(ವ್ಯಾಘ್ರಶಿಲಾಪುರದೊಡೆಯನಿಗೆ ಕಿರಿ ರಂಗ ಪೂಜೆಯ ಹರಕೆ)
ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಮಲೆನಾಡ ಮಡಿಲಲ್ಲಿ ಹಲವು ದೇಗುಲಗಳು ಕಾಣುತ್ತವೆ. ಇಂತಹ ದೇಗುಲಗಳಲ್ಲಿ ಶಿವ, ದುರ್ಗೆ,ಗಣಪತಿ ದೇವರುಗಳೇ ಅತ್ಯಧಿಕ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ಲು ಇಂತಹ ಪರ್ವತ ಶ್ರೇಣಿಯ ಮಡಿಲಿನ ತಾಣವಾಗಿದ್ದು ಇಲ್ಲಿ ಸಾಕ್ಷಾತ್ ವಿಷ್ಣು ನರಸಿಂಹ ಅವತಾರದಲ್ಲಿ ನೆಲೆಯೂರಿದ್ದು ಆರಾಧಿಸುವ ಭಕ್ತ ಜನರರಿಗೆ ಹಲವು ವಿಧದಲ್ಲಿ ಬೆಂಬಿಡದೆ ಸಲಹುತ್ತಾ ತನ್ನತ್ತ ಸೆಳೆಯುತ್ತಿದ್ದಾನೆ. ಇಲ್ಲಿನ ದೇವರಾದ ಶ್ರೀಲಕ್ಷ್ಮೀ ನರಸಿಂಹ ದೇವರು ಅತಿ ಪ್ರಾಚೀನ ಕಾಲದ್ದಾಗಿದ್ದು ಇತ್ತೀಚೆಗೆ ಸ್ಥಳಾಂತರ ಮತ್ತು ಜೀರ್ಣೋದ್ಧಾರಗೊಂಡು ಅಭಿವೃದ್ಧಿ ಹೊಂದುತ್ತಿದೆ.
ಹೊಸನಗರದಿಂದ ಕುಂದಾಪುರ ಮತ್ತು ಉಡುಪಿಯನ್ನು ಸಂಪರ್ಕಿಸುವ ಬಾಳೆಬರೆ ಘಾಟಿಯ ಹೆದ್ದಾರಿ ಈ ದೇಗುಲದ ಮುಂದೆ ಹಾದುಹೋಗಿದ್ದು ನಿತ್ಯ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ.
ಪ್ರಾಚೀನ ಇತಿಹಾಸ :
ಪುರಾಣಕಾಲದಲ್ಲಿ ದೇವಲೋಕದ ಗಂಧರ್ವ ದೇವನೊಬ್ಬ ಶಾಪಗ್ರಸ್ತನಾಗಿ ಸಹ್ಯ ಪರ್ವತ ಶ್ರೇಣಿಯ ವಾರಾಹಿ ನದಿ ತಟಾಕದ ಸ್ಥಳದಲ್ಲಿ ವೃಷಭಾಸುರ ರಾಕ್ಷಸನಾಗಿ ಜನಿಸಿದನಂತೆ. ವಿಷ್ಣು ಹುಲಿರೂಪದಲ್ಲಿ ಬಂದು ವಧಿಸಿದಾಗ ಶಾಪ ವಿಮೋಚನೆಯಾಗಿ ದೇವಲೋಕ ಪ್ರಾಪ್ತಿಯಾಗುತ್ತದೆ ಎಂಬ ವರ ಪಡೆದಿದ್ದನಂತೆ. ಅಂತೆಯೇ ಈ ಸ್ಥಳದಲ್ಲಿ ವೃಷಭಾಸುರನಾಗಿ ಜನರಿಗೆ ಉಪಟಳ ನೀಡುತ್ತಾ ಓಡಾಡುತ್ತಿದ್ದನಂತೆ. ಭಕ್ತರೆಲ್ಲ ಸೇರಿ ವಿಷ್ಣುವಿನಲ್ಲಿ ಮೊರೆ ಹೋಗಿ ರಾಕ್ಷಸನ ಸಂಹಾರಕ್ಕೆ ಬೇಡಿದರಂತೆ. ನರಸಿಂಹನಾಗಿ ಅವತರಿಸಿದ ಮಹಾವಿಷ್ಣು ಹಿರಣ್ಯಕಶಿಪುವನ್ನು ಸಂಹರಿಸಿದ ನಂತರ ದಟ್ಟ ಅರಣ್ಯದ ವಾರಾಹಿ ನದಿ ತೀರದ ಈ ಸ್ಥಳಕ್ಕೆ ಬಂದು ಹುಲಿರೂಪದಲ್ಲಿ ಸಂಚರಿಸಿ ವೃಷಭಾಸುರನನ್ನು ಸಂಹರಿಸಿದನಂತೆ. ಶಾಪ ವಿಮೋಚನೆ ಹೊಂದಿದ ವೃಷಭಾಸುರ ಕ್ಷಮಿಸುವಂತೆ ದೇವರಲ್ಲಿ ಮೊರೆಯಿಟ್ಟನಂತೆ. ಆಗ ವಿಷ್ಣುವು ಹುಲಿಯ ರೂಪದಲ್ಲಿ ಇಲ್ಲಿಯೇ ನೆಲೆಸಿ ಭಕ್ತರನ್ನು ಪೊರೆಯುವಂತೆ ವರ ದಯಪಾಲಿಸಿದನಂತೆ. ಇವರಿಬ್ಬರ ನಡುವಿನ ಈ ಸಂಭಾಷಣೆಯನ್ನು ಆಲಿಸಿದ ಅಗಸ್ತ್ಯ ಮಹರ್ಷಿಗಳು ವರಾಹ ನದಿ ತೀರದ ಈ ಸ್ಥಳ ಪವಿತ್ರ ಸ್ಥಳವೆಂದು ಗುರುತಿಸಿ ಹುಲಿ ಮುಖದ ನರಸಿಂಹ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರಂತೆ. ಈ ಕ್ಷೇತ್ರದ ಸುತ್ತ ಮುತ್ತ ಹುಲಿಗಳು ಅತ್ಯಧಿಕವಾಗಿದ್ದು ನಿತ್ಯ ದೇವರ ಗುಡಿಗೆ ಬಂದು ಮಲಗುತ್ತಿದ್ದವಂತೆ. ಇದರಿಂದಾಗಿ ಈ ಕ್ಷೇತ್ರಕ್ಕೆ ವ್ಯಾಘ್ರಶಿಲಾಪುರ ಎಂಬ ಹೆಸರು ಬಂದಿತ್ತು. ಈ ಹೆಸರು ಕ್ರಮೇಣ ಹುಲಿಕಲ್ಲಿನ ಪುರ ಎಂದು ಬದಲಾಗುತ್ತಾ ಹುಲಿಕಲ್ಲು ಎಂದು ಈಗ ಜನಜನಿತವಾಗಿದೆ.
ವೃಷಭಾಸುರನ ಸಂಹಾರದಿಂದ ದೇವರು ಉಗ್ರ ಸ್ವರೂಪಿಯಾಗಿದ್ದು ದೇಗುಲದ ಎದುರಿನ ಕರಿಕಲ್ಲು ಗುಡ್ಡಕ್ಕೆ ದೇವರ ಉಗ್ರ ದೃಷ್ಠಿ ತಾಗಿ ಆಗಾಗ ಹಸಿ ಹಸಿ ಮರಗಳಿಗೆ ಬೆಂಕಿ ಹತ್ತಿಕೊಂಡು ಕಾಡ್ಗಿಚ್ಚು ಉಂಟಾಗುತ್ತಿತ್ತಂತೆ. ಸುತ್ತಮುತ್ತಲು ವಾಸಿಸುವವರಿಗೂ ಸಹ ಒಂದು ಬಗೆಯ ಉರಿಯ ವೇದನೆ ಆಗುತ್ತಿತ್ತಂತೆ .ಅಗಸ್ತ್ಯ ಮಹರ್ಷಿಗಳು ತೀರ್ಥ ಯಾತ್ರೆ ನಡೆಸುತ್ತಾ ಇಲ್ಲಿಗೆ ಬಂದಾಗ ಕೆಲಕಾಲ ತಪಸ್ಸಿಗೆ ನಿಂತರಂತೆ. ಸ್ಥಳೀಯ ಜನರು ದೇವರ ಉಗ್ರ ಸ್ವರೂಪದ ಬಗ್ಗೆ ವಿವರಿಸಿ ಶಾಂತಗೊಳಿಸಲು ಭಿನ್ನವಿಸಿದರಂತೆ. ಅದಕ್ಕಾಗಿ ಅಗಸ್ತ್ಯ ಮಹರ್ಷಿಗಳು ದಿವ್ಯ ದೃಷ್ಠಿಯಿಂದ ಎಲ್ಲವನ್ನೂ ಗ್ರಹಿಸಿ ಶಾಂತ ಲಕ್ಷ್ಮಿಯ ಪ್ರತಿಷ್ಠಾಪನೆಯೇ ಇದಕ್ಕೆ ಪರಿಹಾರ ಎಂದು