ಉದ್ಯಾನವನಜೀವನ ಕಲೆ

ಉದ್ಯಾವನದ ಮಡಿಲಲ್ಲಿ ಸರ್ಕಾರಿ ವಸತಿ ನಿಲಯ

HOSTEL GARDEN (3)ಫೋಟೋ ಮತ್ತು ವರದಿ-ಎನ್.ಡಿ.ಹೆಗಡೆ ಆನಂದಪುರಂ

ಆವರಣದೊಳಗೆ ಕಾಲಿಡುತ್ತಿದ್ದಂತೆ ಭಾರತದ ನಕಾಶೆಯನ್ನು ಹೋಲುವ ಸಸ್ಯ ಕಾಶಿ,ಜೊತೆಗೆ ತ್ರಿವರ್ಣ ದ್ವಜದ ಮಾದರಿ,ಆವೃತ್ತ,ಚತುರ್ಭುಜ ಹಾಗೂ ಆಯತಾಕಾರದ ಸಸ್ಯಗಳ ರಚನೆ ಎಂತವರನ್ನೂ ಮಂತ್ರ ಮುಗ್ಧಗೊಳಿಸುತ್ತವೆ.ಕೇವಲ ಅಲಂಕಾರಿಕ ಸಸಿಗಳಷ್ಟೆ ಅಲ್ಲ ನುಗ್ಗೆ,ಪೊಪ್ಪಾಯಿ,ಬದನೆ,ಕುಂಬಳ,ಪೇರಲೆ,ಸಫೋಟ ಹಾಗೂ ಬಸಳೆ ಬಳ್ಳಿ ಮುಂತಾದ ಸುಧೀರ್ಘ ಕಾಲ ಹಣ್ಣು-ತರಕಾರಿ ನೀಡಬಲ್ಲ ವಿವಿಧ ಸಸಿಗಳೂ ಸಹ ಇವೆ. ಇದು ಯಾವುದೋ ಖಾಸಗಿ ಉಧ್ಯಾನವನದ ವಿವರಣೆ ಅಲ್ಲ.ಸರ್ಕಾರಿ ವಸತಿ ನಿಲಯದ ವಿನೂತನ ಮಾದರಿಯಾಗಿದೆ.

ಸಾಗರ ತಾಲೂಕಿನ ಆನಂದಪುರಂನಿಂದ ಕೇವಲ ೮ ಕಿ.ಮೀ.ದೂರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಶುಚಿತ್ವ ,ರುಚಿಕರ ಆಹಾರಗಳ ಜೊತೆಗೆ ಸುಂದರ ಉದ್ಯಾನವನ್ನೊಳಗೊಂಡು ಆಕರ್ಷಕ ಪರಿಸರದಿಂದ ಗಮನಸೆಳೆಯುವಂತಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹೊಂದಲು ಅನುಕೂಲತೆ ಒದಗಿಸುವ ಉದ್ದೇಶದಿಂದ ೧೯೮೨-೮೩ ರಲ್ಲಿ ಪ್ರಾರಂಭವಾದ ಈ ವಸತಿ ನಿಲಯ ಈಗ ಸುಸಜ್ಜಿತ ಕಟ್ಟಡ,ಅಡುಗೆ ಮನೆ,ಊಟದ ಹಾಲ್,ಸ್ನಾನ ಗೃಹ,ಶೌಚಾಲಯ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾದ ವಸತಿ ಕೋಣೆಗಳೂ ಇವೆ.ಇಲ್ಲಿ ೫ ರಿಂದ ೧೦ ನೇ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಸತಿ ಹೊಂದಿದ್ದು ಗೌತಮಪುರ ಸುತ್ತಲಿನ ಹಲವು ಹಳ್ಳಿಗಳ ಜೊತೆಗೆ ಶಿಕಾರಿಪುರ ಮತ್ತು ಸೊರಬ ತಾಲೂಕಿನ ಗಡಿ ಭಾಗದ ವಿದ್ಯಾರ್ಥಿಗಳೂ ಸಹ ಆಶ್ರಯಪಡೆದಿದ್ದಾರೆ.೨೦೦೬-೦೭ ರಿಂದ ೨೦೦೮-೦೯ ರ ವರೆಗೆ ಸತತ ಮೂರು ವರ್ಷಗಳ ಕಾಲ ಈ ವಸತಿ ನಿಲಯದ ೧೦ ನೆ ತರಗತಿ ವಿದ್ಯಾರ್ಥಿಗಳು ಶೇ.೧೦೦ ಫಲಿತಾಂಶ ಪಡೆದಿದ್ದು ಇಲ್ಲಿನ ಆಂತರಿಕ ಶಿಸ್ತು ಮತ್ತು ಕ್ರಮಬದ್ಧ ಅಧ್ಯಯನಕ್ಕೆ ಪ್ರಾಶಸ್ತ್ಯ ನೀಡಿರುವುದಕ್ಕೆ ಸಾಕ್ಷಿಯಾಗಿದೆ.

