸ್ರನಾಮದಲ್ಲಿ ಹೇಳಿದಂತೆ ನಮ್ಮಲ್ಲಿ ಪ್ರಬಲವಾದ ಇಚ್ಛಾಶಕ್ತಿ ಉಂಟುಮಾಡುವವಳು ಮಹಾತಾಯಿ. ಭಾಗವತದಲ್ಲಿ ಬರುವ ಪ್ರಹ್ಲಾದ, ಧ್ರುವಕುಮಾರರ ಕಥೆಯಂತೆ, ಮಹಾಭಾರತದಲ್ಲಿ ಬರುವ ಅಭಿಮನ್ಯುವಿನ ಕಥೆಯಂತೆ ನಮ್ಮಲ್ಲಿ ಇಚ್ಛಾಶಕ್ತಿಯನ್ನು ಹುಟ್ಟು ಹಾಕುವವಳು ಮಾತೆ. ಬೆಳಗಿನ ಹೊತ್ತಿನಲ್ಲಿ ತಾಯಂದಿರು ಮನೆಯ ಮುಂದೆ ಹಾಕುವ ರಂಗವಲ್ಲಿ, ಮಕ್ಕಳಲ್ಲಿ ಚಿತ್ರಕಲೆ ಅಂಕುರಿಸಲು ಕಾರಣವಾಗಬಹುದು. ಹಬ್ಬ ಹರಿದಿನಗಳಲ್ಲಿ ತಾಯಿ ಹಾಡುವ ಹಾಡಿನಿಂದ ಮಕ್ಕಳಲ್ಲಿ ಸಂಸ್ಕಾರವುಂಟಾಗಲು ಕಾರಣವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಸದ್ಭಾವದಿಂದ ತಯಾರಿಸಿದ ಅಡುಗೆಯಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರವುಂಟಾಗಲು ನೆರವಾಗುತ್ತದೆ. ಸತ್ಕಾರ್ಯಕ್ಕೆ ಪ್ರೇರಣೆಯಾಗುತ್ತದೆ.
ವ್ಯಕ್ತವಾಗಿ ಮಮತೆಯ ಕಡಲಾಗಿ ಪೋಷಿಸುವ ಮಾತೆ, ಅವ್ಯಕ್ತವಾಗಿ ಗುರುವಾಗಿ ನಮ್ಮ ಊರ್ಧ್ವಮುಖ ಬೆಳವಣಿಗೆಗೆ ಕಾರಣರಾಗುವ ಎಲ್ಲ ಮಾತೆಯರಿಗೆ ಈ ನುಡಿನಮನ.

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.