ಗ್ರಹಿಸಿದರು. ಇದಕ್ಕಾಗಿ ಯೋಗ್ಯ ಮೂರ್ತಿ ಎಲ್ಲಿದೆಯೆಂದು ಯೋಚಿಸಿದಾಗ ಕಾಶಿ ದೇಗುಲದ ಎದುರಿನ ಗಂಗಾನದಿಯಲ್ಲಿ ಈ ವಿಗ್ರಹ ಇರುವುದನ್ನು ತಿಳಿದರಂತೆ. ಶ್ರೀಆಂಜನೇಯನಿಗೆ ಭಿನ್ನವಿಸಿ ಆ ಮೂರ್ತಿಯನ್ನು ತರಿಸಿ ನರಸಿಂಹ ದೇವರ ಬಲಭಾಗದಲ್ಲಿ ಶ್ರೀಶಾಂತಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸದರಂತೆ. ಅಂದಿನಿಂದ ದೇವರ ಉಗ್ರ ಸ್ವರೂಪ ಕ್ಷೀಣಿಸುತ್ತಾ ಬಂದು ಭಕ್ತರ ಭಿನ್ನಹಗಳಿಗೆ ದೇವರು ವರನೀಡಲು ಆರಂಭಿಸಿದನಂತೆ. ವ್ಯಾಘ್ರ ಮುಖದ ನರಸಿಂಹ ದೇವರ ಬಲಭಾಗದಲ್ಲಿ ಲಕ್ಷ್ಮೀ ಇರುವುದು ಅತೀ ಅಪರೂಪವಾಗಿದ್ದು ಭಾರತದಲ್ಲಿ ಏಕೈಕ ದೇಗುಲ ಎನ್ನುತ್ತಾರೆ ದೇವಾಲಯ ಸಮಿತಿ ಮುಖ್ಯಸ್ಥರಾದ ಬಾಬುರಾವ್.
ಹಳೆಯ ಕಾಲದಿಂದ ದೇಗುಲದ ಸುತ್ತಮುತ್ತ ಅಗ್ರಹಾರ ಸಹ ಇತ್ತು.
ಕೆಳದಿಯ ರಾಜ ಶಿವಪ್ಪ ನಾಯಕ ಬಿದನೂರು ಕೋಟೆ ಕಟ್ಟಿ ತನ್ನ ರಾಜಧಾನಿಯನ್ನಾಗಿಸಿಕೊಂಡಾಗ ಈ ದೇವಾಲಯ ಇರುವ ಸ್ಥಳದ ಸಮೀಪ ಚಿಕ್ಕ ಕೋಟೆ , ಬುರುಜು ಮತ್ತು ಕೆರೆ ,ಪುಷ್ಕರಣಿ ನಿರ್ಮಿಸದನಂತೆ. ಸುಮಾರು ೩೦ ವರ್ಷಗಳ ಹಿಂದೆ ವಾರಾಹಿ ನದಿಗೆ ಚಕ್ರ ಎಂಬಲ್ಲಿ ಅಣೆಕಟ್ಟು ಕಟ್ಟಿ ವಿದ್ಯುತ್ ಯೋಜನೆ ಆರಂಭಸಿದಾಗ ಈ ದೇಗುಲ ಮತ್ತು ಸುತ್ತಲಿನ ಅಗ್ರಹಾರ ಇತ್ಯಾದಿಗಳು ಮುಳುಗಡೆಯಾದವು. ಆಗ ಭಕ್ತರು ದೇವರ ಮೂರ್ತಿಯನ್ನು ಈಗಿರುವ ಸ್ಥಳಕ್ಕೆ ತಂದು ಗುಡಿ ನಿರ್ಮಿಸಿ ನಿರಂತರವಾಗಿ ಪೂಜ ಪುನಸ್ಕಾರಗಳನ್ನು ಮುಂದುವರೆಸಿದರು. ಈಗ ದೇಗುಲ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿದ್ದು ಸ್ಥಳೀಯ ಭಕ್ತರು ಮತ್ತು ದೂರದ ಊರುಗಳ ದಾನಿಗಳ ಸಹಕಾರದಿಂದ ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಾ ಸಾಗಿದೆ ಎನ್ನುತ್ತಾರೆ ಕನ್ವಿನರ್ ಕೇಶವ ಮೂರ್ತಿ .