HOSTEL GARDEN (5)ಬೆಳಿಗ್ಗೆ ೫.೩೦ ರಿಂದ ಇಲ್ಲಿನ ವಿದ್ಯಾರ್ಥಿಗಳ ದಿನಚರಿ ಆರಂಭವಾಗಿ ಸ್ನಾನ ಸ್ವಚ್ಛತೆ,ವ್ಯಾಯಾಮ,ಯೋಗಾಸನ,ಪ್ರಾಣಾಯಾಮ,ಲಘು ಶ್ರಮದಾನ ,ಪಾಳಿ ಪ್ರಕಾರ ಸ್ವಚ್ಛತೆ ಹಾಗೂ ನಿರಂತರ ಅಧ್ಯಯನಗಳು ನಡೆಯುತ್ತಿವೆ.ಇಲ್ಲಿ ವಾಸವಾಗಿರುವ ಒಟ್ಟು ೬೦ ವಿದ್ಯಾರ್ಥಿಗಳನ್ನು ತಲಾ ೧೦ ವಿದ್ಯಾರ್ಥಿಗಳಂತೆ ಗುಂಪು ಮಾಡಲಾಗಿದ್ದು ಈ ಗುಂಪುಗಳು ಪಾಳಿ ಪ್ರಕಾರ ಎಲ್ಲಾ ಕೆಲಸಗಳ ಹೊಣೆ ನಿರ್ವಹಿಸುತ್ತವೆ.ಈ ಸಾಲಿನಲ್ಲಿ ಇಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡದ ೮ ವಿದ್ಯಾರ್ಥಿಗಳು,ಪ್ರವರ್ಗ ೧ ರ ೩ ಜನ,೨ ಎ ವರ್ಗದ ೪೪ , ೩ಬಿ ನ ೨ ಹಾಗೂ ೩ ಎ ನ ೪ ವಿದ್ಯಾರ್ಥಿಗಳೂ ವಾಸವಾಗಿದ್ದಾರೆ.

ವಿಶೇಷ ಕಾರ್ಯಕ್ರಮಗಳು: ಕೇವಲ ವಸತಿ ನಿಲಯದ ಚಟುವಟಿಕೆಗಳಲ್ಲದೆ ಪ್ರತಿ ವರ್ಷ ವನಮಹೋತ್ಸವ,ಆರೋಗ್ಯ ತಪಾಸಣೆ,ಮೂರು ತಿಂಗಳಿಗೊಮ್ಮೆ ಪೋಷಕರ ಸಭೆ,ದೇವರಾಜ್ ಅರಸು ಜನ್ಮ ದಿನಾಚರಣೆ,ಅಂಬೇಡ್ಕರ್ ಜಯಂತಿ ಹಾಗೂ ಎಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣೆ,ವಾರ್ಷಿಕೋತ್ಸವ,ವನಸಂಚಾರ,ಕ್ರೀಡಾ ಸ್ಪರ್ಧೆ,ಪರಸ್ಪರ ಚರ್ಚಾ ಕೂಟ ಕಾರ್ಯಕ್ರಮಗಳು ನಡೆಯುತ್ತವೆ.

