ಅರಿವೇ ಗುರು

ಎಲ್ಲಿ ಶ್ರೀರಾಮನೋ ಅಲ್ಲಿ ಹನುಮನು

ಜೀವೋತ್ತಮ ಎಚ್ ರಾವ್, ಮೈಸೂರು

ಹನುಮಂತ ಶ್ರೀ ರಾಮನ ಪರಮ ಭಕ್ತ. ಹನುಮಂತನು ಬಲಿ ವ್ಯಾಸರ ಹಾಗೆ ಚಿರಂಜೀವಿ. ಶಿವಾಂಶ ಸಂಭೂತ. ಹನುಮಂತನು ಶಕ್ತಿ ಹಾಗೂ ಪರಾಕ್ರಮದ ಸಂಕೇತ. ಹನುಮಂತನು ಯಾವುದೇ ಕಾರ್ಯವನ್ನಾಗಲಿ ಸಂಕಲ್ಪಮಾತ್ರದಿಂದ ಪೂರೈಸಬಲ್ಲವನು ಎಂಬ ಪ್ರತೀತಿಯಿದೆ.

ಹನುಮಂತನ ತಾಯಿ ಅಂಜನಾದೇವಿಯು ಶುದ್ಧಳೂ ಪಾತಿವ್ರತ್ಯದಿಂದ ಕೂಡಿದವಳೂ ಆಗಿದ್ದು , ಬಹಳ ವರ್ಷಗಳ ಕಾಲ ಶಿವನನ್ನು ಕುರಿತು ತಪಸ್ಸು ಮಾಡಿ ಶಿವನನ್ನು ತನ್ನ ಪುತ್ರನಾಗಿ ಜನಿಸುವಂತೆ ವರವನ್ನು ಬೇಡಿದಳು. ಶಿವನು ವರವನ್ನು ಕೊಟ್ಟನು. ಅಯೋಧ್ಯೆಯ ಮಹಾರಾಜ ದಶರಥ ಪುತ್ರಕಾಮೇಷ್ಟಿಯಾಗವನ್ನು ಮಾಡಿ ಪವಿತ್ರ ಪಾಯಸವನ್ನು ಧರ್ಮಪತ್ನಿಗೆ ಹಂಚುವಾಗ ದೈವಿ ಸಂಕಲ್ಪದಂತೆ ಹಕ್ಕಿಯೊಂದು ಆ ಪಾಯಸವನ್ನು ತೆಗೆದುಕೊಡು ಹೊಯಿತು. ಆ ಪಾಯಸ ಸ್ವಲ್ಪಜಾರಿ ಅಂಜನಾದೇವಿಯ ಕೈಯಲ್ಲಿ ಸೇರಿತು. ಹೀಗೆ ಪವನದೇವನ ಸಹಾಯದಿಂದ ಸಿಕ್ಕ ಪಾಯಸವನ್ನು ಅಂಜನದೇವಿ ಭಕ್ತಿಯಿಂದ ಸೇವಿಸಲಾಗಿ, ಆಕೆ ಗರ್ಭ ಧರಿಸಿ ಹನುಮಂತನು ಹುಟ್ಟಿದನು. ಈ ದಿನವನ್ನೇ ನಾವು ಹನುಮ ಜಯಂತಿ ಎಂದು ಕರೆಯುತ್ತೇವೆ.