ಹಲವು ಬಗೆಯ ಉತ್ಸವಗಳು :
ಇಲ್ಲಿನ ದೇವರಿಗೆ ಪ್ರತಿ ವರ್ಷ ಚೈತ್ರ ಕೃಷ್ಣ ಚತುರ್ಥಿಯಂದು ಮಹಾರಥೋತ್ಸವ ನಡೆಸಲಾಗುತ್ತದೆ.ಶ್ರಾವಣ ಮಾಸದಲ್ಲಿ ನಿತ್ಯ ವಿಭಿನ್ನ ಬಗೆಯ ಅಲಂಕಾರ ಪೂಜೆ, ನವರಾತ್ರಿಯ ಸಂದರ್ಭದಲ್ಲಿ ನಿತ್ಯವೂ ವೈಭವದ ಆರಾಧನಾ ಪೂಜೆ, ವಿಜಯದಶಮಿಯಂದು ಪಲ್ಲಕ್ಕಿ ಉತ್ಸವ, ಕಾರ್ತಿಕ ಮಾಸದ ಹುಣ್ಣಿಮೆಯಂದು ವೈಭವದ ಮಹಾ ದೀಪೋತ್ಸವ ನಡೆಸಲಾಗುತ್ತದೆ. ಧನುರ್ಮಾಸದಲ್ಲಿ ನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಸರ್ವಾಲಂಕಾರ ಪೂಜೆ, ನೈವೇದ್ಯ ಭಜನೆ ನಡೆಸಲಾಗುತ್ತದೆ. ಕಿರಿ ರಂಗ ಪೂಜೆ ಈ ದೇವರಿಗೆ ಜನ ಹರಕೆ ಹೊತ್ತು ಆಗಮಿಸುತ್ತಾರೆ. ರಥೋತ್ಸವದಂದು ಹಿರಿ ರಂಗ ಪೂಜೆಯನ್ನು ನಡೆಸಲಾಗುತ್ತದೆ. ನಂಬಿ ಬಂದ ಭಕ್ತರಿಗೆ ದೇವರು ಶೀಘ್ರವಾಗಿ ವರ ದಯಪಾಲಿಸಿ ಪೊರೆಯುತ್ತಾನೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ನಿತ್ಯವೂ ಹಲವು ಭಕ್ತರು ಆಗಮಿಸಿ ದೇವರ ಪೂಜೆ ಹಾಗೂ ಹರಕೆ ಒಪ್ಪಿಸುತ್ತಾರೆ. ಬೇಡಿದಾಗ ಮಳೆಯನ್ನು ಕರುಣಿಸುವ ಮತ್ತು ಅತಿ ಮಳೆಯ ಮಳೆಗಾಲದಲ್ಲಿ ಕುಟುಂಬದ ಮಂಗಲ ಕಾರ್‍ಯದ ನಿಮಿತ್ತ ಮಳೆಯಿಂದ ಬಿಡುವು ನೀಡುವಂತೆ ಬೇಡಿದರೆ ಮಳೆ ನಿಲ್ಲಿಸುತ್ತಾನೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದ್ದು ಈ ಜನರಿಗೆ ಇದು ಮಳೆದೇವರೆಂದೇ ಪ್ರಸಿದ್ಧಿ. ಮಳೆ ಹರಕೆಗಾಗಿ ಹಲವು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕರಾದ ವಿಶ್ವನಾಥ ಭಟ್.
ಫೋಟೋ ಮತ್ತು ಲೇಖನ- ಎನ್.ಡಿ,ಹೆಗಡೆ ಆನಂದಪುರಂ
30-4-2013