ಇದೇ ಗ್ರಾಮದ ಬರುಮನೆ ಕೊಲ್ಲಪ್ಪ ಈ ಸ್ಥಳ ವನ್ನು ದಾನಮಾಡಿದ್ದು ಇಲ್ಲಿನ ಚಟುವಟಿಕೆ ನೋಡಿ ಧನ್ಯತೆ ಅನುಭವಿಸುವಂತಿದೆ.
ಆನಂದಪುರಂ -ಶಿಕಾರಿಪುರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ವಸತಿ ನಿಲಯ ಆಕರ್ಷಕ ಉದ್ಯಾವನದಿಂದ ಸದಾ ಗಮನ ಸೆಳೆಯುತ್ತಿದೆ.ವಸತಿ ನಿಲಯದ ಮೇಲ್ವಿಚಾರಕರಾದ ನಾಗೇಂದ್ರಪ್ಪ ಅವರ ಸತತ ಪ್ರಯತ್ನದಿಂದ ಇಲ್ಲಿನ ಆವರಣದಲ್ಲಿ ವಿವಿಧ ಹೂವಿನ ಸಸಿಗಳು ಮತ್ತು ಹುಲ್ಲು ಹಾಸಿನ ಉದ್ಯಾನವನ ನಿರ್ಮಾಣವಾಗಿದೆ.ಆವರಣದಲ್ಲಿ ತೆಂಗಿನ ಸಸಿಗಳು,ಪೊಪ್ಪಾಳೆ,ನುಗ್ಗೆ,ಬೇವು,ನಿಂಬೆ ಸಸಿಗಳು,ಬದನೆ,ಟೊಮಟೋ,ಹಸಿಮೆಣಸು,ಕುಂಬಳ ,ಸುವರ್ಣಗಡ್ಡೆ ಮುಂತಾದ ಬಗೆ ಬಗೆಯ ತರಕಾರಿ ಸಸ್ಯಗಳೂ ಇದ್ದು ಬಿಡುವಿನ ವೇಳೆಯ ಸದುಪಯೋಗಕ್ಕೆ ವೇದಿಕೆಯಾಗಿದೆ.ಮೇಲ್ವಿಚಾರಕರು ಮತ್ತು ಸಹ ನೌಕರರು ಸಮಯವಿದ್ದಾಗಲೆಲ್ಲ ವಿದ್ಯಾರ್ಥಿಗಳೊಂದಿಗೆ ಈ ಉದ್ಯಾನವನದ ನಿರ್ವಹಣೆ ಮಾಡುತ್ತಾ ಮಾದರಿ ವಸತಿನಿಲಯವನ್ನಾಗಿಸಿದ್ದಾರೆ.

ದಾನಿಗಳಿಂದ ಕೊಡುಗೆ:ಸರ್ಕಾರದ ಹಲವು ಸೌಲತ್ತುಗಳ ಜೊತೆಗೆ ಈ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ದಾನಿಗಳಿಂದಲೂ ಹಲವು ಸಾಮಗ್ರಿಗಳು ದೊರತಿವೆ.ಕಲರ್ ಟಿ.ವಿ. ಟಿ.ವಿ.ಟೇಬಲ್,ಸೋಲಾರ್ ಲೈಟ್ ೨,ವಾಟರ್ ಫಿಲ್ಟರ್ ೨ ಹಾಗೂ ೬ ಕಬ್ಬಿಣದ ಕುರ್ಚಿಗಳು ದಾನವಾಗಿ ಬಂದಿದ್ದು ಪ್ರತಿನಿತ್ಯ ಬಳಸಲಾಗುತ್ತಿದೆ.

ಫೋಟೋ ಮತ್ತು ವರದಿ-ಎನ್.ಡಿ.ಹೆಗಡೆ ಆನಂದಪುರಂ

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.