ಹನುಮಂತನಿಗೆ ದೇವತೆಗಳ ವರದಿಂದ ಅಪಾರ ಶೌರ್ಯವೂ, ಅತ್ಯಂತ ವೇಗದಿಂದ ಹಾರುವ ಶಕ್ತಿಯೂ, ತೀಕ್ಷ್ಣ ಬುದ್ಧಿಮತೆಯೂ ದೊರಕಿದವು. ಅದೇ ರೀತಿ ಹನುಮಂತನು ಅತ್ಯಂತ ವಿನಯಶೀಲನೂ ದಯಾಮಯನೂ ಆಗಿದ್ದನು. ಹನುಮಂತನಿಗೆ ರಾಮನ ಮೇಲಿನ ಪರಮಭಕ್ತಿಯನ್ನು ತೋರಿಸುವ ಸಾಕಷ್ಟು ನಿದರ್ಶನಗಳಿವೆ. ಒಮ್ಮೆ ಹನುಮಂತನು ಸೀತಾದೇವಿಯನ್ನು ದೇವಿ ನೀನು ಸಿಂಧೂರವನ್ನು ಏಕೆ ಹಣೆಯಲ್ಲಿ ಧರಿಸುತ್ತೀಯೆ? ಎಂದು ಕೇಳಿದನು. ಸೀತಾಮಾತೆಯು ಹಣೆಯಲ್ಲಿ ಸಿಂಧೂರವನ್ನು ಧರಿಸುವುದು ನನ್ನ ಪತಿ ಶ್ರೀರಾಮನ ದೀರ್ಘಾಯಸ್ಸನ್ನು ಪ್ರತಿನಿಧಿಸುತ್ತದೆ ಎಂದು ಉತ್ತರವನ್ನಿಟ್ಟಳು. ಇದನ್ನು ಕೇಳಿದ ಭಕ್ತಶಿರೋಮಣಿ ಹನುಮಂತನು ರಾಮನ ಸರ್ವವ್ಯಾಪಕತೆಯನ್ನು ಅಮರತ್ವವನ್ನು ಪ್ರತಿನಿಧಿಸಲು ತನ್ನ ಶರೀರಪೂರ್ತಿ ಸಿಂಧೂರಮಯವಾಗಿ ಮಾಡಿಕೊಂಡನು. ಹೀಗಾಗಿ ಹನುಮಂತನಿಗೆ ಸಿಂಧೂರವು ಅತ್ಯಂತ ಪ್ರಿಯವಾದದ್ದು. ಭಕ್ತರು ಹನುಮ ದೇವಸ್ಥಾನಕ್ಕೆ ಹೋದಾಗ ಅವನ ವಿಗ್ರಹಕ್ಕೆ ಲೇಪಮಾಡಿದ ಸಿಂಧೂರವನ್ನು ಧರಿಸುತ್ತಾರೆ.

ಎಲ್ಲಿ ರಾಮನೋ ಅಲ್ಲಿ ಹನುಮನು “ಯತ್ರ ಯತ್ರ ರಘುನಾಥಕೀರ್ತನಂ ತತ್ರ ತತ್ರ ಕೃತಮಸ್ತಕಾಞ್ಜಲಿಮ್” ಎಂಬಂತೆ ರಘುನಾಥನ ಕೀರ್ತನೆ ನಡೆಯುವ ಎಲ್ಲಾ ಕಡೆ ಸರ್ವವ್ಯಾಪಕನಾದ ಹನುಮಂತನು ಭಕ್ತಿಯಿಂದ ಕೇಳುತ್ತಿರುತ್ತಾನೆ. ಹನುಮಂತನು ರಾಮನನ್ನು ತನ್ನ ಎದೆ ಬಗೆದು ತೋರಿಸಿ ಪರಾಭಕ್ತಿಯನ್ನು ತೋರಿಸಿದ್ದಾನೆ. “ಅನಿರ್ವಚನೀಯಮ್ ಪ್ರೇಮಸ್ವರೂಪಮ್” ಎಂಬ ನಾರದ ಸೂತ್ರದಂತೆ ಹನುಮನ ಭಕ್ತಿಯನ್ನು ಮಾತುಗಳಲ್ಲಿ ಹೇಳುವುದಗಲಿ ವಾಕ್ಯಗಳಲ್ಲಿ ಬಣ್ಣಿಸಲಾಗಲೀ ಸಾಧ್ಯವಿಲ್ಲ.

ಹನುಮಂತನು ವಿಘ್ನ ನಿವಾರಕನೂ , ಪ್ರಾಣಾಯಾಮ ಸಾಧನೆಗೆಯ ಆರಾಧ್ಯದೈವನೂ ಆಗಿದ್ದಾನೆ. ಹನುಮಂತನು ಭಕ್ತಿ ವಿವೇಕ ಶಕ್ತಿ ಕರುಣೆ ಯುಕ್ತಿ ಧರ್ಯ ತಪಸ್ಸು ಧ್ಯಾನ ವಿನಯ ಸೇವೆ ಇತ್ಯಾದಿ ಶ್ರೇಷ್ಠತತ್ವಗಳು ಆವಿರ್ಭವಿಸಿದ ರೂಪವಾಗಿದ್ದಾನೆ. “ಬುದ್ಧಿರ್ ಬಲಮ್ ಯಶೋ ಧೈರ್ಯಮ್ ನಿರ್ಭಯತ್ವಮ್ ಅರೋಗಿತಾ ಆಜಾಡ್ಯಮ್ ವಾಕ್ಪಟುತ್ವಂ ಚ ಹನುಮತ್ ಸ್ಮರಣಾತ್ ಭವೇತ್ ” ಬುದ್ಧಿವಂತಿಕೆ ಶಕ್ತಿ ಕೀರ್ತಿ ಧೈರ್ಯ ರೊಗ ಇಲ್ಲದಿರುವಿಕೆ ಆಲಸ್ಯದ ನಿರ್ಮೂಲನೆ ವಾಕ್ಪಟುತ್ವ ಮುಂತಾದ ಶುಭ ಫಲಗಳು ಹನುಮಂತನ ಸ್ಮರಣೆಯಿಂದ ಉಂಟಾಗುತ್ತವೆ. ರಾತ್ರಿ ಮಲುಗುವಾಗ ಹನುಮಂತನ ಸ್ಮರಣೆಯನ್ನು ಮಾಡಿ ನಿದ್ರೆಗೆ ಹೋದರೆ ದುಃಸ್ವಪ್ನಗಳು ಬರುವುದಿಲ್ಲ.

ಹನುಮಂತನ ಪರಾಕ್ರಮದ ಕತೆಗಳನ್ನು ಕೇಳುವುದರಿಂದಿರುವ ಸದಾಕಾಲ ಸುತ್ತುತ್ತಿರುವ ಮನಸ್ಸು ಒಮ್ಮೆ ಶಾಂತವಾಗುತ್ತದೆ. ’ಹನುಮಾನ್ ಚಾಲೀಸ್’ ಅನ್ನು ಪಠಿಸುವುದರಿಂದ ಕಾರ್ಯ ಕ್ಷಮತೆಯು ಹೆಚ್ಚುತ್ತದೆ. ಹನುಮಂತನು ಶನಿಯಿಂದ ಕಾಡಲ್ಪಡದ ಏಕೈಕ ಮೂರ್ತಿ. ಬ್ರಹ್ಮ ವಿಷ್ಣು ಮಹೇಶ್ವರರನ್ನೂ ಬಿಡದ ಶನಿಯು ಹನುಮಂತನನ್ನು ಹಿಡಿಯಲು ಆಗಲೇ ಇಲ್ಲ. ಸೋತ ಶನಿಯು ಯಾರು ಹನುಮಂತನನ್ನು ಧ್ಯಾನಿಸುತ್ತಾರೋ, ಪ್ರಾರ್ಥಿಸುತ್ತಾರೋ ಅಂತಹವರಿಗೆ ನಾನು ಭಾದೆಯುಂಟುಮಾಡುವುದಿಲ್ಲ ಎಂದು ಮಾತನ್ನು ಕೊಟ್ಟು ಹನುಮಂತನ ಗರಿಮೆಯನ್ನು ಹೆಚ್ಚಿಸಿದ್ದಾನೆ. ಶುದ್ಧ ಭಕ್ತಿಯಿಂದ ಸರ್ವವ್ಯಾಪಕನಾದ ಹನುಮಂತನನ್ನು ಯಾರು ಧ್ಯಾನಿಸುತ್ತಾರೊ ಅವರಿಗೆ ಸರ್ವ ಗ್ರಹ ಭಾದೆಯೂ , ಎಲ್ಲಾ ರೀತಿಯ ಅನಿಷ್ಠವೂ ನಿವಾರಣೆಯಾಗಿ ಶ್ರೇಯಸ್ಸುಂಟಾಗುವುದು ನಿಶ್ಚಿತ.

ಜೀವೋತ್ತಮ ಎಚ್ ರಾವ್, ಮೈಸೂರು

9-9-2012

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.